ಒಂದು ಕೈ, ಒಂದು ಕಾಲು ಮಾತ್ರವಿರುವ ಪವರ್ ಫುಲ್ ಬೈಕ್ ರೇಸರ್

ಅಲೆನ್ ಕೆಂಪ್ ಸ್ಟರ್ ಎಂಬ ಹೆಸರು ಹೆಚ್ಚಿನವರಿಗೆ ಪರಿಚಯವಿರಲಿಕ್ಕಿಲ್ಲ. ಈತ ಬೈಕ್ ರೇಸರ್. ಈತನ ಬೈಕ್ ನಲ್ಲಿ 1/2...
ಅಲೆನ್  ಕೆಂಪ್ ಸ್ಟರ್
ಅಲೆನ್ ಕೆಂಪ್ ಸ್ಟರ್

ಅಲೆನ್  ಕೆಂಪ್ ಸ್ಟರ್ ಎಂಬ ಹೆಸರು ಹೆಚ್ಚಿನವರಿಗೆ ಪರಿಚಯವಿರಲಿಕ್ಕಿಲ್ಲ. ಈತ ಬೈಕ್ ರೇಸರ್. ಈತನ ಬೈಕ್ ನಲ್ಲಿ 1/2 ಎಂದು ಬರೆಯಲಾಗಿದೆ, ಅದ್ಯಾಕೆ ಅರ್ಧ ಎಂದು ಬರೆದಿದ್ದಾನೆ ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ಸಿಗಬೇಕಾದರೆ  ಅಲೆನ್ ಕೆಂಪ್ ಸ್ಟರ್ ನ್ನು ನೋಡಲೇಬೇಕು. ಈತನಿಗೆ ಒಂದು ಕೈ ಮತ್ತು ಒಂದು ಕಾಲು ಇಲ್ಲ. ಆದರೆ  ಬೈಕ್ ರೇಸ್ ನಲ್ಲಿ ಸ್ಪರ್ಧಿಸಬಲ್ಲ!

ಆಸ್ಟ್ರೇಲಿಯಾ ಮೂಲದ ಈತನಿಗೆ ಬೈಕ್ ರೇಸ್ ಎಂದರೆ ಪಂಚಪ್ರಾಣ. ತನ್ನ ಇಪ್ಪತ್ತನೇ ವಯಸ್ಸಿನಲ್ಲಿ ಈತ ಬೈಕ್  ರೇಸಿಂಗ್ ಆರಂಭಿಸಿದ್ದ. ಹೀಗೆ ಒಂದು ದಿನ ಬೈಕ್ ರೇಸಿಂಗ್ ಮಾಡುತ್ತಿದ್ದ ವೇಳೆ  ಇನ್ನೊಬ್ಬ ಕುಡುಕ ಚಾಲಕನ ಬೇಜವಾಬ್ದಾರಿತನದಿಂದ ಅಲೆನ್ ಬೈಕ್ ಗೆ ಅಪಘಾತವಾಯಿತು. ಆ ಅಪಘಾತದಲ್ಲಿ ಅಲೆನ್ ತನ್ನ ಬಲ ಕೈ ಮತ್ತು ಬಲಗಾಲನ್ನು ಕಳೆದುಕೊಂಡ.
 
ಕೈಕಾಲು ಕಳೆದುಕೊಂಡು ನಿಸ್ಸಹಾಯಕನಾಗಿ ಕುಳಿತುಕೊಂಡಾಗ ಮನಸ್ಸಲ್ಲಿ ಇದ್ದದ್ದು ಒಂದೇ ಗುರಿ. ಮತ್ತೆ ಟ್ರ್ಯಾಕ್ ಗೆ ಇಳಿಯಬೇಕು. ಬೈಕ್ ಓಡಿಸಬೇಕು. ಕನಸುಗಳೊಂದಿಗೆ ಅಲೆನ್ ನ ಆತ್ಮ ವಿಶ್ವಾಸ ಹೆಚ್ಚುತ್ತಾ ಹೋಯಿತು. ಎಡ ಕೈ ಮತ್ತು ಎಡ ಕಾಲಿನಲ್ಲೇ ಬೈಕ್ ಓಡಿಸಬೇಕು. ಅದಕ್ಕಾಗಿ ಆತ 400 ಸಿಸಿ ಹೋಂಡಾ ಬೈಕ್ನ  ಎಲ್ಲ ನಿಯಂತ್ರಣ ವ್ಯವಸ್ಥೆಗಳನ್ನು ಎಡಭಾಗಕ್ಕೆ ಶಿಫ್ಟ್ ಮಾಡಿದ. ಕಠಿಣ ಪ್ರಯತ್ನದ ನಂತರ ಒಂದೇ ಕೈ, ಕಾಲು ಬಳಸಿ ಬೈಕ್  ಓಡಿಸುವದರಲ್ಲಿ ಹಿಡಿತ ಸಾಧಿಸಿಯೇ ಬಿಟ್ಟ. ಇಷ್ಟೆಲ್ಲಾ ಮಾಡಿದರೂ ರೇಸಿಂಗ್ ಅಧಿಕಾರಿಗಳನ್ನು ಒಲಿಸಿ ಟ್ರ್ಯಾಕ್ ಗೆ ಇಳಿಯುವುದು ಕಷ್ಟವಾಗಿತ್ತು. ಆದರೆ ಅಲೆನ್ ನ ಹಠಕ್ಕೆ  ಅವರು ತಲೆಬಾಗಲೇ ಬೇಕಾಯಿತು.
ರೇಸಿಂಗ್ ಮಾತ್ರವಲ್ಲದೆ ವಿಕಲಾಂಗರಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸವನ್ನೂ ಅಲೆನ್ ಮಾಡುತ್ತಿದ್ದಾರೆ. ಚಿಕ್ಕ ಚಿಕ್ಕ ಸಮಸ್ಯೆಗಳಿಗೂ ಕುಗ್ಗಿ ಬಿಡುವ ಜನರ ನಡುವೆ ಅಲೆನ್ ರ ಜೀವನ ಮತ್ತು ಸಾಧನೆ ಇತರರಿಗೆ ಸ್ಪೂರ್ತಿ ನೀಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com