ತಂದೆ ಟಾಯ್ಲೆಟ್ ಕ್ಲೀನರ್, ಮಗಳು 15ನೇ ವಯಸ್ಸಿಗೆ ಮಾಸ್ಟರ್ ಡಿಗ್ರಿ ಟಾಪರ್!

ಲಖನೌನ ಸುಷ್ಮಾ ವರ್ಮಾ ಎಂಎಸ್ಸಿ ಪದವೀಧರೆ, ಆದರೆ ಆಕೆಯ ವಯಸ್ಸು ಮಾತ್ರ ಕೇವಲ 15 ವರ್ಷ. ಇಷ್ಟು ಪುಟ್ಟ ವಯಸ್ಸಿಗೇ ಸ್ನಾತಕೋತ್ತರ ಪದವಿ ಪಡೆದು ಹೊಸ ರಾಷ್ಟ್ರೀಯ...
ಸುಷ್ಮಾ ವರ್ಮಾ ಹಾಗೂ ಕುಟುಂಬ
ಸುಷ್ಮಾ ವರ್ಮಾ ಹಾಗೂ ಕುಟುಂಬ

ಲಖನೌನ ಸುಷ್ಮಾ ವರ್ಮಾ ಎಂಎಸ್ಸಿ ಪದವೀಧರೆ, ಆದರೆ ಆಕೆಯ ವಯಸ್ಸು ಮಾತ್ರ ಕೇವಲ 15 ವರ್ಷ. ಇಷ್ಟು ಪುಟ್ಟ ವಯಸ್ಸಿಗೇ ಸ್ನಾತಕೋತ್ತರ ಪದವಿ ಪಡೆದು ಹೊಸ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದಾಳೆ.

ಡಾ. ಬಿ.ಆರ್. ಅಂಬೇಡ್ಕರ್(ಕೇಂದ್ರ) ವಿಶ್ವವಿದ್ಯಾಲಯದಲ್ಲಿ ತನಗಿಂತ ಎಂಟ್ಹತ್ತು ವರ್ಷ ಹಿರಿಯರೊಂದಿಗೆ ಪರೀಕ್ಷೆಗೆ ಕೂತು ಎಲ್ಲರನ್ನೂ ಮೀರಿಸಿದ ಅದ್ಭುತ ಪ್ರತಿಭೆ ಸುಷ್ಮಾ ವರ್ಮಾ. ನಾಲ್ಕು ಸೆಮಿಸ್ಟರ್'ಗಳಲ್ಲಿ 3ನೇ ಸೆಮಿಸ್ಟರ್ ಬಿಟ್ಟು ಉಳಿದ ಸೆಮಿಸ್ಟರ್'ಗಳಲ್ಲಿ ಸುಷ್ಮಾ ವರ್ಮಾ ಮೊದಲ ಸ್ಥಾನದಲ್ಲಿ ತೇರ್ಗಡೆಯಾಗಿರುವುದು ವಿಶೇಷ.

ಪೋಸ್ಟ್ ಗ್ರಾಜುಯೇಶನ್'ನಲ್ಲಷ್ಟೇ ಅಲ್ಲ ಮೊದಲಿನಿಂದಲೂ ಈ ಬಾಲಕಿಯದ್ದು ಅದ್ಭುತ ಸಾಧನೆಗಳೇ. 2006ರಲ್ಲಿ ಈಕೆ 5 ವರ್ಷವಿದ್ದಾಗಲೇ, ಅಂದರೆ 1ನೇ ಕ್ಲಾಸಿಗೆ ಸೇರಿಕೊಳ್ಳಬೇಕಿದ್ದ ಹುಡುಗಿಯನ್ನು ನೇರವಾಗಿ 9ನೇ ಕ್ಲಾಸಿಗೆ ಅಡ್ಮಿಶನ್ ಮಾಡಲಾಯಿತು. ಮರುವರ್ಷ ಈ ಬಾಲಕಿ 10ನೇ ತರಗತಿ ಪರೀಕ್ಷೆ ತೇರ್ಗಡೆ ಹೊಂದಿದಳು. 10ನೇ ಕ್ಲಾಸ್ ಪಾಸ್ ಮಾಡಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಲಿಮ್ಕಾ ದಾಖಲೆ ಈಕೆಯ ಹೆಸರಿಗೆ ಬಿತ್ತು.

