
ಇಂದು ಮಾನವನ ಆಯುಸ್ಸು ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದೆ. ಅದಾಗಲೇ 100ರಿಂದ 60ಕ್ಕೆ ಬಂದಿಳಿದಿದೆ. ಅದು ನಮ್ಮ ಜೀವನಶೈಲಿಯ ಕಾರಣಕ್ಕೂ ಇರಬಹುದು. ಆದರೆ, ಇದಕ್ಕೆ ಅಪವಾದವೆಂಬಂತೆ ಸಾಕಷ್ಟು ಜೀವಂತ ನಿದರ್ಶನಗಳಿವೆ. ಬದುಕಿನಲ್ಲಿ ಸಾಕಷ್ಟು ಕಷ್ಟಗಳನ್ನು ಉಂಡು 96ನೇ ವಯಸ್ಸಿನಲ್ಲೂ ಹದಿ ಹರೆಯದವರನ್ನು ನಾಚಿಸುವಂಥ ಲವಲವಿಕೆಯ ಕ್ರಿಯಾಶೀಲ ಅಜ್ಜಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿದ್ದಾರೆ.
ಅವಿಭಕ್ತ ಕುಟುಂಬದಲ್ಲಿ ಬಾಳಿ ಬದುಕಿದ ಈ ಅಜ್ಜಿಯು ಮನೆಯ ಶ್ರೇಯಸ್ಸಿಗೆ ತನ್ನ ಜೀವನವನ್ನೇ ಗಂಧದಂತೆ ತೇಯ್ದಿದ್ದಾಳೆ. ಅದಕ್ಕೇ ಈ ಅಜ್ಜಿ ಎಂದರೆ ಮನೆ ಮಂದಿಗೆಲ್ಲ ಪಂಚಪ್ರಾಣ. ಈ ಅಜ್ಜಿ ಹೆಸರು ಮಲ್ಲಮ್ಮ ಪುರಾಣಿಕಮಠ. ಮೂವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳಿರುವ ಈ ಅಜ್ಜಿಗೆ ಬರೋಬ್ಬರಿ 16 ಮೊಮ್ಮಕ್ಕಳು ಹಾಗೂ 16 ಮರಿ ಮಕ್ಕಳು. ಅಜ್ಜಿಯ ದೊಡ್ಡ ಮಗ, ನಿವೃತ್ತ ಶಿಕ್ಷಕರಾಗಿ ಮನೆತನದ ಜವಾಬ್ದಾರಿ ಹೊತ್ತುಕೊಂಡಿದ್ದಾನೆ. ಎರಡನೇ ಮಗ ಸೈನಿಕರಾಗಿ ನಿವೃತ್ತಿಯಾದರೆ, ಮೂರನೇ ಮಗನಿಗೆ ಕೃಷಿಯಲ್ಲೇ ಖುಷಿ. ಇವರಲ್ಲಿ ಅಜ್ಜಿಯ ದೊಡ್ಡ ಮಗನಿಗೆ ಈಗ ಎಪ್ಪತ್ತಮೂರು ವರ್ಷ. ಈ ಅಜ್ಜಿಯ ಮೊಮ್ಮಕ್ಕಳು ಎಂಜಿನಿಯರ್, ಲೆಕ್ಚರರ್, ಟೀಚರ್ ಆಗಿರುವುದನ್ನು ಕಂಡು ಅಜ್ಜಿ ಎಲ್ಲರ ಮುಂದೆ ತನ್ನ ಮೊಮ್ಮಕ್ಕಳ ಗುಣಗಾನ ಮಾಡುತ್ತಾಳೆ. ಅಜ್ಜಿಯು ಬೆಳಗ್ಗೆ ಏಳುವಾಗ ದೇವರ ಮಂತ್ರ ಹೇಳುತ್ತಾ ಮನೆ ಕಸ ಗುಡಿಸಿ, ಎತ್ತುಗಳಿಗೆ ಮೇವು ಹಾಕಿ ಮನೆ ಮಂದಿಗೆಲ್ಲ ಸ್ನಾನಕ್ಕೆ ನೀರು ಕಾಯಿಸುವುದರಿಂದ ದಿನಚರಿ ಆರಂಭವಾಗುತ್ತದೆ. ಜೋಳದ ರೊಟ್ಟಿ ಎಂದರೆ ಈ ಅಜ್ಜಿಗೆ ಪ್ರಾಣ.
ಸೋಬಾನ ಪದಗಳನ್ನು ಸರಾಗವಾಗಿ ಗಂಟೆಗಟ್ಟಲೆ ಇಂಪಾಗಿ ಹಾಡುವ ಈ ಅಜ್ಜಿಯ ದನಿ ಹಲವರಿಗೆ ಇಷ್ಟ. ಕೃಷಿಯಲ್ಲಿ ತನ್ನ ಜೀವನದ ಬಹುಭಾಗವನ್ನು ಕಳೆದ ಈ ಅಜ್ಜಿಗೆ ಎತ್ತು, ಆಕಳು, ಎಮ್ಮೆಗಳೆಂದರೆ ತುಂಬಾ ಪ್ರೀತಿ. ಅವುಗಳ ಮೈ ಸವರಿ, ನೀರು ಕುಡಿಸಿ ಮೇವುಣಿಸುವುದರಲ್ಲಿ ಆನಂದ ಪಡುತ್ತಾಳೆ.
