
ಬೆಂಗಳೂರು: ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ 376 ಮಂದಿ ಕೀಬೋರ್ಡ್ ನುಡಿಸುವ ಮೂಲಕ ಗಿನ್ನಿಸ್ ದಾಖಲೆ ಬರೆದಿದ್ದಾರೆ. ಬನಶಂಕರಿಯ ಶ್ರೀ ವೀಣಾವಾಣಿ ಸಂಗೀತ ಶಾಲೆ ಈ ಕೀರ್ತಿಗೆ ಪಾತ್ರವಾಗಿದೆ. ಮೊಟ್ಟಮೊದಲ ಬಾರಿಗೆ ಕೀಬೋರ್ಡ್ ವಾದ್ಯ ಗಾರರು ಒಂದೇ ವೇದಿಕೆಯಲ್ಲಿ ಸಂಗೀತ ನುಡಿಸುವ ಮೂಲಕ ದಾಖಲೆ ನಿರ್ಮಿಸಿದರು. ಕಾರ್ಯಕ್ರಮಕ್ಕೆ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಸಾಕ್ಷಿಯಾದರು.
ಸಂಪತ್ ಕುಮಾರ್ ಶರ್ಮಾ ಅವರ ನೇತೃತ್ವದಲ್ಲಿ ಸ್ಥಾಪಿಸಲ್ಪಟ್ಟ ವೀಣಾವಾಣಿ ಸಂಗೀತ ಶಾಲೆ ಕಳೆ 15 ವರ್ಷಗಳಿಂದ ಗಿರೀಶ್ ಕುಮಾರ್ ಅವರ ಸಾರಥ್ಯದಲ್ಲಿ ವಿವಿಧ ವಿನೂತನ ಸಾಧನೆಗಳನ್ನು ಪ್ರದರ್ಶಿಸುತ್ತಾ ಬಂದಿದೆ. ಅದರಲ್ಲಿ ಇಂದಿನ ಗಿನ್ನಿಸ್ ದಾಖಲೆಯ ಕಾರ್ಯಕ್ರಮವೂ ಒಂದು. ಇಲ್ಲಿಯವರೆಗೆ 12 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಸಂಸ್ಥೆಯಿಂದ ಸಂಗೀತ ಕಲಿತಿದ್ದಾರೆ. 2000ರಲ್ಲಿ 129 ಮಂದಿ ಸಂಗೀತಗಾರರು ಒಟ್ಟಾಗಿ ವಾದ್ಯಗೋಷ್ಠಿ ನಡೆಸಿರುವುದೇ ಪ್ರಥಮ ಗಿನ್ನಿಸ್ ದಾಖಲೆಯಾಗಿತ್ತು. ಅದನ್ನು ಅಮೆರಿಕಾ ದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ 175 ಮಂದಿ ವಾದ್ಯಗೋಷ್ಠಿ ನಡೆಸುವ ಮೂಲಕ ಅಳಿಸಿ ಹಾಕಿದ್ದರು. ನಂತರ, ಈ ದಾಖಲೆಯನ್ನು 2014ರಲ್ಲಿ 229 ಮಂದಿ ಚೆನ್ನೈನಲ್ಲಿ ವಾದ್ಯಗೋಷ್ಠಿ ನಡೆಸುವ ಮೂಲಕ ಮುರಿದಿದ್ದರು. ಇದೀಗ ವೀಣಾವಾಣಿ ಸಂಗೀತ ಶಾಲೆ ಈ ದಾಖಲೆಯನ್ನು ಅಳಿಸಿ ಹೊಸ ದಾಖಲೆ ಸೃಷ್ಟಿಸಿದೆ.
ಸಂಗೀತ ಶಾಲೆಯ 100 ಮಕ್ಕಳೊಂದಿಗೆ ವಿವಿಧ ಊರುಗಳಿಂದ ಬಂದಿದ್ದ ಮಕ್ಕಳು ಸಾಥ್ ನೀಡಿದ್ದರು. ನಾಲ್ಕೂವರೆ ನಿಮಿಷದ ಕಾಲಾವಧಿಯಲ್ಲಿ ಲಂಬೋದರ, ವಂದೇಮಾತರಂ ರಾಷ್ಟ್ರಗೀತೆಯನ್ನು ನುಡಿಸಿ ಜನರ ಗಮನ ಸೆಳೆದರು. ಕಾರ್ಯಕ್ರಮದಲ್ಲಿ 4 ವರ್ಷದಿಂದ 70 ವರ್ಷ ದೊಳಗಿನ ವೃದ್ಧರವರೆಗೂ ಪಾಲ್ಗೊಂಡಿದ್ದರು. ಅಂಗವಿಕಲ ಕಲಾವಿದರೂ ಭಾಗವಹಿಸಿದ್ದು ವಿಶೇಷವಾಗಿತ್ತು. ಶಾಂತಿ ಸಮಾಧಾನ, ಛಲದಿಂದ ಏನೇ ಕಲಿತರೂ ಅದಕ್ಕೆ ಫಲಸಿಗುತ್ತದೆ ಎನ್ನುವುದಕ್ಕೆ ಸಂಗೀತ ವೇದಿಕೆ ಸಾಕ್ಷಿಯಾಗಿತ್ತು. ಕೇವಲ ಕೀಬೋರ್ಡ್ ವಾದನ ವಷ್ಟೇ ಅಲ್ಲದೇ ಲಕ್ಷ್ಮೀರಾಜಮಣಿ ಕೂಚುಪುಡಿ ನೃತ್ಯ ಪ್ರದರ್ಶಿಸಿದರೆ, ಜತೆಗೆ ಮೋಹಿನಿಅಟ್ಟಂ, ಭರತನಾಟ್ಯ ಕಾರ್ಯಕ್ರಮಗಳು ಮೂಡಿ ಬಂದವು. ಸಂಗೀತ ನಿರ್ದೇಶಕ ರಾಜನ್, ಆರ್ಟ್ ಆಫ್ ಲಿವಿಂಗ್‍ನ ನಿರ್ದೇಶಕ ರವಿಚಂದ್ರ ಪ್ರಸಾದ್, ಗರುಡ ಮಾಲ್‍ನ ಸಂಸ್ಥಾಪಕ ಉದಯ್ ಬಿ. ಗರುಡ, ಬಾಲಕೃಷ್ಣ ಗುರೂಜಿ ಹಾಜರಿದ್ದರು.
Advertisement