ಪ್ರಕೃತಿ ಮುನಿದರೆ ಮನುಕುಲ ಸರ್ವನಾಶ

ಪ್ರಕೃತಿ ಮುನಿಸಿಕೊಂಡರೆ ಅದು ನಿಜಕ್ಕೂ ಮನುಕುಲದ ನಾಶಕ್ಕೆ ದಾರಿ ಎಂಬ ಮಾತು ಜನಜನಿತ...
ಪ್ರಕೃತಿ ವಿಕೋಪಗಳು
ಪ್ರಕೃತಿ ವಿಕೋಪಗಳು

ಪ್ರಕೃತಿ ಮುನಿಸಿಕೊಂಡರೆ ಅದು ನಿಜಕ್ಕೂ ಮನುಕುಲದ ನಾಶಕ್ಕೆ ದಾರಿ ಎಂಬ ಮಾತು ಜನಜನಿತ. ಮನುಷ್ಯನ ಅತಿ ಆಸೆಯಿಂದಾಗಿ ಅಥವಾ ಆತನ ಸೌಕರ್ಯಕ್ಕಾಗಿ ಇನ್ನಿಲ್ಲದಂತೆ ಅರಣ್ಯವನ್ನು ದೋಚುತ್ತಿರುವುದು ಪ್ರಕೃತಿ ವಿಕೋಪಕ್ಕೆ ಜ್ವಲಂತ ಸಾಕ್ಷಿ.

ಇದರ ಪರಿಣಾಮ ಇಂದು ನಾವು ಹಲವು ಪ್ರಕೃತಿ ವಿಕೋಪಕ್ಕೆ ಬಲಿಯಾಗುತ್ತಿದ್ದೇವೆ. ಕಳೆದ ಒಂದು ಶತಮಾನದಿಂದಲೂ ಕಂಡು ಕೇಳರಿಯದಿದ್ದ ಜಲಪ್ರಳಯ ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳನ್ನು ಬಾಧಿಸುತ್ತಿದೆ. ಇಡೀ ಭಾರತ ಪ್ರವಾಹದ ಭೀತಿಯಿಂದ ತತ್ತರಿಸಿದೆ. ಮಳೆಯನ್ನೇ ಕಾಣದಿದ್ದ ಪ್ರದೇಶಗಳು ದ್ವೀಪಗಳಂತಾಗಿವೆ. ಒಣಗಿ ಬರಡಾಗಿದ್ದ ಭೂಮಿ ನಿಂತ ನೀರಿನ ಹೊಂಡವಾಗಿದೆ. ಪ್ರಕೃತಿಯ ರುದ್ರ ನರ್ತನಕ್ಕೆ ಪ್ರಾಣಹಾನಿ, ವಸತಿ, ಮರಗಳು, ವಿದ್ಯುತ್ ಕಂಬಗಳು ಧರೆಗುರುಳುತ್ತೀವೆ.

ಪ್ರಕೃತಿ ವಿಕೋಪಕ್ಕೆ ಕಾರಣಗಳು
ಅರಣ್ಯನಾಶ, ಮನುಷ್ಯನು ಸಹನೆಯ ಮಿತಿಯನ್ನು ಮೀರಿ ವರ್ತಿಸುನೋ, ಆ ಸಂದರ್ಭದಲ್ಲಿ ಪ್ರಕ್ರತಿ ನೀಡುವ ಪ್ರತ್ಯುತ್ತರವೆ ಬರಗಾಲ, ಅತಿವೃಷ್ಟಿ, ಸುಂಟರಗಾಳಿ, ಭೂ ಕಂಪ, ಜಲಪ್ರಳಯ ಇತ್ಯಾದಿ. ವಿಜ್ಞಾನವು ಮಾನವ ಲೋಕಕ್ಕೆ ವಿವಿದ ಕೊಡುಗೆಯನ್ನು ನೀಡಿದೆ. ಆದರೆ ಮಾನವನು ತನ್ನ ಅತಿ ಆಸೆಯಿಂದ ಅದನ್ನು ದುರ್ಬಳಕೆ ಮಾಡುತ್ತಿದ್ದಾನೆ. ತುಂಬಾ ಆಡಂಬರದ ಜೀವನಶೈಲಿಯನ್ನು ಬಯಸುತ್ತಾನೆ. ಇದರಿಂದಾಗಿ ವಿವಿದ ಅನಗತ್ಯ ವಸ್ತುಗಳನ್ನು ಖರೀದಿಸುತ್ತಾನೆ. ಉದಾಃ ಎಲೆಕ್ಟ್ರಾನಿಕ್ ವಸ್ತುಗಳು, ಪ್ಲಾಸ್ತಿಕ್ ವಸ್ತುಗಳು ಇತ್ಯಾದಿ. ಇವು ಪ್ರಕೃತಿಯ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ.