ತನ್ನ 96ನೇ ವಯಸ್ಸಿನಲ್ಲಿ ಮೊಮ್ಮಗನ ಕಾರಿನಲ್ಲಿ ಹೊಲಕ್ಕೆ ಹೋಗಿ ಬರುವ ಈ ಅಜ್ಜಿ ತಾನು ಹೊಲದಲ್ಲಿ ಕೆಲಸ ಮಾಡುತ್ತಿದ್ದುದನ್ನು ಸ್ಮರಿಸಿಕೊಳ್ಳುತ್ತಾಳೆ. ಸ್ವಾತಂತ್ರ್ಯ ಚಳುವಳಿಯ ವೇಳೆ ಮಹಾತ್ಮಾ ಗಾಂಧೀಜಿ ಹಾಗೂ ಮುಂತಾದ ದೇಶಭಕ್ತರ ಚಟುವಟಿಕೆಗಳನ್ನು ರಾತ್ರಿ ಕಥೆ ರೂಪದಲ್ಲಿ ಹೇಳುತ್ತಾ ತನ್ನ ಮರಿಮೊಮ್ಮಕ್ಕಳಲ್ಲಿ ದೇಶಾಭಿಮಾನ ಮೂಡಿಸುತ್ತಾಳೆ. ಇವರ ಮನೆಗೆ ಬಂದವರೆಲ್ಲರನ್ನು ಸರಾಗವಾಗಿ ಗುರುತು ಹಿಡಿದು ಮಾತನಾಡಿಸುವ ಅಜ್ಜಿಯ ನೆನಪಿನ ಸಾಮರ್ಥ್ಯ ಅಸಾಧಾರಣ. ಮೊಮ್ಮಕ್ಕಳಿಗೆ ಮಲಗುವಾಗ ರಂಜನೀಯ ನೀತಿ ಕಥೆ ಹೇಳುವ ಈ ಅಜ್ಜಿಯ ಕಥೆ ಕೇಳುವುದೆಂದರೆ ದೊಡ್ಡವರಿಗೂ ಖುಷಿ.
ಈ ವಯಸ್ಸಿನಲ್ಲೂ ಯಾವುದೇ ಮಾತ್ರೆಗಳನ್ನು ನುಂಗದ ಅಜ್ಜಿ ಬಿಪಿ, ಶುಗರ್, ಹೃದಯ ಕಾಯಿಲೆ ಇಲ್ಲದೆ ಆರೋಗ್ಯವಾಗಿದ್ದಾಳೆ. 40 ವರ್ಷದ ಹಿಂದೆ ಮನೆ ಗೋಡೆ ಸಾರಿಸಲು ಹೋಗಿ ಏಣಿ ಮೇಲಿಂದ ಬಿದ್ದು ಬೆನ್ನು ಮೂಳೆ ಬಾಗಿದೆ. ಬಗ್ಗಿಕೊಂಡೇ ಎಲ್ಲ ಕೆಲಸ ಮಾಡುವ ಭಂಗಿ ತುಮಕೂರು ಸಿದ್ಧಗಂಗಾ ಶ್ರೀಗಳ ಶರೀರವನ್ನು ನೆನಪಿಸುತ್ತದೆ. ಮೂರನೇ ತರಗತಿಯನ್ನು ಮಾತ್ರ ಓದಿದ ಈ ಅಜ್ಜಿ ಕನ್ನಡಕವಿಲ್ಲದೆ ಪತ್ರಿಕೆಯನ್ನು ಓದಿ ಮನೆ ಮಂದಿಗೆಲ್ಲ ಸುದ್ದಿ ತಿಳಿಸುತ್ತಾಳೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇಂಥ ಹಿರಿಯರನ್ನು ಸಂದರ್ಶಿಸಿ ಅವರಿಂದ ಸೋಬಾನ ಪದಗಳು, ಜಾನಪದ ಹಾಡುಗಳು, ಗೀಗಿ ಪದಗಳು, ಲಾವಣಿ, ಬೀಸುಕಲ್ಲಿನ ಪದಗಳನ್ನು ಸಂರಕ್ಷಣೆ ಮಾಡಿ ಮುಂದಿನ ಜನಾಂಗಕ್ಕೆ ಅವುಗಳನ್ನು ಕೊಂಡೊಯ್ಯುವ ಕೆಲಸ ಮಾಡಬೇಕಿದೆ.
= ಬಸವರಾಜ ಗಂ. ಪುರಾಣಿಕಮಠ
Advertisement