ಕಾರ್ಟೂನ್ ಪ್ರತಿಭೆ ಪುಟಾಣಿ ಹೇಮಂತ ಆಗೇರ

ಸಾಮಾನ್ಯವಾಗಿ ಶಾಲಾ ಮಕ್ಕಳು ಪ್ರಾಣಿ, ಪಕ್ಷಿ, ಗೊಂಬೆ, ಮನೆ, ಗಿಡಮರ, ನಿಸರ್ಗದಂಥ ಚಿತ್ರಗಳನ್ನು ಬಿಡಿಸುತ್ತಾರೆ. ಆದರೆ ಇಲ್ಲೊಬ್ಬ ಬಾಲಕ...
ಹೇಮಂತ ಆಗೇರ ಹಾಗೂ ಆತನ  ವ್ಯಂಗ್ಯ ಚಿತ್ರ
ಹೇಮಂತ ಆಗೇರ ಹಾಗೂ ಆತನ ವ್ಯಂಗ್ಯ ಚಿತ್ರ

ಸಾಮಾನ್ಯವಾಗಿ ಶಾಲಾ ಮಕ್ಕಳು ಪ್ರಾಣಿ, ಪಕ್ಷಿ, ಗೊಂಬೆ, ಮನೆ, ಗಿಡಮರ, ನಿಸರ್ಗದಂಥ ಚಿತ್ರಗಳನ್ನು ಬಿಡಿಸುತ್ತಾರೆ. ಆದರೆ ಇಲ್ಲೊಬ್ಬ ಬಾಲಕ ಇವೆಲ್ಲವನ್ನು ಬದಿಗೆ ಸರಿಸಿ ವ್ಯಂಗ್ಯ ಚಿತ್ರಗಳನ್ನು ರಚಿಸಿ ಅಚ್ಚರಿ ಮೂಡಿಸುತ್ತಿದ್ದಾನೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಹೇಮಂತ ಆಗೇರ ಕೆ.ಎಲ್.ಇ. ಸಂಸ್ಥೆಯ ಪಿ.ಪಿ.ಎಸ್. ಶಾಲೆಯ ಆರನೆಯ ತರಗತಿ ವಿದ್ಯಾರ್ಥಿ. ಓದು ಬರಹದ ಜೊತೆ ಚಿತ್ರಕಲೆಯಲ್ಲಿಯೂ ಆಸಕ್ತ. ಈತನ ಕೈಚಳಕದಲ್ಲಿ ವೈವಿಧ್ಯಮಯ ಚಿತ್ರಗಳು ಹೊರ ಹೊಮ್ಮಿರುವುದು ಸೋಜಿಗವೇ ಸರಿ.

ಸಾಮಾನ್ಯ ಚಿತ್ರಗಳನ್ನು ನೋಡಿ ಯಥಾವತ್ತಾಗಿ ಬಿಡಿಸುತ್ತಿದ್ದ ಈತನ ಪ್ರತಿಭೆಯನ್ನು ನೋಡಿದ ಶಿಕ್ಷಕರು ಖುಷಿಪಟ್ಟರು. ಇವುಗಳಂತೆ ವ್ಯಂಗ್ಯ ಚಿತ್ರಗಳನ್ನೂ ರಚಿಸುವ ಹೊಸ ಪ್ರಯೋಗಕ್ಕೆ ಪ್ರೇರೇಪಿಸಿದರು. ಆರಂಭದಲ್ಲಿ ಆಸಕ್ತಿ ತೋರಿಸದ ಹೇಮಂತ, ಅಂತಹ ಚಿತ್ರಗಳನ್ನು ಬಿಡಿಸೋಕೆ ಬರೋದಿಲ್ಲ ಸರ್ ಅಂತ ಸುಮ್ಮನಾದ. ಆದರೆ ಶಿಕ್ಷಕರು ಸುಮ್ಮನಾಗಲಿಲ್ಲ. ಪ್ರತಿಭೆ ಹೊರತರಲು ಬೆನ್ನು ಹತ್ತಿದರು. ನೀನು ವ್ಯಂಗ್ಯ ಚಿತ್ರಗಳನ್ನು ಬಿಡಿಸಲೇಬೇಕು ಎಂದಾಗ ಗುರುಗಳ ಮಾತನ್ನು ಸವಾಲಾಗಿ ಸ್ವೀಕರಿಸಿ ಚಿತ್ರಗಳ ರಚನೆಗೆ ಮುಂದಾದ. ಅದರಲ್ಲಿ ಯಶಸ್ಸೂ ಕಂಡ.

ದೊಡ್ಡ ದೊಡ್ಡ ಕಲಾವಿದರೂ ಮೆಚ್ಚಿಕೊಳ್ಳುವಂತಹ ವ್ಯಂಗ್ಯ ಚಿತ್ರಗಳನ್ನು ಮನೋಜ್ಞವಾಗಿ ಬಿಡಿಸಿರುವ ಹೇಮಂತನಲ್ಲಿ ವಿಶೇಷವಾದ ಪ್ರತಿಭೆ ವ್ಯಾಪಿಸಿದೆ. ಈ ಕಲಾಸಕ್ತಿಯನ್ನು ಕಂಡು ತಂದೆ ಮಂಗೇಶ, ತಾಯಿ ಮಮತಾ ಮಗನ ಕಲೆಗೆ ಬೆಂಗಾವಲಾಗಿ ನಿಂತಿದ್ದಾರೆ. ಮಾರ್ಗದರ್ಶನಕ್ಕಾಗಿ ಶಿಕ್ಷಕರೂ ಜೊತೆಗೂಡಿದ್ದಾರೆ.

ಸುತ್ತಲಿನ ಪರಿಸರ, ಮನೆಯ ವಾತಾವರಣ ಹಾಗೂ ಶಾಲೆಯಲ್ಲಿ ಶಿಕ್ಷಕ ಬಳಗ ಮಕ್ಕಳ ಅಭಿರುಚಿಯನ್ನು ಗಮನಿಸಿ ಉತ್ತೇಜಿಸಿದರೆ ಅವರಲ್ಲಿ ಸುಪ್ತವಾಗಿ ಅಡಗಿದ ಪ್ರತಿಭೆ ಬೃಹತ್ ಸ್ವರೂಪದಲ್ಲಿ ಹೊರ ಹೊಮ್ಮುತ್ತದೆ. ಹೇಮಂತನ ವಿಚಾರದಲ್ಲಿ ಈ ಮಾತು ನೂರಕ್ಕೆ ನೂರು ನಿಜವಾಗಿದೆ. ಹೇಮಂತನಿಗೆ ಶುಭ ಕೋರಲು ಮೊ.9901426500.

-ಎ.ಎಸ್.ಹೊಲಗೇರಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com