ಅನುಭವಾದಿ ವೃದ್ಧ

ಅನುಭವಾದಿ ವೃದ್ಧ
Updated on: 

ರಾಗ ಹೇಳ್ತೀರಾ?
ಮೈಸೂರಿನ ಚಾಮರಾಜಪುಂದಲ್ಲಿ ಒಂದೆಡೆ ರಾವನವಮಿ ಸಂಗೀತ ಕಛೇರಿ. ಆತ ಕೃಷ್ಣಪ್ಪ. ಹೋಟೆಲ್ ನಡೆಸುತ್ತಿದ್ದರೂ ಬಿಡುವು ಮಾಡಿಕೊಂಡು ಪ್ರತಿದಿನ ಬರುತ್ತಿದ್ದರು. ಅವರೇನು ಶಾಸ್ತ್ರೀಯವಾಗಿ ಸಂಗೀತ ಕಲಿತವರಲ್ಲ. ಕಂಬಕ್ಕೊರಗಿ ಬೀಸಣಿಗೆಯಿಂದ ಗಾಳಿ ಹಾಕಿಕೊಳ್ಳುತ್ತಾ ಕೂತು ಸಂಗೀತ ಆಲಿಸುತ್ತಿದ್ದರು. ಅವರ ತದೇಕಚಿತ್ತ ಉಳಿದ ಕೇಳುಗರಿಗೂ ಸ್ಫೂರ್ತಿ ನೀಡುತ್ತಿತ್ತು. ಆ ದಿನ ಒಂದು ಸ್ವಾರಸ್ಯ ನಡೆಯಿತು. ಗಾಯಕರು ಕಲ್ಯಾಣಿ ಆಲಾಪನೆ ಸೊಗಸಾಗಿ ನಿರ್ವಹಿಸಿಯಾಗಿತ್ತು. ನಂತರ ಪಿಟೀಲು ವಾದಕರು ತಮ್ಮ ಸರದಿಯನ್ನು ಸಮರ್ಥವಾಗಿಯೇ ಬಳಸಿಕೊಳ್ಳತೊಡಗಿದರು. ಅವರು ನಿಭಾಯಿಸಿದ ಒಂದು ಘನ ತಿರುವಿನಲ್ಲಿ ಕೃಷ್ಣಪ್ಪ ತಲೆದೂಗುತ್ತ 'ಅಬ್ಬ! ಎಂತಹ ವಾದ್ಯ ಹಿಡೀತು. ಇದು ಯಾವ ರಾಗ ಯಾರಾದ್ರೂ ಹೇಳ್ತೀರಾ?' ಎಂದುಬಿಡುವುದೆ? ಅದು ಕಲ್ಯಾಣಿ ಅಲ್ಲದೆ ಬೇರೆ ಯಾವ ರಾಗವಾಗಿರಲು ಸಾಧ್ಯ ಎನ್ನುವುದು ಕೃಷ್ಣಪ್ಪನವರಿಗೆ ತಿಳಿಯದೆ ಹೋಗಿತ್ತು! ಸುತ್ತಮುತ್ತ ಕುಳಿತಿದ್ದವರು ಗೊಳ್ಳನೆ ನಕ್ಕಿದ್ದರು. ಕೊಂಚ ಅವಮಾನಿತರಾದವರಂತೆ ಕಂಡು ಬಂದ ಕೃಷ್ಣಪ್ಪ ಸಭಾಂಗಣವನ್ನು ತೊರೆಯಲು ಮುಂದಾದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಗಾಯಕರು ಧ್ವನಿವರ್ಧಕವನ್ನು ಇನ್ನಷ್ಟು ತಮ್ಮತ್ತ ಬಾಗಿಸಿ 'ಅರ್ಥವಾಯ್ತು ನಂಗೆ ವಿಷಯ. ದಯಮಾಡಿ ಕೂತ್ಕೊಳ್ಳಿ. ಎಷ್ಟಾದರೂ ಪಿಟೀಲು ನುಡಿಸ್ತಾಯಿರೊ ವೇಣು ನಿನ್ನೆ ಮೊನ್ನೆ ರಂಗ ಪ್ರವೇಶ ಮಾಡಿದ್ದಾರೆ. ಒಂದೊಂದು ಸಲ ಕಲ್ಯಾಣಿಯಿಂದ ಲತಾಂಗಿ ರಾಗಕ್ಕೆ ಹೊರಟು ಹೋಗುವುದುಂಟು. ಚಿಕ್ಕವರನ್ನು ನಾವು ತಿದ್ದಿ ಉತ್ತೇಜಿಸೋಣ...' ಎಂದರು. ನಕ್ಕವರಿಗೆ ತಮ್ಮ ಆತುರ ಅರ್ಥವಾಗಿತ್ತು. ಕೃಷ್ಣಪ್ಪನವರ ಕೈಯಿಂದ ಬೀಸಣಿಗೆ ಕಿತ್ತುಕೊಂಡು ಅವರಿಗೆ ಗಾಳಿ ಹಾಕಲಾರಂಭಿಸಿದರು.
ಮೊಬೈಲ್ ಏಕೆ?
