ಎರಡೂ ಕೈಗಳಿಲ್ಲದ ಹುಡುಗ ಕ್ರಿಕೆಟ್ ಕ್ಯಾಪ್ಟನ್ ಆದ!

1997ರಲ್ಲಿ ನಡೆದ ದುರಂತವೊಂದು ಅಮೀರ್‌ನ ಜೀವನವನ್ನೇ ಬದಲಾಯಿಸಿ ಬಿಟ್ಟಿತು. ಆಗ ಆತನ ವಯಸ್ಸು 8. ಅಪ್ಪ ಮರದ ಮಿಲ್ ನಲ್ಲಿ ಪುಟ್ಟ ಬಾಲಕ ಅಮೀರ್ ಆಟವಾಡುತ್ತಿದ್ದನು...
ಅಮೀರ್ ಹುಸೈನ್  ಲೋನ್
ಅಮೀರ್ ಹುಸೈನ್ ಲೋನ್
ಬದುಕಿನಲ್ಲಿ ಅನಿರೀಕ್ಷಿತವಾಗಿ ಏನಾದರೂ ಒಂದು ಆಘಾತವಾದರೆ ಸಾಕು ಈ ಬದುಕೇ ಸಾಕೆಂದು ಗೋಳಿಡುತ್ತೇವೆ, ನನ್ನ ಬದುಕು ಹೀಗಾಯ್ತಲ್ಲ ಎಂದು ಕಣ್ಣೀರಿಡುತ್ತೇವೆ. ಅದೇ ವೇಳೆ ಕೃತಕ ಕಾಲುಗಳನ್ನು ಕಟ್ಟಿಕೊಂಡು ನೃತ್ಯ ಮಾಡುವ ಸುಧಾ ಚಂದ್ರನ್, ಬ್ಲೇಡ್ ರನ್ನರ್ ಮೇಜರ್ ದೇವೇಂದ್ರ ಪಾಲ್, ಅಂಧರ ಕ್ರಿಕೆಟ್ ತಂಡದ ನಾಯಕ ಶೇಖರ್ ನಾಯ್ಕ್ ಮುಂತಾದವರು ವೈಫಲ್ಯಗಳನ್ನು ಮೆಟ್ಟಿ ನಿಂತು ಸಾಧನೆಗೈದವರು ನಮಗೆ ಸ್ಪೂರ್ತಿ ನೀಡುತ್ತಾರೆ. ಇಂಥಾ ಸಾಧಕರ ಪಟ್ಟಿಯಲ್ಲೀಗ ಅಮೀರ್ ಹುಸೈನ್  ಲೋನ್ ಎಂಬ ಈ ಯುವಕ ಸ್ಥಾನಗಿಟ್ಟಿಸಿದ್ದಾನೆ.
26ರ ಹರೆಯದ ಅಮೀರ್‌ಗೆ ಎರಡೂ ಕೈಗಳಿಲ್ಲ. ಆದರೆ ಈತ ಉತ್ತಮ ಕ್ರಿಕೆಟ್‌ಪಟು. ತನ್ನ ವೈಫಲ್ಯಗಳನ್ನು ಹಿಂದಿಕ್ಕಿ ಕಠಿಣ ಪರಿಶ್ರಮದಿಂದ ಮುನ್ನಡೆದ ಈತ ಈಗ  ಜಮ್ಮು ಮತ್ತು ಕಾಶ್ಮೀರದ ಪ್ಯಾರಾ ಕ್ರಿಕೆಟ್ ಟೀಂನ ನಾಯಕ!
