
ಬಿಳಿ ಧೋತಿ, ನೆಹರೂ ಶರ್ಟು- ಕೋಟು, ತಲೆಮೇಲೆ ಟೊಪ್ಪಿ, ಕಟ್ಟುನಿಟ್ಟಾದ ದೇಹಾಕೃತಿ, ಗಡಸು ದನಿ, ನೇರ ನೋಟ... ಒಬ್ಬ ಮನುಷ್ಯನ 107ನೇ ವಯಸ್ಸಿನಲ್ಲಿ ಇಂಥ ನಿಲುವನ್ನು ಕಲ್ಪಿಸಿಕೊಳ್ಳಿ. ತಾಳಿ, ಅವರೇನು ಹಾಸಿಗೆ ಮೇಲೆ ಮಲಗಿಲ್ಲ. ಫುಲ್ ಆ್ಯಕ್ಟಿವ್.
ಸೆಂಚುರಿಯ ಆ ಪಾದರಸದ ಹೆಸರು ತಮ್ಮಾಜಿ ರಾಮಚಂದ್ರ ಕುಲಕರ್ಣಿ. ಮೂಲತಃ ಉಣಕಲ್ಲದವರು. ಸದ್ಯ ಧಾರವಾಡ ಜಿಲ್ಲೆಯ ಬೈರಿದೇವರಕೊಪ್ಪದಲ್ಲಿ ವಾಸ. ಈಗ ಅಜ್ಜ ಕುಟುಂಬದ ನಾಲ್ಕನೇ ತಲೆಮಾರನ್ನು ಕಾಣುತ್ತಿದ್ದಾರೆ. ಬ್ರಿಟಿಷರ ಕಾಲದಲ್ಲಿ ಮುಲ್ಕಿ ಪರೀಕ್ಷೆ ಪಾಸಾದ ನಂತರ, ಶಿಕ್ಷಕರಾದರು. ಅಮ್ಮಿನಬಾವಿ, ನವಲೂರು, ಗರಗ ಮುಂತಾದೆಡೆ ಸೇವೆ ಸಲ್ಲಿಸಿ, ಕೊನೆಗೆ ಗಾಮನಗಟ್ಟಿಯಲ್ಲಿ ಮುಖ್ಯ ಶಿಕ್ಷಕರಾಗಿ ಬಡ್ತಿ ಪಡೆದು, 1973ರಲ್ಲಿ ನಿವೃತ್ತರಾದರು. ಆಗ ಅವರು ಪಡೆಯುತ್ತಿದ್ದ ಸಂಬಳ ಕೇವಲ 215 ರುಪಾಯಿ! ವಿದ್ಯಾದಾನ ಇವರ ಉಸಿರು. ಶಾಲೆ ಮುಗಿಸಿ ಮನೆಯಲ್ಲೂ ಉಚಿತ ಶಿಕ್ಷಣ ನೀಡುತ್ತಿದ್ದರು. ಕನ್ನಡ, ಇಂಗ್ಲಿಷ್, ಹಿಂದಿ ಹೀಗೆ ಮೂರು ಭಾಷೆಯಲ್ಲಿ ಪರಿಣತರು.
ಅಂದಹಾಗೆ, ಆ ಅಜ್ಜ ಸ್ವಾತಂತ್ರ್ಯ ಹೋರಾಟಗಾರರೂ ಹೌದು. ಎರಡು ದಿನ ಜೈಲುವಾಸ ಅನುಭವಿಸಿದವರು. ಒಟ್ಟಾರೆ 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಜ್ಞಾನ ಬಿತ್ತಿದ್ದಾರೆ. ಸಮಾಜ ಸೇವೆಯಲ್ಲಿ ಹೆಚ್ಚಿನ ಆಸಕ್ತಿ.
ಈಗಲೂ ಇವರ ಬಾಯಿಯಲ್ಲಿ ಹಲ್ಲುಗಳು ಉದುರಿಲ್ಲ. ಕಣ್ಣು, ಕಿವಿ ಚೆನ್ನಾಗಿಯೇ ಕೆಲಸ ಮಾಡುತ್ತವೆ. ಬಿಪಿ, ಶುಗರ್ನಂಥ ಕಾಯಿಲೆಗಳ ಹೆಸರನ್ನೇ ಕುಲಕರ್ಣಿಯವರು ಕೇಳಿಲ್ಲ. ಕುಟುಂಬದ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಕಿರಿಯರಿಗೆ ತಪ್ಪುಗಳಿಗೆ ತೀರ್ಪು ನೀಡುತ್ತಾರೆ. ಮತ್ತೊಬ್ಬರ ನೆರವು ಪಡೆಯದೆ, ದೈನಂದಿನ ಕಾರ್ಯಗಳಲ್ಲಿ ತೊಡಗುತ್ತಾರೆ. ಆದರೆ, ವರ್ಷದ ಹಿಂದೆ ನಾಲ್ಕನೇ ಮಗ ತೀವ್ರ ಜ್ವರದಿಂದ ಸಾವನ್ನಪ್ಪಿದಾಗ, ಅಗಲಿಕೆಯ ನೋವಿನಿಂದ ಶಕ್ತಿ ಕುಂದಿದಂತಿದ್ದಾರೆ.
- ನಾಗರಾಜ ಪಾಟೀಲ
Advertisement