ಮರುಭೂಮಿಯ ಓಯಸಿಸ್ ಈ ರಾಜೇಂದ್ರ ಸಿಂಗ್

ಆಧುನಿಕ ಭಾರತದ ಭಗೀರಥನೆಂಬ ಖ್ಯಾತಿಗೆ ಭಾಜನಾಗಿರುವ ರಾಜಸ್ಥಾನದ ರಾಜೇಂದ್ರ ಸಿಂಗ್‍ರ ಸಾಧನೆ ಅಪ್ರತಿಮ...
ರಾಜೇಂದ್ರ ಸಿಂಗ್
ರಾಜೇಂದ್ರ ಸಿಂಗ್

ಆಧುನಿಕ ಭಾರತದ ಭಗೀರಥನೆಂಬ ಖ್ಯಾತಿಗೆ ಭಾಜನಾಗಿರುವ ರಾಜಸ್ಥಾನದ ರಾಜೇಂದ್ರ ಸಿಂಗ್‍ರ ಸಾಧನೆ ಅಪ್ರತಿಮ. ಮರುಭೂಮಿಯಂತ ರಾಜಸ್ಥಾನದಲ್ಲಿ ಐದು ನದಿಗಳನ್ನು ಪುನಶ್ಚೇತನಗೊಳಿಸಿದ ಅವರು ಹತ್ತಾರು ವರ್ಷಗಳಿಂದ ನೀರಿನ ವಿಚಾರದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿದ್ದಾರೆ.

ಇಂತಹ ಸಾಧನೆಗೈದ ರಾಜೇಂದ್ರ ಸಿಂಗ್ ಅವರಿಗೆ 2015ರ ಸ್ಟಾಕ್‍ಹೊಮ್ ಪ್ರಶಸ್ತಿ ಸಂದಿದೆ. `ವಾಟರ್ ನೊಬೆಲ್' ಎಂದೇ ಪರಿಗಣಿತವಾದ ಈ ಪ್ರಶಸ್ತಿಯನ್ನು ಜಲ ಸಂರಕ್ಷಣೆ, ನೀರಿನ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೆ ಕೊಡಲಾಗುತ್ತದೆ. ಈ ಬಾರಿಯ ಪ್ರಶಸ್ತಿ ರಾಜೇಂದ್ರ ಸಿಂಗ್‍ಗೆ ಲಭಿಸಿರುವುದು ಭಾರತಕ್ಕೆ ಅಕ್ಷರಶಃ ಹೆಮ್ಮೆ ತಂದಿದೆ. ಖಂಡಿತಾ ಯುವಜನರು ಕನಸು ಕಂಡರೆ, ಆ ಕನಸನ್ನು ನನಸು ಮಾಡಲು ಸತತ ಪರಿಶ್ರಮ, ಶ್ರದ್ಧೆಯಿಂದ ಭೂಮಿ ಮುಟ್ಟಿ ಪ್ರಯತ್ನಿಸಿದರೆ….ಎಲ್ಲವೂ ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

ಆಗಸ್ಟ್ 26ರಂದು ಸ್ವೀಡನ್‍ನಲ್ಲಿ ನಡೆಯುವ ರಾಯಲ್ ಅವಾರ್ಡ್ ಸೆರಮನಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗು ವುದು. ವಿಶ್ವ ಜಲದಿನವಾದ ಮಾ.22 ರಂದು ಪ್ರಶಸ್ತಿ ಘೋಷಿಸಲಾಗಿದೆ.

ಭಗೀರಥನಾದ ರಾಜೇಂದ್ರ ಸಿಂಗ್
1959ರಲ್ಲಿ ಉತ್ತರಪ್ರದೇಶದಲ್ಲಿ ಜಮೀನ್ದಾರೀ ಮನೆತನದಲ್ಲಿ ಹುಟ್ಟ ಬೆಳೆದರ ರಾಜೇಂದ್ರ ಸಿಂಗ್ ಮುಂದೊಂದು ದಿನ ದೇಶ ಕಂಡ ಅಪ್ರತಿಮ ಸಾಧಕರಾಗುತ್ತಾರೆ ಎಂದು ಯಾರು ಊಹಿಸಿರಲು ಸಾಧ್ಯವಿಲ್ಲ. 1974ರಲ್ಲಿ ರಾಜೇಂದ್ರಸಿಂಗ್ ಹೈಸ್ಕೂಲಿನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಅವರ ಮನೆಗೆ ಬಂದ ‘ಗಾಂಧಿ ಶಾಂತಿ ಪ್ರತಿಷ್ಠಾನ’ದ ರಮೇಶ್ ಶರ್ಮ ಅವರ ಭೇಟಿ, ಅವರ ಬದುಕಿನ ದಿಕ್ಕನ್ನೇ ಬದಲಿಸಿತು.

