

ಕರ್ನಾಟಕ ಶ್ರೀಗಂಧದ ಬೀಡು ಎಂದೇ ಪ್ರಸಿದ್ಧಿ. ಕಾರಣ ಇಲ್ಲಿನ ಶ್ರೀಗಂಧ ವಿಶ್ವದರ್ಜೆಯದ್ದು. ರಾಜ್ಯದಲ್ಲಿ ಶ್ರೀಗಂಧ ಬೆಳೆಯಲು ಪೂರಕ ವಾತಾವರಣ ಇದೆ. ಶ್ರೀಗಂಧವನ್ನು ವಾಣಿಜ್ಯ ಬೆಳೆಯನ್ನಾಗಿ ರೈತರು ಜಮೀನಿನಲ್ಲಿ ಬೆಳೆಯಲು ಅವಕಾಶ ಕಲ್ಪಿಸಲಾಗಿದೆ. ಬಹಳಷ್ಟು ರೈತರಿಗೆ ಈ ಕುರಿತು ಮಾಹಿತಿ ಇಲ್ಲ. ಆದರೆ, ಕಡಿಮೆ ಖರ್ಚಿನಲ್ಲಿ, ಜಾಸ್ತಿ ನಿರ್ವಹಣೆ ಇಲ್ಲದೆ ರೈತರು ಜಮೀನುಗಳಲ್ಲಿ ಶ್ರೀಗಂಧ ಬೆಳೆಯಬಹುದು.
ಬೆಳೆಯುವ ವಿಧಾನ
ಶ್ರೀಗಂಧದ ಗಿಡವನ್ನು 1 ್ಢ 1 ಅಡಿ ಜಾಗದಲ್ಲಿ 1 ಅಡಿ ಆಳದ ಗುಂಡಿ ತೋಡಬೇಕು. ಬಳಿಕ 3ರಿಂದ 5 ಅಡಿ ಅಂತರದಲ್ಲಿ ಗಿಡ ನೆಡಬೇಕು. ಹಾಗೆ ನೆಡುವಾಗ ಅಗತ್ಯಕ್ಕೆ ತಕ್ಕಷ್ಟು ತಿಪ್ಪೆ ಗೊಬ್ಬರ ಹಾಕಬೇಕು. ಬಳಿಕ ಆಗಾಗ ನೀರು ಹಾಯಿಸಬೇಕು (ಮಳೆಯಾಗದಿದ್ದರೆ). ಶ್ರೀಗಂಧದ ಗಿಡ ಜಾಸ್ತಿ ನಿರ್ವಹಣೆ ಬಯಸುವುದಿಲ್ಲ. ವರ್ಷಕ್ಕೊಮ್ಮೆ ತಿಪ್ಪೆ ಗೊಬ್ಬರ ಕೊಡಬೇಕು. ಆಗಾಗ ಕಳೆ ತೆಗೆಯಬೇಕು. ಗಿಡ ನೆಡಲು ಜೂನ್ ಸಕಾಲ. ಎಕರೆಗೆ 400- 500 ಗಿಡಗಳು ಬೇಕಾಗುತ್ತವೆ. ಇದರ ಮಧ್ಯ ಅಂತರ ಬೆಳೆಗಳನ್ನು ಬೆಳೆಯಬಹುದು. ಶ್ರೀಗಂಧ ಗಿಡ ನೆಟ್ಟ ಕನಿಷ್ಠ 10 ವರ್ಷದ ನಂತರ ಕಟಾವು ಮಾಡಬೇಕು. ಇದಕ್ಕೆ ಅರಣ್ಯ ಇಲಾಖೆಯವರ ಅನುಮತಿ ಬೇಕು. ಅಲ್ಲದೆ, ಗಿಡವನ್ನು ಅವರಿಗೆ ಮಾರಬೇಕು. ಇದಕ್ಕೆ ರೋಗದ ಹಾವಳಿ ತೀರಾ ಕಮ್ಮಿ. ಸಾಮಾನ್ಯವಾಗಿ ಎಲ್ಲ ನಮೂನೆಯ ಮಣ್ಣಲ್ಲೂ ಬೆಳೆಯಬಹುದು.
ವಿಮೆ ಅಗತ್ಯ
ಶ್ರೀಗಂಧ ದೀರ್ಘಕಾಲಿಕ ಬೆಳೆ. ಹಾಗಾಗಿ ಕಳ್ಳರ ಉಪಟಳವೂ ಜಾಸ್ತಿಯಾಗುತ್ತಿವೆ. ಹಲವು ಕಡೆ ಕಳ್ಳರು ಶ್ರೀಗಂಧದ ಮರಗಳನ್ನು ಕಡಿದುಕೊಂಡು ಹೋಗುತ್ತಿದ್ದಾರೆ. ಇದರಿಂದ ಹತ್ತಾರು ವರ್ಷ ಗಿಡ ಬೆಳೆಸಿದ ರೈತರಿಗೆ ಸಾಕಷ್ಟು ಹಾನಿಯಾಗುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಅಲ್ಲದೆ, ಶ್ರೀಗಂಧ ಮರಕ್ಕೆ ವಿಮೆ ಜಾರಿಗೊಳಿಸಬೇಕು ಎಂಬುದು ಹಲವು ರೈತರ ಆಗ್ರಹವಾಗಿದೆ. ಇದರಿಂದ ಶ್ರೀಗಂಧ ಬೆಳೆಯಲು ಮತ್ತಷ್ಟು ಪ್ರೋತ್ಸಾಹ ಕೊಟ್ಟಂತಾಗುತ್ತದೆ.
ಉಪಯೋಗ
ಶ್ರೀಗಂಧವನ್ನು ಮುಖ್ಯವಾಗಿ ಸುಗಂಧ ದ್ರವ್ಯ, ಸಾಬೂನು ಮತ್ತು ಪೀಠೋಪಕರಣಗಳ ತಯಾರಿಕೆಯಲ್ಲಿ ಹೆಚ್ಚು ಬಳಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಯಾಚೇನಹಳ್ಳಿಯ ವೈ.ಎನ್. ಶಂಕರೇಗೌಡ (ಮೊ. 9845187246) ಅವರನ್ನು ಸಂಪರ್ಕಿಸಬಹುದು.
-ಮಹೇಶ್ ಅರಳಿ
Advertisement