
ಕಳೆದ ಭಾನುವಾರ ಲೈಬ್ರರಿಯಲ್ಲಿ ಕುಳಿತು ವಾರಪತ್ರಿಕೆಗಳನ್ನು ಓದುತ್ತಿದ್ದೆ. ಆಗ ಅಲ್ಲಿಗೆ ವಯೋವೃದ್ಧರೊಬ್ಬರು ಆಗಮಿಸಿದರು. ಲೈಬ್ರರಿಯಲ್ಲಿ ಜನರಿಗೆ ದೊರೆಯುವ ಸೌಲಭ್ಯಗಳು ಹಾಗೂ ಲೈಬ್ರರಿ ನಿರ್ವಹಣೆ ಮಾಡುವ ವೈಖರಿ ಕುರಿತು ಗ್ರಂಥಾಲಯದ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಆನಂತರ 'ನೀವೀಗ ಅನುಸರಿಸುತ್ತಿರುವ ವಿಧಾನ ತೀರಾ ಔಟ್ಡೇಟೆಡ್. ಲೈಬ್ರರಿ ನಿರ್ವಹಣೆಗೆ ಈಗ ಎಂತೆಂಥ ವಿಧಾನಗಳಿವೆ? ನೀವ್ಯಾಕೆ ಅವುಗಳನ್ನು ಅನುಸರಿಸಬಾರದು?' ಅಂತೆಲ್ಲ ಪ್ರಶ್ನಿಸಿದರು. ಅಲ್ಲೇ ಇದ್ದ ನನ್ನೆಡೆಗೆ ನೋಡಿ, 'ನಾನು ಹೇಳ್ತಿರೋದು ಸರಿ ಅಲ್ವಾ?' ಅಂತ ಕೇಳಿದ್ರು.
'ನಾನು ಹೌದೌದು' ಅಂತ ತಲೆ ಅಲ್ಲಾಡಿಸಿ ಸುಮ್ಮನೆ ನನ್ನ ಪಾಡಿಗೆ ವಾರಪತ್ರಿಕೆ ಓದುವುದನ್ನು ಮುಂದುವರಿಸಿದೆ. ಲೈಬ್ರರಿಯಿಂದ ಹೊರ ನಡೆಯುವಾಗ ಆ ಅಜ್ಜ ಮತ್ತೆ ಎದುರಾದರು. ತಮ್ಮನ್ನು ತಾವು ಪರಿಚಯಿಸಿಕೊಂಡು ನನ್ನ ಹೆಸರು, ವೃತ್ತಿ ಹಿನ್ನೆಲೆ ಕುರಿತು ವಿಚಾರಿಸಿದರು.
ಆನಂತರ ಅವರ ಮಾತು ಮತ್ತೆ ಲೈಬ್ರರಿಯಲ್ಲಿನ ಅವ್ಯವಸ್ಥೆಯೆಡೆಗೆ ಹೊರಳಿತು. ಈ ಲೈಬ್ರರಿನಾ ಬ್ರಿಟಿಷರ ಕಾಲದಲ್ಲೇ ಕಟ್ಟಲಾಗಿದೆ. ಆಗಿದ್ದ ವ್ಯವಸ್ಥೆಯೇ ಈಗಲೂ ಇದೆ. ಅಬ್ಬಬ್ಬಾ ಅಂದ್ರೆ ಒಂದಷ್ಟು ಪುಸ್ತಕಗಳು, ಅವನ್ನಿಡುವ ರ್ಯಾಕ್ಗಳ ಸಂಖ್ಯೆ ಹೆಚ್ಚಾಗಿದೆಯಷ್ಟೇ. 'ಲೈಬ್ರರಿಯನ್ನು ಈಗ ಅತ್ಯಾಧುನಿಕವಾಗಿ ನಿರ್ವಹಿಸಬಹುದು ರೀ. ಇವ್ರು ಇನ್ನೂ ಯಾವ್ದೋ ಕಾಲ್ದಲ್ಲಿದ್ದಾರೆ. ಎಲ್ಲಾ ಬುಕ್ಗಳಿಗೂ ಕೋಡಿಂಗ್ ಮಾಡಿ ಡಾಟಾಬೇಸ್ ಮೇಂಟೇನ್ ಮಾಡಿದ್ರೆ ಇಲ್ಲಿ ಯಾವ್ಯಾವ ಪುಸ್ತಕಗಳು ಇವೆ, ಯಾವ್ಯಾವು ಡೆಲಿವರಿ ಆಗಿವೆ ಅನ್ನೋದ್ನೆಲ್ಲ ನಿಮಿಷದೊಳಗೆ ಹೇಳ್ಬಹುದು. ಜನಕ್ಕೆ ಬಿಡುವು ಸಿಗೋದೆ ಕಡಿಮೆ. ಅವರು ಈ ಲೈಬ್ರರಿಗೆ ಬಂದು ಪುಸ್ತಕ ಹುಡುಕೋದ್ರಲ್ಲೇ ಗಂಟೆಗಟ್ಟಲೆ ಟೈಮ್ ವೇಸ್ಟ್ ಮಾಡಿದ್ರೆ, ಓದೋದು ಯಾವಾಗ?' ಅಂತ ಕೇಳಿದ್ರು.