ಕಾಂತಣ್ಣ ಮೈಸೂರಿನಿಂದ ಆಗಾಗ ಬೆಂಗಳೂರಿಗೆ ಬಂದು ಮದುವೆ, ಮುಂಜಿ, ಗೃಹಪ್ರವೇಶ, ನಾಮಕರಣ ಮುಂತಾದ ಶುಭಕಾರ್ಯಗಳಿಗೆ ಪೌರೋಹಿತ್ಯ ವಹಿಸುತ್ತಾರೆ. 75ರ ಇಳಿವಯಸ್ಸಿನಲ್ಲೂ ಈ ತಾರಾಟ. ಪರ್ಸ್, ಹ್ಯಾಂಡ್ ಬ್ಯಾಗ್ ಇಲ್ಲ. ಚಿಲ್ಲರೆ ನಾಣ್ಯಗಳನ್ನು ಶಲ್ಯದ ತುದಿಯಲ್ಲಿ ಗಂಟಾಗಿಸಿರುತ್ತಾರೆ. ಸಿಟಿ ಬಸ್ಸಿನಲ್ಲಿ ಕಂಡಕ್ಟರುಗಳಿಗೆ ಕಾಯಣ್ಣಪ್ಪ ಎಂದರೆ ಬಲು ಪ್ರೀತಿ. ಏಕೆಂದರೆ ಸರಿಯಾದ ಚಿಲ್ಲರೆ ನೀಡಿ ಟಿಕೆಟ್ ಕೊಳ್ಳುತ್ತಾರೆ. ನಾನು ಕುತೂಹಲಕ್ಕೆ ನಿಮ್ಮ ಹತ್ತಿರ ಮೊಬೈಲ್ ಏಕಿಲ್ಲ ಅಂತ ಪ್ರಶ್ನಿಸಿದೆ. ನಾನು ಎಲ್ಲೆಲ್ಲಿಗೆ ಹೋಗಿ ಹೋಮ, ಹವನ, ಪೂಜೆ ನೆರವೇರಿಸಬೇಕೆಂಬ ನಿರ್ಧಾರ ಈಗಾಗಲೇ ಆಗಿದೆ. ಆದ್ದರಿಂದ ಯಾರಿಗೂ ಮೊಬೈಲಾಯಿಸುವ ಅಗತ್ಯವಿಲ್ಲ. ಯಾವಾಗಲೂ ಅಷ್ಟೆ ಒಳಬರುವ ಕರೆಗಳು ನಮ್ಮಲ್ಲಿ ಅನಗತ್ಯ ಒತ್ತಡ, ದುಗುಡ ಸೃಷ್ಟಿಸುತ್ತವೆ. ಆದ್ದರಿಂದ ಯಾವ ಒಳಕರೆಗಳು ಬೇಕಿಲ್ಲ. ಹಾಗಾಗಿ ನನಗೆ ಮೊಬೈಲ್ ಬೇಡ ಎಂದರು ಕಾಂತಣ್ಣ.
ಶಿಸ್ತಿದ್ದರೆ ವೃದ್ಧರಾಗಲ್ಲ
ನಮ್ಮ ಸುಬ್ಬಣ್ಣ ಆಗಲೇ 70ರ ಅಂಚಿನಲ್ಲಿದ್ದಾನೆ. ಒಂದೊಳ್ಳೆ ನಿದ್ದೆ, ಎದ್ದೊಡನೆ ತಣ್ಣೀರು ಸ್ನಾನ, ಪ್ರತಿನಿತ್ಯ ತನ್ನ ತೋಟ, ಗದ್ದೆಯ ಮೇಲ್ವಿಚಾರಣೆ, ಕೈಲಾದಷ್ಟು ಮೈಬಗ್ಗಿಸಿ ಕೆಲಸ, ನಿತ್ಯಕರ್ಮಗಳಲ್ಲಿ ಶಿಸ್ತು ಆತನ ದಿನಚರಿ. ಮಾಡುವ ಎಲ್ಲ ಕಾರ್ಯಗಳಲ್ಲೂ ಶಿಸ್ತು, ಶ್ರದ್ಧೆ ಇದ್ದರೆ ವಯಸ್ಸಾಗುವುದೇ ಇಲ್ಲ ಎಂಬುದು ಅವನ ನುಡಿಮುತ್ತು. ಇಂದಿಗೂ ಪ್ರತಿ ಸಮಾರಂಭಗಳಲ್ಲೂ ಹೋಳಿಗೆ ಮೇಲೆ ಹೋಳಿಗೆ, ಲಾಡು ಮೇಲೆ ಲಾಡು ಇಳಿಸುತ್ತಾನೆ.
ಇಂದಿನವರಿಗೆ ಏಕೆ ಟೇಬಲ್ಲೇ ಬೇಕಲ್ಲ? ಮೊನ್ನೆ ನಾನು ಹೋಗಿದ್ದ ಮುಂಜಿ ಊಟಕ್ಕೆ ಟೇಬಲ್ಲಿನ ಮೇಲೆ ಕೂರಲು ಒಬ್ಬರು ಹೆಣಗಾಡಿ ಕಡೆಗೆ ನಿಂತೇ ಉಂಡರು. ಮಣ್ಣಿನ ಗುಣವೋ ಅಥವಾ ನಮ್ಮದೇ ಅವಗುಣವೋ ಒಗಟು.


-ಬಿಂಡಿಗನವಿಲೆ ಭಗವಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com