ಬೆಲ್ಲದ ನಾಡಿನಲ್ಲಿ ಜರ್‍ಬೇರಾ ಹೂಗಳ ಘಮ.. ಘಮ...!

ಜವಳಿ ವ್ಯಾಪಾರಸ್ಥರೊಬ್ಬರು ತಮ್ಮ ಕೃಷಿಯಲ್ಲಿನ ಭಕ್ತಿ, ಭೂಮಿ ತಾಯಿಯ ಸೆಳೆತ, ನವೀನತೆಯ ಪ್ರಯೋಗದೊಂದಿಗೆ ಸಾವಯವ ಕೃಷಿ ಪದ್ದತಿಯಲ್ಲೇ ಎಲೆಮರೆ
ಸೋಮಶೇಖರ ಸಂಶಿ (ಎಡಗಡೆಯಿಂದ)
ಸೋಮಶೇಖರ ಸಂಶಿ (ಎಡಗಡೆಯಿಂದ)
Updated on
ಜವಳಿ ವ್ಯಾಪಾರಸ್ಥರೊಬ್ಬರು ತಮ್ಮ ಕೃಷಿಯಲ್ಲಿನ ಭಕ್ತಿ, ಭೂಮಿ ತಾಯಿಯ ಸೆಳೆತ, ನವೀನತೆಯ ಪ್ರಯೋಗದೊಂದಿಗೆ ಸಾವಯವ ಕೃಷಿ ಪದ್ದತಿಯಲ್ಲೇ ಎಲೆಮರೆ ಕಾಯಿಯಂತಿದ್ದು ಕಬ್ಬು ಮತ್ತು ಅರಿಷಿಣ ಹೆಚ್ಚಾಗಿ ಬೆಳೆಯುವ ಪ್ರದೇಶದಲ್ಲಿ ಜರಬೇರಾ ಹೂಗಳ ಸಮೃದ್ದ ಕೃಷಿಯೊಂದಿಗೆ ಬೆಲ್ಲದ ನಾಡಿನಲ್ಲಿ ಜರಬೇರಾ ಹೂಗಳ ಘಮ ಘಮ ಸುವಾಸನೆಯನ್ನು ಪಸರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಜವಳಿ ವ್ಯಾಪಾರಸ್ಥರಾದ ಸೋಮಶೇಖರ ಸಂಶಿ ಅವರು ಪಕ್ಕದ ಸಂಗಾನಟ್ಟಿ ಗ್ರಾಮದಲ್ಲಿರುವ  ತಮ್ಮ 12 ಎಕರೆ ಜಮೀನನಲ್ಲಿ ಸಂಪೂರ್ಣ ಸಾವಯವ ಪದ್ದತಿಯ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಈ ಭಾಗದಲ್ಲಿ ಯಾರು ಮಾಡದೇ ಇರುವಂತಹ ಕೃಷಿಯನ್ನು ಮಾಡಬೇಕೆಂದು ನಿಶ್ಚಯಿಸಿ ಜರಬೇರಾ ಹೂಗಳ ಕೃಷಿಗೆ ಮುಂದಾಗಿದ್ದಾರೆ.
