ಕುದುರೆಯ ಕಲ್ಯಾಣದಲ್ಲಿ

ಕುದುರೆಯ ಕಲ್ಯಾಣದಲ್ಲಿ
Updated on: 

ಕಳೆದ ಇಪ್ಪತ್ತೈದು ವರ್ಷಗಳಿಂದ ಕುದುರೆಗಳನ್ನು ಸಾಕುತ್ತಿರುವ ಅಪರೂಪದ ಕುಟುಂಬವೊಂದು ರಾಯಬಾಗ್‌ನಲ್ಲಿದೆ. ಕಲ್ಯಾಣ್‌ರಾವ್ ದೇಶ್‌ಪಾಂಡೆಗೆ ಕುದುರೆ ಸಾಕಣೆ ನೆಚ್ಚಿನ ಹವ್ಯಾಸಗಳಲ್ಲೊಂದು. ದಿನದ ಇಂತಿಷ್ಟು ಸಮಯವನ್ನು ಕುದುರೆಗಳೊಂದಿಗೆ ಕಳೆಯುವ ಕಲ್ಯಾಣ್‌ರಾವ್ ಬಳಿ ಇದೀಗ ಮೂರು ಮರಿ ಕುದುರೆಗಳು ಸೇರಿ ಒಟ್ಟು ಒಂಭತ್ತು ಕುದುರೆಗಳಿವೆ. ಸಾಹಕಡ, ಮಾಲೆಗಾವ್, ಪಂಡರಾಪುರಗಳಲ್ಲಿ ಪ್ರತಿವರ್ಷ ಕುದುರೆಗಳ ಜಾತ್ರೆ ನಡೆಯುತ್ತದೆ. ಕುದುರೆ ಮಾರಾಟ ಮತ್ತು ಖರೀದಿಗೆ ಮುಕ್ತ ಅವಕಾಶವಿದ್ದು ಈ ಹಿಂದೆ ಜಾತ್ರೆಯಿಂದ ತಂದ 30 ಕುದುರೆಗಳು ಇವರಲ್ಲಿದ್ದುವು.
ನಾಲ್ಕರಿಂದ ಎಂಟು ವರ್ಷ ಪ್ರಾಯದ ಕುದುರೆಗಳು ಇವರ ಬಳಿಯಿದ್ದು, ಒಂದು ಕುದುರೆ 25ರಿಂದ 30 ವರ್ಷಗಳ ಕಾಲ ಬದುಕಬಲ್ಲದು. ಪಂಜಾಬ್, ಮರ್‌ವಾಡ್, ಕಾಟಿಯವಾಡ್, ಸಿಂಧ್ ಮುಂತಾದ ತಳಿಗಳು ಇಲ್ಲಿವೆ. ಬಿಳಿ ಬಣ್ಣದ ಕುದುರೆಗೆ ಬೇಡಿಕೆ ಹೆಚ್ಚು. ಎರಡನೇ ಸ್ಥಾನ ಕಪ್ಪು ಬಣ್ಣದ್ದು. ಬಣ್ಣ, ಕೈಕಾಲು, ಸುಳಿ, ಎತ್ತರ, ಸ್ವಭಾವವನ್ನು ನೋಡಿ ಕುದುರೆಗೆ ದರ ನಿಗದಿಯಾಗುತ್ತದೆ. ಮರಿಗೆ 50 ಸಾವಿರದಿಂದ 4 ಲಕ್ಷ ರೂಪಾಯಿಯವರೆಗೆ ದರವಿದೆ. ಮಾರಾಟ, ಮೆರವಣಿಗೆ, ನೃತ್ಯ ಮುಂತಾದ ಕಾರಣಗಳಿಗಾಗಿ ಕುದುರೆಗಳನ್ನು ಸಾಕಬಹುದು. ಆದರೆ ಕುದುರೆಯನ್ನು ಸಾಕುವುದು ಅಷ್ಟು ಸುಲಭದ ಮಾತಲ್ಲ.
ಹುಲ್ಲು, ಜೋಳ, ಮೇವು ಇವುಗಳ ಆಹಾರ. ಜೊತೆಗೆ ಇತರ ದವಸ ಧಾನ್ಯಗಳನ್ನು ನೀಡಬಹುದು. ಒಂದು ಕುದುರೆಗೆ ಪ್ರತಿದಿನ ಒಂದು ದನದ ಹಾಲನ್ನು ನೀಡಬೇಕು. ಮರಿ ಕುದುರೆಗೆ ಎರಡರಿಂದ ಐದು ಲೀಟರ್ ದನದ ಹಾಲು ಬೇಕು. ಪ್ರತಿದಿನ ಕುದುರೆಯನ್ನು ಪಾಲಿಶ್ ಮಾಡಬೇಕು. ಕುದುರೆಯ ಕೆಲಸವನ್ನು ನೋಡಿಕೊಳ್ಳುವುದಕ್ಕಾಗಿಯೇ ಅನುಭವಸ್ಥ ಮೂರು ಮಂದಿ ಕೂಲಿಯಾಳುಗಳು ಇವರ ಬಳಿಯಿದ್ದಾರೆ. ಒಂದು ಕುದುರೆಯನ್ನು ಸಾಕಲು ಒಂದು ವರ್ಷಕ್ಕೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ಖರ್ಚು ತಗಲುತ್ತದೆ. ಕುದುರೆಯನ್ನು ಕಟ್ಟಿ ಹಾಕಿಯೇ ಸಾಕಬೇಕು.
ಕುದುರೆಗಳಿಗೆ ಮೂರರಿಂದ ಇಪ್ಪತ್ತು ಲಕ್ಷದವರೆಗೆ ಬೇಡಿಕೆಯಿದೆ. ಮಾರಾಟದ ಉದ್ದೇಶದಿಂದ ಕುದುರೆಯನ್ನು ಸಾಕುವುದು ಅಷ್ಟು ಸುಲಭದ ಮಾತಲ್ಲ. ಹವ್ಯಾಸವಾಗಿ ಸಾಕುವುದಾದರೆ ಮರಿಗಳಿಂದಲೂ ಗಳಿಸಬಹುದೆಂಬುದು ಸಾಕಣೆಗಾರ ಕಲ್ಯಾಣ್‌ರಾವ್‌ರವರ ಅನುಭವದ ಮಾತು. ಯಾವುದೇ ಶಬ್ದವಾದರೂ ಕುದುರೆಗೆ ತಕ್ಷಣ ಗೊತ್ತಾಗುತ್ತದೆಯಂತೆ. ಸ್ವರವನ್ನು ಸುಲಭವಾಗಿ ಪತ್ತೆಹಚ್ಚುವ ಶಕ್ತಿ ಕುದುರೆಗಿದೆ. ಕಲ್ಯಾಣ್‌ರಾವ್‌ರವರ ಬಳಿಯಿರುವ ಕುದುರೆಗಳನ್ನು ಊರಿನಲ್ಲಿ ನಡೆಯುವ ಜಾತ್ರೆ, ಸಮಾರಂಭಗಳ ಮೆರವಣಿಗೆಗೆ ಕೊಂಡೊಯ್ಯುತ್ತಾರೆ. ಇಲ್ಲಿನ ಪ್ರತಿಯೊಂದು ಕುದುರೆಗೂ ಭಾಷೆಯನ್ನು ಕಲಿಸಿಕೊಟ್ಟಿದ್ದಾರೆ. ಮಾಲೀಕ ಸನ್ನೆಯನ್ನಿತ್ತರೆ ನೃತ್ಯ, ಓಟ ಎಲ್ಲಾವನ್ನು ಮಾಡಿ ತೋರಿಸುತ್ತವೆ. ಕುದುರೆ ಮೇಲೆ ಕುಳಿತು ಪಯಣಿಸುವುದೆಂದರೆ ಕುದುರೆಗಳಿಗೆ ತುಂಬಾ ಇಷ್ಟವಂತೆ. ಅವುಗಳನ್ನು ಪಳಗಿಸುವ ಚಾಕಚಕ್ಯತೆ ನಮ್ಮಲ್ಲಿರಬೇಕಷ್ಟೇ. ಜೊತೆಗೆ ನಾಲ್ಕೈದು ತಳಿಯ ನಾಯಿ ಮರಿಗಳು ಇವರ ಬಳಿಯಿವೆ. ಒಟ್ಟಾರೆ ಹವ್ಯಾಸವಾಗಿ ಕುದುರೆಯನ್ನು ಸಾಕುತ್ತಿರುವ ಕಲ್ಯಾಣ್‌ರಾವ್‌ರವರ ಪ್ರಾಣಿ ಪ್ರೀತಿಯನ್ನು ಮೆಚ್ಚಲೇಬೇಕು.

-ಚಂದ್ರಹಾಸ ಚಾರ್ಮಾಡಿ

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555 ಸಖಿ ಖರೀದಿಗಾಗಿ http://www.magzter.com/IN/Express-Network-Private-Limited/Sakhi/Women%27s-Interest//ಗೆ ಭೇಟಿನೀಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com