ರತನ್ ಎಂಬ ರತ್ನ

ಜೀವನದಲ್ಲೊಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲು ಅನೇಕರು ಹಿಂದು ಮುಂದು...
ಉದ್ಯಮಿ ರತನ್ ಟಾಟಾ
ಉದ್ಯಮಿ ರತನ್ ಟಾಟಾ
Updated on

ಜೀವನದಲ್ಲೊಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲು ಅನೇಕರು ಹಿಂದು ಮುಂದು ನೋಡುತ್ತಾರೆ. ಅವರೊಂದು ನಿರ್ಧಾರಕ್ಕೆ ಬರುವುದರೊಳಗೆ ಸುವರ್ಣ ಅವಕಾಶವೊಂದು ಕೈ ತಪ್ಪಿರುತ್ತೆ. ಯಶಸ್ವಿಗಳು ಎನಿಸಿಕೊಂಡವರು ಮೊದಲು ಒಂದು ನಿರ್ಧಾರಕ್ಕೆ ಬರುತ್ತಾರೆ. ನಂತರ ಆ ನಿರ್ಧಾರವನ್ನು ದಿಟ್ಟ ಮಾರ್ಗದಲ್ಲಿ ಜಾರಿಗೊಳಿಸಿ, ಜಯಲಕ್ಷ್ಮಿಯೇ ಇವರನ್ನು ಹುಡುಕಿಕೊಂಡು ಬರುಂತೆ ಮಾಡಿಕೊಳ್ಳುತ್ತಾರೆ. ಇಂಥ ರಿಸ್ಕ್ ತೆಗೆದುಕೊಳ್ಳುವುದರಿಂದಲೇ 'ಜಯ' ಹಾಗೂ 'ಲಕ್ಷ್ಮಿ'ಯರಿಬ್ಬರನ್ನೂ ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.

ಅದಕ್ಕೆ ಕೆಲವರು ಯಾವುದೇ ಗಾಡ್‌ಫಾದರ್‌ಗಳಿಲ್ಲದೆಯೂ ಜೀವನದಲ್ಲಿ ಮಹತ್ತರವಾದದ್ದನ್ನು ಸಾಧಿಸೋದು. ಇಂಥ ವ್ಯಕ್ತಿಗಳ ಸಾಲಿನಲ್ಲಿ ಭಾರತದ ಅತ್ಯುನ್ನತ ಉದ್ಯಮಿ ರತನ್ ಟಾಟಾ ಸೇರುತ್ತಾರೆ. ಬ್ಲೂ ಕಾಲರ್ ಕಾರ್ಮಿಕನಾಗಿ ಕಂಪನಿ ಸೇರಿ ಉಪ್ಪಿನಿಂದ ಹಿಡಿದು, ಬಸ್‌ನವರೆಗೂ ಅನೇಕ ಉತ್ಪನ್ನಗಳನ್ನು ತಯಾರಿಸಿ ಜನ ಸಾಮಾನ್ಯರಿಗೆ ಟಾಟಾ ಹೆಸರು ಚಿರಪರಿಚಿತವಾಗುವಂತೆ ಮಾಡಿದ ಕೀರ್ತಿ ರತನ್‌ಗೇ ಸಲ್ಲುತ್ತದೆ. ತಳಮಟ್ಟದಿಂದ ಕಂಪನಿಯ ಆಗುಹೋಗುಗಳನ್ನು ಅರ್ಥ ಮಾಡಿಕೊಂಡಿದ್ದರಿಂದಲೇ ರತನ್‌ಗೆ ಕಾರ್ಮಿಕರಾದಿಯಾಗಿ ಉನ್ನತ ಮಟ್ಟದ ಉದ್ಯೋಗಿಗಳ ಕಷ್ಟಸುಖಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗಿದ್ದು, ಲೀಡರ್‌ಗೆ ಅನ್ವರ್ಥ ಎನ್ನುವಷ್ಟರಮಟ್ಟಿಗೆ ಬೆಳೆದಿದ್ದು.

