ದೃಷ್ಟಿ ಹೀನತೆ ಇದ್ದರೂ ಐಎಫ್ಎಸ್ ಗೆ ಆಯ್ಕೆಯಾದ ಸಾಧಕಿ ಬೆನೋ

ಈಕೆ ತಮಿಳುನಾಡಿನ ಎನ್. ಎಲ್. ಬೆನೋ ಝೆಫೈನ್. ಭಾರತೀಯ ವಿದೇಶಿ ಸೇವೆ (ಐಎಫ್‌ಎಸ್)ಗೆ ಆಯ್ಕೆಯಾದ ಮೊಟ್ಟ ಮೊದಲ ಅಂಧೆ....
ಬೆನೋ ಝೆಫೈನ್ ಅವರಿಗೆ ಅಮ್ಮನ ಮುತ್ತು
ಬೆನೋ ಝೆಫೈನ್ ಅವರಿಗೆ ಅಮ್ಮನ ಮುತ್ತು

ಈಕೆ ತಮಿಳುನಾಡಿನ ಎನ್. ಎಲ್. ಬೆನೋ ಝೆಫೈನ್. ಭಾರತೀಯ ವಿದೇಶಿ ಸೇವೆ (ಐಎಫ್‌ಎಸ್)ಗೆ ಆಯ್ಕೆಯಾದ ಮೊಟ್ಟ ಮೊದಲ ಅಂಧೆ.

ಸಾಮಾನ್ಯವಾಗಿ ಐಎಎಸ್ ಮತ್ತು ಐಪಿಎಸ್ ಶ್ರೇಣಿಗಳಷ್ಟೇ ಪ್ರತಿಷ್ಠಿತವಾದ ಐಎಫ್‌ಎಸ್ ಸೇವೆಗೆ ಅಂಧರನ್ನು ಆಯ್ಕೆ ಮಾಡುವುದಿಲ್ಲ. ಆದಾಗ್ಯೂ, ಕಳೆದ 69 ವರುಷಗಳಲ್ಲಿ ದೃಷ್ಟಿ ದೋಷ ಹೊಂದಿರುವವರನ್ನು ಹೊರತುಪಡಿಸಿ ಸಂಪೂರ್ಣವಾಗಿ ಅಂಧರಾಗಿರುವವನ್ನು ಈ ಹುದ್ದೆಗೆ ನೇಮಕ ಮಾಡಿರಲಿಲ್ಲ. ಆದರೆ ಈಗ ಬೆನೋ ಝೆಫೈನ್ ಈ ಸೇವೆಗೆ ಆಯ್ಕೆಯಾಗುವ ಮೂಲಕ ಮನಸ್ಸಲ್ಲಿ ಛಲವೊಂದಿದ್ದರೆ ಸಾಧನೆಗೆ ಯಾವುದೂ ಅಡ್ಡಿಯಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

ಸದ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪ್ರೊಬೆಷನರಿ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿರುವ ಬೆನೋ ಝೆಫೈನ್ ತಮ್ಮ ಸಾಧನೆಯ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಅವರ ಮಾತಿನಲ್ಲೇ ಕೇಳಿ..


ಈ ಹೊತ್ತಲ್ಲಿ ನಾನು ಪ್ರಧಾನ ಮಂತ್ರಿಯವರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನಾನು ಸ್ಟೇಟ್ ಬ್ಯಾಂಕ್‌ನಲ್ಲಿ ಕೆಲಸ ಮಾಡುವುದರ ಜತೆಗೆ ಇನ್ನೊಬ್ಬರಿಗೆ ಸ್ಫೂರ್ತಿ ತುಂಬುವ ತರಗತಿ ನಡೆಸಿಕೊಡುತ್ತಿದ್ದೇನೆ. ಶಾಲೆ, ಕಾಲೇಜುಗಳಿಗೆ ಹೋಗಿ ಅಲ್ಲಿ ಮಕ್ಕಳಿಗೆ ಪ್ರೇರಣೆ ನೀಡುತ್ತೇನೆ. ನನಗೆ ಈ ಸಾಧನೆ ಮಾಡುವುದಕ್ಕೆ ದೃಷ್ಟಿಹೀನತೆ ಅಡ್ಡ ಬಂದಿಲ್ಲ. ಐಎಎಸ್‌ನವರಂತೆ ಫೀಲ್ಡ್ ವರ್ಕ್ ಐಎಫ್‌ಎಸ್‌ನವರಿಗಿಲ್ಲ. ಅಧ್ಯಯನ ನಡೆಸುವುದು, ಪರಿಶೀಲನೆ ನಡೆಸುವುದು, ಆದೇಶ ನೀಡುವುದು ಹೀಗಿರುವ ಕೆಲಸಗಳೇ ಐಎಫ್‌ಎಸ್‌ನಲ್ಲಿರುತ್ತದೆ. ಈಗ ನನಗೆ ತುಂಬ ಅಭಿಮಾನ ಅನಿಸುತ್ತಿದೆ.  ಕಳೆದ ವರುಷ ನಾನು ಸಿವಿಲ್ ಸರ್ವೀಸ್ ಪರೀಕ್ಷೆ ಬರೆದಿದ್ದೆ. ಅದರಲ್ಲಿ  ಪಾಸಾಗಿದ್ದರೂ, ಕೆಲಸ ಎಲ್ಲಿ ಮಾಡಬೇಕೆಂಬುದರ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ.  ನೇಮಕಾತಿಗೆ ಸಂಬಂಧಿಸಿದ ಯುಪಿಎಸ್‌ಸಿಯ ಸಂದರ್ಶನದಲ್ಲಿ  ವಿದೇಶ ನೀತಿ, ಅಂತಾರಾಷ್ಟ್ರೀಯ ಗಡಿ ಪ್ರದೇಶಗಳಲ್ಲಿನ ಸಮಸ್ಯೆಗಳ ಬಗ್ಗೆಯೇ ಕೇಳಲಾಗಿತ್ತು. ಭಾರತದ ಈಶಾನ್ಯ ಗಡಿಪ್ರದೇಶಗಳ ಸಮಸ್ಯೆ ಬಗ್ಗೆ ನಾನು ವಿವರಿಸಿ ಮಾತನಾಡಿದ್ದೆ.