ಜಪಾನ್'ನಲ್ಲೂ ಸುಷ್ಮಾ ಕಮಾಲ್
2010ರಲ್ಲಿ 12ನೇ ಕ್ಲಾಸ್ ಪರೀಕ್ಷೆಯನ್ನೂ ಪಾಸ್ ಮಾಡಿದಳು. ಇದಾದ ಬಳಿಕ ಈಕೆಯ ಸಾಧನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತು. ಈಕೆಯನ್ನು ಜಪಾನ್'ಗೆ ಆಹ್ವಾನಿಸಲಾಯಿತು. ಅಲ್ಲಿ ಐಕ್ಯೂ ಪರೀಕ್ಷೆಯಲ್ಲಿ 30ರ ವಯಸ್ಸಿನವರೊಂದಿಗೆ ಈಕೆ ಸ್ಪರ್ಧಿಸಿದಳು. ಅಲ್ಲಿಯೂ ಈಕೆ ಗೆದ್ದು ವಿಶ್ವವನ್ನೇ ದಂಗುಬಡಿಸಿದಳು.

ಡಾಕ್ಟರ್ ಆಗಲು ಅಡ್ಡಿ
ಸುಷ್ಮಾ ವರ್ಮಾ 10 ವರ್ಷದವಳಿದ್ದಾಗ ವೈದ್ಯಕೀಯ ಕೋರ್ಸ್'ಗೆ ಸೇರಬಯಸಿದ್ದಳು. ಉತ್ತರಪ್ರದೇಶದ ವೈದ್ಯಕೀಯ ಪೂರ್ವಬಾವಿ ಪರೀಕ್ಷೆಯನ್ನೂ ಬರೆದಳು. ಆದರೆ, ವಿಶ್ವವಿದ್ಯಾಲಯ ನಿಯಮವನ್ನು ಮುಂದೊಡ್ಡಿ ಈಕೆಯ ಫಲಿತಾಂಶ ತಡೆಹಿಡಿಯಲಾಯಿತು. ಹೀಗಾಗಿ ಈಕೆ ಅತೀ ಕಿರಿಯ ವಯಸ್ಸಿಗೆ ಡಾಕ್ಟರ್ ಆಗುವ ದಾಖಲೆ ಕೈತಪ್ಪಿತು.

ಎಂಬಿಬಿಎಸ್ ಸೇರುವ ಅವಕಾಶ ಇಲ್ಲವಾದ ಬಳಿಕ ಸುಷ್ಮಾ ಲಕ್ನೋ ವಿವಿಯಲ್ಲಿ ಬಿಎಸ್ಸಿ ಪದವಿಗೆ ಸೇರಿದಳು. 2013ರಲ್ಲಿ ಪದವಿಯನ್ನೂ ಪಡೆದಳು. ಅದಾದ ಬಳಿಕ ಸುಷ್ಮಾ ಎಂಎಸ್ಸಿ ಮಾಡಿ ಸೈ ಎನಿಸಿಕೊಂಡಿದ್ದಾಳೆ.

