ಆಸ್ತಿಪಂಜರ

ಆಸ್ತಿಪಂಜರ

ಮಕ್ಕಳು ಈಗ ಬೆಳೆದಿದ್ದಾರೆ. ಮೊದಲಿನಂತಿಲ್ಲ. ಮಾತು ಗಡುಸಾಗಿದೆ, ಹೆತ್ತವರ ಮನಸ್ಸು ಇರಿಯುವಷ್ಟು. ಅವರ ಕಣ್ಣಲ್ಲಿ ಹನಿಗೂಡಿದರೆ ಒರೆಸಲು ಕರ್ಚೀಫಾಗಲು ಯಾರೂ ತಯಾರಿಲ್ಲ. ಒರೆಸುವ ಮಾತು ಹಾಗಿರಲಿ, ಮತ್ತಷ್ಟು ಕಣ್ಣೀರು ಸುರಿಯದಂತೆ ನೋಡಿಕೊಂಡರೆ ಅದೇ ಪುಣ್ಯ.
ಒಬ್ಬೊಬ್ಬರೂ ಒಂದೊಂದು ಕಡೆಯಿಂದ ಲೆಕ್ಕ ಹಾಕುತ್ತಾರೆ. ಅಪ್ಪನ ಆಸ್ತಿಯ ಒಂದಂಶವೂ ಮಿಸ್ ಆಗಬಾರದೆಂಬ ಇರಾದೆ. ಯಾವುದನ್ನು ತನ್ನ ಪಾಲಾಗಿ ತೆಗೆದುಕೊಂಡರೆ ಹೆಚ್ಚು ಲಾಭವೆಂಬ ತರ್ಕ ಶುರುವಾಗುತ್ತದೆ. ಒಳಗಿನ ಬೇಗುದಿ ಒಮ್ಮೆ ಆಸ್ಫೋಟಗೊಳ್ಳುತ್ತದೆ. ಹಿಂದೆ ಒಟ್ಟಿಗೆ ಕೈ ತುತ್ತು ತಿಂದವರು ಪರಸ್ಪರ ಕೊರಳಪಟ್ಟಿ ಹಿಡಿದು ಕಾದಾಡುತ್ತಾರೆ. ತಕ್ಕ ಮಟ್ಟಿಗೆ ಅವಿಭಕ್ತವಾಗಿದ್ದ ಕುಟುಂಬ ವಿಭಕ್ತವಾಗಲು ವೇದಿಕೆ ಸಿದ್ಧವಾಗುತ್ತದೆ. ಈಗ ಆ ಮನೆಗೆ ನಗು ಅಪರಿಚಿತ. ಸಂಬಂಧಗಳ ನಡುವಿನ ಪ್ರೀತಿಯ ಬೆಸುಗೆ ಇತಿಹಾಸಕ್ಕೆ ರವಾನೆಯಾಗುತ್ತದೆ.
ದೊಡ್ಡ ಮನುಷ್ಯರೆಂದು ಕರೆಸಿಕೊಳ್ಳುವ ಒಂದಷ್ಟು ಜನ ಬಂದು ಸೇರುತ್ತಾರೆ. ಪಂಚಾಯಿತಿ ನಡೆಸುತ್ತಾರೆ. ಒಂದಷ್ಟು ವಾದ ವಿವಾದ, ಹಂಚಿಕೆಯ ಲೆಕ್ಕಾಚಾರ, ಮುಗಿಯದ ಗೊಂದಲ, ಅಸಮಾಧಾನ. ಈ ನಡುವೆಯೇ ಕಡೆಗೂ ತೀರ್ಮಾನವಾಗುತ್ತದೆ. ಹೊಲ, ಗದ್ದೆ, ತೋಟ, ಮನೆ, ಸೈಟು, ಪಾತ್ರೆ... ನಿನಗಿಷ್ಟು, ಅವನಿಗಿಷ್ಟು, ಅವಳಿಗಿಷ್ಟು... ಮುಖದ ಮೇಲೆ ಮುನಿಸು ಧರಿಸಿಕೊಂಡು ಎಲ್ಲರೂ ಸಮ್ಮತಿಸುತ್ತಾರೆ. ದೊಡ್ಡ ಮನುಷ್ಯರು ತಮ್ಮ ಜವಾಬ್ದಾರಿ ನಿರ್ವಹಿಸಿ ನಿರ್ಗಮಿಸುತ್ತಾರೆ. ಹೆತ್ತವರು ಕತ್ತಲ ಕೋಣೆಯಲ್ಲಿ ಮುದುಡಿ ಕುಳಿತು ಬಿಕ್ಕಳಿಸಿ ಅಳುತ್ತಾರೆ. ಅವರಿಂದ ಜನ್ಮ ಪಡೆದವರು ಮತ್ತೆ ಲೆಕ್ಕ ಹಾಕುತ್ತಾರೆ, ಸಿಡುಕುತ್ತಾರೆ, ಸಂಭ್ರಮ ಪಡುತ್ತಾರೆ.
