ನೃತ್ಯದ ಮೂಲಕ ಕ್ಯಾನ್ಸರ್‌ನ್ನೇ ಸೋಲಿಸಿದ 'ಆನಂದ'!

ಆನಂದ ಶಂಕರ ಜಯಂತ್ ಎಂಬ ನರ್ತಕಿಯ ಹೆಸರು ಕೇಳಿದ್ದೀರಾ? ಕೂಚುಪ್ಪುಡಿ, ಭರತನಾಟ್ಯದಲ್ಲಿ ಪ್ರಾವೀಣ್ಯತೆ ಗಳಿಸಿದ ಅದ್ಭುತ ಪ್ರತಿಭೆ...
ಆನಂದ ಶಂಕರ ಜಯಂತ್  (ಕೃಪೆ : ಫೇಸ್ ಬುಕ್ )
ಆನಂದ ಶಂಕರ ಜಯಂತ್ (ಕೃಪೆ : ಫೇಸ್ ಬುಕ್ )
Updated on
ಆನಂದ ಶಂಕರ ಜಯಂತ್ ಎಂಬ ನರ್ತಕಿಯ ಹೆಸರು ಕೇಳಿದ್ದೀರಾ? ಕೂಚುಪ್ಪುಡಿ, ಭರತನಾಟ್ಯದಲ್ಲಿ ಪ್ರಾವೀಣ್ಯತೆ ಗಳಿಸಿದ ಅದ್ಭುತ ಪ್ರತಿಭೆ ಈಕೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ  ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಪಡೆದ ಈ ಕಲಾವಿದೆ ಸಾಹಸಿ, ನೃತ್ಯವನ್ನೇ ಬದುಕಾಗಿಸಿಕೊಂಡ ಛಲಗಾತಿ.
ಈಕೆಗೆ 2008ರಲ್ಲಿ ಕ್ಯಾನ್ಸರ್ ರೋಗ ಬಂದಿತ್ತು. ಆ ಹೊತ್ತಲ್ಲಿ ಧೈರ್ಯಗುಂದದೆ ನೃತ್ಯದ ಮೂಲಕವೇ ಕ್ಯಾನ್ಸರ್‌ನ್ನು ಸೋಲಿಸಿ ಬದುಕನ್ನು ಗೆದ್ದವರು ತಮಿಳ್ನಾಡು ಮೂಲದ ಆನಂದ ಶಂಕರ್ ಜಯಂತ್!
ಅಗಲವಾದ ಸುಂದರ ಕಣ್ಣುಗಳಿವೆ ಎಂಬ ಕಾರಣದಿಂದಾಗಿಯೇ ಆನಂದ ಶಂಕರ್ ಅವರನ್ನು ಮನೆಯವರು ನೃತ್ಯ ತರಗತಿಗೆ ಸೇರಿಸಿದ್ದರಂತೆ. ಹಾಗೆ ನಾಲ್ಕರ ಹರೆಯದಲ್ಲಿ ಕಾಲಿಗೆ ಕಟ್ಟಿದ ಗೆಜ್ಜೆ ಅವರ ಜೀವನದ ಅಂಗವೇ ಆಗಿ ಬಿಟ್ಟಿತು. ಕ್ಯಾನ್ಸರ್ ಇದೆ ಎಂದು ಗೊತ್ತಾದ ಕ್ಷಣವನ್ನೂ  ನೃತ್ಯದೊಂದಿಗೆ ಸಂಬಂಧವಿರಿಸುವಂತೆ ಗ್ರಹಿಸುವುದೇ ಈಕೆಗೆ ಇಷ್ಟ.  ನೃತ್ಯದ ನವರಸಗಳಲ್ಲೊಂದಾದ ಭಯಾನಕ ..ಆ ಸ್ಥಿತಿಯನ್ನು ನಿಜವಾಗಿ ಅನುಭವಿಸಿದ್ದು ಕ್ಯಾನ್ಸರ್ ಇದೆ ಎಂಬುದು ಗೊತ್ತಾದಾಗ. ಎಲ್ಲರೂ ಕುಸಿದು ಹೋಗುವ ಆ ಕ್ಷಣದಲ್ಲಿಯೂ ನಾನು ಸೋಲಬಾರದು ಎಂದು ನಿರ್ಧರಿಸಿದೆ. ಅದರ ಬದಲು ನನಗೆ ಬಂದಿರುವ ರೋಗವನ್ನೇ ಸೋಲಿಸಬೇಕೆಂದು  ನಿರ್ಧರಿಸಿದೆ. ನನ್ನ ಉಸಿರಿನಂತಿರುವ ಈ ನೃತ್ಯವೇ ಅದಕ್ಕಿರುವ ಮಾರ್ಗ ಎಂದು ಗಟ್ಟಿ ಮನಸ್ಸು ಮಾಡಿದೆ.