ನೈಸರ್ಗಿಕವಾಗಿ ನೀರನ್ನು ಹೀರಿಕೊಳ್ಳುವ ಗುಣ ಭೂಮಿಗಿರುತ್ತದೆ. ಕೆರೆಗಳು ಈ ಮಹತ್ತರ ಕಾರ್ಯವನ್ನು ನಿರ್ವಹಿಸುತ್ತವೆ. ಆದರೆ ನಗರೀಕರಣ ಪ್ರಕ್ರಿಯೆಗೆ ಬಲಿಯಾಗಿ ಬಹುತೇಕ ಎಲ್ಲ ಕೆರೆಗಳೂ ಕಾಂಕ್ರೀಟ್ ಕಾಡುಗಳಾಗಿವೆ. ಸಣ್ಣ ಪುಟ್ಟ ರೈತರಿಗೆ ನೀರಾವರಿಗೆ ಸಹಾಯಕವಾಗುತ್ತಿದ್ದ ಕೆರೆಗಳನ್ನು ಕಬಳಿಸಿದ ರಿಯಲ್ ಎಸ್ಟೇಟ್ ಉದ್ಯಮ ಬಡಾವಣೆಗಳನ್ನು ನಿರ್ಮಿಸುವ ಮೂಲಕ ಲಕ್ಷಾಂತರ ಜನರನ್ನು ಬೀದಿಪಾಲು ಮಾಡಿರುವುದು ನಮ್ಮ ಕಣ್ಣ ಮುಂದಿರುವ ಕಟು ಸತ್ಯ. ಅಳಿದುಳಿದಿರುವ ಕೆಲವೇ ಕೆರೆಗಳಲ್ಲಿ ಹೂಳು ತೆಗೆದು ದಶಕಗಳೇ ಕಳೆದಿವೆ. ಮಳೆ ನೀರನ್ನು ಹೀರಿಕೊಳ್ಳಲು ಅಗತ್ಯವಾದ ಅರಣ್ಯ ಸಂಪತ್ತು ಬರಿದಾಗಿದೆ, ಕೆರೆಗಳು ಬತ್ತಿಹೋಗಿವೆ, ಬಾವಿ ಕುಂಟೆಗಳು ನಿಶ್ಯೇಷವಾಗಿವೆ. ಹಾಗಾಗಿ ಭಾರಿ ಮಳೆ ಬಂದಾಗಲೆಲ್ಲಾ ನೀರು ಭೂಮಿಯ ಮೇಲ್ಬಾಗದಲ್ಲೇ ಹರಿಯುವುದರಿಂದ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಇನ್ನು ಜಲಾಶಯಗಳಲ್ಲಿ ಹೂಳು ತುಂಬಿದ್ದು ಜಲಾಶಯಗಳು ಶೀಘ್ರವಾಗಿ ಭರ್ತಿಯಾಗುತ್ತದೆ. ಇನು ನಗರ ಪಟ್ಟಣಗಳಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದರಿಂದ ಅಲ್ಪ ಪ್ರಮಾಣದ ಮಳೆ ಬಂದರೆ ರಸ್ತೆಯಲ್ಲಿ ನದಿ ಹರಿಯುತ್ತದೆ. ಬಡಾವಣೆಗಳನ್ನು ನಿರ್ಮಿಸುವ ಭರದಲ್ಲಿ ಬೆಟ್ಟ ಗುಡ್ಡ ಪ್ರದೇಶಗಳನ್ನು ಸಮತಟ್ಟು ಮಾಡದೆ ನಿರ್ಮಿಸುವುದರಿಂದಲೂ ತಗ್ಗಿನ ಪ್ರದೇಶದ ಮನೆಗಳು ಶೀಘ್ರ ಜಲಾವೃತವಾಗುತ್ತವೆ.

