
ಬಾಲ್ಯದಿಂದಲೇ ನನ್ನನ್ನು ಹೆಚ್ಚು ಅಕರ್ಷಿಸಿದ್ದು ಪ್ರೀತಿಯ ಅಜ್ಜ ಏಕಾಂತವಾಗಿ ದೀರ್ಘ ಕಾಲದವರೆಗೂ ಕಡ್ಡಾಯವಾಗಿ ಬರೆಯುತ್ತಿದ್ದ ಡೈರಿ. ಅದು ನನ್ನ ಅಜ್ಜ ಬದುಕಿನ ಕೊನೆಯವರೆಗೂ ರೂಢಿಸಿಕೊಂಡು ಬಂದ ನಿತ್ಯ ಕರ್ಮ.
ನನ್ನ ಅಜ್ಜನಿಗೂ ಮತ್ತು ಅ ಡೈರಿಗೂ ಅವಿನಾಭಾವ ಸಂಬಂಧ. ಮೊದಮೊದಲು ನಾನು ಅ ಡೈರಿ ಗೊಡವೆಗೇ ಹೋಗಿರಲಿಲ್ಲ. ಒಂದು ಬಾರಿ ಹಠಾತ್ತನೆ ಆ ಡೈರಿಯನ್ನು ಓದಲೇಬೆಂಕೆಂದು ಮನಸ್ಸು ಚಡಪಡಿಸಿತು. ಮೊದಲಿಂದಲೂ ನಮ್ಮ ಅಜ್ಜನ ಅನುಮತಿ ಪಡೆಯದೆ ಅ ಡೈರಿಯನ್ನು ಮುಟ್ಟುವ ಧೈರ್ಯ ನಮ್ಮನೆಯಲ್ಲಿ ಯಾರೂ ಮಾಡಿರಲಿಲ್ಲ. ಅದರೆ ಒಂದು ಬಾರಿ ಕುತೂಹಲವನ್ನು ತಡೆಯಲು ಅಗದೆ ಅಜ್ಜ ತನ್ನ ಕೋಣೆಯಲ್ಲಿ ಇರದಿದ್ದ ಸಮಯವನ್ನು ಗಮನಿಸಿದ ನಾನು, ಇಷ್ಟು ದಿನ ಕುತೂಹಲದ ಕಣಜವಾಗಿದ್ದ ಅ ಡೈರಿಯನ್ನು ಎತ್ತಿಕೊಂಡವನೇ ನೇರವಾಗಿ ಮನೆಯ ಮಾಳಿಗೆಯನ್ನು ಏರಿ ಒಂದೊಂದೇ ಪುಟವನ್ನು ತಿರುವುತ್ತಾ ಹೋದೆ. ಅಬ್ಬಾ! ಅದರಲ್ಲಿ ಹಲವು ಸ್ವಾರಸ್ಯಕರ ವಿಷಯಗಳ ಜೊತೆಗೆ ಸಾಂಸಾರಿಕ ಖರ್ಚು, ಹೊಲಕ್ಕೆ ಮಾಡಿದ ಕೆಲಸದ ವಿವರ, ನೆರೆ ಹೊರೆಯವರೆಗೆ ನೀಡಿದ ಕೈ ಸಾಲಗಳು ಸೇರಿದಂತೆ ತನ್ನ ಜೀವನದಲ್ಲಿ ನಡೆದ ಹಲವು ಸುಖ ದುಃಖದ ಮೇಳೈಸುವಿಕೆ ಇರುವ ಹಲವು ದೃಷ್ಟಾಂತಗಳು ನನ್ನನ್ನು ಹಿಡಿದಿಟ್ಟವು.
