
ನ್ಯೂಯಾರ್ಕ್: 1986 ರಲ್ಲಿ ನಡೆದ ಅಣು ವಿಕಿರಣ ದುರಂತದಿಂದ ಸುತ್ತಲಿನ ಪರಿಸರ ಸಂಪೂರ್ಣ ನಾಶವಾಗಿ, ಅಲ್ಲಿಂದ ಜನರನ್ನು ಸ್ಥಳಾಂತರ ಮಾಡಬೇಕಾಗಿ ಬಂದಿತ್ತು. ಈಗ ಅದೇ ಪ್ರದೇಶದಲ್ಲಿ ವನ್ಯಮೃಗಗಳ ವೃದ್ಧಿಯಾಗಿದೆ ಎನ್ನುತ್ತದೆ ಅಂತರಾಷ್ಟ್ರೀಯ ಸಂಶೋಧಕರ ತಂಡದ ಅಧ್ಯಯನವೊಂದು.
ಇಲಿಗಳ ಸಂತತಿ, ರೋ ಜಿಂಕೆಗಳು, ಕಾಡು ಹಂದಿಗಳು ಮತ್ತು ತೋಳಗಳ ಸಂಖ್ಯೆಯಲ್ಲಿ ಅಪಾರ ವೃದ್ಧಿಯಾಗಿದೆಯಂತೆ. ಉಕ್ರೇನಿನ ಈ ಪ್ರದೇಶ ಈಗ ದುರಂತ ಸ್ಥಳಕ್ಕಿಂತಲೂ ಪರಿಸರ ಸಂರಕ್ಷಕ ಸ್ಥಳದಂತೆ ಕಾಣುತ್ತಿದೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ. ೩೦ ವರ್ಷದ ಹಿಂದೆ ನಡೆದ ಈ ದುರಂತ ವಿಶ್ವದ ಅತಿ ದೊಡ್ಡ ಅಣುದುರಂತ ಎಂದೇ ಬಣ್ಣಿಸಲಾಗುತ್ತದೆ.
ಈ ೧೬೨೧ ಚದರ ಮೈಲಿಯ ಚೆರ್ನೋಬಿಲ್ ನಿಷೇಧಿತ ಪ್ರದೇಶದಲ್ಲಿ ವಿಕಿರಣ ಸೋರಿಕೆಯಿಂದ ವನ್ಯಮೃಗ ಸಂತತಿ ಇಳಿಮುಖವಾಗುತ್ತಿದ್ದನ್ನು ಹಿಂದಿನ ಸಂಶೋಧನೆಗಳು ಗುರುತಿಸಿದ್ದವು. ಈಗಿನ ಸಂಶೋಧನೆ ಆಶಾವಾದವನ್ನು ನೀಡಿವೆ.
"ಇದರ ಅರ್ಥ ವಿಕಿರಣ ಸೋರಿಕೆ ವನ್ಯಜೀವಕ್ಕೆ ಒಳ್ಳೆಯದು ಎಂದಲ್ಲ. ಆದರೆ ಭೇಟೆ, ಕೃಷಿ ಮತ್ತು ಕಾಡಿನ ನಾಶ ಕಡಿಮೆಯಾಗಿರುವುದರಿಂದ ವನ್ಯ ಜೀವಿಗಲ್ಲಿ ಏರಿಕೆ ಕಂಡಿದೆ" ಎಂದು ಸಂಶೋಧಕರ ತಂಡದ ಪ್ರೊಫೆಸರ್ ಜಿಮ್ ಸ್ಮಿತ್ ಸ್ಪಷ್ಟಪಡಿಸಿದ್ದಾರೆ.
ಹತ್ತಿರದ ಸಂರಕ್ಷಕ ಅಭಯಾರಣ್ಯಕ್ಕಿಂತಲೂ ಇಲ್ಲಿ ತೋಳಗಳ ಸಂಖ್ಯೆಯಲ್ಲಿ ಏಳು ಪಟ್ಟು ಹೆಚ್ಚಳ ಕಂಡಿದೆ ಎನ್ನುತ್ತದೆ ಅಧ್ಯಯನ.
ಈ ಅಧ್ಯಯನ ಕರಂಟ್ ಬಯಾಲಜಿಯಲ್ಲಿ ಪ್ರಕಟವಾಗಿದೆ.
Advertisement