

ವಯಸ್ಸು ಇಷ್ಟೊಂದು ಆಯ್ತು ಅಂತ ಗೊತ್ತೇ ಆಗಿರ್ಲಿಲ್ಲ ನೋಡು. ನಿನ್ನ ನಗು, ಎಡೆಬಿಡದ ಮಾತು, ಕಾಳಜಿಯಲ್ಲಿ ವರ್ಷಗಳು ಸರಿದುಹೋಗುತ್ತಿರುವುದನ್ನೇ ಮರೆತುಬಿಟ್ಟೆ. ಅನುರೂಪ ಸುಂದರಿ ನೀನು. ಹಣೆಯ ಮೇಲೆ ಕೆಂಪು ಬೊಟ್ಟನ್ನು ದೊಡ್ಡದಾಗಿಟ್ಟು ಕೈಗಳಲ್ಲಿ ಹಸಿರು ಬಳೆ ಇಟ್ಟುಕೊಂಡು ಗಲಗಲನೆ ಮನೆ ತುಂಬ ಓಡಾಡುತ್ತಲೇ 50 ವರ್ಷ ನನ್ನೊಂದಿಗೆ ಸವೆಸಿದ್ಯಲ್ಲ!
ನಿನಗೆ ವಯಸ್ಸೇ ಆಗಲಿಲ್ಲ ನೋಡು. ನಿನ್ನ ನೋಡುವ ಮೈಮರವೆಯಲ್ಲಿ ನನ್ನ ಹಲ್ಲು ಯಾವಾಗ ಉದುರಿ ಬಿದ್ದವೋ, ಮೈ ಸುಕ್ಕುಗಟ್ಟಿದ್ದು ಯಾವಾಗಲೋ ನಾನೂ ನೋಡಿಕೊಳ್ಳಲೇ ಇಲ್ಲ. ಈಗ ಇದ್ದಕ್ಕಿದ್ದಂತೆ ಸೂಚನೆ ಕೊಡದೆ ನೀ ನನ್ನ ತೊರೆದ ಮೇಲೆ ನನ್ನ ನಾನು ನೋಡಿಕೊಳ್ಳಲೇಬೇಕಲ್ಲ, ಈ ಯುವಕನ ಉತ್ಸಾಹವನ್ನೆಲ್ಲ ರಾತ್ರೋರಾತ್ರಿ ಕಸಿದುಕೊಂಡು ಹೋಗಿ ಮುದುಕ ಮಾಡಿಬಿಟ್ಯಲ್ಲೇ? ನಿನ್ನ ನೆನೆದು ಎಲ್ಲರೂ ಮುತ್ತೈದೆಯಾಗಿ ಹೋದ್ಲು ಪುಣ್ಯಾತ್ಗಿತ್ತಿ ಅಂತಿದಾರೆ. ಬದುಕಿರುವವನ ಪಾಡು ದೇವರೇ ಬಲ್ಲ!
ಐವತ್ತು ವರ್ಷ, ಎಡೆಬಿಡದೆ ನನ್ನ ಬಾಯಿರುಚಿಗೆ ದಿವಿನಾದ ಅಡುಗೆ ಮಾಡಿ, ಮಕ್ಕಳ ಜವಾಬ್ದಾರಿಯನ್ನೂ ಸಂಪೂರ್ಣ ಹೊತ್ತು, (ಅವರ ನಗು ಮಾತ್ರ ನನಗೆ ಗೊತ್ತು!) ನನ್ನ ಮೂಡನ್ನು ಪ್ರತಿಕ್ಷಣ ಗಮನಿಸಿ ಅದಕ್ಕೆ ಸರಿಯಾಗಿ ಪ್ರತಿಕ್ರಿಯಿಸುತ್ತಿದ್ದೆಯಲ್ಲ, ಈಗ ನೋಡು ಒಂಟಿಯಾಗಿದ್ದೇನೆ. ಅಡುಗೆ ಮಾಡಲು ಹೋದರೆ ಅಡುಗೆ ಮನೆಯ 50 ತರದ ಡಬ್ಬಿಗಳು ಅಣಕಿಸುತ್ತವೆ. ಯಾವುದು ಎಷ್ಟು ಹಾಕಬೇಕು, ಯಾವಾಗ ಯಾವ ಮಾತ್ರೆ ತಿನ್ನಬೇಕು, ತಂಬಾಕಿನ ಡಬ್ಬಿ ಎಲ್ಲಿದೆ ಸಮೇತ ತಿಳಿಯುತ್ತಿಲ್ಲ. ಪಾತ್ರೆಗಳು ಸಿಂಕ್ನಲ್ಲಿ ರಾಶಿಯಾಗುತ್ತಲೇ ಇವೆ. ಈ ನಡುಗುವ ಕೈಯ್ಯಲ್ಲಿ ಏನು ಮಾಡಲು ಹೋದರೂ ಬಟ್ಟೆ ಮೇಲೆ ಬೀಳುತ್ತದೆ. ಒಗೆದರೆ ಯಾವೊಂದು ಕಲೆಯೂ ಹೋಗುವುದಿಲ್ಲ. ಇಷ್ಟೆಲ್ಲ ಆಗುವಾಗ ಅಳು ಬಂದರೂ, ಬೇಜಾರಾದರೂ, ಸಿಟ್ಟು ಬಂದರೂ ತೋರಿಸಲು ನೀನಿಲ್ಲ.
