ಹೆಗಡೆ ಸ್ಪೆಷಲ್!

ಹೆಗಡೆ ಸ್ಪೆಷಲ್!
Updated on: 

ಮೆಣಸಿಕೇರಿಯ ಶರಶ್ಚಂದ್ರ ಹೆಗಡೆ ಅವರಿಗೆ ವ್ಯಾಪಾರದ ಕಸುಬಿನ ಹಿಂದುಮುಂದು ಗೊತ್ತಿರಲಿಲ್ಲ. ಅನಿವಾರ್ಯವಾಗಿ ಈ ಧುಮುಕಬೇಕಾಯಿತು. ಈಗ ಅದರಲ್ಲಿಯೇ ಯಶಸ್ಸು ಕಂಡು ನೆಮ್ಮದಿಯಿಂದ ಬಾಳುತ್ತಿದ್ದಾರೆ.
ಆ ಅನಿವಾರ್ಯತೆ ಸೃಷ್ಟಿಯಾದದ್ದು ಹೀಗೆ. ಅವರು ಹೀಪನಳ್ಳಿಯ ಸೇವಾ ಸಹಕಾರಿ ಸಂಘದಲ್ಲಿ ಕ್ಲರ್ಕ್ ಕಮ್ ಸೇಲ್ಸ್‌ಮನ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಸಂಬಳ ಸಂಸಾರದ ನಿರ್ವಹಣೆಗೆ ಸಾಕಾಗುತ್ತಿತ್ತು. ಇದ್ದುದ್ದರಲ್ಲಿಯೇ ಸುಖ, ಸಂತೋಷ ಕಂಡುಕೊಂಡಿದ್ದ ಈ ಕುಟುಂಬದಲ್ಲಿ ಒಮ್ಮೆಲೇ ಬಿರುಗಾಳಿ ಬೀಸಿತು.
ಶರಶ್ಚಂದ್ರರ ಬಾಳಸಂಗಾತಿ ರೇಖಾ ಅವರಿಗೆ ಆರೋಗ್ಯ ಹದಗೆಟ್ಟು ಹಾಸಿಗೆ ಹಿಡಿದರು. ಪತ್ನಿಯ ಆರೈಕೆಯಲ್ಲಿ ತೊಡಗಿಕೊಂಡು, ಅವರ ಚಿಕಿತ್ಸೆಗಾಗಿ ಹಣವನ್ನು ನೀರಿನಂತೆ ವ್ಯಯ ಮಾಡಬೇಕಾಯಿತು. ಸಹಜವಾಗಿಯೇ ಶರಶ್ಚಂದ್ರ ಹೆಗಡೆ ಅವರು ಸಾಲಿದ ಬಾಧೆಗೆ ಸಿಲುಕಿದರು. ಇದರಿಂದ ಮಾನಸಿಕ ನೆಮ್ಮದಿ ಕಳೆದುಕೊಂಡ ಅವರು, 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಸೊಸೈಟಿ ಕೆಲಸ ಬಿಟ್ಟು, ಸ್ವ-ಉದೋಗದತ್ತ ಹೆಜ್ಜೆ ಹಾಕಿದರು.
ಕೆಲಕಾಲ ಅಡಕೆ ಫಲಗುತ್ತಿಗೆ ಮಾಡಿದ ಶರಶ್ಚಂದ್ರ ಹೆಗಡೆ, ಕೆಲಸಗಾರರ ತೊಂದರೆಯಿಂದ ಅದನ್ನೂ ನಿಲ್ಲಿಸಿದರು. ನಂತರ 'ಅನ್ನಪೂರ್ಣ ಹೋಮ್ ಪೊಡಕ್ಟ್ಸ್‌' ಆರಂಭಿಸಿದ ದಂಪತಿ, ಶುರುವಿನಲ್ಲಿ ಆರು ಐಟಂಗಳನ್ನು ಸಿದ್ದಪಡಿಸಿ ಮಾರಾಟ ಮಾಡತೊಡಗಿದರು. ಹಂತಹಂತವಾಗಿ ತಮ್ಮ ಉತ್ಪನ್ನಗಳನ್ನು ವಿಸ್ತರಿಸಿ 36ಕ್ಕೂ ಹೆಚ್ಚು ಬಗೆಯ ತಿನಿಸುಗಳನ್ನು ಸಿದ್ದಪಡಿಸುತ್ತಿದ್ದಾರೆ.
