

ಇತ್ತೀಚಿನ ದಿನಗಳಲ್ಲಿ ಸ್ಯಾಕ್ಸೋಫೋನ್ ನುಡಿಸುವವರ ಸಂಖ್ಯೆ ವಿರಳ. ಹೆಚ್ಚಿನವರಿಗೆ ಇದರ ಅರಿವೇ ಇಲ್ಲ. ಆದರೆ ಸ್ಯಾಕ್ಸೋಫೋನನ್ನು ಸಂಪ್ರದಾಯಬದ್ಧವಾಗಿ ನುಡಿಸುವ ಕಲೆಯನ್ನು ವಂಶಪಾರಂಪರ್ಯವಾಗಿ ಪೋಷಿಸಿಕೊಂಡು ಬಂದಿದೆ ಪುತ್ತೂರು ತಾಲೂಕಿನ ಮೂಡಾಯೂರಿನ ದೇವಾಡಿಗ ಕುಟುಂಬ. ಸ್ಯಾಕ್ಸೋಫೋನ್ನಲ್ಲಿ ಸಾಕಷ್ಟು ಸಾಧನೆ ಮಾಡಬೇಕೆಂಬ ಕನಸು ಹೊತ್ತಿರುವ ಎಂ. ವೇಣುಗೋಪಾಲ ಇದೇ ಕುಟುಂಬದ ತರುಣ.
ಪ್ರಸಿದ್ಧ ನಾಗಸ್ವರ ವಾದಕ ದಿ.ಬಾಬು ಶೇರಿಗಾರ ಅವರ ವಂಶ ಕುಡಿ ಈತ. ಪ್ರಸ್ತುತ ಪುತ್ತೂರು ವಿವೇಕಾನಂದ ಕಾಲೇಜಿನ ತೃತೀಯ ಬಿ.ಎ ತರಗತಿ ವಿದ್ಯಾರ್ಥಿ. ತಂದೆಯ ಒತ್ತಾಯಕ್ಕೋಸ್ಕರ ಸ್ಯಾಕ್ಸೋಫೋನ್ ವಾದನ ಶುರು ಹಚ್ಚಿಕೊಂಡ ಈತ ಈಗ ತನ್ನ ನಿಜವಾದ ಪ್ರತಿಭೆ, ಸಾಮರ್ಥ್ಯ ತೋರುತ್ತಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಸ್ಯಾಕ್ಸೋಫೋನ್ ವಾದನದಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡರು. ಈಗಾಗಲೇ ಹಲವಾರು ಕಛೇರಿ ನೀಡಿರುವ ಇವರು ಪ್ರಪ್ರಥಮವಾಗಿ ಕಛೇರಿ ನೀಡಿದ್ದು ಪುತ್ತೂರು ತಾಲೂಕು ಎರಡನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ.
ಕುದ್ಮಾರು ವೆಂಕಟರಮಣ ಅವರಲ್ಲಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿ, ಈಗ ಸವಿತಾ ಅವರಲ್ಲಿ ಅಧ್ಯಯನ ಮುಂದುವರಿಸಿದ್ದಾರೆ. ಪುತ್ತೂರು ಶ್ರೀಧರ ಭಂಡಾರಿ ಅವರ ಬಳಿ ಯಕ್ಷಗಾನ ನಾಟ್ಯ, ಅರ್ಥಗಾರಿಕೆಯನ್ನೂ ಕಲಿಯುತ್ತಿದ್ದಾರೆ.
- ಯಶೋದ ಎ.ಆಲಂಗಾರು