ಮೂರ್ತಿಕೆತ್ತನೆ

ಮೂರ್ತಿಕೆತ್ತನೆ
Updated on: 

ಶಿವಮೂರ್ತಿಯವರ ಮನೆಯ ಶೋಕೇಸ್ ತುಂಬಾ ಕ್ರಿಮಿ-ಕೀಟಗಳದ್ದೇ ಕಾರುಬಾರು. ನೊಣ, ಜಿರಳೆ, ತುಂಬೆಹುಳ, ತಿಗಣೆ, ಉಣ್ಣಿ, ಇರುವೆ, ಮಳೆಹಾತೆ, ಚಿಟ್ಟೆ, ಜೇಡ, ಬಾವಲಿ, ಗೊಬ್ಬರದ ಹುಳ... ಹೀಗೆ ನೂರಾರು ಕೀಟಗಳು ಇವರ ಕಪಾಟಿನಲ್ಲಿ ಕುಳಿತಿವೆ.

ಈ ಹುಳ ಹುಪ್ಪಟೆಗಳನ್ನೆಲ್ಲ ಇವರೇಕೆ ಕಪಾಟಿನಲ್ಲಿ ಸಂಗ್ರಹಿಸಿಟ್ಟಿದ್ದಾರೆ ಎಂದು ನಿಮಗೆ ಅನ್ನಿಸುವುದು ಸಹಜ. ಆದರೆ ಇವುಗಳನ್ನೆಲ್ಲ ಇವರೇನೂ ಕೊಂದು ತಂದಿಟ್ಟಿಲ್ಲ, ಬದಲಿಗೆ ತೆಂಗಿನಕಾಯಿಯ ಚಿಪ್ಪಿನಿಂದ ತಯಾರಿಸಿದ್ದಾರೆ! ಯಾವುದೇ ಕಲೆಯಲ್ಲಿ ಅದನ್ನು ಸೃಷ್ಟಿಸುವವನ ಚಿಂತನೆ ಇರುತ್ತದೆ ಎಂಬುದು ಸುಳ್ಳಲ್ಲ. ಇಲ್ಲಿ ಸೃಷ್ಟಿಸಿದ ಕಲೆ ಕೂಡ ಸೃಜನಾತ್ಮಕ ನೈಪುಣ್ಯ ಕಲೆ. ಶಿವಮೂರ್ತಿಯವರ ಕಲಾನೈಪುಣ್ಯತೆ ಅವರ ಕಲೆಯಲ್ಲಿ ಅಭಿವ್ಯಕ್ತಗೊಂಡಿದೆ. ಪ್ರತಿಭೆ ಯಾರಲ್ಲಿ ಯಾವ ರೀತಿ ಅರಳುತ್ತದೆಂದು ಹೇಳುವುದು ಕಷ್ಟ. ತೆಂಗಿನ ಚಿಪ್ಪು, ನಾರಿನಲ್ಲಿ ಇವರ ಸೃಜನಶೀಲತೆ ಕಲೆಯಾಗಿ ಅರಳಿದೆ. ಎಲ್ಲ ಕೀಟಗಳನ್ನೂ ಅದರದೇ ಗಾತ್ರದಲ್ಲಿ, ಅದರದೇ ಬಣ್ಣದಲ್ಲಿ, ತಕ್ಷಣ ಮುಟ್ಟಲು ಭಯವಾಗುವಷ್ಟು ನೈಜವಾಗಿ ಸೂಕ್ಷ್ಮ ಕೆತ್ತನೆ ಮಾಡಿ ಕಪಾಟಿನಲ್ಲಿ ಫಿಕ್ಸ್ ಮಾಡಿಟ್ಟಿದ್ದಾರೆ ಯುವ ಕಲಾವಿದ ಶಿವಮೂರ್ತಿ.
ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಮುರೂರು ಸಿದ್ಧರಮಠದ ಈ ಯುವ ಕಲಾವಿದ ಕಲೆಯಲ್ಲಿ ತರಬೇತಿ ಹೊಂದಿದವನೇನಲ್ಲ. ಕಲೆ ಈತನಿಗೆ ಅನುವಂಶಿಕವಾಗಿ ಬಂದಿರಲೂಬಹುದು. ಏಕೆಂದರೆ ಶಿವಮೂರ್ತಿಯವರ ತಂದೆ ಸೂರ್ಯನಾರಾಯಣ ಭಟ್ಟರು ಕಲ್ಲಿನಲ್ಲಿ ದೇವರ ಮೂರ್ತಿಗಳನ್ನು ನಿರ್ಮಿಸುವುದರಲ್ಲಿ ಸಿದ್ಧಹಸ್ತರು. ಇವರ ಮನೆಯ 'ಪ್ರಧಾನ ಬಾಗಿಲು' ಪಟ್ಟಿಯನ್ನು ಕುಸುರಿ ಕೆತ್ತನೆ ಮಾಡಿದ ಕಪ್ಪು ಶಿಲೆಯಿಂದ ತಯಾರಿಸಲಾಗಿದೆ. ತಂದೆಗೆ ಸಹಾಯ ಮಾಡುತ್ತಾ ಮಗನೂ ಕೆತ್ತನೆ ಕೆಲಸದಲ್ಲಿ ನಿಪುಣನಾಗಿದ್ದಾನೆ.
ಇವರ ಸಂಗ್ರಹದಲ್ಲಿ ಕೇವಲ ಹುಳಹುಪ್ಪಟೆಗಳು ಮಾತ್ರವಲ್ಲ, ಸುಂದರವಾದ ಅದ್ಭುತ ನಾಟ್ಯ ಗಣಪತಿ, ಆಭರಣ ಕರಂಡಿಕೆ ಕೂಡ ಇವೆ. ತೆಂಗಿನ ಚಿಪ್ಪಿನಿಂದ ಏನೇನು ಮಾಡಲು ಸಾಧ್ಯವೋ ಅದೆಲ್ಲವನ್ನೂ ಶಿವಮೂರ್ತಿ ತಯಾರಿಸಿದ್ದಾರೆ.

ಐದಾರು ಕಡೆಗಳಲ್ಲಿ ಕಲಾ ಪ್ರದರ್ಶನ ಕೂಡ ಏರ್ಪಡಿಸಿದ ಹೆಗ್ಗಳಿಕೆ ಶಿವಮೂರ್ತಿಯದು. ಸ್ವಲ್ಪ ತರಬೇತಿ, ಪ್ರಚಾರ, ಸಹಾಯ ಸಿಕ್ಕರೆ ಈ ಯುವಕ ಖ್ಯಾತ ಕಲಾವಿದನಾಗುವುದರಲ್ಲಿ ಸಂಶಯವಿಲ್ಲ.

- ಕೆಕ್ಕಾರು ಎಸ್.ಎ. ಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com