ಬಾಳೆ, ಅರಿಷಿಣ, ಹೈನುಗಾರಿಕೆ; ಹೆಚ್ಚಿಸಿತು ರೈತನ ಎದೆಗಾರಿಕೆ

ಕಬ್ಬಿಗೆ ಬೆಲೆ ಸಿಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವ ರೈತರು ನಿಜವಾಗಿ ಕೃಷಿಯನ್ನು ಅರ್ಥ ಮಾಡಿಕೊಂಡಿಲ್ಲ ಎಂದು ವಾದಿಸುವ ರೈತರೊಬ್ಬರು...
ಹನಮಂತ ಶಿರೋಳ ಬೆಳೆದ ಹುಲುಸಾದ ಅರಿಷಿಣ ಬೆಳೆಯ ದೃಶ್ಯ
ಹನಮಂತ ಶಿರೋಳ ಬೆಳೆದ ಹುಲುಸಾದ ಅರಿಷಿಣ ಬೆಳೆಯ ದೃಶ್ಯ
ಕಬ್ಬಿಗೆ ಬೆಲೆ ಸಿಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವ ರೈತರು ನಿಜವಾಗಿ ಕೃಷಿಯನ್ನು ಅರ್ಥ ಮಾಡಿಕೊಂಡಿಲ್ಲ ಎಂದು ವಾದಿಸುವ ರೈತರೊಬ್ಬರು ತಮ್ಮ ಜಮೀನಿನಲ್ಲಿ ಕೇವಲ ಕಬ್ಬು ಮಾತ್ರ ಬೆಳೆಯದೇ ಗೋವಿನ ಜೋಳ, ಅರಿಷಿಣ ಮತ್ತು ಬಾಳೆ ಬೆಳೆದು ಒಂದರಲ್ಲಾದ ನಷ್ಟವನ್ನು ಇನ್ನೊಂದರಲ್ಲಿ ಭರಿಸಿಕೊಂಡು ಸಮತೋಲನ ಕಾಯ್ದುಕೊಂಡಿದ್ದಾರೆ ಅಲ್ಲದೇ ಪೂರಕವಾಗಿ ಹೈನುಗಾರಿಕೆ ಆರಂಭಿಸಿ ನಷ್ಟವನ್ನು ಎದುರಿಸುವ ಎದೆಗಾರಿಕೆ ಹೆಚ್ಚಿಸಿಕೊಂಡು ಕಳೆದ 10 ವರ್ಷದಿಂದ ಲಾಭವನ್ನೇ ಕಂಡಿದ್ದಾರೆ.
ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ರನ್ನಬೆಳಗಲಿ ಪಟ್ಟಣದ ಅದೃಶಿ ತೋಟದ ವಸ್ತಿ ನಿವಾಸಿ ಹನಮಂತ ಶಿರೋಳ ಎಂಬ ರೈತ ತನ್ನ ಸ್ವತಂತ್ರ ಒಕ್ಕಲುತನದ 8 ವರ್ಷಗಳ ಅನುಭವವನ್ನು ಧಾರೆಯೆರೆದು ಲಾಭ, ನಷ್ಟ, ಮಾರುಕಟ್ಟೆಯ ಏರು-ಪೇರುಗಳನ್ನು ಮನಗಂಡು ತಮ್ಮ 19 ಎಕರೆ ಜಮೀನಿನಲ್ಲಿ ಸಮವಾಗಿ ಕಬ್ಬು, ಬಾಳೆ, ಅರಿಷಿಣ, ಗೋವಿನಜೋಳದಂಥ ವೈವಿಧ್ಯಮಯ ಬೆಳೆ ಬೆಳೆದು ಪೂರಕವಾಗಿ 20 ಜಾನುವಾರುಗಳ ಸಾಕಣೆ ಮಾಡಿ ಹೈನೋದ್ಯಮವನ್ನೂ ನಡೆಸುತ್ತಿದ್ದಾರೆ. 
ಕಬ್ಬಿನಿಂದ ಕಡಿಮೆ ಆದಾಯ:
ತಮ್ಮ 19 ಎಕರೆ ಪೈಕಿ 6 ಎಕರೆಯಲ್ಲಿ ಕಬ್ಬು ನಾಟಿ ಮಾಡಿ ಅಂದಾಜು 1 ಲಕ್ಷ ವೆಚ್ಚದಲ್ಲಿ 180 ಟನ್ ಕಬ್ಬು ಬೆಳೆದು ಸರಾಸರಿ 3.8 ಲಕ್ಷ ಆದಾಯ ಗಳಿಸಿದ ಇವರು ಕಬ್ಬಿನಿಂದ ಲಾಭವಿಲ್ಲ ಎಂದು ಮನಗಂಡರು. 