ಮಾತಿಗೆ ಹೆಚ್ಚು ಬೆಲೆ ನೀಡದೇ ಎಲ್ಲವನ್ನೂ ಕಾರ್ಯಗತಗೊಳಿಸಿದ್ದರಿಂದಲೇ ರತನ್ ಗ್ರೇಟ್ ಅನಿಸೋದು. ಜನರಿಗೆ ಅವಶ್ಯಕತೆ ಇದೆ ಎಂಬುದು ಅರಿವಿಗೆ ಬಂದ ಕೂಡಲೇ ತಕ್ಷಣವೇ ಜಾರಿ ತಂದಿದ್ದರಿಂದ ಟಾಟಾ ಜನರ ಕಂಪನಿಯಾಗಿ ಬೆಳೆಯಿತು. ಈ ಗುಣದಿಂದಲೇ ದೇಶದ ಸಾಮಾನ್ಯನೂ ಕಾರು ಕೊಳ್ಳುವಂಥ ಆಸೆಯನ್ನು ಈಡೇರಿಸಿದ್ದು. ನ್ಯಾನೋ ಎಂಬ ಲಕ್ಷ ರುಪಾಯಿ ಕಾರನ್ನು ಮಾರುಕಟ್ಟೆಗೆ ಬಿಟ್ಟಿದ್ದೇ ಶ್ರೀ ಸಾಮಾನ್ಯನ ಭಾವನೆಗಳಿಗೆ ರತನ್ ಸ್ಪಂದಿಸಿದ್ದಕ್ಕೆ ಒಳ್ಳೆಯ ಉದಾಹರಣೆ.

ಸಾಮಾನ್ಯರಂತೆ ಕಂಪನಿಯಲ್ಲಿ ದುಡಿದು, ಎಲ್ಲರಿಗೂ ದುಡಿಯುವಂತೆ ಪ್ರೇರೇಪಿಸುವ ಧೀಶಕ್ತಿ ರತನ್. ಅದಕ್ಕೆ ತಮ್ಮನ್ನು ನಂಬಿದವರ ಜೀವನಮಟ್ಟವನ್ನು ಸುಧಾರಿಸುವುದೇ ಕಂಪನಿಯ ಧ್ಯೇಯ ವಾಕ್ಯವಾಗುವಂತೆ ಮಾಡಿದರು. ತಮ್ಮ ವಿಶೇಷ ದೂರ ದೃಷ್ಟಿಯಿಂದ ಕಂಪನಿ, ಉದ್ಯೋಗಿಗಳ ಅಭಿವೃದ್ಧಿಯೊಂದಿಗೆ ಸರ್ವತೋಮುಖ ಸಮಾಜದ ಏಳ್ಗೆ ಬಗ್ಗೆಯೂ ರತನ್‌ಗೆ ಕಾಳಜಿ ಇತ್ತು. ಮೂರು ದಶಕಗಳ ಹಿಂದಯೇ ರತನ್ ಕಂಪನಿಯು ಪ್ರಗತಿ ಬಗ್ಗೆ ತಮ್ಮದೇ ಆದ ದೃಷ್ಟಿಕೋನವನ್ನಿಟ್ಟಿಕೊಂಡು ನೀಲಿ ನಕ್ಷೆಯೊಂದನ್ನು ತಯಾರಿಸಿಕೊಂಡಿದ್ದರು. ಆ ದೂರದೃಷ್ಟಿಯ ಸಾಕಾರವೇ ಇವತ್ತಿನ ಟಾಟಾ ಕಂಪನಿ ವಿಶ್ವ ಮಾನ್ಯತೆ ಪಡೆಯಲು ಸಾಧ್ಯವಾಗಿದ್ದು ಹಾಗೂ ನ್ಯಾನೋ ಆವಿಷ್ಕಾರವಾಗಿದ್ದು.

ವಿಶಾಲ ಹೃದಯಿ
ಕಂಪನಿಯ ಉದ್ಯೋಗಿಗಳು, ಸಿಬ್ಬಂದಿ, ಸಮಾನರು ಅಷ್ಟೇ ಅಲ್ಲ ಮಾಧ್ಯಮದ ಮನಸ್ಸನ್ನು ಗೆಲ್ಲೋದು ರತನ್‌ರಂಥ ದೊಡ್ಡ ಉದ್ಯಮಿಗಳಿಗೆ ತುಸು ಕಷ್ಟ. ಆದರೆ, ತಮ್ಮ ಮೃದು ಮಾತಿನಿಂದ ಎಲ್ಲರ ಹೃದಯವನ್ನೂ ಗೆದ್ದ ಯಶಸ್ವಿ ಉದ್ಯಮಿ ಇವರು.