ಹತ್ತು ವರ್ಷದಿಂದ ಇದ್ ಉದ್ಯೋಗದಲ್ಲಿ ನೆಮ್ಮದಿ ಕಂಡುಕೊಂಡಿರುವ ದಂಪತಿ, ಬಾಳೆಕಾಯಿ ಚಿಪ್ಸ್, ಹಲಸಿನ ಚಿಪ್ಸ್, ಹಾಗಲಕಾಯಿ ಚಿಪ್ಸ್, ಉಂಡ್ಲೆಕಾಳು, ಹಲಸಿನ ಬೇಳೆ ಒಬ್ಬಟ್ಟು, ಹಲಸಿನ ಕಾಯಿಯ ಹಪ್ಪಳ, ಹಲಸಿನ ಹಣ್ಣಿನ ಹಪ್ಪಳ, ತೊಡದೇವು, ಹತ್ತು ಬಗೆಯ ತರಕಾರಿ ಮತ್ತು ಅಕ್ಕಿ ಹಪ್ಪಳ; ಏಳು ಬಗೆಯ ಅಕ್ಕಿ ಸಂಡಿಗೆ..... ಹೀಗೆ ಬಗೆಬಗೆಯ ತಿಂಡಿ - ತಿನಿಸು ಸಿದ್ಧಪಡಿಸಿ ಮಾರಾಟ ಮಡುತ್ತಾರೆ. ಈ ತಿಂಡಿಗಳನ್ನು ಸ್ವತಃ ತಯಾರಿಸುವ ಈ ದಂಪತಿಗೆ 14ರ ಹರೆಯದ ಮಗ ವೆಂಕಟ್ರಮಣ ಕೂಡ ಕೈ ಜೋಡಿಸುತ್ತಾನೆ.
ಇವರು ತಮ್ಮ ಉತ್ಪನ್ನಗಳನ್ನು ಜನಜಂಗುಳಿ ಸೇರುವ ಸ್ಥಳಗಳಿಗೆ ಹೋಗಿ ಮಾರಾಟ ಮಾಡುತ್ತಾರೆ. ಶಿರಸಿಯ ಹಲಸಿನ ಮೇಳ, ಕದಂಬೋತ್ಸವ, ಕರಾವಳಿ ಉತ್ಸವ, ಕಿತ್ತೂರು ಉತ್ಸವ, ಹಂಪಿ ಉತ್ಸವ, ಬೆಂಗಳೂರಿನ ಕೃಷಿ ಮೇಳ, ಅಲ್ಲದೇ, ವಿಜಾಪುರ, ಜಮಖಂಡಿ, ಮುಧೋಳ, ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ.... ಇನ್ನಿತರ ಕಡೆಗಳಲ್ಲಿ ನಡೆಯುವ ಉತ್ಸವ-ಮೇಳಗಳಲ್ಲಿ ವ್ಯಾಪಾರ ಮಾಡುತ್ತಾರೆ.  ಈ ದಂಪತಿ ವಾರ್ಷಿಕ 3-4 ಲಕ್ಷ ರುಪಾಯಿ ವಹಿವಾಟು ನಡೆಸುತ್ತಾರೆ. ಇದರಲ್ಲಿಯೇ ಕಚ್ಚಾವಸ್ತುಗಳ ಖರೀದಿ, ಸಾಲ ಮರುಪಾವತಿ ಆಗಬೇಕು. ಶ್ರದ್ಧೆ, ನಿಷ್ಠೆಯಿಂದ ಸ್ವ-ಉದ್ಯೋಗದಲ್ಲಿ ತೊಡಗಿಕೊಂಡಿರುವ ಈ ಪುಟ್ಟ ಸಂಸಾರ ಸ್ವಾವಲಂಬಿಯಾಗಿ ಬದುಕುತ್ತಿದೆ. (ಸಂಪರ್ಕ: 9241050791)

ಚಿತ್ರ- ಬರಹ: ಗಣಪತಿ ಹಾಸ್ಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com