

ಸುಶೀಲಮ್ಮ ತಮ್ಮ ತೀರ್ಥಯಾತ್ರೆಯ ಬಗ್ಗೆ ಹೇಳಿ ಇವರ ಬಗ್ಗೆ ಕೇಳಿದಾಗ ಗಿರಿಜಮ್ಮನ ಕತೆ ಬಿಚ್ಚಿಕೊಂಡಿತು...
ಹುಟ್ಟಿದಾಗಿಂದ ತಾಯಿಯ ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಮನೆ ತುಂಬಾ ಮಕ್ಕಳು. ವಯಸ್ಸಿಗೆ ಬಂದು ತಿಂಗಳಾಗಿರಲಿಲ್ಲ, ಒಂದು ದೇಗುಲದಲ್ಲಿ ಸಿರಿವಂತ ಕುಟುಂಬದ ದೊಡ್ಡ ವ್ಯಕ್ತಿತ್ವದ, ವಯಸ್ಸಿನಲ್ಲೂ ನನಗಿಂತ ಇಪ್ಪತ್ತು ವರುಷ ದೊಡ್ಡವರು ನನ್ನನ್ನು ವಿವಾಹವಾದರು. ಅವರಿಗದು ಎರಡನೇ ಮದುವೆಯಾಗಿತ್ತು. ಅವರಿಗೆ ಸಂತಾನ ಭಾಗ್ಯವಿರಲಿಲ್ಲ. ನನಗೆ ಅಭ್ಯಂತರವಿರಲಿಲ್ಲ. ಮನೆಯವರೆಲ್ಲರೂ ಬಹಳ ಚೆನ್ನಾಗಿ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತಿದ್ದರು.
ಇವರ ಪ್ರೇಮದ ಪರಿಚಯವಾದ ನಂತರ ನನಗೆ ವಯಸ್ಸಿನ ಅಂತರ ಮರೆತೇಹೋಗಿತ್ತು. ತಂದೆತಾಯಿಯಾಗುವ ಭಾಗ್ಯ ನಮ್ಮದಾಗಿರಲಿಲ್ಲವಾದರೂ ಒಳ್ಳೇ ದಂಪತಿ ಆಗಿದ್ದೇವು. ಕುಟುಂಬದ ಹೊಣೆ ಇವರ ಮೇಲಿತ್ತು. ಹಂಗಿಸಿ, ಮೂದಲಿಸಿ ಮಾತನಾಡುವವರಿಗೂ ಅದು ಭಯ ಹುಟ್ಟಿಸಿತ್ತು. ಬರುಬರುತ್ತಾ ಮನೆ ಹೋಳಾಯಿತು. 35 ವರ್ಷಗಳಿಂದ ಎಲ್ಲರ ಜವಾಬ್ದಾರಿ ಹೊತ್ತಿದ್ದ ಇವರ ಮನಸ್ಸಿಗೆ ಘಾಸಿಯಾಗಿ ಹೃದಯಾಘಾತವಾಯ್ತು. ಮೊದಲ ಬಾರಿ ಹೃದಯಾಘಾತವಾದಾಗಲೇ ನನ್ನ ಹೆಸರಿಗೆ ವಿಲ್ ಮಾಡಲು ನನ್ನವರು ಬಯಸಿದರೂ ರೆಸ್ಟ್ ನೆಪದಲ್ಲಿ ಮನೆಯವರಾರೂ ಲಾಯರನ್ನು ಅವರ ಬಳಿ ಸುಳಿಯಲು ಬಿಡಲೇ ಇಲ್ಲ. ಒಂದು ಪುಣ್ಯ ದಿನ ದೇವರ ಪಾದ ಸೇರಿದರು. ಅದನ್ನೇ ಕಾಯುತ್ತಿದ್ದಂತೆ ಇಪ್ಪತ್ತೆಂಟು ವರ್ಷ ಸಂಸಾರ ನಡೆಸಿದ ನನ್ನನ್ನು ಕೆಲಸದವಳಂತೆ ಕಂಡು, ಹೊರ ಹಾಕಿದರು.
ಸ್ವಲ್ಪ ದಿನ ಇರಲು ಜಾಗ ಕೊಡಿ...ನಂತರ ಏನಾದರೂ ವ್ಯವಸ್ಥೆ ಮಾಡಿಕೊಳ್ಳುತ್ತೇನೆ ಎಂದು ಅಂಗಲಾಚಿ ಬೇಡಿದರೂ ಯಾರೂ ಕರುಣೆ ತೋರಲಿಲ್ಲ. ತನ್ನ ಗಂಡ ಬದುಕಿದ್ದಾಗ ನಮಗೆ ದತ್ತಕಕ್ಕೆ ಕೊಡಲು ನಾಮುಂದು ತಾಮುಂದು ಎನ್ನುತ್ತಿದ್ದ ಹಿರಿಯರು, ಅಮ್ಮಾ ಎಂದೇ ಕರೆಯುತ್ತಿದ್ದ ಕಿರಿಯರು ಎಲ್ಲರೂ ಮೂಕರಾಗಿ ಆಸ್ತಿ ಹಂಚಿಕೆಯಲ್ಲಿ ಮಗ್ನರಾಗಿದ್ದರು.