20 ಗುಂಟಿದಲ್ಲಿ ಜರಬೇರಾ: ಸಂಶಿಯವರು ತಮ್ಮ ಜಮೀನಿನ 20 ಗುಂಟೆ ಜಾಗೆಯಲ್ಲಿ ಮಾತ್ರ ಜರಬೇರಾ ಹೂಗಳ ಕೃಷಿಯನ್ನು ಮಾಡುತ್ತಿದ್ದಾರೆ. ಅದರಲ್ಲಿ ಎರಡು ಹಸಿರು ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ಜಮೀನಿನ ಕಪ್ಪು ಮಣ್ಣಿನ ಜೊತೆಗೆ ಮರಳು ಸಹಿತ ಕೆಂಪು ಮಣ್ಣನ್ನು ಹಾಕಿಸಿ, ಆಕಳ ಗಂಜಲು ಮತ್ತು ಸಗಣಿಯಿಂದ ತಯಾರಿಸಿದ ಕಾಂಪೋಸ್ಟ ಗೊಬ್ಬರವನ್ನು ಮಣ್ಣಿನೊಂದಿಗೆ ಮಿಶ್ರಣ ಮಾಡಿ, 20 ಗುಂಟೆಯಲ್ಲಿ ಸುಮಾರು 12 ಸಾವಿರ ಜರಬೇರಾ ಹೂಗಳ ಸಸಿಗಳನ್ನು ಹಚ್ಚಿದ್ದಾರೆ. ಸಸಿಗಳನ್ನು ನಾಟಿ ಮಾಡಿದ 90 ದಿನಗಳ ನಂತರ ಹೂಗಳು ಬಿಡಲು ಪ್ರಾರಂಭಿಸಿವೆ.
ಮೂರು ವರ್ಷದ ಬೆಳೆ : ಜರಬೇರಾ ಹೂಗಳ ಕೃಷಿಯು ಸುದಿರ್ಘ ಮೂರು ವರ್ಷಗಳ ಸಮೃದ್ದ ಕೃಷಿಯಾಗಿದೆ. ಬಿಸಿಲಿ, ಮಳೆ, ಚಳಿಗೆ ಸಸಿಗಳು ನಾಶವಾದಂತೆ ಹಸಿರು ಮನೆಯು ರಕ್ಷಿಸುತ್ತಿದೆ.ಸಸಿಗಳಿಗೆ ಯಾವುದೇ ರೋಗದ ಬಾದೆ ತಟ್ಟದಂತೆ ಸೋಮಶೇಖರ ಸಂಶಿಯವರು ಎಚ್ಚರಿಕೆ ವಹಿಸುತ್ತಿದ್ದಾರೆ.ಕೆಲಸಗಾರರನ್ನು ಹಿಡಿದು ಪ್ರತಿಯೊಬ್ಬರು ಹಸಿರುಮನೆಯೊಳಗೆ ಪಾದರಕ್ಷೆ ಸಮೇತ ಒಳ ಪ್ರವೇಶಿಸುವಂತಿಲ್ಲ. ಹೂಗಳ ಕಟಾವ ಸಮಯದಲ್ಲಿ ಕೈಗಳಿಗೆ ರಕ್ಷಾಕವಚವನ್ನು ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆ. ಒಂದು ವರ್ಷದ ನಂತರ ಅಲ್ಲಲ್ಲಿ ಅಲ್ಪಸ್ವಲ್ಪ ನಾಶವಾಗುವ ಜರಬೇರಾ ಸಸಿಗಳನ್ನು ಪುನ: ಹೊಸ ಸಸಿಗಳ ನಾಟಿ ಮಾಡಿಕೊಳ್ಳುತ್ತಿದ್ದಾರೆ.
ಹನಿ ನೀರಾವರಿ : ಜರಬೇರಾ ಹೂಗಳ ಕೃಷಿಗೆ ಸಂಶಿಯವರು ಹನಿ ನೀರಾವರಿ ಪದ್ದತಿಯನ್ನು ಅಳವಡಿಸಿದ್ದಾರೆ. ತಮ್ಮ ಭಾಂವಿಯಲ್ಲಿನ ನೀರು ಹೆಚ್ಚಿನ ಲವಣಾಂಶವನ್ನು ಹೊಂದಿದ್ದರಿಂದ, ಪಕ್ಕದಲ್ಲೆ ಹರಿಯುವ ಹಳ್ಳ ಮತ್ತು ಘಟಪ್ರಭಾ ಎಡದಂಡೆ ಕಾಲುವೆಯ ನೀರನ್ನು ಹೊಂಡದಲ್ಲಿ ಶೇಖರಿಸಿ, ಅದನ್ನು ಶುದ್ದಿಕರಣಗೊಳಿಸಿ ಬೆಳೆಗಳಿಗೆ ಪೂರೈಕೆ ಮಾಡುತ್ತಿದ್ದಾರೆ. 