ಮಕ್ಕಳ ಮನೆ, ನೆಂಟರಿಷ್ಟರು, ಅಕ್ಕಪಕ್ಕದವರೆಂದು ಪ್ರೀತಿಯಿಟ್ಟು ಎಲ್ಲರ ಬಳಿಯೂ ಬಾಯ್ತುಂಬ ಮಾತನಾಡಿ ಪ್ರತಿ ಸಂಜೆ ವಿಷಯಗಳ ಸರಮಾಲೆಯನ್ನೇ ಎದುರಿಡುತ್ತಿದ್ದೆಯಲ್ಲಾ, ಈಗ ನನಗೆ ಸ್ವಂತ ಮಕ್ಕಳ ಸಮಾಚಾರವೇ ಗೊತ್ತಾಗುತ್ತಿಲ್ಲ. ಅಪ್ಪನ ಬೇಕುಬೇಡಗಳು ಕೇಳಲ್ಲ ಎಂದು ಮಕ್ಕಳನ್ನು ದೂರುವ ಹಕ್ಕೇ ನನಗಿಲ್ಲ, ಏಕೆಂದರೆ ಅವರ ಬೇಕುಬೇಡಗಳೆಲ್ಲವೂ ನಿನಗೆ ಮಾತ್ರ ಗೊತ್ತಿದ್ದುವು.
ನಿನ್ನ ಮೇಲಿನ ಅವಲಂಬನೆ ಇಂದು ನನ್ನ ಮೇಲೆಯೇ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ರಾತ್ರಿ ಬಾಗಿಲು ಹಾಕಲೇ ಮರೆತುಬಿಡುತ್ತೇನೆ. ಆದರೆ ಮರೆವಿಗೂ ಕರುಣೆಯಿದೆ. ನಿನ್ನ ನೆನಪುಗಳಲ್ಲಿ ಒಂದನ್ನೂ ಕಸಿಯುವುದಿಲ್ಲ. ಜೀವನದಲ್ಲಿ ಒಂದು ದಿನವೂ ಸೀರೆ ಬೇಕು, ಒಡವೆ ಬೇಕು, ಊರು ಸುತ್ತಬೇಕು ಎನ್ನಲಿಲ್ಲ. ನಿನ್ನಾಸೆ ಏನಿದ್ದರೂ ಮನೆಯ ಮುಂದಿನ ಮಲ್ಲಿಗೆ ಬಳ್ಳಿಯಲ್ಲಿ ಅರಳಿ ನಗುವ ಹೂವನ್ನು ಮುಡಿಗೇರಿಸಿಕೊಂಡು ಸಂಭ್ರಮಿಸುವಷ್ಟು ಸರಳ. ಈಗ ಪ್ರತಿನಿತ್ಯ ನಿನ್ನ ಫೋಟೋಗೆ ಮಲ್ಲಿಗೆ ದಂಡೆ ಹಾಕೋಣವೆಂದರೆ ಯಾರ ಬಳಿ ಮಾಲೆ ಮಾಡಿಸಲಿ? ಅದಕ್ಕೇ ಬಿಡಿ ಹೂಗಳನ್ನೇ ಇಡುತ್ತಿದ್ದೇನೆ. ಫೋಟೋದಲ್ಲಿಯೂ ನಿನ್ನ ಹೆರಳಿನ ಮಲ್ಲಿಗೆ ಮಾಲೆ ಎದುರಿಗಿಟ್ಟ ಬಿಡಿಹೂಗಳನ್ನು ನೋಡಿ ನಕ್ಕಂತೆನಿಸುತ್ತದೆ. ಇರಲಿ, ಬರಿ ನಿನ್ನಿಂದ ಪಡೆದಷ್ಟೇ ಗೊತ್ತಿರುವ ಈ ಮುದುಕನಿಗೆ ಆಗಬೇಕಾದ್ದೇ.
ಬದುಕು ಎಷ್ಟೊಂದು ಅಸಹನೀಯ ಎಂಬ ಭಾವನೆ ನೀನಿರುವವರೆಗೂ ನನಗೆ ಎಂದೂ ಕಾಡಿರಲಿಲ್ಲ. ಅನಿಸದಿದ್ದಾಗ ಹೀಗೊಂದು ಭಾವನೆ ಇರಬಹುದು, ಅದು ನಿನ್ನಿಂದಲೇ ಮರೆಯಾಗಿದೆ ಎಂಬ ಕಲ್ಪನೆಯೂ ನನ್ನಲ್ಲಿರಲಿಲ್ಲ. ಕಳೆದುಕೊಂಡ ಮೇಲೇ ಒಂದು ವಸ್ತುವಿನ ನಿಜ ಮೌಲ್ಯ ತಿಳಿವುದಂತೆ. ಬದುಕು ಬಂಗಾರವಾಗಿಸಿದ ಬಂಗಾರಿ... ನಿನಗಿದೋ ನನ್ನ ಅಶ್ರುತರ್ಪಣ.
-ರೇಶ್ಮಾ ರಾವ್ ಸೊನ್ಲೆ