ಜ್ಞಾನ ಪೀಠ

ಜ್ಞಾನ ಪೀಠ
Updated on: 

ಮಠಗಳು ಕೇವಲ ಧಾರ್ಮಿಕ ಚಟುವಟಿಕೆಗಳಿಗಷ್ಟೇ ಸೀಮಿತವಲ್ಲ. ಬೇಕಾದರೆ ಸಂಡೂರಿನ ಪ್ರಭುದೇವರ ವಿರಕ್ತಮಠವನ್ನು ನೀವಿಲ್ಲಿ ವಿಶೇಷ ಉದಾಹರಣೆಯನ್ನಾಗಿ ತೆಗೆದುಕೊಳ್ಳಬಹುದು. ಸಾಹಿತ್ಯಾಸ್ತಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವ ಈ ಮಠ ಬಹುಶಃ ನಾಡಿನಲ್ಲೇ ಅಪರೂಪದ್ದು.
ಸುಮಾರು 25 ಸಾವಿರ ಪುಸ್ತಕವುಳ್ಳ ಗ್ರಂಥಾಲಯವನ್ನು ಇಲ್ಲಿ ಆರಂಭಿಸಲಾಗಿದೆ. ನಾಡಿನ ಸಕಲ ಕವಿಗಳ ಪುಸ್ತಕಗಳು ಇಲ್ಲಿ ಓದಲು ಸಿಗುತ್ತವೆ. ಕಾರ್ಯಕ್ರಮದಲ್ಲಿ ಅತಿಥಿಗಳಾದವರಿಗೆ ಹಾರ ತುರಾಯಿ ನೀಡದೆ, ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವ ಪರಿಪಾಠವನ್ನೂ ವಿರಕ್ತಮಠ ಸಂಪ್ರದಾಯ ಮಾಡಿಕೊಂಡಿದೆ.

ಸ್ವಾಮೀಜಿಯೇ ಶಿಕ್ಷಕರು!
ಸ್ವಾಮೀಜಿ ಎಂದರೆ ಗಂಭೀರ ಮುಖ, ಹಿತಮಿತ ವಚನಗಳನ್ನಾಡುವ ಕಾಯವೇ ಕಣ್ಮುಂದೆ ಬರುತ್ತದೆ. ಆದರೆ ಸಂಡೂರಿನ ಮಠದ ಪ್ರಭುದೇವ ಸ್ವಾಮೀಜಿ ಕೇವಲ ವೈಚಾರಿಕ ನೆಲೆಗಟ್ಟಿನಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳದೆ, ಮಠದ ಶಾಲೆಯಲ್ಲಿ 10ನೇ ತರಗತಿಯ ಮಕ್ಕಳಿಗೆ ನಿತ್ಯವೂ 2-3 ತಾಸು ಪಾಠ ಹೇಳುತ್ತಾರೆ.

ಬೃಹತ್ ಗ್ರಂಥಾಲಯ
ಯಾವ ಸಾರ್ವಜನಿಕ ಗ್ರಂಥಾಲಯಕ್ಕೂ ಕಮ್ಮಿ ಇಲ್ಲದಂತೆ ಇಲ್ಲಿ ಪುಸ್ತಕ ಭಂಡಾರವಿದೆ. ಸ್ವಾಮಿಗಳು ಎಲ್ಲಿಗೆ ಹೋದರೂ ಪುಸ್ತಕಗಳನ್ನು ಕೊಂಡು ತರುವುದನ್ನು ಮಾತ್ರ ಮರೆಯುವುದಿಲ್ಲ. ಪುಸ್ತಕ ಓದುವುದರಿಂದಲೇ ಮನುಷ್ಯನ ಆಚಾರ-ವಿಚಾರಗಳು, ಸನ್ನಡೆ ಸಾಧ್ಯ ಎಂಬುದನ್ನು ನಂಬಿದವರು ಇವರು. ಜನರಲ್ಲಿ ಓದುವ ಸಂಸ್ಕೃತಿ ಬೆಳೆಯಬೇಕೆಂಬುದು ಶ್ರೀಗಳ ಆಶಯ. ಪ್ರತಿ ಮನೆಯಲ್ಲಿ ದೇವರ ಕೋಣೆಯಂತೆ ಪ್ರತ್ಯೇಕ ಪುಸ್ತಕ ಕೋಣೆಯೂ ಇರಬೇಕೆಂಬ ಬಯಕೆ ಇವರದು. ಇಲ್ಲಿನ ಗ್ರಂಥಾಲಯದಲ್ಲಿ ಕಥೆ, ಕಾದಂಬರಿ, ವ್ಯಕ್ತಿಚಿತ್ರ, ಮಹಿಳಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಧಾರ್ಮಿಕ ವಿಚಾರ ಸೇರಿದಂತೆ ಹಲವು ಸಾಹಿತ್ಯ ಪ್ರಕಾರಗಳ ಕೃತಿಗಳು ಇಲ್ಲಿವೆ.