ಬೆಂಗಳೂರಿನಲ್ಲೂ ಈ ಸಮಸ್ಯೆ ಪ್ರತಿ ವರ್ಷ ತಲೆದೋರುತ್ತದೆ. ಉತ್ತರ ಕರ್ನಾಟಕದಲ್ಲಿ ಆದಂತೆ ೫೦ ಸೆಂಟಿಮೀಟರ್ ಮಳೆ ಬೆಂಗಳೂರು ಅಥವಾ ಮೈಸೂರಿನಲ್ಲಿ ಸುರಿದರೆ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದೂ ಅಸಾಧ್ಯ . ಬಹುತೇಕ ಕೃಷಿ ಭೂಮಿ ಮತ್ತು ಕೆರೆ ಕುಂಟೆಗಳು ಬಿಎಂಐಸಿ ಕಾರಿಡಾರ್ ಮತ್ತು ರಿಯಲ್ ಎಸ್ಟೇಟಿಗೆ ಬಲಿಯಾಗಿರುವ ಈ ಪ್ರದೇಶದಲ್ಲಿ ನೀರನ್ನು ಹೀರಿಕೊಳ್ಳುವ ಸೆಲೆಗಳೇ ಬತ್ತಿಹೋಗಿವೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದಾಗ ನೈಸರ್ಗಿಕ ವಿಕೋಪವನ್ನು ಎದುರಿಸುವ ನಿಟ್ಟಿನಲ್ಲಿ ಆಳ್ವಿಕರು ವಿಫಲವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಪರಿಸ್ಥಿತಿ ಕೈಮೀರಿ ಹೋದ ನಂತರದಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವ ಬದಲು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರಗಳು ಯೋಚಿಸದೆ ಹೋದಲ್ಲಿ, ಸರ್ಕಾರದ ಪ್ರಯತ್ನಗಳೆಲ್ಲವೂ ಅಸಂಬದ್ಧ ಪ್ರಲಾಪವಾಗುತ್ತದೆ. ಮಾನವ ಸಮಾಜ ಪ್ರಕೃತಿಯೊಡನೆ ಸಹಬಾಳ್ವೆ ನಡೆಸಬೇಕೇ ಹೊರತು, ವಿಧ್ವಂಸಕರಾಗಿ ಪರಿಣಮಿಸಬಾರದು. ಆಧುನಿಕತೆ, ಪ್ರಗತಿ, ಅಭಿವೃದ್ಧಿಯ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ನಿರ್ನಾಮ ಮಾಡುತ್ತಿರುವ ವ್ಯವಸ್ಥೆಯಲ್ಲಿ ಪ್ರಕೃತಿ ವಿಕೋಪವನ್ನು ಎದುರಿಸಲು ಸಾಮರ್ಥ್ಯವಿಲ್ಲದಿರುವುದು ಸ್ಪಷ್ಟವಾಗಿದೆ. ಅಮೆರಿಕದ ಕತ್ರಿನಾ ತೂಫಾನಿನ ಸಂದರ್ಭದಲ್ಲೂ ಇದು ನಿರೂಪಿತವಾಗಿದೆ. ಇನ್ನಾದರೂ ಜನರು ಎಚ್ಚೆತ್ತುಕೊಳ್ಳುವರೇ ಕಾದು ನೋಡಬೇಕಾಗಿದೆ.