ಲಕ್ಷಾಧಿಪತಿಯ ಧರ್ಮಪತ್ನಿ ಇಂದು ತುತ್ತಿಗೂ ಪರದಾಡುವಂತಾಗಿತ್ತು. ಆಗ ಸಹಾಯಕ್ಕೆ ಬಂದವರು ತನ್ನ ಯಜಮಾನರ ಸ್ನೇಹಿತರು. ಅವರು ಏನೂ ತಿಳಿದುಕೊಳ್ಳಬೇಡಿ ಅಕ್ಕಾ...ನಿಮ್ಮನ್ನು ಸುರಕ್ಷಿತವಾದ ಸ್ಥಳಕ್ಕೆ ಸೇರಿಸುತ್ತೇನೆ.
ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಇಲ್ಲಿಗೆ ತಂದು ಸೇರಿಸಿದರು. ತವರು ಮನೆಯ ಬಡತನ, ಗಂಡನ ಮನೆಯ ಸಿರಿತನ ಎಲ್ಲವನ್ನೂ ಮರೆತ ಅನುಭವ ಅಲ್ಲಿ ನನಗಾಯ್ತು. ಬಹುಶಃ ಸುಖ ನೆಮ್ಮದಿ ಏನೆಂದು ಇಲ್ಲಿ ಅರಿವಾಗತೊಡಗಿತು. ಎಂದೂ ಏನನ್ನೂ ಆಸೆ ಪಡದ ನನಗೆ ದೇವರು ನೀಡಿದ ಶಿಕ್ಷೆಯೋ ರಕ್ಷೆಯೋ ತಿಳಿಯದಾಗಿದೆ. ತವರು ಇದ್ದೂ ಇಲ್ಲ. ಮಕ್ಕಳ ಭಾಗ್ಯವೇ ಇಲ್ಲ, ನನ್ನವರೆಂದುಕೊಂಡವರೂ ದೂರಾದರು. ಈಗ ಜೊತೆಗಿದ್ದ ಗಂಡನೂ ಇಲ್ಲ. ಆದರೂ ಇಲ್ಲಿ ಯಾವುದೇ ಅಪೇಕ್ಷೆ ಇಲ್ಲದ ಎಲ್ಲ ಸಂಬಂಧಗಳೂ ದೊರೆತು ಕೈಲಾದ ಕೆಲಸ ದೇವರ ಸ್ಮರಣೆ ಮಾಡಿಕೊಂಡು ಯಾವುದೇ ಒತ್ತಡವಿಲ್ಲದೆ ಹಾಯಾಗಿದ್ದೇನೆ. ಇದೇ ಈ ವೃದ್ಧಾಶ್ರಮವೇ ನನಗೆ ಮನೆ, ದೇಗುಲ, ಮಂತ್ರಾಲಯ...ಎಂದು ಕಣ್ಣೊರೆಸಿಕೊಂಡಾಗ, ಪಕ್ಕದಲ್ಲಿದ್ದ ಸುಶೀಲಮ್ಮ, ಮಕ್ಕಳಿದ್ದು ಸುಖ ಅನುಭವಿಸಿ, ಇಲ್ಲಿ ಬಂದಿಲ್ವಾ?
ನಮಗಿಂತಾ ಒಂದು ರೀತಿಯಲ್ಲಿ ನೀವೇ ಪುಣ್ಯಾತ್ಮರು ಎಂದು ಬರುತ್ತಿದ್ದ ಕಣ್ಣೀರನ್ನು ತಡೆಯಲೆತ್ನಿಸಿದರು. ನೋವಿನಲ್ಲೂ ಅತ್ತು ಹಗುರಾಗಿ, ನಗುತ್ತಿದ್ದ ಆ ಜೀವಗಳನ್ನು ಕಂಡ ನೆನಪೇ ಇನ್ನೂ ನನ್ನ ಮನಸಲ್ಲಿ ಹಸಿರಾಗಿದೆ.
ಮನುಷ್ಯತ್ವ, ಮಾನವೀಯ ಮೌಲ್ಯಗಳು ಹಣದ ಸೆರಗಲ್ಲಿ ಮರೆಯಾಗುತ್ತಿದೆಯೇಕೆ?
-ನಾಗಲಕ್ಷ್ಮೀ ಕಡೂರು