
ಮೂಡುಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಓದಿ, ಬೆಂಗಳೂರಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಆಶಾ ಭಟ್ 'ಮಿಸ್ ದಿವಾ ಯೂನಿವರ್ಸ್ 2014'ರ ಎರಡನೇ ರನ್ನರ್ ಅಪ್. ಅಷ್ಟೇ ಅಲ್ಲದೆ ಬುದ್ಧಿಮತ್ತೆ ಸ್ಪರ್ಧೆಯಲ್ಲಿನ ಗರಿಯೂ! ಇದೀಗ ಪೊಲ್ಯಾಂಡ್ ದೇಶದಲ್ಲಿ 'ಮಿಸ್ ಸುಪ್ರನ್ಯಾಷನಲ್' ಕಿರೀಟ ಧರಿಸಿದ್ದಾರೆ.
ಸೌಂದರ್ಯ ಎನ್ನುವುದು ಕೇವಲ ಬಾಹ್ಯರೂಪಕ್ಕೆ ಸಂಬಂಧಿಸಿದ್ದಲ್ಲ, ಅದು ದಿನನಿತ್ಯದ ಬದುಕಿಗೆ ಸಂಬಂಧಿಸಿದ್ದು. ಹಾಗೆಯೇ ಸೌಂದರ್ಯ ಸ್ಪರ್ಧೆಗಳು ಕೇವಲ ದೇಹದ ದೃಷ್ಟಿಕೋನದಿಂದ ಮಾತ್ರ ನಡೆಯುವುದಲ್ಲ. ಆತ್ಮವಿಶ್ವಾಸ, ಮಾತು, ನಡೆ ನುಡಿ ಹೀಗೆ ನೂರೆಂಟು ವಿಷಯಗಳನ್ನು ಆಧರಿಸಿದ್ದು ಎನ್ನುತ್ತಾರೆ ಬೆಳದಿಂಗಳ ಬಾಲೆ, ಅಚ್ಚ ಕನ್ನಡದ ಹುಡುಗಿ ಭದ್ರಾವತಿಯ ಆಶಾ ಭಟ್.
ಆಶಾರ ತಂದೆ ಸುಬ್ರಮಣ್ಯ ಭಟ್, ತಾಯಿ ಶ್ಯಾಮಲ ಭಟ್. ಇವರು ಕರಾವಳಿ ಕಡೆಯವರಾದರೂ ಬಹಳ ವರ್ಷಗಳಿಂದ ನೆಲೆ ನಿಂತಿರುವುದು ಭದ್ರಾವತಿಯಲ್ಲಿ. ಹೀಗಾಗಿ ತಾನು ಅಪ್ಪಟ ಭದ್ರಾವತಿಯವಳು ಎಂದು ಮಂದಸ್ಮಿತರಾಗಿ ನುಡಿವ ಆಶಾ, ಪ್ರೌಢಶಾಲೆ ತನಕ ಓದಿದ್ದು ಇಲ್ಲಿನ ಸೈಂಟ್ ಚಾರ್ಲ್ಸ್ ಶಾಲೆಯಲ್ಲಿ. ಆ ದಿನಗಳಲ್ಲಿಯೇ ನೃತ್ಯ, ಕಲೆ, ಸಂಗೀತ ಹೀಗೆ ಎಲ್ಲವನ್ನು ವಿಪರೀತವಾಗಿ ಪ್ರೀತಿಸುತ್ತಿದ್ದ ಆಶಾಗೆ ನಾಟಕ ನಿರ್ದೇಶನದಲ್ಲಿಯೂ ಆಸಕ್ತಿ. ಹೀಗಾಗಿ ಒಮ್ಮೆ ಶಾಲೆಯ ವಾರ್ಷಿಕೋತ್ಸವದ ಸಲುವಾಗಿ ರಾಮಾಯಣವನ್ನು ಆಧರಿಸಿದ ನಾಟಕವನ್ನು ನಿರ್ದೇಶಿಸಿ ಸೈ ಎನ್ನಿಸಿಕೊಂಡಿದ್ದಿದೆ. ಆನಂತರದ ಓದು ಮೂಡುಬಿದರೆಯ ಆಳ್ವಾಸ್ ಕಾಲೇಜಿನಲ್ಲಿ. ಪಠ್ಯದೊಂದಿಗೆಪಠ್ಯೇತರ ಚಟುವಟಿಕೆಗಳಲ್ಲಿ ಪಾದರಸದಂತೆ ಭಾಗಿಯಾಗುತ್ತಿದ್ದ ಆಶಾ ಅಲ್ಲಿ ಉತ್ತಮ ಎನ್‌ಸಿಸಿ ಕೆಡೆಟ್ ಆಗಿಯೂ ಗುರುತಿಸಿಕೊಂಡರು. ಅದೇ ದಿನಗಳಲ್ಲಿ ದಿಲ್ಲಿಯಲ್ಲಿ ನಡೆದಗಣರಾಜ್ಯೋತ್ಸವ ಪೆರೇಡ್‌ನಲ್ಲಿಯೂ ಹೆಜ್ಜೆ ಹಾಕಿದರು. ಅದೇ ರೀತಿ ಸಾರ್ಕ್ ದೇಶಗಳ ಯುವ ಸಮ್ಮೇಳನದಲ್ಲಿ ಭಾರತವನ್ನುಪ್ರತಿನಿಧಿಸಿ ಬಂದರು.
