

ವಿಶ್ವವಿಖ್ಯಾತ ಹಂಪಿಯ ಕಲ್ಲಿನ ರಥಕ್ಕೆ ಗೋಪುರ ಇದ್ದ ಕಾಲದ ಚಿತ್ರ ನೋಡಬೇಕೆ? ಗಾಂಧೀ ಟೋಪಿ ಎಂದು ಖ್ಯಾತಿ ಪಡೆದಿರುವ ಇಂತಹ ಟೊಪ್ಪಿಗೆಯನ್ನು ಸ್ವತಃ ಮಹಾತ್ಮಗಾಂಧಿ ಧರಿಸಿದ್ದನ್ನು ನೋಡುವ ಕುತೂಹಲವೇ? ಭವ್ಯ ವಿಧಾನಸೌಧ ನಿರ್ಮಾಣದ ವಿವಿಧ ಹಂತಗಳ ಛಾಯಾಚಿತ್ರಗಳನ್ನು ನೋಡುವ ಬಯಕೆಯೆ?ಹಾಗಿದ್ದರೆ ನೀವು ಒಂದು ಬಾರಿ ಕೊಪ್ಪಳಕ್ಕೆ ಬರಲೇಬೇಕು. ಉಪನ್ಯಾಸಕ ಲಿಂಗಣ್ಣ ಮೇಟಿಯವರ ಬಳಿ ಇಂಥ ಅಪರೂಪದ ಲಕ್ಷಾಂತರ ಚಿತ್ರಗಳ ಸಂಗ್ರಹವೇ ಇದೆ.
1977ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದ ವೇಳೆ ಗೆಳೆಯನೊಬ್ಬನ ಚಿತ್ರಗಳ ಸಂಗ್ರಹ ಕಂಡು ಸ್ಫೂರ್ತಿ ಪಡೆದ ಮೇಟಿಯವರು, ಮುಂದೆ ಇದನ್ನೇ ತಮ್ಮ ಹವ್ಯಾಸವಾಗಿ ಸ್ವೀಕರಿಸಿದರು. ಈಗ 90 ವಿಷಯಗಳಿಗೆ ಸಂಬಂಧಿಸಿದ 90 ಪ್ರತ್ಯೇಕ ಆಲ್ಬಮ್‌ಗಳಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಚಿತ್ರಗಳಿವೆ. ವಿವಿಧ ಬಗೆಯ ಶಿಲೆಗಳು, ನಾಣ್ಯಗಳು, ಹಳೆಯ ವಸ್ತುಗಳು ಹಾಗೂ ಅಂಚೆ ಚೀಟಿಗಳ ಅದ್ಭುತ ಸಂಗ್ರಹಗಳು ಮೇಟಿಯವರ ಮ್ಯೂಸಿಯಂ ವೈವಿಧ್ಯವನ್ನು ಹೆಚ್ಚಿಸಿವೆ.
ಆರಂಭದಲ್ಲಿ ಕೇವಲ ಚಿತ್ರಗಳನ್ನು ಸಂಗ್ರಹಿಸುತ್ತಿದ್ದ ಲಿಂಗಣ್ಣ ಮೇಟಿಯವರು, ನಂತರ ನೋಡುಗರ ಸಲಹೆಯಂತೆ ಚಿತ್ರಗಳಿಗೆ ಸಂಬಂಧಿಸಿದ ಕಾಲ, ಮಾಹಿತಿಗಳನ್ನು ಜೋಡಿಸತೊಡಗಿದರು. 1982ರಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಮೊದಲ ಪ್ರದರ್ಶನ ನೀಡಿದರು. ಆನಂತರ ಹೈದ್ರಾಬಾದ್, ಮದ್ರಾಸ್ ಸೇರಿದಂತೆ ದೇಶದ ವಿವಿಧೆಡೆ ನಡೆದ ಪ್ರದರ್ಶನಗಳಿಗೆ ಲೆಕ್ಕವಿಲ್ಲ. ಸಿದ್ಧಯ್ಯ ಪುರಾಣಿಕ, ಪಂ.ರಾಜೀವ ತಾರಾನಾಥ, ಬರಗೂರು ರಾಮಚಂದ್ರಪ್ಪ, ಬಿ.ಟಿ. ಲಲಿತಾನಾಯಕ, ಡಾ. ಪಂಚಾಕ್ಷರಿ ಹಿರೇಮಠ, ಶಿವಮೊಗ್ಗ ಸುಬ್ಬಣ್ಣ, ಕೇಂದ್ರದ ಮಾಜಿ ಸಚಿವೆ ರೇಣುಕಾ ಚೌಧರಿ, ಡಾ.ಮಲ್ಲಿಕಾರ್ಜುನ ಮನ್ಸೂರ, ಪ್ರೇಮಾ ಕಾರಂತ, ಡಾ.ಎಂ.ಎಂ.ಕಲಬುರ್ಗಿ, ಪುರುಷೋತ್ತಮ ಬಿಳಿಮಲೆ, ಕಿರಣ್ ಬೇಡಿ, ಉಪೇಂದ್ರಕುಮಾರ್, ಬಿ.ಕೆ.ಸುಮಿತ್ರಾ ಮತ್ತಿತರರು ಇವರ ಹವ್ಯಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೇಟಿಯವರ ಮನೋಬಲ ಎಂಥದ್ದು ನೋಡಿ. ಒಮ್ಮೆ ಚಿತ್ರದುರ್ಗ ಬಸ್‌ನಿಲ್ದಾಣದಲ್ಲಿ ನಿಂತಿದ್ದಾಗ ಅಪರಿಚಿತ ವ್ಯಕ್ತಿ ಬಾಳೆಹಣ್ಣನ್ನು ತಿಂದು ಸಿಪ್ಪೆಯನ್ನು ಒಂದು ಹಾಳೆಯಲ್ಲಿ ಸುತ್ತಿ ಎಸೆದ. ಆ ಹಾಳೆಯಲ್ಲಿದ್ದ ವಿಶಿಷ್ಟ ಪಕ್ಷಿಯ ಚಿತ್ರ ಮೇಟಿಯವರನ್ನು ಬಹುವಾಗಿ ಸೆಳೆದಿತ್ತು. 'ಈಗ ಬಿಟ್ಟರೆ ಮತ್ತೆ ಇಂಥ ಚಿತ್ರ ಸಿಗುವುದಿಲ್ಲ. ಯಾರು ಏನೆಂದುಕೊಂಡರೂ ಪರವಾಗಿಲ್ಲ' ಎಂದುಕೊಂಡು ಆ ಕಾಗದದ ಚೂರನ್ನು ತಂದು ಜತನದಿಂದ ಇರಿಸಿಕೊಂಡಿದ್ದಾರೆ.
ಲಿಂಗಣ್ಣನವರು ಕೊಪ್ಪಳದಂತಹ ಹಿಂದುಳಿದ ಪ್ರದೇಶದಲ್ಲಿದ್ದುಕೊಂಡು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪತ್ರಿಕೆಗಳಿಂದಲೂ ಚಿತ್ರ, ಮಾಹಿತಿಗಳನ್ನು ಕಲೆ ಹಾಕಿರುವುದು ಅವರ ಶ್ರಮಕ್ಕೆ ಹಿಡಿದ ಕನ್ನಡಿ.
ತುಂಬ ಪ್ರೀತಿ ಹಾಗೂ ಶ್ರದ್ಧೆಯಿಂದ ಈ ಕಾರ್ಯ ಮಾಡಿಕೊಂಡು ಬಂದಿರುವ ಮೇಟಿಯವರಿಗೆ ಚಿತ್ರಗಳ ಸಂಗ್ರಹ ಹಾಗೂ ಪ್ರದರ್ಶನದ ವೇಳೆ ಹಲವಾರು ಸಲ ಬೇಸರದ ಅನುಭವಗಳಾಗಿವೆ. ಅನೇಕ ಸಂದರ್ಭಗಳಲ್ಲಿ ಜನ ಸೇರಿಸುವ ಉದ್ದೇಶದಿಂದ ಇವರನ್ನು ಚಿತ್ರಗಳ ಪ್ರದರ್ಶನಕ್ಕೆ ಆಹ್ವಾನಿಸಿ, ಕನಿಷ್ಠ ಮೂಲಸೌಕರ್ಯಗಳನ್ನು ವ್ಯವಸ್ಥೆ ಮಾಡುವುದಿಲ್ಲ. ಲಿಂಗಣ್ಣನವರಿಗೆ ಆ ಕ್ಷಣಕ್ಕೆ ಬೇಸರ ತರಿಸಿದರೂ, ಉತ್ಸಾಹ ಕಳೆದುಕೊಳ್ಳದೇ ಕಾರ್ಯ ಮುಂದುವರೆಸಿದ್ದಾರೆ.
