ಗಿನ್ನಿಸ್ ದಾಖಲೆ ಸೇರಿದ ಕನ್ನಡದ ಬಾಲಕಿ

ಹನ್ನೆರಡು ವರ್ಷದ ಬಾಲಕಿಯೊಬ್ಬಳು ನೃತ್ಯದ ಮೂಲಕ ಗಿನ್ನಿಸ್ ...
ಸ್ವಾತಿ. ಪಿ. ಭಾರದ್ವಾಜ್
ಸ್ವಾತಿ. ಪಿ. ಭಾರದ್ವಾಜ್

ಹನ್ನೆರಡು ವರ್ಷದ ಬಾಲಕಿಯೊಬ್ಬಳು ನೃತ್ಯದ ಮೂಲಕ ಗಿನ್ನಿಸ್ ಪುಸ್ತಕಕ್ಕೆ ದಾಖಲಾದ ಏಕೈಕ ಬಾಲ ಕಲಾವಿದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆಂದರೆ ಅದು ಚನ್ನರಾಯಪಟ್ಟಣದ ಕು.ಸ್ವಾತಿ. ಪಿ. ಭಾರದ್ವಾಜ್ ಒಬ್ಬರೇ. ಇಂತಹ ಒಂದು ಅಪೂರ್ವ ಘಳಿಗೆಗೆ ಸಾಕ್ಷಿಯಾದದ್ದು ಹೈದರಾಬಾದಿನ ಗಾಚಿಬೋಲಿ ಕ್ರೀಡಾಂಗಣ. ಡಿಸೆಂಬರ್ 26. 2010ರಲ್ಲಿ ಜರುಗಿದ ದ್ವಿತೀಯ ಅಂತಾರಾಷ್ಟ್ರೀಯ ಕೂಚುಪುಡಿ ನೃತ್ಯೋತ್ಸವದಲ್ಲಿ 2850 ನೃತ್ಯ ಗಾತಿಯರೊಡನೆ ನೃತ್ಯ ಪ್ರದರ್ಶನ ನೀಡಿದ್ದು ಬರೋಬ್ಬರಿ ನಾಲ್ಕು ಗಂಟೆ 26 ನಿಮಿಷಗಳು.

ಇದು ಈ ಬಾಲಕಿಯ ಜೀವನದ ಮಧುರ ಕ್ಷಣಗಳು. ಸ್ವಾತಿ ತನ್ನ ನಾಲ್ಕನೇ ವರ್ಷಕ್ಕೆ ಭರತನಾಟ್ಯ ಕಲಿಯಲು ಪ್ರಾರಂಭಿಸಿದಳು.

ಬೆಂಗಳೂರಿನ ವಿದುಷಿ ರೇಖಾ ಜಗದೀಶ್‌ರವರಿಂದ ಭರತನಾಟ್ಯವನ್ನು ಕಲಿತು ಇಂದು ಚಿಕ್ಕವಯಸ್ಸಿನಲ್ಲಿಯೇ ಅದ್ಭುತ ಸಾಧನೆ ಮಾಡಿ ನಮ್ಮ ನಾಡಿಗೆ ಹೆಸರು ತಂದಿದ್ದಾರೆ. ತಂದೆ ಪ್ರಕಾಶ್ ಮತ್ತು ತಾಯಿ ಅನಿತಾ ತಮ್ಮ ಮಗಳ ಕಲಾಸಕ್ತಿಗೆ ನೀರೆರೆದು ಪೋಷಿಸಿದರು. ಓದಿನಲ್ಲಿಯೂ ಮಂಚೂಣಿಯಲ್ಲಿರುವ ಸ್ವಾತಿ ಇದುವರೆಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ 850ಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳನ್ನು ನೀಡಿ ಮನ್ನಣೆ ಗಳಿಸಿದ್ದಾರೆ.

ಹಲವಾರು ಏಕವ್ಯಕ್ತಿ ಕಾರ್ಯಕ್ರಮಗಳನ್ನು ನೀಡಿ ಕಲಾ ಸಕ್ತರ ಮನಸೆಳೆದಿದ್ದಾರೆ. ಇವರ ಅನೇಕ ಕಾರ್ಯಕ್ರಮಗಳು ದೂರದರ್ಶನದ ವಿವಿಧ ಚಾನೆಲ್‌ಗಳಲ್ಲಿ ಪ್ರಸಾರವಾಗಿದೆ. ನೂರಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಸಿರುವ ಸ್ವಾತಿ ನಮಗೆ ಆಪ್ಯಾಯಮಾನವಾಗಿರುವುದು ಅವಳ ಸಾಮಾಜಿಕ ಕಳಕಳಿಯಿಂದ ಜೀವನದಲ್ಲಿ ಸಾಧನೆಗೆ ಮಿತಿಯಿಲ್ಲವಾದರೂ ತನ್ನ ಜೀವನದ ಧ್ಯೇಯ ಕೇವಲ ಹಣ ಮತ್ತು ಹೆಸರು ಗಳಿಸುವುದಲ್ಲ, ತಾನು ಕಲಿತಿರುವ ಕಲೆಯನ್ನು ಅವಕಾಶ ವಂಚಿತ ಮಕ್ಕಲಿಗೂ ಕಲಿಸಿಕೊಡಬೇಕೆಂಬುದು. ಅದಕ್ಕಾಗಿ ಶ್ರೀ ನಾಟ್ಯ ಭೈರವಿ ಸಂಗೀತ ಮತ್ತು ಭರತನಾಟ್ಯ ಶಾಲೆಯನ್ನು ಚನ್ನರಾಯಪಟ್ಟಣದಲ್ಲಿ ಸ್ಥಾಪಿಸಿ, ಸುಮಾರು 450 ಮಕ್ಕಳಿಗೆ ಉಚಿತವಾಗಿ ಭರತನಾಟ್ಯವನ್ನು ಕಲಿಸುತ್ತಿದ್ದಾಳೆ.

ಇಷ್ಟು ಸಣ್ಣವಯಸ್ಸಿಗೇ ಇಂತಹ ವಿಶಾಲ ಹೃದಯ ಹೊಂದಿರುವ ಸ್ವಾತಿಯನ್ನು ಈ ಬಗ್ಗೆ ಪ್ರಶ್ನಿಸಿದರೆ, ದೇವರು ನೀಡಿರುವ ಈ ಪ್ರತಿಭೆಯನ್ನು ಸಮಾಜಕ್ಕೆ ಸೇವೆ ಸಲ್ಲಿಸುವುದರ ಮೂಲಕ ಸದುಪಯೋಗ ಪಡಿಸಿಕೊಳ್ಳಲು ಎನ್ನುತ್ತಾರೆ. ಚಿಕ್ಕವಯಸ್ಸಿನಲ್ಲಿಯೇ ಅದೆಂತಹ ಕಳಕಳಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com