ಮಾರುಕಟ್ಟೆ ವ್ಯವಸ್ಥೆ: ಜರಬೇರಾ ಹೂಗಳನ್ನು ಬೆಳೆಯುವದರ ಜೊತೆಗೆ ಅದರ ಮಾರುಕಟ್ಟೆ ವ್ಯವಸ್ಥೆಯು ಅಷ್ಟೆ ಮುಖ್ಯವಾಗಿದೆ. ಸೋಮಶೇಖರ ಅವರು ಸಂಗಾನಟ್ಟಿ ಗ್ರಾಮದ ತಮ್ಮ ಜಮೀನಿನಲ್ಲಿ ಬೆಳೆಯುವ ಜರಬೇರಾ ಹೂಗಳನ್ನು ವಾರಕ್ಕೆ ನಾಲ್ಕು ಬಾರಿ ಕಟಾವ ಮಾಡಿ ಬೆಂಗಳೂರು ಮತ್ತು ಹೈದರಾಬಾದ್‍ಗೆ ಕಳಿಸುತ್ತಿದ್ದಾರೆ. 10 ಹೂಗಳ ಒಂದು ಕಟ್ಟನ್ನು ತಯಾರಿಸಿ, ಸುಮಾರು 10ರಿಂದ 20 ಕಟ್ಟುಗಳಿಂದ ಒಂದು ಬಾಕ್ಸನ್ನು ತಯಾರಿಸಿ ಪ್ಯಾಕ್ ಮಾಡಿ ಬಸ್‍ಗಳ ಮೂಲಕ ರವಾಣಿಸುತ್ತಿದ್ದಾರೆ. ಬಿಳಿ, ಕೆಂಪು, ಹಳದಿ ಸೇರಿದಂತೆ ನಾಲ್ಕಾರು ಬಣ್ಣಗಳ ಜರಬೇರಾ ಹೂಗಳ ಕಲರವವು ಸಂಶಿಯವರ ಪಾಲಿನ ಅಚ್ಚುಮೆಚ್ಚಿನ ಮತ್ತು ಲಾಭದ ಕೃಷಿಯಾಗಿ ಅವರ ಬದುಕಿನಲ್ಲಿ ಬಣ್ಣಗಳ ಚಿತ್ತಾರ ಮೂಡಿಸಿದೆ.
8 ಲಕ್ಷ ಆದಾಯ : ಮಣ್ಣಿನ ಫಲವತ್ತತೆ, ಹನಿ ನೀರಾವರಿ, ಹಸಿರು ಮನೆ ನಿರ್ಮಾಣ, 12 ಸಾವಿರ ಸಸಿಗಳ ನಾಟಿ ಸೇರಿದಂತೆ ಸಮಾರು 21 ಲಕ್ಷ ರೂಗಳ ಖರ್ಚುಮಾಡಿ ಜರಬೇರಾ ಹೂಗಳ ಕೃಷಿ ಮಾಡುತ್ತಿದ್ದಾರೆ. ಸಸಿ ನಾಟಿಯ ಮೂರು ತಿಂಗಳ ನಂತರ ಮುಂದಿನ ಮೂರು ವರ್ಷಗಳ ಕಾಲ ನಿರಂತರವಾಗಿ ಹೂಗಳು ದೊರೆಯುವದರಿಂದ ಮದುವೆ ಮತ್ತು ಹಬ್ಬಗಳ ಸಂದರ್ಭದಲ್ಲಿ ಹೂಗಳು ಹೆಚ್ಚಿಗೆ ವ್ಯಾಪಾರವಾಗುವದರಿಂದ ಇದು ಲಾಭದ ಕೃಷಿಯಾಗಿದೆ. ಒಂದುವರೆ ವರ್ಷದಲ್ಲಿ 8 ಲಕ್ಷ ಆದಾಯವನ್ನು ಪಡೆದಿರುವದರಿಂದ ಮುಂಬರುವ ದಿನಗಳಲ್ಲಿ ಜರಬೇರಾ ಹೂಗಳಿಂದ ಇನ್ನು ಹೆಚ್ಚಿನ ಲಾಭಾಂಶವನ್ನು ಕಾಣಬಹುದಾಗಿದೆ ಎನ್ನುತ್ತಾರೆ ಸೋಮಶೇಖರ ಸಂಶಿ.
