

ರಿಯಾಲಿಟಿ ಶೋ, ಸಿನಿಮಾ ಸಂಗೀತ, ನೃತ್ಯ ಇವೆಲ್ಲ ದೊಂಬರಾಟಗಳ ಆಚೆಯೂ ಶಾಸ್ತ್ರೀಯ ಕಲಾಪ್ರಾಕಾರಗಳನ್ನು ಸ್ವಯಂ ಆಸಕ್ತರಾಗಿ ತಪಸ್ಸಿನಂತೆ ಸಾಧನೆ ಮಾಡುವವರೂ ಇದ್ದಾರೆ ಎಂಬ ಸಮಾಧಾನ ನೀಡಲು ಇಲ್ಲೊಬ್ಬ ಯುವಕನಿದ್ದಾನೆ. ಅದರಲ್ಲೂ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತ ಎಂಬಂತಾಗಿರುವ ಭರತನಾಟ್ಯದಲ್ಲಿ ಪ್ರಾವೀಣ್ಯ ಪಡೆದಿರವುದು ನವೀನ್ ಆರ್. ಹೆಗೆಡೆ. ಈತ ಇತ್ತೀಚೆಗಷ್ಟೇ ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ರಂಗಪ್ರವೇಶ ಮಾಡಿದ್ದಾನೆ.
ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಬಗೆ ಬಗೆಯ ನರ್ತನಕ್ಕೆ ತನ್ನ ಪುಟ್ಟ ಕಂದನ ಹೆಜ್ಜೆಗಳು ತಾನೇ ತಾನಾಗಿ ನರ್ತಿಸಲಾ ರಂಭಿಸಿದ್ದನ್ನು ಕಂಡ ತಾಯಿ ನಿರ್ಮಲ ಆರ್. ಹೆಗಡೆ ತಡ ಮಾಡದೆ ನಾಟ್ಯದ ತರಗತಿಗೆ ಸೇರಿಸಿಬಿಟ್ಟರು. ಆ ತಾಯಿಯ ಅಂದಿನ ದೂರದೃಷ್ಟಿ ಇಂದು ಪುತ್ರ ನವೀನ್ ಆರ್. ಹೆಗೆಡೆಯನ್ನು ಭರತನಾಟ್ಯ ಕ್ಷೇತ್ರದಲ್ಲಿ ಇಷ್ಟು ಇನ್ನಷ್ಟು ಮತ್ತಷ್ಟು ದೂರ ಸಾಗುವ ಲಕ್ಷಣಗಳು ಅವನ ಆಸಕ್ತಿಯಲ್ಲಿವೆ.
ಶಿವಮೊಗ್ಗ ಜಿಲ್ಲೆಯ ಸಾಗರದ ಸುಪ್ರಸಿದ್ಧ ಆಯುರ್ವೇದ ವೈದ್ಯ ಆರ್. ಹೆಗಡೆ ಅವರ ಹತ್ತು ವರ್ಷ ಭರತನಾಟ್ಯದ ಪ್ರಾಥಮಿಕ ಅಭ್ಯಾಸವನ್ನು ಕಲಾಕೇಂದ್ರದ ನಾಟ್ಯಾಚಾರ್ಯ ವಿದ್ವಾನ್ ಗೋಪಾಲ್ ಅವರಲ್ಲಿ ಪಡೆದರು. ನಂತರ ಬೆಂಗಳೂರಿನ ಪ್ರಖ್ಯಾತ ನೃತ್ಯ ಕಲಾವಿದರಾದ ನಿರುಪಮಾ ರಾಜೇಂದ್ರ ಹಾಗೂ ಟಿ.ಡಿ ರಾಜೇಂದ್ರ ಅವರಲ್ಲಿ ಭರತನಾಟ್ಯ ಪ್ರೌಢ ಶಿಕ್ಷಣವನ್ನು ನಾಲ್ಕು ವರ್ಷಗಳಿಂದ ಪಡೆಯುತ್ತಾ ಪ್ರೌಢಿಮೆಯನ್ನು ಗಳಿಸುವತ್ತ ಹೆಜ್ಜೆ ಹಾಕಿದ್ದಾರೆ. ಜೊತೆಜೊತೆಗೆ ತಂಜಾವೂರಿನ ಸುಪ್ರಸಿದ್ಧ ಶಾಸ್ತ್ರಾ ವಿಶ್ವವಿದ್ಯಾಲಯದಲ್ಲಿ ಪ್ರಖ್ಯಾತ ನರ್ತಕಿ ಹಾಗೂ ಗುರು ಡಾ. ಪದ್ಮಾ ಸುಬ್ರಹ್ಮಣ್ಯಮ್ ಅವರ ಮಾರ್ಗದರ್ಶನದಲ್ಲಿ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ ಕೋರ್ಸ್ ಕೂಡ ಮಾಡುತ್ತಿದ್ದಾರೆ.
ನವೀನ ನರ್ತನ
ಈಗಾಗಲೇ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಉತ್ಸವಗಳಲ್ಲಿ ಅಭಿನವ ಕಲಾಕೇಂದ್ರದ ಅಡಿಯಲ್ಲಿ ಪ್ರದರ್ಶನ ನೀಡಿರುವ ನವೀನ್, ನೂರಾರು ಸೋಲೊ ಕಾರ್ಯಕ್ರಮಗಳನ್ನೂ ನೀಡಿದ್ದಾರೆ. ಸುಬ್ರಮಣ್ಯ ಭಾರತಿ ಅವರ ಪ್ರಸಿದ್ಧವಾದ ಶುಟೃಮ್ ಜಿ ಕೃತಿಯನ್ನು ಪ್ರಸ್ತುತಪಡಿಸುವಲ್ಲಿ ಇವರು ಚಾಣಾಕ್ಷ. ಚಿಗುರು ಮೀಸೆಯ ಈ ಯುವಕನ ಹೊಂಗನಸುಗಳು ಈಗಷ್ಟೇ ಚಿಗುರೊಡೆಯುತ್ತಿವೆ. ತನ್ನೂರು ಸಾಗರದಲ್ಲಿ ಬಹು ದೊಡ್ಡ ನಾಟ್ಯ ಶಾಲೆ ಆರಂಭಿಸಿ ಸಾಗರದ ಪ್ರತಿಭೆಗಳು ಸಾಗರದಾಚೆಗೂ ನಾಟ್ಯ ಪ್ರದರ್ಶಿಸುವಂತಾಗಬೇಕು. ಭಾರತೀಯ ಕಲೆಗೆ ವಿಶ್ವಮಾನ್ಯತೆ ಸದಾ ಇರುವಂತೆ ಕಾಪಾಡಬೇಕೆಂಬುದೇ ನವೀನ್ ಕನಸು. ಇದು ನನಸಾಗುವಂತಾಗಲಿ ಎನ್ನುವ ಹಾರೈಕೆ ನಮ್ಮದು.
ಚಿನ್ಮಯ ರಾವ್ ಹೊನಗೋಡು