ರೆಕ್ಕೆಯ ಸದ್ದು

ರೆಕ್ಕೆಯ ಸದ್ದು

ಗಾಳಿಗೆ ಗಾಳ ಹಾಕಿ ವಿದ್ಯುತ್ ಉತ್ಪಾದಿಸುತ್ತವೆ ಈ ಬೃಹತ್ ಫ್ಯಾನುಗಳು. ಗಾಳಿಯ ವೇಗ ಹೆಚ್ಚಾದಂತೆಲ್ಲ ಫ್ಯಾನುಗಳು ಎಬ್ಬಿಸುವ ಸದ್ದು ಅಡಿಯಲ್ಲಿ ನಿಂತವರ ಎದೆ ಬಡಿತ ಹೆಚ್ಚಿಸುತ್ತದೆ.
ಸೀಗೆಗುಡ್ಡ, ಹಾಸನದ ಮಡಿಲಲ್ಲೇ ಇರುವ ರಮಣೀಯ ಸ್ಥಳ. ದೂರದಿಂದ ನುಣುಪಾಗಿ ಕಾಣುವ ಗುಡ್ಡ ತನ್ನೊಳಗೆ ಅಸಂಖ್ಯ ಕಥನಗಳನ್ನು ಹುದುಗಿಸಿಕೊಂಡಿದೆ. ಗುಡ್ಡ ಏರುವ ದಾರಿ ತುಸು ಕಠಿಣ. ಕೊಂಚ ಎಚ್ಚರ ತಪ್ಪಿದರೂ ಬೈಕಿನೊಂದಿಗೆ ನಮ್ಮ ಸ್ಪೇರ್ ಪಾರ್ಟ್ಸೂ ಡ್ಯಾಮೇಜಾಗುವ ಸಾಧ್ಯತೆ ಇರುತ್ತದೆ. ಪಯಣದ ಶುರುವಿನಲ್ಲೇ ನಮಗೆ ಎದುರಾದದ್ದು ಬಂದೂಕು ಹಿಡಿದು ಕಾಡು ಹಂದಿಯ ಶಿಕಾರಿಗೆ ಅಣಿಯಾಗಿ ನಿಂತಿರುವವರ ಗುಂಪು. ನಮ್ಮನ್ನು ನಿಂತಲ್ಲೇ ಗುರಾಯಿಸುತ್ತಿದ್ದ ಅವರನ್ನು ಕಂಡು ಮನಸ್ಸು ಕೊಂಚ ಬೆದರಿತು.
ಇನ್ನೇನು ಗುಡ್ಡದ ತುತ್ತತುದಿ ತಲುಪಿಯೇ ಬಿಟ್ಟೆವೆಂದು ಬೀಗುವ ಹೊತ್ತಿನಲ್ಲಿ ಬೈಕು ಮತ್ತು ಅದನ್ನು ನಿಯಂತ್ರಿಸುವ ನಮ್ಮ ಕೌಶಲ್ಯದ ಪರೀಕ್ಷೆ ಶುರುವಾಯಿತು. ಪಲ್ಸರ್ರು ತನ್ನ ಖದರ್ರು ಕಳಕೊಂಡು ಹಿಮ್ಮುಖವಾಗಿ ಚಲಿಸಿತು. ಹೇಗೋ ಅದನ್ನು ಸಂಭಾಳಿಸಿಕೊಂಡು ಕೊನೆಗೂ ಗುರಿ ತಲುಪಿದ್ದಾಯ್ತು. ಗಾಳಿಯೊಂದಿಗೆ ಫ್ಯಾನಿನ ರೆಕ್ಕೆಗಳು ಸರಸವಾಡುತ್ತಿದ್ದವು. ಆದರೆ, ಒಂದು ಫ್ಯಾನು ಮಾತ್ರ ಮುನಿಸಿಕೊಂಡು, ಗಾಳಿಯೊಂದಿಗೆ ಮಾತು ಬಿಟ್ಟು ತಟಸ್ಥವಾಗಿತ್ತು. ತಿರುಗುತ್ತಿರುವ ಫ್ಯಾನಿನ ಅಡಿಯಲ್ಲಿ ನಿಂತ ನಮಗೆ ಗಾಳಿಯ ಗಡುಸುತನದ ಪರಿಚಯವಾಗತೊಡಗಿತು. ಕತ್ತು ಮೇಲೆತ್ತಿ ನೋಡುತ್ತಿದ್ದಂತೆಯೇ ತಲೆ ಗಿರಕಿ ಹೊಡೆಯಲಾರಂಭಿಸಿತು.
ನಾವು ನಿಂತಲ್ಲಿಗೆ ಅಲ್ಲಿನ ಸೆಕ್ಯೂರಿಟಿ ಬಂದರು. ಈ ಫ್ಯಾನುಗಳು ಮನುಷ್ಯನ ನಿದ್ದೆಗೆ ಹೇಗೆಲ್ಲ ಸಂಚಕಾರ ತಂದೊಡ್ಡುತ್ತವೆ ಎಂಬುದನ್ನೆಲ್ಲ ಹೇಳಿದರು. 'ಈಗೇನ್ ಸೌಂಡು ಸಾರ್, ನೀವು ರಾತ್ರಿ ಬಂದು ನೋಡ್ಬೇಕು ಈ ಫ್ಯಾನುಗಳ ಆರ್ಭಟನಾ. ನಮ್ಗಂತೂ ಕೇಳಿ ಕೇಳಿ ತಲೆ ನೋವು ಬರುತ್ತೆ. ಮಲ್ಗೋಕೇ ಆಗಲ್ಲ. ಅಷ್ಟು ಸೌಂಡ್ ಮಾಡ್ತವೆ' ಅಂತ ಫ್ಯಾನುಗಳ ವಿರುದ್ಧ ದೂರು ನೀಡಿದರು.
ಈ ಫ್ಯಾನಿನ ರೆಕ್ಕೆಗಳಿಗೆ ಹಕ್ಕಿಗಳು ಅಪ್ಪಳಿಸಿ ಅಲ್ಲೇ ಸಾವಿಗೀಡಾಗುವುದನ್ನು ಕೇಳಿದ್ದೇವೆ. ಆದರೆ, ಇವುಗಳ ಸದ್ದು ಏಕಾಂತವನ್ನು ಹೀಗೆಲ್ಲ ನುಂಗುತ್ತದೆ ಎಂಬುದನ್ನು ಕೇಳಿರಲಿಲ್ಲ. ಅವರ ಕೆಲಸ ಕಂಡು ಅಯ್ಯೋ ಎಂಬ ಮರುಕ ಹುಟ್ಟಿತು. ಜಾಸ್ತಿ ಹೊತ್ತು ನಾವೂ ಅಲ್ಲಿ ನಿಲ್ಲಲಿಲ್ಲ.

- ಎಚ್.ಕೆ. ಶರತ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com