ಅಪ್ಪ ಟಾಯ್ಲೆಟ್ ಕ್ಲೀನರ್
ಇವಿಷ್ಟೂ ಈಕೆಯ ಪ್ರತಿಭೆಯ ಕಥೆ. ಆದರೆ, ಸುಷ್ಮಾ ವಿಚಾರದಲ್ಲಿ ಇನ್ನೂ ವಿಶೇಷತೆಗಳಿವೆ. ಸುಷ್ಮಾ ವರ್ಮಾಳ ಅಪ್ಪ 51 ವರ್ಷದ ತೇಜ್ ಬಹದ್ದೂರ್ ಟಾಯ್ಲೆಟ್ ಕ್ಲೀನ್ ಮಾಡುವ ಸಾಮಾನ್ಯ ದಿನಗೂಲಿ ಕಾರ್ಮಿಕ. ಇತ್ತೀಚೆಗಷ್ಟೇ ಸುಷ್ಮಾ ಬಗ್ಗೆ ಮಾಹಿತಿ ಪಡೆದ ಭೀಮರಾವ್ ಅಂಬೇಡ್ಕರ್ ಯೂನಿವರ್ಸಿಟಿಯ ಉಪಕುಲಪತಿ ಡಾ. ಆರ್.ವಿ.ಸೋಬ್ತಿ ಅವರು ತೇಜ್ ಬಹದ್ದೂರ್'ಗೆ ಸ್ಯಾನಿಟೇಶನ್ ಸೂಪರ್'ವೈಸರ್ ಕೆಲಸ ಕೊಟ್ಟು ಸಹಾಯ ಮಾಡಿದರು.

ಇಡೀ ಕುಟುಂಬವೇ ಹೀಗೆ
ಸುಷ್ಮಾಳ ಅಣ್ಣ ಕೂಡ ಅಸಾಮಾನ್ಯ ಪ್ರತಿಭೆಯೇ. ಈತ 14ನೇ ವಯಸ್ಸಿಗೆ ಬಿಸಿಎ ಪದವಿ ಪೂರೈಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದ. ಸುಷ್ಮಾಗೆ 3 ವರ್ಷದ ತಂಗಿ ಕೂಡ ಇದ್ದು, ಆ ಪುಟ್ಟ ಹುಡುಗಿ ತನ್ನ ಅಕ್ಕನ ಎಲ್ಲಾ ದಾಖಲೆಗಳನ್ನು ಅಳಿಸಿಹಾಕುವ ಕುರುಹು ತೋರುತ್ತಿದೆಯಂತೆ.

ಸುಷ್ಮಾ ಮುಂದೇನು ಮಾಡುತ್ತಾಳೆ?
ಅಗ್ರಿಕಲ್ಚರಲ್ ಮೈಕ್ರೋಬಯೋಲಜಿಯ ವಿಷಯವೊಂದರಲ್ಲಿ ಡಾಕ್ಟರೇಟ್ ಪಡೆಯುವ ಇಚ್ಛೆ ಸುಷ್ಮಾಳದ್ದು. ಎಂಎಸ್ಸಿ ಓದುವಾಗ ಜಮೀನಿನಲ್ಲಿ ಕೃಷಿ ಕೆಲಸ ಮಾಡುವಾಗ ಈಕೆಗೆ ಇದೇ ಕ್ಷೇತ್ರದಲ್ಲಿ ಪಿಎಚ್'ಡಿ ಮಾಡುವ ಆಸೆ ಉಂಟಾಗುತ್ತಿತ್ತಂತೆ. ಹಾಗೆಯೇ, ಎಂಎಸ್ಸಿ ಲ್ಯಾಬ್'ಗಳಲ್ಲಿ ಗಿಡಗಳ ಬೇರಿನಿಂದ ರೈಜೋಬಿಯಮ್ ಬ್ಯಾಕ್ಟೀರಿಯಾವನ್ನು ಬೇರ್ಪಡಿಸುವಾಗ ಕೃಷಿ ಸೂಕ್ಷ್ಮಜೀವವಿಜ್ಞಾನದಲ್ಲಿ ಏನಾದರೂ ಸಂಶೋಧನೆ ಮಾಡಬೇಕೆಂದು ನಿರ್ಧರಿಸಿದ್ದಳಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com