ಸಾಹಿತ್ಯ ಕಾರ್ಯಕ್ರಮ
ಮಠದಲ್ಲಿ ನಿರಂತರ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಎಲ್ಲಾ ಜಾತಿಯ ಮಕ್ಕಳಿಗೂ ಇಲ್ಲಿ ಉಚಿತ ವಸತಿ ನಿಲಯದ ಸೌಲಭ್ಯ ಕಲ್ಪಿಸಲಾಗಿದೆ. ಸುಮಾರು 500 ಮಕ್ಕಳು ಮಠದ ಶಾಲೆಯಲ್ಲಿ ಓದುತ್ತಿದ್ದಾರೆ. ಹೀಗೆ ಮಠವು ಪುಸ್ತಕ ಹವ್ಯಾಸ, ಶಿಕ್ಷಣ, ವೈಚಾರಿಕ, ಧಾರ್ಮಿಕ ಸಂಗತಿಗಳಲ್ಲಿ ಭಕ್ತರ ಹೊರತಾಗಿಯೂ ಗಮನ ಸೆಳೆದಿದೆ.

ಪುಸ್ತಕ ಪ್ರಕಾಶನ
ಈ ಮಠ ಪುಸ್ತಕಗಳನ್ನೂ ಪ್ರಕಟಿಸುತ್ತದೆ. ಪ್ರತಿವರ್ಷ ಸಾಹಿತ್ಯ, ಕಲೆ, ಸಾಮಾಜಿಕ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಮಠದ ವತಿಯಿಂದ 'ಬಸವ ಬೆಳಗು' ಗೌರವ ನೀಡಲಾಗುತ್ತದೆ. ಮಾಜಿ ಸಚಿವ ಎಂ.ವೈ. ಘೋರ್ಪಡೆ, ಮಾಜಿ ಸಂಸದ ಕೆ.ಎಸ್. ವೀರಭದ್ರಪ್ಪ, ಸಾಹಿತಿ ಕುಂ. ವೀರಭದ್ರಪ್ಪ, ಹಿರಿಯ ನ್ಯಾಯವಾದಿ ಮೃತ್ಯುಂಜಯಪ್ಪ, ಜಾನಪದ ತಜ್ಞ ಡಾ. ಬಸವರಾಜ ಮಲಶೆಟ್ಟಿ, ಸಂಡೂರಿನ ಡಾ. ರತ್ನಾಕರ ಶೆಟ್ಟಿ, ಪತ್ರಕರ್ತ ಸಿ.ಜೆ. ಹಂಪಣ್ಣ, ಧಾರವಾಡದ ನಿಜಗುಣ ಪಟ್ಟಣಶೆಟ್ಟಿ ಸೇರಿದಂತೆ ಹಲವರಿಗೆ ಈ ಗೌರವ ಸಂದಿದೆ.
ಮಠದ ಪ್ರಭುದೇವ ಸ್ವಾಮೀಜಿಯವರ ಸಾಹಿತ್ಯ ಪ್ರೇಮ ಇನ್ನೂ ಸಹಸ್ರಾರು ಜನರ ಹೃದಯ ತಲುಪಲಿ.

- ಶಶಿಧರ ಮೇಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com