ನನ್ನ ಅಪ್ಪ ರೈಲ್ವೇ ಉದ್ಯೋಗಿ ಲ್ಯೂಕ್ ಆ್ಯಂಟನಿ ಚಾರ್ಲ್ಸ್. ಅಮ್ಮ ಮೇರಿ ಪದ್ಮಜಾ ಗೃಹಿಣಿ. ಇವರಿಬ್ಬರಿಂದಲೇ ನನಗೆ ಪ್ರೇರಣೆ, ಪ್ರೋತ್ಸಾಹ ಸಿಕ್ಕಿದ್ದು. ಹುಟ್ಟಿದಾಗಿನಿಂದಲೇ ನನಗೆ ದೃಷ್ಟಿ ಹೀನತೆಯಿತ್ತು. ಲಿಟ್ಲ್ ಫ್ವವರ್ ಕಾನ್ವೆಂಟ್ ಶಾಲೆಯಲ್ಲಿ ಓದಿದ್ದು. ಸಿವಿಲ್ ಸರ್ವೀಲ್ ಕೋಚಿಂಗ್ ಹಲವಾರು ಕೇಂದ್ರಗಳಲ್ಲಿ  ಪಡೆದದ್ದೆ. ನನ್ನ ಈ ಸಾಧನೆಗೆ ನೆರವಾದ ಆ ಐಎಎಸ್ ಅಕಾಡೆಮಿಯ ಅಧ್ಯಾಪಕರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು.

ನನಗೆ ರೋಲ್ ಮಾಡೆಲ್ ಅಂತ ಯಾರೂ ಇಲ್ಲ. ನಾನು ನನ್ನ  ವ್ಯಕ್ತಿತ್ವದ ಮೇಲೆ ವಿಶ್ವಾಸವಿರಿಸಿದ್ದೇನೆ. ಬ್ರೈಲ್ ಲಿಪಿಯಲ್ಲಿ ಓದಿದ್ದೆ, ಅಂಧರಿಗಾಗಿರುವ ಪ್ರತ್ಯೇಕ ಸಾಫ್ಟ್‌ವೇರ್ ಸಹಾಯದಿಂದ ಕಂಪ್ಯೂಟರ್ ಬಳಕೆ ಮಾಡುತ್ತಿದ್ದೇನೆ. ತಮಿಳು, ಇಂಗ್ಲಿಫ್ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಅದನ್ನು ಕಂಪ್ಯೂಟರ್ ನಲ್ಲಿ ಸೇವ್ ಮಾಡಿಟ್ಟು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದೆ.  ಪುಸ್ತಕ, ದಿನಪತ್ರಿಕೆ ಎಲ್ಲವನ್ನೂ ನನಗೆ ಓದಿ ಹೇಳುತ್ತಿದ್ದದ್ದು ಅಮ್ಮ. ನನ್ನ ಸಾಧನೆಯಲ್ಲಿ ಅವಳ ಶ್ರಮವಿದೆ ಅಂತಾರೆ ಬೆನೋ.

ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜಯಲಲಿತಾ ಅವರ ಅನುಗ್ರಹ ಪಡೆದ ನಂತರವೇ ತಾನು ಔದ್ಯೋಗಿಕ ಜೀವನ ಆರಂಭಿಸಲು ನಾನು ಇಚ್ಛಿಸುತ್ತೇನೆ ಅಂದಿದ್ದಾರೆ ಬೆನೋ ಝೆಫೈನ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com