ಹೀಗೆ ಕ್ರಿಯಾಶೀಲ ವ್ಯಕ್ತಿತ್ವದ ಆಶಾ,ಬೆಂಗಳೂರಿನ ಎಂಜಿನಿಯರಿಂಗ್ ಕಾಲೇಜಿಗೆ ಸೇರಿದ ಮೇಲೆ ಸ್ನೇಹಿತರ ಒತ್ತಾಯಕ್ಕೆಕಟ್ಟುಬಿದ್ದು ರ್ಯಾಂಪ್ ಹತ್ತುವ ನಿರ್ಧಾರಕ್ಕೆ ಬಂದರು. ಏಳು ಇಂಚಿನ ಹೈ ಹೀಲ್ಡ್ ಚಪ್ಪಲಿಗಳು, ಕ್ಯಾಟ್‌ವಾಕ್ ಮಾಡುವಾಗ ಎದುರಿಸುವ ಸಮಸ್ಯೆಗಳು, ಭಾಷೆ, ಹಾವ- ಭಾವ ಮುಂತಾದ ಸಮಸ್ಯೆಗಳನ್ನೆದುರಿಸಬೇಕಾಗಿ ಬಂದರೂ ಅದರಲ್ಲೂ ಹೊಸತನವನ್ನು ಕಾಣುತ್ತ ರ್ಯಾಂಪಿನ ಮೇಲೆ ಹೆಜ್ಜೆ ಹಾಕಿಬಿಟ್ಟರು.
ಯಶಸ್ಸು ಬೆನ್ನು ಹತ್ತಿತ್ತು. 'ಮಿಸ್ ದಿವಾ ಯೂನಿವರ್ಸ್ 2014'ರ ಎರಡನೇ ರನ್ನರ್ ಅಪ್ ಕಿರೀಟ ಇವರ ಮುಡಿಗೇರಿತು. ಅಷ್ಟೇಅಲ್ಲದೆ ಬುದ್ಧಿಮತ್ತೆ ಸ್ಪರ್ಧೆಯಲ್ಲಿನ ಗರಿಯೂ ಮುಡಿಗೇರಿದೆ. ಇದೀಗ ಪೊಲ್ಯಾಂಡ್ ದೇಶದಲ್ಲಿ ನಡೆದ 'ಮಿಸ್ ಸುಪ್ರನ್ಯಾಷನಲ್' ಸ್ಪರ್ಧೆಯಲ್ಲೂ ಗೆಲ್ಲುವ ಮೂಲಕ ಈವರೆಗೂ ಭಾರತದ ಯಾವ ಸ್ಪರ್ಧಿಯೂ ಗೆಲ್ಲದ ಮಿಸ್ ಸುಪ್ರ ನ್ಯಾಷನಲ್ ಕಿರೀಟವನ್ನು ಧರಿಸಿದ್ದಾರೆ.
-ಹರ್ಷ ಕೂದುವಳ್ಳಿ
Advertisement