ಅದಕ್ಕೆ ನಾನು, 'ಸಾರ್ ನೀವು ಹೇಳೋದೆಲ್ಲ ಸರಿ. ಆದ್ರೆ ಇದು ಸರ್ಕಾರ ನಿರ್ವಹಿಸುವ ಲೈಬ್ರರಿ. ಇಲ್ಲಿ ಪುಸ್ತಕಗಳ ಆಯ್ಕೆ ಮತ್ತು ಖರೀದಿಯಲ್ಲೇ ದೊಡ್ಡ ಮಟ್ಟದಲ್ಲಿ ಗೋಲ್ಮಾಲ್ ನಡೆಯುತ್ತೆ ಅಂತಾರೆ. ಅಂಥದ್ರಲ್ಲಿ ಜನರಿಗೆ ಅನುಕೂಲ ಆಗುತ್ತೆ ಅಂತ ಇರೋ ವ್ಯವಸ್ಥೆನಾ ಬದಲಾಯಿಸ್ತಾರ? ಕಷ್ಟ ಸರ್' ಅಂತಂದೆ.
ಅದಕ್ಕವರು, 'ನೀವು ಏನೇ ಹೇಳಿ ನಾನು ಮಾತ್ರ ಸುಮ್ಮನಿರೋನಲ್ಲ. ನಾನು ಜಪಾನ್, ಜರ್ಮನಿಯಲ್ಲೆಲ್ಲ ಕೆಲಸ ಮಾಡಿದವನು. ಅಲ್ಲಿನ ವ್ಯವಸ್ಥೆ ಎಷ್ಟು ಅಚ್ಚುಕಟ್ಟಾಗಿರುತ್ತೆ ಗೊತ್ತಾ? ಅವರು ಅನುಸರಿಸುತ್ತಿರೋ ವಿಧಾನನಾ ನಾವ್ಯಾಕೆ ಅಳವಡಿಸಿಕೊಳ್ಳಬಾರದು? ನಾನು ನಾಳೆನೇ ಮುಖ್ಯ ಗ್ರಂಥಾಲಯಾಧಿಕಾರಿಗೆ ಪತ್ರ ಬರೆಯುತ್ತೇನೆ. ಇಲ್ಲಿನ ವ್ಯವಸ್ಥೆ ಬದಲಾಯಿಸೋಕೆ ನನ್ನ ಕೈಲಾದ ಹೋರಾಟ ಮಾಡ್ತೀನಿ' ಅಂದ್ರು.
'ಸಾರ್, ನೀವೊಬ್ರು ಇಲ್ಲಿನ ಅವ್ಯವಸ್ಥೆ ವಿರುದ್ಧ ದನಿ ಎತ್ತೋದ್ಕಿಂತ ಇಲ್ಲಿಗೆ ಬರುವವರೆಲ್ಲ ಸಂಘಟಿತರಾಗಿ ಹೋರಾಡಿದ್ರೆ ಪ್ರಯೋಜನ ಆಗ್ಬಹುದೇನೊ?' ಅಂದೆ.
'ರೀ, ಒಬ್ಬನಿಂದ ಏನೂ ಆಗಲ್ಲ ಅಂತ ಯಾಕೆ ಅಂದ್ಕೊಳ್ತೀರ? ನೀವಿನ್ನೂ ಯುವಕರಿದ್ದೀರಿ. ನಿಮ್ಮಂಥೋರು ಹೀಗಂದ್ರೆ ಹೇಗೆ? ಗಾಂಧಿ, ಬುದ್ಧ, ನೆಲ್ಸನ್ ಮಂಡೇಲ ಎಲ್ಲ ನಿಮ್ಮ ಹಾಗೆ ಯೋಚ್ನೆ ಮಾಡಿದ್ರೆ ಆಗ್ತಿತ್ತಾ? ನಾನಂತೂ ಸುಮ್ನೆ ಇರೋ ಮನುಷ್ಯ ಅಲ್ಲ. ನಿಮ್ಮ ಸಲಹೆಗಳನ್ನು ಕೊಡುವುದಿದ್ದರೆ ಕೊಡಿ' ಅಂತ ನನ್ನ ಫೋನ್ ನಂಬರ್ ತೆಗೆದುಕೊಂಡರು. ಅವರು ಎಂಜಿನಿಯರ್ ಆಗಿದ್ದವರು. ದೇಶ ವಿದೇಶಗಳಲ್ಲಿ ಕೆಲಸ ಮಾಡಿ ಇದೀಗ ಹಾಸನದಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದಾರೆ. ಕೆಲ ಕಂಪನಿಗಳಿಗೆ ಸಲಹೆಗಾರರೂ ಆಗಿದ್ದಾರೆ. ಅವರಲ್ಲಿದ್ದ ಆತ್ಮಸ್ಥೈರ್ಯ ಹಾಗೂ ಬದ್ಧತೆ ಇನ್ನೂ ಇಪ್ಪತ್ತೈದು ದಾಟದ ನನ್ನನ್ನು ಸೆಳೆದದ್ದು ಮಾತ್ರ ಸುಳ್ಳಲ್ಲ. ಇವರನ್ನು ಕಂಡ ಮೇಲೆ ವಯಸ್ಸು ದೇಹಕ್ಕಷ್ಟೇ ಮನಸ್ಸಿಗಲ್ಲ ಎಂಬ ಮಾತು ಅರ್ಥಪೂರ್ಣವೆನಿಸಿತು.
- ಎಚ್.ಕೆ. ಶರತ್ ಹಾಸನ
Advertisement