ಹಳ್ಳಿಯ ಶುಚಿತ್ವದ ಮತ್ತು ಮದ್ಯವ್ಯಸನ ಮುಕ್ತಿಗಾಗಿ ನಡೆಸುತ್ತಿದ್ದ ಕಾರ್ಯಕ್ರಮಗಳಿಗೆ ಕರೆದೊಯ್ಯುತ್ತಿದ್ದ ರಮೇಶ್ ಶರ್ಮ ಅವರು, ರಾಜೇಂದ್ರ ಅವರ ಎಳೆಯ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿದರು. ಇದರೊಂದಿಗೆ 1975 ರಲ್ಲಿ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾದ ಪ್ರತಾಪ್‌ಸಿಂಗ್ ತಮ್ಮ ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಿದ್ದ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳು, ಜೊತೆಗೇ ಅದೇ ಸಂದರ್ಭದಲ್ಲಿ ಬಂದ ತುರ್ತುಪರಿಸ್ಥಿತಿ, ತರುಣ ರಾಜೇಂದ್ರ ಅವರು ತೀವ್ರವಾಗಿ ಮತ್ತು ಸ್ವತಂತ್ರವಾಗಿ ಪ್ರಜಾಪ್ರಭುತ್ವದ ವಿವಿಧ ಆಯಾಮಗಳ ಕುರಿತು ಯೋಚಿಸುವಂತಹ ಪ್ರಭಾವವನ್ನು ಬೀರಿದವು. ಸಿಂಗ್ ಆಯುರ್ವೇದದಲ್ಲಿ ಪದವಿ ಮುಗಿಸಿದ್ದರೂ, ತಾವು ಓದಿರುವ ವಿಷಯ ಬಿಟ್ಟು ಇನ್ನೊಂದು ವಿಷಯದ ಬಗ್ಗೆ ಅಧ್ಯಯನ ನಡೆಸಿ, ತರುಣ್ ಭಾರತ್ ಸಂಘ ಕಟ್ಟಿ ಜನರಿಗೆ ನೀರು ಸಿಗುವಂತೆ ಮಾಡಿದರು.

1980 ರಲ್ಲಿ ರಾಷ್ಟ್ರೀಯ ಶಿಕ್ಷಣಪ್ರಚಾರ ಸಮಿತಿಯ ಸ್ವಯಂಸೇವಕನಾಗಿ ಸರ್ಕಾರಿ ಕೆಲಸಕ್ಕಾಗಿ ಸೇರಿಕೊಂಡರು. ಅದರದ್ದೇ ಭಾಗವಾಗಿ ವಯಸ್ಕರಿಗೆ ಶಿಕ್ಷಣ ನೀಡುವ ಸಲುವಾಗಿ ರಾಜಸ್ಥಾನದ ದೌಸಾ ಜಿಲ್ಲೆಗೆ ಹೋಗಬೇಕಾಯ್ತು. ಆಗಲೇ ‘ತರುಣ ಭಾರತ ಸಂಘ’ಕ್ಕೆ ಸೇರಿ, ಅದರ ಸಕ್ರಿಯ ಕಾರ್ಯದರ್ಶಿಯಾಗಿ ಯುವಕರಿಗೆ ಮತ್ತು ಸಂಘಕ್ಕೆ ಸ್ಪೂರ್ತಿದಾಯಕವಾಗಿ ಹಲವಾರು ಆಮೂಲಾಗ್ರ ಬದಲಾವಣೆಗಳನ್ನು ತಂದರು. ಯುವಕರ ಸಂಘಟನೆಗಾಗಿ ಹಳ್ಳಿಯಿಂದ ಹಳ್ಳಿಗೆ ಪ್ರವಾಸ ಮಾಡಿದ್ದು ಅವರ ಬದುಕಿನ ಒಂದು ಮಹತ್ವದ ಮೈಲಿಗಲ್ಲು ಎನ್ನಬಹುದು. ಇದು ಅವರು ಜನಪರವಾಗಿ ಯೋಚಿಸಲು ಮತ್ತು ಯೋಜಿಸಲು ಸಹಕಾರಿಯಾಯ್ತು. ಜನರ ನೆಲಮೂಲದ ಸಮಸ್ಯೆಗಳ ಅರಿವು ಯುವ ರಾಜೇಂದ್ರರ ಮನಸಿನ ಮೇಲೆ ಅಗಾಧ ಪರಿಣಾಮ ಬೀರಿದವು. ಆದರೆ ತಾವಿರುವ ಸರ್ಕಾರಿ ಹುದ್ದೆ ತಮ್ಮ ಮುಕ್ತ ಮನಸ್ಥಿತಿಗೆ, ಚಟುವಟಿಕೆಗೆ ಸರಿಹೊಂದುವುದಿಲ್ಲವೆಂದೆನಿಸಿ 1984 ರಲ್ಲಿ ಕೆಲಸವನ್ನು ಬಿಟ್ಟು, ತಮ್ಮ ಬಳಿಯಿದ್ದ ವಸ್ತುಗಳನ್ನೆಲ್ಲಾ ಮಾರಿ, ತಮ್ಮ ನಾಲ್ಕು ಮಿತ್ರರೊಡಗೂಡಿ ಬಸ್ ಏರಿ ರಾಜಸ್ಥಾನದ ಮೂಲೆಯ ಆಳ್ವಾರ್ ಜಿಲ್ಲೆಯ ಹಳ್ಳಿಯೊಂದಕ್ಕೆ ಬಂದು ತಲುಪಿದಾಗ ಅವರಿಗೆ ಕೇವಲ 26 ವರ್ಷ!

