ರೇಖಾಚಿತ್ರ

ರೇಖಾಚಿತ್ರ
Updated on: 

'ರೆಕ್ಕೆ ಇದ್ದರೆ ಸಾಕೆ? ಹಕ್ಕಿಗೆ ಬೇಕು ಬಾನು, ಬಯಲಲಿ ತೇಲುತ ತಾನು, ಮ್ಯಾಲೇ ಹಾರೋಕೆ' ಎಂಬ ಸುಪ್ರಸಿದ್ಧ ಹಾಡನ್ನು ಕೇಳದ ಕನ್ನಡಿಗನಿಲ್ಲ. 'ಚಿನ್ನಾರಿ ಮುತ್ತ' ಚಿತ್ರದ ಈ ಹಾಡನ್ನು ಹಾಡಿ ಎಲ್ಲರ ಮನದಲ್ಲಿ ನಿಂತ ಬಾಲಗಾಯಕಿ ರೇಖಾ ಇಂದು ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಯುವ ಪ್ರತಿಭೆ.

ಹುಟ್ಟಿದ್ದು ಸೆಪ್ಟೆಂಬರ್ 4, 1981. ಮಂಗಳಾ ಅಂಜನ್ ಹಾಗೂ ಅಂಜನ್ ಕುಮಾರ್ ಅವರ ಮಗಳಾಗಿ. ಸಂಗೀತ ಕುಟುಂಬದ ಹಿನ್ನಲೆ. ತಾಯಿಯನ್ನು ಆಗಲೇ ಕನ್ನಡದ ಉಷಾ ಉತ್ತಪ್, ಜ್ಯೂನಿಯರ್ ಎಲ್.ಆರ್. ಈಶ್ವರಿ ಅಂತಲೂ ಕರೀತಿದ್ದರು. ಹಳ್ಳಿಮೇಷ್ಟ್ರು, ಚೈತ್ರದ ಪ್ರೇಮಾಂಜಲಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಹಾಡಿದವರು. ಅಂಜನ್‌ಕುಮಾರ್ ಕೂಡ ಸಂಗೀತ ಕ್ಷೇತ್ರದ ನಂಟು ಹೊಂದಿರುವವರೇ. ಕಾರ್ಯಕ್ರಮಗಳ ಆಯೋಜಕರಾಗಿರುವ ಇವರ ಗರಡಿಯಲ್ಲಿ ಅದೆಷ್ಟೋ ನವತಾರೆಯರು ಉದಯಿಸಿದ್ದಾರೆ. ಅಂಜನ್ ಅವರ ತಾಯಿ ಶಾರದಾದಾಸಿ, ಅಂದಿನ ಕಾಲಕ್ಕೇ ದೇವರ ನಾಮಗಳನ್ನು ರಚಿಸಿ ರಾಗ ಹಾಕಿ ಹಾಡುತ್ತಿದ್ದರಂತೆ. ಇಂಥ ಸಂಗೀತ ಕುಟುಂಬದಲ್ಲಿ ರೇಖಾಳನ್ನೂ ಇದೇ ಕ್ಷೇತ್ರಕ್ಕೆ ಎಳೆದು ತಂದದ್ದು ಅಚ್ಚರಿಯಲ್ಲ.