ಇದು ಬಹುತೇಕ ಮನೆಗಳಲ್ಲಿ ಜರುಗುವ ಸಾಮಾನ್ಯ ವಿದ್ಯಮಾನ. ಆಸ್ತಿ ಹಂಚಿಕೆ ಮಕ್ಕಳಿಗೆ ಮದುವೆ ಮಾಡುವಷ್ಟೇ ಜವಾಬ್ದಾರಿಯುತ ಕರ್ತವ್ಯವೆಂಬ ಮನಸ್ಥಿತಿ ಹೆತ್ತವರಲ್ಲಿ ಮನೆ ಮಾಡಿದೆ. ಅದು ಅವರ ಇಚ್ಛೆಗೆ ವಿರುದ್ಧವಾದರೂ ವಾಸ್ತವ ಅರಿತು ಆಸ್ತಿ ಹಂಚಿಕೆ ಮಾಡುವ ಕಾರ್ಯಕ್ಕೆ ಕೈ ಹಾಕುತ್ತಾರೆ.
ಇಂದು ಇದು ಕೇವಲ ನಾಲ್ಕು ಗೋಡೆಗಳ ನಡುವೆ ನಡೆದು ಮುಗಿದು ಹೋಗುವ ಕ್ರಿಯೆಯಾಗಿಲ್ಲ. ಎಷ್ಟೋ ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿ ಅಲ್ಲಿ ಇತ್ಯರ್ಥವಾಗುತ್ತವೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಕಾನೂನು ಸಲಹೆ ಅಂಕಣದ ಮೇಲೊಮ್ಮೆ ಕಣ್ಣು ಹಾಯಿಸಿದರೆ ಸಾಕು, ವಸ್ತುಸ್ಥಿತಿಯ ಅರಿವಾಗುತ್ತದೆ.
ಒಂದೇ ಮನೆಯಲ್ಲಿ ನೋವು, ನಲಿವು ಹಂಚಿಕೊಂಡು ಬೆಳೆದದ್ದು, ಆಡಿ ನಲಿದದ್ದು, ಒಬ್ಬರೊಳಗೊಬ್ಬರು ಇಳಿದು ಪರಸ್ಪರ ಸ್ಪಂದಿಸಿದ್ದು ಎಲ್ಲವೂ ವ್ಯಾವಹಾರಿಕ ಚೌಕಟ್ಟಿನೊಳಗೆ ಒಮ್ಮೆಲೇ ಅಸ್ತಿತ್ವ ಕಳೆದುಕೊಂಡು ಬಿಡುವುದು. ಸಂಬಂಧಗಳ ನಡುವಿನ ಬೆಸುಗೆ ಸಡಿಲಗೊಂಡು ಅಣ್ಣ-ತಮ್ಮಂದಿರು ಶತ್ರುಗಳಂತೆ ವರ್ತಿಸಲು ಮುಂದಾಗುವರು. ಆಸ್ತಿ ವಿವಾದಗಳು ಕೊಲೆಯಲ್ಲಿ ಅಂತ್ಯವಾಗುವ ನಿದರ್ಶನಗಳಿಗೆ ನಮ್ಮಲ್ಲಿ ಬರವಿಲ್ಲ.
ಹೊಂದಾಣಿಕೆಯಿಂದ ಬಾಳಬೇಕು, ಜೀವನಪೂರ್ತಿ ಒಟ್ಟಿಗೆ ಇರಬೇಕು, ಅವಿಭಕ್ತ ಕುಟುಂಬದಲ್ಲಿ ಸುಖ, ಶಾಂತಿ, ಪ್ರೀತಿ, ಸಂತಸ ಹೇರಳವಾಗಿರುತ್ತದೆ ಎಂದು ಚಿಕ್ಕಂದಿನಲ್ಲಿ ಹೆತ್ತವರು ಹೇಳಿದ ಮಾತುಗಳೇಕೋ ಅರ್ಥ ಕಳೆದುಕೊಳ್ಳುತ್ತವೆ.

= ಎಚ್.ಕೆ. ಶರತ್ ಹಾಸನ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com