ಗಣಕೀಕರಣ
ಯಾರ ಸಹಾಯವೂ ಇಲ್ಲದೇ ಸ್ವಂತ ಖರ್ಚಿನಲ್ಲಿ ಇಂಥ ಅನನ್ಯ ಸಂಗ್ರಹ ಹೊಂದಿರುವ ಲಿಂಗಣ್ಣ ಮೇಟಿಯವರು, ತುಂಬ ಕಷ್ಟಪಟ್ಟು ಸಂಗ್ರಹಿಸಿರುವ ಈ ಚಿತ್ರಗಳನ್ನು ಗಣಕೀಕರಣಗೊಳಿಸುವ ಯೋಜನೆ ಹಾಕಿಕೊಂಡಿದ್ದಾರೆ. ಕಂಪ್ಯೂಟರನಲ್ಲಿ ಕೆಲಸ ಮಾಡುವ ಮಗ ನರೇಂದ್ರನ ನೆರವಿನೊಂದಿಗೆ ಮಹಾತ್ಮ ಗಾಂಧಿಯವರ ಸಾವಿರಾರು ಚಿತ್ರಗಳನ್ನು ಕಂಪ್ಯೂಟರ್‌ಗೆ ಅಳವಡಿಸಿದ್ದಾರೆ. ಇದು ತುಂಬ ದುಬಾರಿ ಕೆಲಸವಾದುದರಿಂದ ಸದ್ಯಕ್ಕೆ ಆ ಯೋಜನೆ ಅಲ್ಲಿಗೇ ಸ್ಥಗಿತಗೊಂಡಿದೆ. ಸಂಘ-ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಕೈ ಜೋಡಿಸಿದರೆ ಈ ಕೆಲಸಕ್ಕೆ ವೇಗ ಬರಬಹುದು. (ಸಂಪರ್ಕ: 9980646049)
ಅಪರೂಪದ ಕ್ಷಣಗಳು
ಮೇಟಿಯವರ ಸಂಗ್ರಹದಲ್ಲಿದ್ದ ಕನ್ನಡ ಚಲನಚಿತ್ರರಂಗದ ಚಿತ್ರಗಳನ್ನು ಡಾ.ರಾಜಕುಮಾರ್ ಅವರು 1989ರ ಮಾರ್ಚ್ 26ರಂದು ಸುಮಾರು ಎರಡು ತಾಸು ಕಾಲ ತನ್ಮಯರಾಗಿ ನೋಡಿ ಖುಷಿಪಟ್ಟಿದ್ದನ್ನು ಲಿಂಗಣ್ಣ ಹೆಮ್ಮೆಯಿಂದ ಸ್ಮರಿಸುತ್ತಾರೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಜರುಗಿದ ಮಹಾತ್ಮಗಾಂಧಿ ಕುರಿತ ಚಿತ್ರಗಳ ಪ್ರದರ್ಶನವನ್ನು ವೀಕ್ಷಿಸುತ್ತಿದ್ದ ರಾಜ್ಯಪಾಲ ಹನ್ಸರಾಜ್ ಭಾರಧ್ವಾಜ್ ಅವರು, ನಾಥೂರಾಮ್ ಗೋಡ್ಸೆಯನ್ನು ನ್ಯಾಯಾಲಯಕ್ಕೆ ಕರೆತರುತ್ತಿರುವ ಅಪರೂಪದ ಚಿತ್ರ ಕಂಡು ಲಿಂಗಣ್ಣನವರ ಶ್ರಮವನ್ನು ಕೊಂಡಾಡಿದರು.
- ಚಿತ್ರ-ಲೇಖನ: ಮಂಜುನಾಥ ಡಿ. ಡೊಳ್ಳಿನ