
ಹಿರಿಯ ಲೇಖಕ ಪ್ರೊ.ಷ. ಶೆಟ್ಟರ್, ಡಾ.ಬಿ.ಎನ್. ಸುಮಿತ್ರಾಬಾಯಿ ಮತ್ತು ಡಾ.ನಾ.ಮೊಗಸಾಲೆ ಅವರಿಗೆ 2015ನೇ ಸಾಲಿನ ಕನ್ನಡ ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ 'ಮಾಸ್ತಿ ಪ್ರಶಸ್ತಿ' ಸಂದಿದೆ.
ಜೂನ್‌ನಲ್ಲಿ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಪುರಸ್ಕೃತರಿಗೆ 25 ಸಾವಿರ ರುಪಾಯಿ ನಗದು, ಮಾಸ್ತಿ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು.
ಪ್ರೊ.ಷ.ಶೆಟ್ಟರ್ ಅವರಿಗೆ ಕನ್ನಡ ಭಾಷಾ ಅಧ್ಯಯನ ಮತ್ತು ಸಂಶೋಧನೆ ವಿಭಾಗದಲ್ಲಿ ಪ್ರಶಸ್ತಿ ಸಂದಿದೆ. ಡಾ.ಬಿ.ಎನ್. ಸುಮಿತ್ರಾ ಬಾಯಿ ಅವರಿಗೆ ವಿಮರ್ಶೆ ವಿಭಾಗದಲ್ಲಿ ಪ್ರಶಸ್ತಿ ಸಂದಿದೆ. ಅವರು ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಜೈನ ಶಾಸ್ತ್ರ ಮತ್ತು ಪ್ರಾಕೃತದಲ್ಲಿ ಪಿ.ಎಚ್.ಡಿ ಮಾಡಿದ್ದಾರೆ.
ಡಾ.ನಾ.ಮೊಗಸಾಲೆ ಅವರಿಗೆ ಸೃಜನಶೀಲ ವಿಭಾಗದಲ್ಲಿ ಪ್ರಶಸ್ತಿ ಸಂದಿದ್ದು, ಅವರು ಕತೆ, ಕಾದಂಬರಿ, ಕವನ ಲೇಖನ ಸಂಕಲನ, ಸಂಪಾದನಾ ಕೃತಿಗಳು ವೈದ್ಯಕೀಯ ಬರಹಗಳೂ ಸೇರಿ 65 ಪುಸ್ತಕಗಳನ್ನು ಹೊರತಂದಿದ್ದಾರೆ. ಕೇರಳ ಹುಟ್ಟೂರಾದರೂ, ಕಾರ್ಕಳದ ಸಮೀಪದ ಕಾಂತಾವರದಲ್ಲಿ ನೆಲೆಸಿ, ಬಹುಸಂಸ್ಕೃತಿ ಹಾಗೂ ಜೀವ ವೈವಿದ್ಯತೆ ಉಳಿಸಲು ಶ್ರಮಿಸಿದ್ದಾರೆ. ಇವರ ಹಲವು ಕತೆ, ಕವನ, ಕಾದಂಬರಿಗಳು ಹಿಂದಿ, ಇಂಗ್ಲಿಷ್, ತೆಲುಗು ಭಾಷೆಗೆ ಅನುವಾದವಾಗಿವೆ.
Advertisement