ಎಂಥದ್ದೇ ಕಠಿಣ ಪರಿಸ್ಥಿತಿ ಎದುರಾಗಲಿ, ನಗ್‌ನಗ್ತಾನೇ ಎಲ್ಲವನ್ನೂ ನಿಭಾಯಿಸಬಲ್ಲರು. ಅಷ್ಟೇ ಅಲ್ಲ ತಮ್ಮ ಉಡುಪುಗಳಿಂದಲೂ ರತನ್ ಎಲ್ಲರನ್ನೂ ಆಕರ್ಷಿಸುತ್ತಾರೆ. ಭಾಷೆಗೆ ತಕ್ಕಂತೆ ಆಂಗಿಕ ಭಾಷೆ, ಅಲ್ಲದೇ ಎಂಥದ್ದೇ ಪರಿಸ್ಥಿತಿ ಎದುರಾಗಲಿ ಸದಾ ಶಾಂತವಾಗಿ, ಹಸನ್ಮುಖಿಯಾಗಿರುವ ಮುಕಾರವಿಂದವೂ ಎಂಥವರನ್ನೂ ಬೇಕಾದರೂ ಆಕರ್ಷಿಸಬಲ್ಲದು.

ಅಪ್ಪ ಹಾಕಿದ ಮರಕ್ಕೆ ಜೋತು ಬಿದ್ದವರಲ್ಲ ರತನ್. ಕಾಲ ಕಾಲಕ್ಕೆ ತಂತ್ರಜ್ಞಾನದಲ್ಲಾದ ಬೆಳವಣಿಗೆಯನ್ನು ಗಮನಿಸುವ ಸೂಕ್ಷ್ಮಮತಿ. ತಂತ್ರಜ್ಞಾನವನ್ನು ಕಂಪನಿಯ ಉತ್ಪನ್ನಗಳಲ್ಲಿ ಅಳವಡಿಸಿಕೊಂಡವರು. ಹಾಗಂತ ಕೇವಲ ವ್ಯವಹಾರ, ವ್ಯಾಪಾರದಲ್ಲಿಯೇ ತಮ್ಮನ್ನು ತಾವು ತೊಡಗಿಸಿಕೊಂಡವರೂ ಇವರಲ್ಲ. ಕಲೆ, ಸಂಸ್ಕೃತಿಯೆಡೆಗೆ ತಮಗಿರುವ ಒಲವಿನಿಂದ ಎಲ್ಲರಿಗಿಂತ ವಿಭಿನ್ನ ಎನಿಸಿಕೊಂಡವರು. ರತನ್‌ಗೆ ಕಲೆಯ ಗೀಳಿದೆ. ತಮ್ಮದೇ ವಿಮಾನವನ್ನು ಆಗಾಗ ಹಾರಿಸಿ ತಮ್ಮ ಕನಸುಗಳನ್ನೂ ಆಕಾಶದೆತ್ತರಕ್ಕೆ ಬೆಳೆಸಿಕೊಂಡವರು. ವಿಶೇಷ ವೈಯಕ್ತಿಕ ಆಸಕ್ತಿಗಳಿಂದಲೂ ಎಲ್ಲರಿಗಿಂತ ವಿಭಿನ್ನ ಎನಿಸಿಕೊಳ್ಳುತ್ತಾರೆ.

ಲೀಡರ್ ಎಂದ್ರೆ ಕೇವಲ ತಾನು ಮಾತ್ರ ಬೆಳೆಯುವುದಲ್ಲ. ತಾನು ಬೆಳಯುತ್ತ, ಇನ್ನೊಬ್ಬರನ್ನು ಬೆಳೆಯಿಸಿ, ಎಲ್ಲೆಡೆ ವಿಶೇಷ ಪ್ರಭಾವಲಯವೊಂದನ್ನು ಸೃಷ್ಟಿಸುತ್ತಾನೆ. ಅಂಥ ನಾಯಕತ್ವ ಗುಣಕ್ಕೆ ರತನ್ ಅನ್ವರ್ಥ. ಇವರ ಇದೇ ಗುಣದಿಂದ ಸಾಮಾಜಿಕ ಆವಿಷ್ಕಾರಕ್ಕೂ ನಾಂದಿ ಹಾಡಿ, ಸಮಗ್ರ ಅಭಿವೃದ್ಧಿಯೆಡೆಗೆ ಗಮನ ಹರಿಸಲು ಸಾಧ್ಯವಾಗುವಂತೆ ಮಾಡಿದ್ದು.

- ಕೆ.ಎಸ್ ನಿರುಪಮಾ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com