ಆಳ್ವಾರ್ ಜಿಲ್ಲೆ ಒಂದೊಮ್ಮೆ ಹಸಿರಿನಿಂದ ಕೂಡಿ, ಧಾನ್ಯಗಳ ಮಾರಾಟಕ್ಕೆ ಪ್ರಸಿದ್ಧವಾಗಿತ್ತು. ಆದರೆ ರಾಜೇಂದ್ರಸಿಂಗ್ ಇಲ್ಲಿಗೆ ಬಂದ ಕಾಲದಲ್ಲಿ ಅದೊಂದು ಶುಷ್ಕವಾದ ಮರುಭೂಮಿಯಾಗಿತ್ತು. ಅರಣ್ಯನಾಶ ಮತ್ತು ಗಣಿಗಾರಿಕೆ ನೀರಿನ ಮೂಲಗಳನ್ನೇ ನಾಶಮಾಡಿತ್ತು. ಅಂತರ್ಜಲ ಭೂಮಿಯಾಳಕ್ಕೆ ಇಳಿದುಹೋಗಿತ್ತು. ಪಾರಂಪರಿಕ ಚೆಕ್ ಡ್ಯಾಂ [ಜೋಹಡ್] ವ್ಯವಸ್ಥೆಗಳನ್ನು ನಿರ್ಲಕ್ಷಿಸಿದ್ದ ಜನರು ಆಧುನಿಕ ಬೋರ್‌ವೆಲ್‌ಗಳನ್ನು ಅವಲಂಬಿಸಿದ್ದರು. ನೀರಿನ ತೀವ್ರ ಕೊರತೆಯಿಂದ ಇಡೀ ಜಿಲ್ಲೆಯನ್ನು ‘ಡಾರ್ಕ್ ಝೋನ್’[ಕಪ್ಪು ಪ್ರದೇಶ]ವೆಂದು ಘೋಷಿಸಲಾಗಿತ್ತು. ರಾಜೇಂದ್ರಸಿಂಗ್ ಅವರಿಗೆ ನೀರಿನ ಸಮಸ್ಯೆಯ ತೀವ್ರತೆ ಅರ್ಥವಾಯ್ತು. ಇದೇ ಸಂದರ್ಭದಲ್ಲಿ ಹಳ್ಳಿಯೊಂದರ ಮುಖ್ಯಸ್ಥ ಮಂಗೂಲಾಲ್ ಪಟೇಲ್ ‘ರಾಜಾಸ್ಥಾನದಲ್ಲಿ ಶಿಕ್ಷಣಕ್ಕಿಂತಾ ನೀರಿನ ಸಮಸ್ಯೆ ತುಂಬಾ ದೊಡ್ಡದು’ ಎಂದು ಹೇಳಿದ ಮಾತು ಇವರ ಬದುಕಿನ ಮಹತ್ವದ ತಿರುವಿಗೆ ಕಾರಣವಾಯಿತು.

