ಸಾಧನೆಗೆ ಅಡ್ಡಿಯಾಗದ ಕ್ಯಾನ್ಸರ್, ಪಿಯುಸಿಯಲ್ಲಿ 542 ಅಂಕ ಪಡೆದ ವೈಶಾಲಿ

ಬೆಂಗಳೂರಿನ ಗೌತಮ್ ಸಿದ್ದಾರ್ಥ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ವೈಶಾಲಿ ಕೆ ಅವರು ಕ್ಯಾನ್ಸರ್ ಮೆಟ್ಟಿನಿಂತು ಬೆರೆಯವರಿಗೆ ಸ್ಫೂರ್ತಿಯಾಗುವಂತಹ...
ಪೋಷಕರೊಂದಿಗೆ ವೈಶಾಲಿ
ಪೋಷಕರೊಂದಿಗೆ ವೈಶಾಲಿ
Updated on

ಬೆಂಗಳೂರಿನ ಗೌತಮ್ ಸಿದ್ದಾರ್ಥ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ವೈಶಾಲಿ ಕೆ ಅವರು ಕ್ಯಾನ್ಸರ್ ಮೆಟ್ಟಿನಿಂತು ಬೇರೆಯವರಿಗೆ ಸ್ಫೂರ್ತಿಯಾಗುವಂತಹ ಸಾಧನೆ ಮಾಡಿದ್ದಾರೆ.

ಆರನೇ ವರ್ಷದಿಂದಲೇ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ವೈಶಾಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 542 ಅಂಕ(ಶೇ.90.33ರಷ್ಟು)ಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಬ್ಯುಸಿನೆಸ್ ಸ್ಟಡೀಸ್‌ನಲ್ಲಿ 97, ಅಂಕೌಂಟೆನ್ಸಿಯಲ್ಲಿ 94, ಬೇಸಿಕ್ ಮಾಥ್ಸ್‌ನಲ್ಲಿ 90, ಹಿಂದಿಯಲ್ಲಿ 98, ಇಂಗ್ಲಿಷ್‌ನಲ್ಲಿ 87 ಹಾಗೂ ಇಕೊನಾಮಿಕ್ಸ್‌ನಲ್ಲಿ 76 ಅಂಕಗಳನ್ನು ಪಡೆದಿದ್ದಾರೆ.

ಉತ್ತಮ ಅಂಕಗಳನ್ನು ಪಡೆಯುವ ಮೂಲಕ ನನ್ನ ಮಗಳು ಇತರರಿಗೆ ಸ್ಫೂರ್ತಿಯಾಗಿದ್ದಾಳೆ ಎನ್ನುವ ವೈಶಾಲಿ ಅವರ ತಂದೆ ಕಲ್ಯಾಣ್ ಕೃಷ್ಣ ಅವರು, ನನ್ನ ಮಗಳು ಆರನೇ ವರ್ಷದಲ್ಲಿದ್ದಾಗಲೇ ರಕ್ತ ಕ್ಯಾನ್ಸರ್ ಲ್ಯೂಕೆಮಿಯಾ ಕಾಣಿಸಿಕೊಂಡಿತು. ಕಿಮೋಥೆರಫಿಗಾಗಿ ಅವಳು ಏಳು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದಳು. 2003ರಿಂದ 2008ರವರೆಗೆ ಚಿಕಿತ್ಸೆ ಕೊಡಿಸಿದ್ದೇವೆ. ಈಗ ಅವಳು ಸಂಪೂರ್ಣ ಗುಣಮುಖಳಾಗಿದ್ದಾಳೆ ಎನ್ನುತ್ತಾರೆ.

'ನನ್ನ ಮಗಳು ಶಾಲಾ ದಿನಗಳಲ್ಲಿ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದಳು. ಮೆಟ್ಟಿಲು ಹತ್ತಲು ಅಥವಾ ಸ್ಕೂಲ್ ಬ್ಯಾಗ್ ಹಾಕಿಕೊಳ್ಳಲು ಆಗುತ್ತಿರಲಿಲ್ಲ. ಹೀಗಾಗಿ ಅವಳನ್ನು ಪ್ರತಿದಿನ ನಾನೇ ಶಾಲೆಗೆ ಬಿಟ್ಟು ಬರುತ್ತಿದ್ದೆ' ಎಂದು ತಾಯಿ ಲತಾ ಕೃಷ್ಣ ಅವರು ಹೇಳಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ವೈಶಾಲಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ. ಆದರೆ ಮುಂದಿನ ವರ್ಷ ಪರೀಕ್ಷೆ ಬರೆದು ಶೇ.90ರಷ್ಟು ಅಂಕ ಪಡೆದಳು ಎಂದು ಲತಾ ಕೃಷ್ಣ ಅವರು ಹರ್ಷ ವ್ಯಕ್ತಪಡಿಸಿದರು.

ಪೋಷಕರ ವೈಶಾಲಿಗೆ ಸತತ ಬೆಂಬಲ ಮತ್ತು ಪ್ರೊತ್ಸಾಹ ನೀಡಿದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಅವಳನ್ನು ಸಕಾರಾತ್ಮಕವಾಗಿ ಬೆಳಸಿದರು. ಆದಾಗ್ಯೂ ಅವಳು ಒಂದು ಬಾರಿ ಖಿನ್ನತೆಗೆ ಒಳಗಾಗಿದ್ದಳು. ಆದರೆ ಪೋಷಕರ, ಶಿಕ್ಷಕರ ಹಾಗೂ ಸ್ನೇಹಿತರ ಉತ್ತಮ ಬೆಂಬಲದಿಂದ ಅವಳು ಮತ್ತೆ ಉತ್ತಮವಾಗಿ ಓದತೊಡಗಿದಳು ಎಂದು ತಾಯಿ ತಿಳಿಸಿದ್ದಾರೆ.

ಮುಂದೆ ಏನು ಮಾಡಬೇಕು ಎಂಬ ಗೊಂದಲದಲ್ಲಿರುವ ವೈಶಾಲಿ, 'ನನಗೆ ಕಲೆ ಮತ್ತು ಪೇಂಟಿಂಗ್ ಮಾಡುವುದರಲ್ಲಿ ಆಸಕ್ತಿ ಇದೆ. ಅಲ್ಲದೆ ಮುಂದೆ ಸಿಎ ಮಾಡಬೇಕು ಎಂದುಕೊಂಡಿದ್ದೇನೆ. ಪಿಯುಸಿಯಲ್ಲಿ 542 ಅಂಕ ಪಡೆದಿದ್ದಕ್ಕೆ ತುಂಬಾ ಖುಷಿಯಾಗಿದೆ. ಇದರ ಕ್ರೆಡಿಟ್ ನನ್ನ ಪೋಷಕರಿಗೆ, ಶಿಕ್ಷಕರಿಗೆ ಹಾಗೂ ಸ್ನೇಹಿತರಿಗೆ ಸಲ್ಲಬೇಕು' ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com