ಬಂಧು ಬಳಗದವರ ಮದುವೆ ಸಮಾರಂಭ ಸೇರಿದಂತೆ ಹಬ್ಬ ಹರಿದಿನಗಳಲ್ಲಿ ಖರೀದಿಸಿದ ಅಭರಣಗಳ ವಿವರ, ಅಸ್ಪತ್ರೆಗೆ ಖರ್ಚು ಮಾಡಿದ ಹಣದ ವಿವರ ಸೇರಿದಂತೆ, ಎಲ್ಲವನ್ನು ಡೈರಿಯಲ್ಲಿ ಬರೆದಿಡುವ ಕಾರ್ಯವನ್ನು ಮಾಡುತ್ತಿದ್ದರು. ದೇಶದಲ್ಲಿ ಸಂಭವಿಸಿದ ರಾಜಕೀಯ ಏರುಪೇರುಗಳು, ಖಾತೆ ಹಂಚಿಕೆ, ಮಂತ್ರಿಗಳ ವಿವರ ಸೇರಿದಂತೆ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಗಳನ್ನು ಅಚ್ಚುಕಟ್ಟಾಗಿ ಕತ್ತರಿಸಿ ಅವುಗಳನ್ನು ಜೋಪಾನ ಮಾಡುವ ಕಾರ್ಯವನ್ನು ಮೊದಲಿನಿಂದಲೂ ಅವರು ರೂಢಿಸಿಕೊಂಡಿದ್ದರು. ಒಮ್ಮೊಮ್ಮೆ ವಿಷಯ ಸಂಗ್ರಹಣೆಗಾಗಿ ನಮ್ಮ ಸಹಾಯವನ್ನು ಬಯಸುತ್ತಿದ್ದ ಅಜ್ಜ, ಬೆಳಗ್ಗೆ ಪತ್ರಿಕೆಗಳ ಮುಖ್ಯಾಂಶಗಳನ್ನು ಕತ್ತರಿಸಲು ಕುಳಿತರೆ ಸಂಜೆ ಆದರೂ ಮುಗಿಸುತ್ತಿರಲಿಲ್ಲ. ಅಗ ನಮಗೆ ಒಂದೆಡೆ ಬೆಳಗ್ಗೆಯಿಂದ ಕುಳಿತಲ್ಲೇ ಕುಳಿತು ಕೆಲಸ ಮಾಡಿ ಅಸಹನೀಯವಾದ ಕಾಲು ನೋವು ಸಹಿಸದೇ ಅಜ್ಜಿಗೆ ಅಜ್ಜನ ವಿರುದ್ಧ ದೂರು ನೀಡುತ್ತಿದ್ದೆವು.
ಅಜ್ಜ ಡೈರಿಯ ಒಡನಾಟದಲ್ಲಿ ತನ್ನ ವಯಸ್ಸನ್ನೇ ಮರೆತವರಂತೆ ಅಡುತ್ತಿದ್ದರು. ಸಹಜವಾಗಿ ವೃದ್ಧರಿಗೆ ಬರುವ ಅರಳು ಮರಳು ಅಜ್ಜನ ಜೀವನದಲ್ಲಿ ಅಗಮಿಸಿ ಅವರನ್ನು ಪೇಚಿಗೆ ಸಿಲುಕವಂತೆ ಮಾಡಿತು. ಅಚ್ಚುಕಟ್ಟಾಗಿ ಬರೆಯುತ್ತಿದ್ದ ಡೈರಿ ತನ್ನ ಹಳೆಯ ಸೌಂದರ್ಯವನ್ನು ಕಳೆದುಕೊಳ್ಳುವಂತೆ ಮಾಡಿತು. ತಮ್ಮ ಅರೋಗ್ಯ ಸರಿ ಇರದೇ ಅಸ್ಪತ್ರೆ ಸೇರಿದಾಗಲೂ ಡಾಕ್ಟರ್ ಮತ್ತು ಮನೆಯವರು ಎಷ್ಟೇ ಉಗ್ರವಾಗಿ ಡೈರಿ ಬರೆಯುವ ಕಾರ್ಯವನ್ನು ಬಿಡಿಸಿ ರೆಸ್ಟ್ ತೆಗೆದುಕೊಳ್ಳುವಂತೆ ಗೋಗರೆದರೂ ನಮ್ಮ ಮಾತನ್ನು ಅವರು ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ನಂತರ ಮನೆಯವರೆಲ್ಲ ಯೋಚಿಸಿ ಡೈರಿಯನ್ನು ಅವರ ಕಣ್ಣಿಗೆ ಬೀಳದಂತೆ ಬಚ್ಚಿಟ್ಟರು. ತಮ್ಮ ಹಠ ಸಾಧಿಸುವರೆಗೂ ಊಟ ಮಾಡುವುದಿಲ್ಲವೆಂದು ಉಪವಾಸಕ್ಕೆ ಅಣಿಯಾದರು. ನಂತರ ಪಕ್ಕದಲ್ಲಿದ್ದ ಇಳಿ ವಯಸ್ಸಿನ ರೋಗಿಯೊಬ್ಬ ಅವರ ಅಸೆಗಳನ್ನು ಪೂರೈಸಿ, ಇಲ್ಲವಾದರೆ ಅವರು ತುಂಬಾನೆ ಕೊರಗುತ್ತಾರೆ ಎಂಬ ಬುದ್ಧಿಮಾತನ್ನು ನಮ್ಮ ಕಿವಿಗೆ ಊದಿದರು. ಕೊನೆಗೂ ಅಜ್ಜ ಡೈರಿ ಪಡೆಯುವಲ್ಲಿ ಸಫಲರಾದರು. ಮತ್ತೆ ತಮ್ಮ ನಿತ್ಯ ಕಾರ್ಯದಲ್ಲಿ ತೊಡಗಿಸಿಕೊಂಡರು.
= ಜಿ. ಸತೀಶ ಕುಮಾರ
Advertisement