ಮೊದಲಿಗೆ ರಾಜೇಂದ್ರ ಸಿಂಗ್ ಜೋಹಡ್‌ಗಳ ಮರು ನಿರ್ಮಾಣದಲ್ಲಿ ತೊಡಗಿದರು. ಈ ವೇಳೆ ಈ ಕೆಲಸ ತಮ್ಮಿಂದ ಸಾಧ್ಯವಿಲ್ಲವೆಂದು ಇವರೊಟ್ಟಿಗಿದ್ದ ನಾಲ್ಕು ಗೆಳೆಯರು ಇವರನ್ನು ಬಿಟ್ಟು ಹೋದರು. ಇದರಿಂದ ಎದೆಗುಂದದ ರಾಜೇಂದ್ರ ಅವರು ಹಳ್ಳಿ ಹಳ್ಳಿಗಳಲಿ ಯುವಜನರನ್ನು ಸಂಘಟಿಸಿ ಕೆರೆಕಟ್ಟೆಗಳನ್ನು ಪುನಶ್ಚೇತನಗೊಳಿಸಿದರು. ಚೆಕ್ ಡ್ಯಾಂಗಳನ್ನು ನಿರ್ಮಿಸಿ ಅಂತರ್ಜಲ ಪ್ರಮಾಣವನ್ನು ಹೆಚ್ಚಿಸಿದರು. ಮಳೆ ನೀರು ಸಂಗ್ರಹ ಮತ್ತು ಅದರ ವ್ಯವಸ್ಥಿತ ಬಳಕೆಯಿಂದ ಕೇವಲ 3 ವರ್ಷಗಳಲ್ಲಿ ಪ್ರತಿಫಲ ಕಾಣತೊಡಗಿ, ಕೆಲವೇ ವರ್ಷಗಳಲ್ಲಿ ಅದು ‘ವೈಟ್ ಝೋನ್’ [ಶ್ವೇತ ಪ್ರದೇಶ]ವಾಗಿ ಮಾರ್ಪಟ್ಟಿತು.

ಇತ್ತೀಚೆಗಿನ ವರದಿಯಂತೆ ಕರ್ನಾಟಕದ 13 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಂತರ್ಜಲ ಬತ್ತಿ, ಕೃಷಿಗಿರಲಿ ಕುಡಿಯಲೂ ನೀರಿಲ್ಲದೇ ಜನ ತತ್ತರಿಸುವಂತಾಗಿದ್ದು, ದೇಶದ ಎರಡನೆಯ ದೊಡ್ಡ ಮರುಭೂಮಿಯಾಗಿ ಪರಿವರ್ತನೆಯಾಗುವ ಲಕ್ಷಣಗಳು ಗೋಚರಿಸುತ್ತಿದೆ. ಇನ್ನೊಂದೆಡೆ ಪ್ರವಾಹದಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ. ನಿಯಮಿತ ಮಳೆಯನ್ನು ಸೆಳೆಯಲು, ಅಂತರ್ಜಲ ಪ್ರಮಾಣ ಹೆಚ್ಚಿಸಲು ಈಗಲಾದರೂ ವೈಜ್ಞಾನಿಕ ಕ್ರಮಗಳನ್ನು ಅನುಸರಿಸದಿದ್ದರೆ ಮುಂದಿನ ಪರಿಣಾಮಗಳು ಇನ್ನಷ್ಟು ಘೋರವಾಗಬಹುದು. ಬಯಲುಸೀಮೆಯ ಜನರ ದಾಹ ತಣಿಸಲು ಎತ್ತಿನಹೊಳೆ ಯೋಜನೆ, ನೇತ್ರಾವತಿ ತಿರುವು ಯೋಜನೆ, ಪರಮಶಿವಯ್ಯ ವರದಿಯ ಅನುಷ್ಠಾನ... ಹೀಗೆ ಸಾವಿರಾರು ಕೋಟಿಗಳ, ಅಪಾರ ಪ್ರಮಾಣದ ಕಾಡು ನಾಶದ, ಹಲವಾರು ವರ್ಷಗಳ ಕಾಮಗಾರಿಯ ಯೋಜನೆಗಳ ಪ್ರಸ್ತಾವನೆಗಳನ್ನು ತರಾತುರಿಯಾಗಿ ಪರಿಶೀಲಿಸಿ, ಸರ್ಕಾರ ಹಣವನ್ನು ಬಿಡುಗಡೆ ಮಾಡಲು ಕಾತುರವಾಗಿದೆ.

ಪರಿಸರ ರಕ್ಷಣೆಯೊಂದಿಗೆ ಜಲ ಸಂರಕ್ಷಣೆಯ ಕ್ಷೇತ್ರದಲ್ಲಿ ಸಾಧನೆ ಮಾಡುವುದಾದರೆ, ಸಿಂಗ್ ನಮಗೆಲ್ಲ ಮಾದರಿಯಾಗುತ್ತಾರೆ. ಅವರ ನಡೆಗಳು ನಮಗೆಲ್ಲ ಆದರ್ಶವಾಗಲಿದೆ.


- ವಿಶ್ವನಾಥ್. ಎಸ್


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com