ಮಾನವ ಹೊಸ ಹೊಸ ಆವಿಷ್ಕಾರಗಳನ್ನು ಕಂಡುಹಿಡಿಯುವುದು ಒಳ್ಳೆಯದೇ ಆದರೂ, ಅದು ಪರಿಸರ ಸ್ನೇಹಿ ಆಗುವ ಬದಲು, ಪರಿಸರ ಮಾರಕವಾಗುತ್ತಿರುವುದು ವಿಪರ್ಯಾಸದ ಸಂಗತಿ. ವಾಹನಗಳಿಂದ ಹಾಗು ಕಾರ್ಖಾನೆಗಳಿಂದ ಹೊರಹೊಮ್ಮುವ ರಾಸಾಯನಿಕ ವಸ್ತುಗಳು ಇಂಗಾಲದ ಡೈ ಆಕ್ಸೈಡ್ ನ್ನು ಹೀರಿ ಜೀವ ಅನಿಲವಾದ ಆಮ್ಲಜನಕವನ್ನು ಉತ್ಪತ್ತಿ ಮಾಡುವ ಮರಗಳ ಕೊರತೆ, ಪ್ರಕ್ರತಿಯಲ್ಲಿ ಉಷ್ಣಾಂಶ ಬರಲು ಕಾರಣವಾಗಿದೆ. ಇದರ ಪರಿಣಾಮವಾಗಿ ಹಿಮ ಪ್ರದೇಶಗಳು ಕರಗಿ ಜಲಪ್ರವಾಹವಾಗುತ್ತಿದೆ. ಜಗತ್ತಿನ ವಿವಿದೆಡೆ ಭೂಕಂಪ, ಜಲಪ್ರವಾಹಗಳು, ಅತಿವೃಷ್ಟಿ, ಎಚ್ಚರಿಕೆಯ ಘಟನೆಯನ್ನು ಮೊಳಗಿಸುತ್ತಿದೆಯಾದರು ಮಾನವನು ತನ್ನ ಚಟುವಟಿಕೆಯಲ್ಲಿ ಬದಲಾವಣೆಯನ್ನು ತಂದುಕೊಳ್ಳದೆ ಇರುವುದು ಬೇಸರದ ಸಂಗತಿಯಾಗಿದೆ.

ಮಾನವ ತನ್ನ ಸಾಧನೆಯಲ್ಲಿ ಪ್ರಗತಿ ಸಾಧಿಸುವ ದೆಸೆಯಲ್ಲಿ ಪ್ರಕೃತಿಯೊಂದಿಗೆ ಸದ್ದಿಲ್ಲದೆ ಸಂಘರ್ಷಕ್ಕೆ ಇಳಿದಿದ್ದಾನೆ. ಅವನ ಹೊಸ ಆವಿಷ್ಕಾರಗಳು ಮನುಕುಲದ ಮೇಲೆ, ಪ್ರಾಣಿ, ಪಕ್ಷಿ ಜಗತ್ತಿನ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ. ಮನಸ್ಸಿಗೆ ಬಂದಂತೆ ನಡೆಯುತ್ತಿರುವ ಮಾನವನ ಮೇಲೆ ಪ್ರಕ್ರತಿ ಮುನಿಸು ತಾಳಿ, ಇಡೀ ವಾತಾವರಣವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಪ್ರಕೃತಿಯ ವಿಕೋಪಗಳಾಗುತ್ತಿವೆ.


ಪರಿಹಾರ ದಾರಿಗಳು

ವಿನಾಃ ಕಾರಣ ಕಾಡುಗಳನ್ನು ಬರಿದು ಮಾಡುವುದುನ್ನು ಬಿಟ್ಟು. ಹೆಚ್ಚಾಗಿ ಗಿಡಗಳನ್ನು ಬೆಳೆಸುವ ಪರಿಪಾಠ. ಮುಚ್ಚಿಹೋಗುತ್ತಿರುವ ಕೆರೆಗಳ ಅಭಿವೃದ್ಧಿ, ಮಳೆ ನೀರು ಕೆರೆಗಳನ್ನು ತಲುಪುವಂತಾ ವ್ಯವಸ್ಥೆ. ಐಷಾರಾಮಿ ಜೀವನ ಸಂಕೇತವಾಗಿ ವಾಹನ ಉಪಕರಣಗಳನ್ನು ಬಳಸಲಾಗುತ್ತಿದೆ. ಇದರ ಪರಿಣಾಮ ದಟ್ಟ ಹೊಗೆ ಪರಿಸರವನ್ನು ಹಾಳು ಮಾಡುತ್ತಿದೆ. ಹೀಗಾಗಿ ಜನರು ಹೆಚ್ಚು ಪರಿಸರ ಸ್ನೇಹಿ ವಾಹನ, ಉಪಕರಣಗಳನ್ನು ಬಳಸುವುದು ಸೂಕ್ತ.

- ವಿಶ್ವನಾಥ್. ಎಸ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com