ಕಬ್ಬಿನ ಸಸಿಗಳ ತಯಾರಿಕೆ: ಋತುಮಾನಕ್ಕೆ ತಕ್ಕಂತೆ ತಮ್ಮ ಜಮಿನಿನಲ್ಲಿ ಕಬ್ಬು, ಅರಿಷಿಣ, ಗೋವಿನ ಜೋಳ, ಗೋ, ಚಂಡು ಹೂಗಳನ್ನು ಬೆಳೆಯುತ್ತಿದ್ದಾರೆ. ತಮ್ಮ ಜಮೀನಿಗೆ ಬೇಕಾದ ಕಬ್ಬಿನ ಸಸಿಗಳನ್ನು ತಾವೇ ತಯಾರಿಸಿ ನಾಟಿ ಮಾಡುತ್ತಿದ್ದಾರೆ. 86.032 ಕಬ್ಬಿನ ತಳಿಯ ಕಬ್ಬಿನ ಸಸಿಗಳನ್ನು ತಯಾರಿಸುತ್ತಿದ್ದಾರೆ. ಕಬ್ಬಿನ ಸಸಿಗಳನ್ನು ಸಾಲಿನಿಂದ ಸಾಲಿಗೆ 5 ಅಡಿ, ಸಸಿಯಿಂದ ಸಸಿಗೆ 3ಅಡಿ ಅಂತರದಲ್ಲಿ ನಾಟಿ ಮಾಡಿ ಕೇವಲ 11 ತಿಂಗಳಲ್ಲಿ ಕಟಾವುಮಾಡಿ ಎಕರೆಗೆ 60ರಿಂದ 80 ಟನ್ ಬೆಳೆದು ಸೈ ಎನಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ನಾಟಿ ಮಾಡಲು ಇಂದು ಎಕರೆಗೆ 3ಟನ್ ಕಬ್ಬು ಬೇಕು.ಆದರೆ ಸಂಶಿಯವರು ಬೀಜ ತಯಾರಿಸಿ ನಾಟಿ ಮಾಡುವ ಪದ್ದತಿಗೆ 1ಕ್ವಿಂಟಾಲ್ ಬೀಜದಲ್ಲಿ ಒಂದು ಎಕರೆ ನಾಟಿ ಮಾಡಬಹುದಾಗಿದೆ.
ಆಕಳು ಸಾಕಾಣಿಕೆ: ಸೋಮಶೇಖರ ಸಂಶಿಯವರು ಜರಬೇರಾ ಹೂಗಳು ಮತ್ತು ಸಮಗ್ರ ವಾಣಿಜ್ಯ ಬೆಳೆಗಳ ಜೊತೆಗೆ ತಮ್ಮ ಸಾವಯವ ಕೃಷಿಗೆ ಸಹಾಯಕವಾಗುವಂತೆ ಹತ್ತಾರು ಜರ್ಸಿ ಆಕಳುಗಳನ್ನು ಸಾಕಿದ್ದಾರೆ.  ಅವುಗಳ ಸಗಣಿ ಮತ್ತು ಗಂಜಲು, ಕಬ್ಬಿನ ರವದಿ, ಗಿಡಮರಗಳ ಎಲೆಗಳಿಂದ ಕಾಂಪೋಸ್ಟ ಗೊಬ್ಬರವನ್ನು ತಯಾರಿಸಿ ಹೊಲಕ್ಕೆ ಪೂರೈಕೆ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ರಸಗೊಬ್ಬರವನ್ನು ಬಳಸುವದಿಲ್ಲ.