1997ರಲ್ಲಿ ನಡೆದ ದುರಂತವೊಂದು ಅಮೀರ್‌ನ ಜೀವನವನ್ನೇ ಬದಲಾಯಿಸಿ ಬಿಟ್ಟಿತು. ಆಗ ಆತನ ವಯಸ್ಸು 8. ಅಪ್ಪ ಮರದ ಮಿಲ್ ನಲ್ಲಿ ಪುಟ್ಟ ಬಾಲಕ ಅಮೀರ್ ಆಟವಾಡುತ್ತಿದ್ದನು. ಹಾಗೆ ಆಟವಾಡುತ್ತಿದ್ದಾಗ ದುರದೃಷ್ಟವಶಾತ್ ಮಿಲ್ ನ ಯಂತ್ರಕ್ಕೆ ಸಿಕ್ಕಿ ಬಿಟ್ಟಿತು. ಹಲವಾರು ವರುಷಗಳ ಕಾಲ ಅಮೀರ್ ಚಿಕಿತ್ಸೆ ಪಡೆದರು. ಈತನ ಚಿಕಿತ್ಸೆಗಾಗಿ  ಅಪ್ಪ ತನ್ನ ಆಸ್ತಿಯನ್ನೆಲ್ಲಾ ಮಾರಿ ಬಿಟ್ಟರು. ಆಮೇಲೆ ಮನೆಯವರ ಒತ್ತಾಯದ ಮೇರೆಗೆ ಶಾಲೆಗೆ ಹೋದರೂ ಅಲ್ಲಿನ ಶಿಕ್ಷರರೊಬ್ಬರು ನಿಮ್ಮಂಥವರಿಗೆ ಇಲ್ಲಿ ಕಲಿಸಲು ಕಷ್ಟ. ನೀವು ಮನೆಯಲ್ಲೇ ಇರುವುದು ಒಳ್ಳೆಯದು ಎಂದು ಹೇಳಿದರು. ಅದನ್ನು ಕೇಳಿ ಕುಟುಂಬದವರಿಗೆ ಬೇಸರವಾಗಿದ್ದರೂ ಅಮೀರ್ ಧೈರ್ಯಗುಂದಲಿಲ್ಲ. ಆ ವೇಳೆಯಲ್ಲೇ ಅಮೀರ್ ಚಿತ್ತ ಕ್ರಿಕೆಟ್‌ನತ್ತ ಸೆಳೆಯಿತು. ಕ್ರಿಕೆಟ್ ಆಡಬೇಕೆಂಬ ತುಡಿತ ಆತನಲ್ಲಿ ಹೆಚ್ಚುತ್ತಾ ಹೋಯಿತು. ಎರಡೂ ಕೈಗಳಿಲ್ಲದ ಈತ ಅದು ಹೇಗೆ ಕ್ರಿಕೆಟ್ ಆಡುತ್ತಾನೆ ಎಂದು ಎಲ್ಲರೂ ಮಾತನಾಡಿಕೊಂಡರು. ಆದರೆ ಅಮೀರ್ ತನ್ನ ಕನಸನ್ನು ನನಸು ಮಾಡಲು ಪ್ರಯತ್ನಿಸುತ್ತಲೇ ಇದ್ದ. ಬಲಕಾಲಿನಿಂದ ಬೌಲಿಂಗ್ ಮಾಡುವುದು, ಗಲ್ಲ ಮತ್ತು ತೋಳಿನ ಮಧ್ಯೆ ಬ್ಯಾಟ್ ಇಟ್ಟು ಬ್ಯಾಟಿಂಗ್ ಮಾಡುವುದನ್ನು ಆತ ಕಲಿತುಕೊಂಡ. ಕ್ಯಾಚ್ ಹಿಡಿಯುವುದು, ಬಾಲ್ ಪಾಸ್ ಮಾಡುವುದೆಲ್ಲವೂ ಕಾಲಿನಿಂದಲೇ ಅಭ್ಯಾಸವಾಗಿ ಬಿಟ್ಟಿತು.
ತನ್ನ ಜೀವನದ ದಿಶೆಯನ್ನೇ ಬದಲಿಸಿದ ಈ ಆಘಾತದಿಂದ ಕುಟುಂಬವೂ ಸೊರಗಿ ಹೋಗಿತ್ತು. ತನ್ನ ಕುಟುಂಬಕ್ಕೆ ಹೊಸ ಜೀವಕಳೆಯನ್ನು ತರಬೇಕು ಎಂದು ಅಮೀರ್ ನಿರ್ಧರಿಸಿದ. ಕಷ್ಟಗಳು ಬಂದಾಗ ಈತ ಕುಗ್ಗಲಿಲ್ಲ, ಅದನ್ನು ಎದುರಿಸಿ ಗೆಲುವು ಸಾದಿಸುತ್ತಾ ಹೋದ. ಈಗ ಅಮೀರ್ ತನ್ನ ಬಟ್ಟೆಯನ್ನು ತಾನೇ ಒಗೆಯುತ್ತಾನೆ, ಶೇವ್ ಮಾಡಿಕೊಳ್ಳುತ್ತಾನೆ. ಕಾಲಿನಿಂದಲೇ ಊಟವನ್ನು ಮಾಡುತ್ತಾನೆ. ಯಾರ ಸಹಾಯವೂ ಇಲ್ಲದೆ ಈತ ತನ್ನ ಕಾರ್ಯಗಳನ್ನೆಲ್ಲಾ ಮಾಡುತ್ತಾನೆ. ಸಾಧನೆ ಎಂಬುದು ಸುಲಭವಲ್ಲ, ಅದಕ್ಕೆ ಕಠಿಣ ಪರಿಶ್ರಮ ಬೇಕೇ ಬೇಕು.
ಅದೆಷ್ಟೇ ಕಷ್ಟ ಬಂದರೂ ಸೋಲೊಪ್ಪದೆ ಹೋರಾಡುವ, ವೈಫಲ್ಯವನ್ನು ಬೌಂಡರಿಯಾಚೆ ಎಸೆದು ಸಾಧನೆ ಮಾಡಿದ ಈ ಯುವ ಕ್ರಿಕೆಟರ್ ಅಮೀರ್‌ಗೆ ಹ್ಯಾಟ್ಸ್ ಆಫ್!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com