ಸಾವಿನಂಚಿನಲ್ಲಿದ್ದರೂ ಎದೆಗುಂದದೆ ಎಸ್ಎಸ್ ಎಲ್ ಸಿ ಪರೀಕ್ಷೆ ಗೆದ್ದ ವಿದ್ಯಾರ್ಥಿನಿ

ಓದಿ ಏನಾದರೂ ಸಾಧಿಸಬೇಕೆಂಬ ಛಲ ಬತ್ತಿಲ್ಲ. ತುತ್ತು ಅನ್ನಕ್ಕಾಗಿ ನಿತ್ಯ ಮೈಮುರಿದು ದುಡಿಯುವ ತಾಯಿಗೆ ನೆರವಾಗಲು ಒಳ್ಳೆಯ ಉದ್ಯೋಗ ಹಿಡಿಯಬೇಕೆಂಬ ..
ಅಂಜನಾ ಬಿ.ಎನ್
ಅಂಜನಾ ಬಿ.ಎನ್

ಬೆಂಗಳೂರು:  ಓದಿ ಏನಾದರೂ ಸಾಧಿಸಬೇಕೆಂಬ ಛಲ ಬತ್ತಿಲ್ಲ. ತುತ್ತು ಅನ್ನಕ್ಕಾಗಿ ನಿತ್ಯ ಮೈಮುರಿದು ದುಡಿಯುವ ತಾಯಿಗೆ ನೆರವಾಗಲು ಒಳ್ಳೆಯ ಉದ್ಯೋಗ ಹಿಡಿಯಬೇಕೆಂಬ ಕನಸು, ತಾನು ಹೆಚ್ಚು ದಿನ ಬದುಕುವುದಿಲ್ಲ ಎಂಬ ಸತ್ಯ ಗೊತ್ತಿದ್ದರೂ ಆ ಕಣ್ಣುಗಳಲ್ಲಿ ಸಾವಿನ ಭಯವಿಲ್ಲದೇ ಬದುಕುತ್ತಿರುವ ಈಕೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಮತ್ತಷ್ಟು ಭರವಸೆ ತಂದುಕೊಟ್ಟಿದೆ.

ಬೆಂಗಳೂರಿನ ಬ್ಲಾಸಂ ಶಾಲೆಯ ವಿದ್ಯಾರ್ಥಿನಿ ಬಿ.ಎನ್.ಅಂಜನಾಳ  ಯಶೋಗಾಥೆ ಇದು.  ಡಿಸ್ಲೆಕ್ಸಿಯಾ, ಡಯಾಬಿಟಿಕ್ ಮತ್ತು ಸ್ನಾಯುಕ್ಷಯ (ದೇಹ ನಿಶ್ಯಕ್ತಿ ಮತ್ತು ಸ್ನಾಯು ಸವೆಯುವಿಕೆ) ಎಂಬ ಕಾಯಿಲೆಯಿಂದ ಬಳಲುತ್ತಿರುವ ಅಂಜನಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.72 ಅಂಕ ಗಳಿಸಿದ್ದಾಳೆ.

ಅಪರೂಪದ ರೋಗಕ್ಕೆ ತುತ್ತಾಗಿರುವ ಅಂಜನಾಳಿಗೆ ತಾನು ಹೆಚ್ಚು ದಿನ ಬದುಕುವುದಿಲ್ಲವೆಂಬ ಸತ್ಯ ತಿಳಿದಿದೆ. 5 ವರ್ಷದ ಹಿಂದೆ ಸಹೋದರ ಕೂಡ ಇದೇ ರೋಗಕ್ಕೆ ಬಲಿಯಾಗಿದ್ದರೂ ಈಕೆ ಎದೆ ಗುಂದಲಿಲ್ಲ. ಶಾಲೆಗೆ ಕಳುಹಿ ಸದಂತೆ ವೈದ್ಯರು ನೀಡಿರುವ ಎಚ್ಚರಿಕೆಯನ್ನೂ ನಿರ್ಲಕ್ಷಿಸಿ ಓದು ಮುಂದುವರಿಸಿರುವ ಅಂಜನಾ, ಸಾಧನೆಗೆ ರೋಗ ಅಡ್ಡಿಯಾಗದೆಂಬುದನ್ನು ನಿರೂಪಿಸಿದ್ದಾಳೆ.

ಚಿಕ್ಕವಯಸ್ಸಿನಲ್ಲೇ ತಂದೆಯನ್ನೂ ಕಳೆದುಕೊಂಡ ಅಂಜನಾ ವಿದ್ಯಾಭ್ಯಾಸಕ್ಕೆ ಬೆನ್ನೆಲುಬಾಗಿದ್ದು ತಾಯಿ. ಉಸಿರಾಟದ ತೊಂದರೆ ಎದುರಾಗುವ ಭೀತಿಯಲ್ಲಿ ವೈದ್ಯರು ಶಾಲೆಗೆ ಕಳುಹಿಸದಂತೆ ಹೇಳಿದ್ದರೂ ಮಗಳ ಕನಸಿಗೆ ಒತ್ತಾಸೆಯಾಗಿ ನಿಂತು ಶಿಕ್ಷಣ ದೊರಕಿಸಿಕೊಟ್ಟಿದ್ದಾರೆ.

ಎಲ್ಲಾ ಮಕ್ಕಳಂತೆ ಈಕೆಗೆ ಆಡಲು ಓಡಲು ಬರುವುದಿಲ್ಲ. ಇಂತಹ ಕಷ್ಟವನ್ನೆಲ್ಲ ಮೀರಿ ವಿದ್ಯಾರ್ಥಿಯೊಬ್ಬರ ಸಹಾಯದಿಂದ ಪರೀಕ್ಷೆ ಬರೆದ ಅಂಜನಾ ಈಗ ಹೆಚ್ಚಿನ ಅಂಕ ಪಡೆಯುವ ಮೂಲಕ ತನ್ನಂತೆ ಅನಾರೋಗ್ಯದಿಂದ ಬಳಲುತ್ತಿರುವವರಿಗೂ ಮಾದರಿ ಆಗಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com