ಕಾಸರಗೋಡಿನ ಎಂಡೋಸಲ್ಫಾನ್ ದುರಂತದ ಬಗ್ಗೆ ಕೇಳುವಾಗಲೆಲ್ಲಾ ಅಂಗವೈಕಲ್ಯತೆಯಿಂದ ಬಳಲುತ್ತಿರುವ, ಬುದ್ಧಿ ಮಾಂದ್ಯರಾಗಿರುವ ಮಕ್ಕಳ ದೃಶ್ಯವೇ ನಮ್ಮ ಕಣ್ಣ ಮುಂದೆ ಬರುತ್ತದೆ. ಎಂಡೋಸಲ್ಫಾನ್‌ನ ಕರಾಳ ಹಸ್ತದಲ್ಲಿ ನಲುಗುತ್ತಿರುವ ಎಣ್ಮಕಜೆ ಎಂಬ ಗ್ರಾಮದ ಜನರ ದಯನೀಯ ಸ್ಥಿತಿ, ಮಕ್ಕಳ ಅಂಗವೈಕಲ್ಯತೆ, ಅವರ ಕಷ್ಟಗಳು..ಇವೆಲ್ಲವನ್ನೂ ಪದಗಳಲ್ಲಿ ಹೇಳಲು ಅಸಾಧ್ಯ. ಊರಿಗೆ ಊರೇ ಎಂಡೋಸಲ್ಫಾನ್‌ನ ಭೀಕರ ಹೊಡೆತ ಅನುಭವಿಸುತ್ತಿದ್ದ ಹೊತ್ತಲ್ಲಿ ಅಲ್ಲಿನ ಮಕ್ಕಳ ಫೋಟೋ ತೆಗೆಯಲಾಗಿತ್ತು. ಆ ಫೋಟೊಗಳಲ್ಲಿ ಅಂಗವೈಕಲ್ಯತೆಯಿಂದ ಬಳಲುತ್ತಿರುವ ಪುಟ್ಟ ಹುಡುಗಿಯೊಬ್ಬಳ ಫೋಟೋ ಕೂಡಾ ಇತ್ತು. ಆ ಪುಟ್ಟ ಹುಡುಗಿಯ ಹೆಸರು ಶ್ರುತಿ. ಇದೀಗ ಈಕೆ ವೈದ್ಯೆಯಾಗುವ ಕನಸು ಹೊತ್ತು ಮುನ್ನಡೆಯುತ್ತಿದ್ದಾಳೆ. ಬದುಕಿನ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಈಕೆ ತನ್ನ ಕನಸುಗಳನ್ನು ನನಸು ಮಾಡಿದ್ದಾಳೆ.