ನೃತ್ಯಕಲೆಯಲ್ಲಿ ಮಾತ್ರವಲ್ಲ ಕಲಿಕೆಯಲ್ಲೂ ಆನಂದ ಜಾಣೆಯಾಗಿದ್ದರು. ಕಾಮರ್ಸ್, ಆರ್ಟ್ಸ್ ಮತ್ತು ಹಿಸ್ಟರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಈಕೆ ಯುನಿವರ್ಸಿಟಿ ಟಾಪರ್ ಆಗಿದ್ದರು. 
ಕ್ಯಾನ್ಸರ್ ಎಂಬುದು ನನ್ನ ಬದುಕಿನ ಒಂದು ಪುಟ ಅಷ್ಟೇ. ಅದನ್ನು ಪುಸ್ತಕವನ್ನಾಗಿಸಲು ನಾನು ಇಷ್ಟಪಡುವುದಿಲ್ಲ. ಕ್ಯಾನ್ಸರ್ ನ್ನು ಹಿಮ್ಮೆಟ್ಟಿ ಬದುಕಲೇ ಬೇಕು ಎಂದು ಪಣತೊಟ್ಟೆ. 2009ರಲ್ಲಿ ಕ್ಯಾನ್ಸರ್ ಸರ್ಜರಿಗೊಳಪಡಬೇಕಾದ ದಿನದ ಹಿಂದಿನ ದಿನ ನೃತ್ಯ ಕಾರ್ಯಕ್ರಮ ನೀಡುವುದಕ್ಕಿತ್ತು. ಮತ್ತೇನೂ ಯೋಚಿಸಲಿಲ್ಲ. ಬ್ಯೂಟಿ ಪಾರ್ಲರ್‌ಗೆ ಹೋಗಿ ಮನಿಕ್ಯೂರ್, ಪೆಡಿಕ್ಯೂರ್ ಎಲ್ಲ ಮಾಡಿಸಿ, ಮೇಕಪ್ ಹಚ್ಚಿ ಡಾಕ್ಟರ್‌ಗೇ ಕೇಳಿ ಬಿಟ್ಟೆ...ಹೇಗೆ? ಎಲ್ಲವೂ ಸರಿಯಾಗಿದೆಯಲ್ಲವಾ? ಎಂದು. 
ಭಯ, ಸಂಕಟ, ಸಿಟ್ಟು, ನಿರಾಶೆಗೊಳಪಡುವಾಗಲೆಲ್ಲಾ ಪಾಸಿಟಿವ್ ಆಗಿ ಯೋಚನೆ ಮಾಡತೊಡಗಿದೆ. ಕ್ಯಾನ್ಸರ್ ಎಂಬ ಪೀಡೆಯನ್ನು ಹೊಡೆದೋಡಿಸಲೇ ಬೇಕು ಎಂಬ ದೃಢ ನಿಶ್ಚಯ ತೆಗೆದುಕೊಂಡಿದ್ದೆ ಅಲ್ವಾ...ಕ್ಯಾನ್ಸರ್ ಇದೆ ಎಂಬ ಯೋಚನೆ ಬಂದಾಗಲೆಲ್ಲಾ ಗೆಜ್ಜೆ ಕಟ್ಟಿ ಕುಣಿದೆ. ಸರ್ಜರಿ, ಕೀಮೋಥೆರಪಿ ನಡುವೆಯೂ ನೃತ್ಯವಾಡಿದೆ. ಹಾಗೆ ನನ್ನ ಕಾಲುಗಳಿಂದಲೇ ಕ್ಯಾನ್ಸರ್ ನ್ನು ಒದ್ದು ಓಡಿಸಿದೆ.
ಇದೀಗ ಎಲ್ಲರಿಗೂ ಪ್ರೇರಣೆಯಾಗಿರುವ ಆನಂದ ಅವರಿಗೆ ಕ್ಯಾನ್ಸರ್ ನಿಂದ ಪಾರಾದವಳು ಎಂದು ಹೇಳುವುದಕ್ಕಿಂತ ಕ್ಯಾನ್ಸರನ್ನೇ ಸೋಲಿಸಿದವಳು ಎಂದು ಹೇಳುವುದು ಇಷ್ಟ. ಅವರ ಆ ಕಲಾ ಪ್ರೀತಿಗೆ, ಛಲಕ್ಕೆ, ಧೈರ್ಯಕ್ಕೆ ಹ್ಯಾಟ್ಸ್ ಆಫ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com