ಬಾಲಗಾಯಕಿಯಾಗಿ ಗಾಯನ ಕ್ಷೇತ್ರಕ್ಕೆ ಕಾಲಿಟ್ಟಾಗ ರೇಖಾಗಿನ್ನೂ ಮೂರು ವರುಷ. ಮಕ್ಕಳ ಸಾಕ್ಷಿ, ರಕ್ಷಕರೇ ಭಕ್ಷಕರು, ಹೃದಯ ಬಂಧನ... ಹೀಗೆ ಹಲವಾರು ಸಿನಿಮಾಗಳಲ್ಲಿ ಸೋಲೋ ಸಾಂಗ್ ಹಾಡುತ್ತ ಬೆಳೆದ ಬಾಲ ಪ್ರತಿಭೆ ಎಸ್.ಜಾನಕಿ, ಎಸ್‌ಪಿಬಿ ಮುಂತಾದ ಮಹಾನ್ ಗಾಯಕರೊಂದಿಗೆ ಹಾಡುತ್ತ ಕೆರಿಯರ್ ಮುಂದುವರಿಸಿದರು. ಹಂಸಲೇಖ ಇವರಿಗೆ ಮುಖ್ಯ ಗುರು. ಆರ್.ಪಿ. ಪಟ್ನಾಯಕ್, ಇಳೆಯರಾಜ ಅವರೊಂದಿಗೆ ಕೋರಸ್‌ನಲ್ಲಿ ಹಾಡಿರುವರು. ಸಿ.ಅಶ್ವತ್ಥ್‌ಅವರೊಂದಿಗೆ ಹಲವಾರು ಸಿಡಿಗಳಲ್ಲಿ ಇವರ ಧ್ವನಿಯಿದೆ. ಹಂಸಲೇಖ ನಿರ್ದೇಶನದ 'ಪ್ರೀತಿಗಾಗಿ' ಧಾರವಾಹಿಯ 30ಕ್ಕೂ ಹೆಚ್ಚು ಕಂತುಗಳಲ್ಲಿ ನಟಿಸಿದ್ದಾರೆ ಕೂಡ.
ಮುಂದಿನ ಎಂಟು ವರ್ಷ ಓದಿಗಾಗಿ ಮೀಸಲಿಟ್ಟರು. ಬಿ.ಕಾಂ ಪದವಿ,  ಎನ್‌ಐಟಿಯಲ್ಲಿ ಡಿಪ್ಲೊಮಾ ಪಡೆದರು. ಹಂಸಲೇಖಾ ಬಳಿ ಜ್ಯೂನಿಯರ್ ಆಗಿದ್ದ ಮೋಹನ್ ಅವರೊಂದಿಗೆ ಮದುವೆಯೂ ಆಯಿತು. ಕಂಪನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿಕೊಂಡರು.
ಒಮ್ಮೆ ಕಾಫಿ ಟೈಮ್‌ನಲ್ಲಿ ಹಾಡು ಗುನುಗಿಕೊಳ್ಳುತ್ತಿರುವಾಗ ಅವರ ಬಾಸ್ 'ಯಾರಿದು ಕೋಗಿಲೆ' ಎಂದರಂತೆ. 'ಈ ಕೆಲಸ ನಿಮಗೆ ಬೇಡಮ್ಮ. ನಿಮ್ಮನ್ನು ಕಲೆಯ ಕ್ಷೇತ್ರವೇ ಕರೆಯುತ್ತಿದೆ' ಎಂದು ಹೇಳಿದ್ದು ಮತ್ತೆ ಸಂಗೀತದತ್ತ ಹೊರಳಲು ಕಾರಣವಾಯಿತು. ಬಾಸ್ ಮಾತನ್ನು ಗಂಭೀರವಾಗಿ ಪರಿಗಣಿಸಿ ಗುರು ಹಂಸಲೇಖಾ ಬಳಿ ಹೋದರು. ಮತ್ತೆ ಇವರ ಹಾಡಿನ ಹಕ್ಕಿ ರೆಕ್ಕೆ ಬಿಚ್ಚಿ ಹಾರತೊಡಗಿತು. ಹರಿಕೃಷ್ಣರಿಗೆ ಟ್ರ್ಯಾಕ್ ಸಿಂಗರ್ ಆಗುವುದರ ಮುಖೇನ ಎರಡನೇ ಇನ್ನಿಂಗ್ಸ್ ಶುರವಾಯಿತು. ಈಗ 'ಮಾಯದಂಥ ಮಳೆ' ಚಿತ್ರದಿಂದ ಸಂಗೀತ ನಿರ್ದೇಶಕಿಯಾಗಿ ಬಡ್ತಿ ಪಡೆದಿದ್ದಾರೆ. ಗೀತ ರಚನೆ, ಸಂಗೀತ ನಿರ್ದೇಶನ, ಗಾಯನ ಎಲ್ಲವೂ ಅವರದೇ. ರೇಖಾ ಮೋಹನ್ ಜತೆಗೆ ಅನುರಾಧಾ ಭಟ್, ಆಕಾಂಕ್ಷ ಬಾದಾಮಿ, ಅರ್ಚನಾ ರವಿ, ಲಕ್ಷ್ಮೀ,  ಲಕ್ಷ್ಮಿ, ಶಿಲ್ಪಾ ಹಾಡಿದ್ದಾರೆ. ಮಹಿಳಾ ಗಾಯಕಿಯರಿಗೆ ಅವಕಾಶ ಕಲ್ಪಿಸುವ ಹಂಬಲದಿಂದ 'ಮ್ಯೂಸಿಕ್ ಸ್ಪಾರ್ಕ್‌' ಎಂಬ ಮಹಿಳಾ ಬ್ಯಾಂಡ್ ಆರಂಭಿಸಿದ್ದಾರೆ.
ಗಂಡ-ಹೆಂಡತಿ ಇಬ್ಬರೂ ಒಂದೇ ಕ್ಷೇತ್ರದಲ್ಲಿರುವುದರಿಂದ ಸಾಧನೆಗೆ ಮತ್ತಷ್ಟು ಹುರುಪು ಬಂದಿದೆ. ಸದ್ಯ ತಮ್ಮದೇ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಟಿವಿ ಸೀರಿಯಲ್‌ಗಳು, ಕಿರುಚಿತ್ರಗಳಿಗೆ ವಾದ್ಯ ಹಾಗೂ ರಾಗ ಸಂಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 7ನೇ ತರಗತಿಯಿಂದಲೇ ಕವಿತೆ ಬರೆಯುವ ಅಭ್ಯಾಸವನ್ನೂ ರೂಢಿಸಿಕೊಂಡಿರುವ ರೇಖಾ ಅವರಿಗೆ, ಪದಗಳು ಸಿಗದಿದ್ದಾಗ ಪತಿಯೇ ಮುಖ್ಯ ನಿಘಂಟು ಆಗುತ್ತಾರಂತೆ.

- ಸವಿತಾ ನಾಗೇಶ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com