

ಅವರು ಪರೀಕ್ಷೆ ಬರೆದು 32 ವರ್ಷಗಳೇ ಕಳೆದಿದ್ದವು. ಈಗ ಕನ್ನಡ ಎಂ.ಎ ಬರೆದಿದ್ದಾರೆ. ಅದೂ ಪದವಿ ಪಡೆಯಲು ಅಲ್ಲ, ಕನ್ನಡದಲ್ಲಿ ಪಾಂಡಿತ್ಯ ಗಳಿಸಲು!
ಕಲಿಕೆಗೆ ವಯಸ್ಸಿನ ಹಂಗಿಲ್ಲ ಎನ್ನುವುದನ್ನು ಮತ್ತೆ ನೆನಪಿಸಿರುವ ಜೈನ ಶ್ರಾವಕಿ ಸಾಧನಾ ಮಾತಾಜಿ. ಮೂಲತಃ ಹಾಸನದವರಾದ, ಪ್ರಸ್ತುತ ಕಾರ್ಕಳದಲ್ಲಿ ವಾಸಿಸುತ್ತಿರುವ 53 ವರ್ಷ ಪ್ರಾಯದ ಅವರು, ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಮೈಸೂರು ವಿವಿಯ ದೂರ ಶಿಕ್ಷಣ ಯೋಜನೆಯಡಿ ಕನ್ನಡ ಎಂಎ ಪರೀಕ್ಷೆ ಬರೆದಿದ್ದಾರೆ.
ಸನ್ಯಾಸ ಪಡೆದರು
ಹಾಸನದ ನಾಗಲಕ್ಷ್ಮೀ ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಒಮ್ಮೆ ಅವರು ಮನೆಯ ಬಳಿ ನಡೆದ ಜೈನರ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಅಲ್ಲಿ ತಮಗಿಂತ ಬಹಳ ಚಿಕ್ಕ ಪ್ರಾಯದ ಯುವತಿಯರಿಗೆ ಸನ್ಯಾಸ ದೀಕ್ಷೆ ನೀಡುವುದನ್ನು ಕಂಡು ಅವರೂ ಪರಿವರ್ತನೆಗೊಂಡರು. ಮನೆಗೆ ಹೋಗಿ ಮಕ್ಕಳ ಬಳಿ ತಾನು ಸನ್ಯಾಸಿಯಾಗುತ್ತೇನೆ ಎಂದು ಒಪ್ಪಿಗೆ ಪಡೆದರು. ಪತಿಯನ್ನೂ ಒಪ್ಪಿಸಿದರು. ಆಗ ಅವರಿಗೆ 36 ವರ್ಷ ವಯಸ್ಸು, ಉತ್ತರ ಭಾರತದ ಜೈನರ ಹಿರಿಯ ಮುನಿ ಆಚಾರ್ಯ ವಿದ್ಯಾಸಾಗರ ಮಹಾರಾಜ್ ಅವರಿಂದ ಆಜೀವ ಬ್ರಹ್ಮಚರ್ಯ ದೀಕ್ಷೆ ಪಡೆದು ಸಾಧನಾ ಮಾತಾಜಿ ಆದರು. ಆಗ ಅವರು ಬಿಎ ಪದವಿ ಪಡೆದು 16 ವರ್ಷಗಳೇ ಆಗಿದ್ದವು. ಇದೀಗ ಅವರು ಕಾರ್ಕಳದ ಜೈನ ಶ್ರಾವಕಿಯರ ಸಂಘದಲ್ಲಿ ಧರ್ಮ ಪ್ರವಚನಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕನ್ನಡ ಅಧ್ಯಯನದ ಸಂಕಲ್ಪ
ಅವರ ಗುರುಗಳು ಪ್ರವಚನ ನೀಡುವುದು ಹಿಂದಿ ಭಾಷೆಯಲ್ಲಿ. ಅದನ್ನು ಅರ್ಥ ಮಾಡಿಕೊಳ್ಳುವುದು ನಸಾಮಾನ್ಯರಿಗೆ ಕಷ್ಟ ಆಗುತ್ತಿರುವುದನ್ನು ಮನಗಂಡ ಸಾಧನಾ ಮಾತಾಜಿ, ಕನ್ನಡಕ್ಕೆ ಅದನ್ನು ತರ್ಜುಮೆ ಮಾಡಿ ಹೇಳುತ್ತಿದ್ದರು. ಕನ್ನಡದ ಮೇಲಿನ ಹಿಡಿತ ಅಷ್ಟಿಲ್ಲದಿದ್ದುದರಿಂದ ಕಷ್ಟವಾಗುತ್ತಿತ್ತು. ಅದಕ್ಕಾಗಿ ಕನ್ನಡವನ್ನು ಇನ್ನಷ್ಟು ಆಳವಾಗಿ ಅಧ್ಯಯನ ಮಾಡಬೇಕು ಎಂದುಕೊಂಡಾಗ ಅವರಿಗೆ ಹೊಳೆದದ್ದು ಕನ್ನಡ ಎಂಎ ಮಾಡುವುದು. ತರಗತಿಗೆ ಹೋಗಿ ಎಂಎ ಮಾಡುವುದು ಸಮಯ, ವಯಸ್ಸು ಕಾರಣದಿಂದ ಸಾಧ್ಯವಿಲ್ಲದಿದ್ದರಿಂದ ಅವರು ಮೈಸೂರು ವಿವಿಯ ದೂರ ಶಿಕ್ಷಣ ವ್ಯವಸ್ಥೆಯಲ್ಲಿ ಕಳೆದ ವರ್ಷ ಕನ್ನಡ ಎಂಎಗೆ ಸೇರಿದರು.
ಪ್ರಥಮ ವರ್ಷ ಶೇ.57 ಅಂಕಗಳನ್ನು ಗಳಿಸಿದ್ದಾರೆ. ಎರಡನೇ ವರ್ಷದ ಪರೀಕ್ಷೆ ಈಚೆಗಷ್ಟೇ ಮುಗಿದಿದೆ. 'ಯುವ ಪರೀಕ್ಷಾರ್ಥಿಗಳ ವೇಗದಲ್ಲಿ, ಅದೂ 32 ವರ್ಷಗಳ ನಂತರ ಪರೀಕ್ಷೆ ಬರೆಯುವುದು ಸ್ವಲ್ಪ ಕಷ್ಟ. ಉಳಿದವರು 25- 30 ಪುಟ ಬರೆಯುವಾಗ ನನಗೆ 18 - 20 ಪುಟ ಮಾತ್ರ ಬರೆಯಲಿಕ್ಕೆ ಆಗುತ್ತಿದೆ' ಎನ್ನುವ ಅವರ ಅಕ್ಷರಗಳು ಬಹಳ ಸುಂದರವಾಗಿವೆ. ಎಂಎ ಅಧ್ಯಯನದಿಂದ ತನ್ನ ಕನ್ನಡ ಸಾಕಷ್ಟು ಸುಧಾರಣೆಯಾಗಿದೆ ಎನ್ನುತ್ತಾರೆ ಅವರು.
- ಸುಭಾಶ್ಚಂದ್ರ ಎಸ್. ವಾಗ್ಳೆ