

ಆ ಗೊಂಬೆಗಳು ಕುಣಿಯುತ್ತವೆ. ಎದುರಿದ್ದವರನ್ನು ಹಾಸ್ಯದ ಹೊನಲಲ್ಲಿ ತೇಲಿಸುತ್ತವೆ. ಅದರೊಳಗಿದ್ದವರು ಒಬ್ಬ ವ್ಯಕ್ತಿ ಎನ್ನುವುದು ನಮ್ಮ ಕಲ್ಪನೆಗೂ ಬಾರದಂತೆ ಮನರಂಜನೆ ನೀಡುತ್ತವೆ!
ಹೀಗೆ ನಿರ್ಜೀವ ಗೊಂಬೆಗಳಿಗೂ ಜೀವ ತುಂಬುವ ಆ ಕಲಾವಿದ ಮಂಗಳೂರಿನ ಅಶೋಕ್ ಪೊಳಲಿ. ಏಳನೇ ತರಗತಿವರೆಗೆ ಓದಿರುವ ಇವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದವರು ಎನ್ನುವುದು ತುಳು ನಾಡಿನ ಹೆಮ್ಮೆ. ಗೊಂಬೆಗಳನ್ನು ತಾವೇ ತಯಾರಿಸಿ, ಅವುಗಳಿಗೆ ವಿಶೇಷ ರೂಪ ಕೊಟ್ಟು, ತಾವೇ ಧರಿಸಿ, ಹಾಡಿಗೆ ತಕ್ಕ ಹಾಗೆ ನೃತ್ಯ ಮಾಡಿ ಕಲಾರಸಿಕರನ್ನು ಹಾಸ್ಯದ ಹೊನಲಲ್ಲಿ ತೇಲುವಂತೆ ಮಾಡುವ ಇವರ ಕೌಶಲ ಜನರಿಗೆ ಅಚ್ಚರಿ ಮೂಡಿಸುತ್ತದೆ.
ಹವ್ಯಾಸಕ್ಕೆಂದು ಈ ಕಲೆಯನ್ನು ರೂಢಿಸಿಕೊಂಡ ಪೊಳಲಿ, ನಂತರ ಅದನ್ನೇ ಉದ್ಯೋಗವನ್ನಾಗಿ ಮಾಡಿಕೊಂಡರು. ಕರ್ನಾಟಕ ಮಾತ್ರವಲ್ಲದೆ ಕೇರಳ, ಗೋವಾಗಳಲ್ಲಿ; ಮುಂಬೈನಲ್ಲಿ; ಬಹರೈನ್, ದುಬೈಗಳಲ್ಲೂ ಪ್ರದರ್ಶನ ನೀಡಿದ್ದಾರೆ. 500ಕ್ಕೂ ಹೆಚ್ಚು ಪ್ರದರ್ಶನ ನೀಡಿರುವ ಇವರು 7 ಅಡಿ ಎತ್ತರದ ಕೋಳಿಯನ್ನು ಧರಿಸಿ ಮಾಡಿದ ನೃತ್ಯ ಅಪಾರ ಜನಮನ್ನಣೆ ಗಳಿಸಿದೆ. ನವಿಲು, ಉಷ್ಟ್ರ ಪಕ್ಷಿ, ತುಂಟ ಮಗು, ಕುಳ್ಳನ ನೃತ್ಯಗಳಿಗೆ ಹೊಸ ಸೇರ್ಪಡೆ ಎಂದರೆ ಸುದೀಪ್ ನಟನೆಯ ಈಗ, ಅಜ್ಜ-ಅಜ್ಜಿ ದ್ವಿಪಾತ್ರ.
ಹೊಸಹೊಸ ಪ್ರಯೋಗ ಮಾಡುವ ಬಯಕೆ ಹೊಂದಿರುವ ಇವರ ಕಲಾ ಜೀವನ ಪ್ರಾರಂಭವಾಗಿ 8 ವರ್ಷ ಕಳೆದಿದೆ. ಪ್ರಸಿದ್ಧಿಗೆ ಬರುತ್ತಿರುವುದು ಎರಡು ವರ್ಷಗಳಿಂದ ಈಚೆ.
ಭಾರಿ ಬೇಡಿಕೆ
ಇವರು ತಯಾರಿಸಿದ ಗೊಂಬೆ, ಮುಖವಾಡಗಳಿಗೆ ಭಾರಿ ಬೇಡಿಕೆ. ಹುಲಿವೇಷ, ಯಕ್ಷಗಾನ ಕಲಾವಿದರಷ್ಟೇ ಅಲ್ಲದೇ ಮನೆಯ ಅಲಂಕಾರಕ್ಕಾಗಿ ಮುಖವಾಡಗಳನ್ನು ಕೊಳ್ಳುವವರೂ ಇದ್ದಾರೆ. ಆವೆಮಣ್ಣು, ಅಂಟು, ಪೇಪರ್, ಪೈಬರ್ ಮುಖವಾಡ ತಯಾರಿಸುವಲ್ಲಿ ಇವರದು ವಿಶೇಷ ಪರಿಣಿತಿ. 'ನಾರಾಯಣ ಹೊಳ್ಳರ ಪ್ರೋತ್ಸಾಹದಿಂದ ಇಷ್ಟು ಮುಂದುವರಿದ್ದೇನೆ. ಜೊತೆಗೆ ಗೆಳೆಯರ ಸಹಾಯ ಕೂಡ ಇದೆ' ಎನ್ನುವ ಪೊಳಲಿ, 200ಕ್ಕೂ ಅಧಿಕ ಸನ್ಮಾನ ಸ್ವೀಕರಿಸಿದ್ದಾರೆ. ಐಡಿಯಲ್ ರಾಜ್ಯ ಪ್ರಶಸ್ತಿಯೂ ಸಂದಿದೆ.
ಎಲ್ಲ ಕಲಾವಿದರಿಗೂ ಇರುವಂತೆ ಇವರಿಗೂ ಆರ್ಥಿಕ ತಾಪತ್ರಯ. ಆದರೆ ಅದನ್ನು ತೋರ್ಪಡಿಸಿಕೊಳ್ಳದೇ ಸದಾ ನಗುವಿನ 'ಮುಖವಾಡ' ಧರಿಸಿರುತ್ತಾರೆ. ಸಂಪರ್ಕ: 9164225504.
- ಅಶ್ವಿನಿ ಎನ್.ಹಕ್ಲಾಡಿ