ಮಾದರಿ ರೈತ : ಸರಿಯಾಗಿ ವಿದ್ಯುತ್ ಇಲ್ಲ, ಉತ್ತಮ ಬೆಲೆ ಇಲ್ಲ, ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ ಎನ್ನುತ್ತಿರುವ ರೈತಸಮುದಾಯದ ಮಧ್ಯೆ ತಮ್ಮ ಜವಳಿ ವ್ಯಾಪಾರದ ಜೊತೆಗೆ ಪ್ರತಿನಿತ್ಯ ಕೃಷಿಕೇತ್ರದಲ್ಲಿ ನಡೆಯುತ್ತಿರುವ ಹೊಸ ಅವಿಷ್ಕಾರ ಮತ್ತು ವಿನೂತನ ಪದ್ದತಿಗಳ ಸದ್ಭಳಕೆಯೊಂದಿಗೆ ಸಾಂಪ್ರದಾಯಿಕ ಸಾವಯವ ಕೃಷಿಯನ್ನೇ ಲಾಭದಾಯಕ ಕೃಷಿ ಉದ್ದಿಮೆಯನ್ನಾಗಿ ಪರಿವರ್ತಿಸಿಕೊಂಡಿರುವ ಸೋಮಶೇಖರ ಸಂಶಿ ಅವರು ನಿಜಕ್ಕೂ ಮಾದರಿ ರೈತರಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.
ಸಾವಯವ ಕೃಷಿ ಪದ್ದತಿ ಮತ್ತು ಜರಬೇರಾ ಹೂಗಳ ಕೃಷಿ ಮಾಹಿತಿಗಾಗಿ ಸೋಮಶೇಖರ ಸಂಶಿ. ಮಹಾಲಿಂಗಪುರ-587312.ತಾ.ಮುಧೋಳ ಜಿ.ಬಾಗಲಕೋಟ. ಮೋ: 9845526437 ಗೆ ಸಂಪರ್ಕಿಸಬಹುದು.
ನಂಬಿದವರ ಪಾಲಿನ ಸ್ವರ್ಗ :
ಕೃಷಿಯು ನಮ್ಮ ದೇಶದ ಬೆನ್ನೆಲಬು. ಆದರೆ ಇಂದಿನ ಯುವಕರು ಕೃಷಿಯಿಂದ ವಿಮುಖರಾಗಿ ಪಟ್ಟಣಗಳತ್ತ ಮುಖಮಾಡುತ್ತಿರುವುದು ಬೇಸರದ ಸಂಗತಿ. ಭೂಮಿ ತಾಯಿಯನ್ನು ನಂಬಿ ಮಣ್ಣಲ್ಲಿ ಮಣ್ಣಾಗಿ ದುಡಿಯುವವರ ಪಾಲಿಗೆ ಕೃಷಿಯು ಭೂಲೋಕದ ಸ್ವರ್ಗವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಸೋಲು-ಗೆಲವುಗಳಿರುವದರಿಂದ ಎಲ್ಲವನ್ನು ಸಮನಾಗಿ ಸ್ವೀಕರಿಸಿ, ಕೃಷಿಯನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿಯು ಇಂದಿನ ಯುವಕರ ಮೇಲಿದೆ. 
- ಸೋಮಶೇಖರ ಸಂಶಿ. ಸಾವಯವ ಕೃಷಿಕ.
ಚಿತ್ರ-ಲೇಖನ: ಸಿ.ಎಂ. ಮೋರೆ 
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com