ಬಾಳೆಯಿಂದ ಬಾಳು ಬಂಗಾರವಾಯ್ತು: 
ಕೇವಲ ಕಬ್ಬಿಗೆ ಮಾತ್ರ ಅಂಟಿಕೊಳ್ಳದೇ 4.5 ಎಕರೆ ಹೊಲದಲ್ಲಿ ಜಿ9 ತಳಿಯ ಬಾಳೆ ಬೆಳೆದು ವರ್ಷಕ್ಕೆ 2.5 ಲಕ್ಷ ವೆಚ್ಚದಲ್ಲಿ 11 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಇದಕ್ಕೂ ಮುಂಚೆ ಬಾಳೆ ಬೆಲೆ ಉತ್ತುಂಗಕ್ಕೇರಿದಾಗ ಕೇವಲ 2 ಎಕರೆ ಬಾಳೆಯಲ್ಲಿ ವರ್ಷಕ್ಕೆ 25 ಲಕ್ಷ ಆದಾಯ ಗಳಿಸಿದ್ದರು.
ಅರಿಷಿಣದಿಂದ ಅಪ್ಪಟ ಆದಾಯ:
ಕೇವಲ ಕಬ್ಬು, ಬಾಳೆಗೆ ಸಂತೃಪ್ತರಾಗದೇ 4 ಎಕರೆಯಲ್ಲಿ ಸೇಲಂ ತಳಿಯ ಅರಿಷಿಣ ನಾಟಿ ಮಾಡಿ, ವರ್ಷಕ್ಕೆ 1.5 ಲಕ್ಷ ವೆಚ್ಚ ಮಾಡಿ ಅಂದಾಜು 10 ಕ್ಷ ಆದಾಯ ಗಳಿಸುತ್ತಿದ್ದಾರೆ. ಸರಾಸರಿಯಾಗಿ ಕಬ್ಬಿಗಿಂತ ದ್ವಿಗುಣ ಆದಾಯ ಅರಿಷಿಣದಿಂದ ಬರುತ್ತದೆ ಎಂಬುದು ಇವರ ಅನುಭವ. 
ಗೋವಿನಜೋಳದಿಂದ ಮೇವು:
ಉಳಿದ 4 ಎಕರೆ ಜಮೀನಿನಲ್ಲಿ ಗೋವಿಜೋಳ ನಾಟಿ ಮಾಡಿ, 30 ಸಾವಿರ ವೆಚ್ಚದಲ್ಲಿ ವರ್ಷಕ್ಕೆ 40 ಚೀಲ ಗೋವಿನಜೋಳ ಬೆಳೆದಿದ್ದಾರೆ. ಇದರಿಂದ ಮನೆಗೆ ಆಹಾರಧಾನ್ಯ, ಜಾನುವಾರುಗಳಿಗೆ ಪಶು ಆಹಾರ, ಹಸಿ ಮತ್ತು ಒಣ ಮೇವು ಉತ್ಪಾದನೆಯಾಗುತ್ತಿದ್ದು ಹೈನುಗಾರಿಕೆಗೆ ಪೂರಕವಾಗಿದೆ. 
ಹೈನುಗಾರಿಕೆಯಿಂದ ಬಂತು ಎದೆಗಾರಿಕೆ:
ಸ್ವಂತ ಮನೆ ಮುಂದೆ 1 ಲಕ್ಷ ವೆಚ್ಚದಲ್ಲಿ 25*35 ಚದರ ಅಡಿ ಗಾತ್ರದ ಶೇಡ್ ನಿರ್ಮಿಸಿ 15 ಎಮ್ಮೆ, 5 ಆಕಳು ಸೇರಿ 20 ಜಾನುವಾರುಗಳನ್ನು ಸಾಕಿದ್ದಾರೆ. ಪ್ರತಿ ದಿನ 50 ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಪ್ರತಿ ಲೀಟರ್‍ಗೆ ರೂ. 38 ರಂತೆ ಪ್ರತಿ ದಿನ 2 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ. ಅಲ್ಲದೇ ವರ್ಷಕ್ಕೆ 50 ಲಾರಿ ತಿಪ್ಪೆ ಗೊಬ್ಬರ ಸಂಗ್ರಹವಾಗುತ್ತದೆ. 1 ಲಾರಿ ಗೊಬ್ಬರ ಲೋಡ್ 10 ಸಾವಿರ ರೂ.ಗಳಂತೆ ಮಾರಾಟವಾಗುತ್ತಿದ್ದು, ಬರೀ ಗೊಬ್ಬರದಿಂದಲೇ ವರ್ಷಕ್ಕೆ 5 ಲಕ್ಷ ಗಳಿಸುತ್ತಿದ್ದಾರೆ. ಹಾಲು, ಗೊಬ್ಬರ ಸೇರಿ ಹೈನುಗಾರಿಕೆಯಿಂದ ವರ್ಷಕ್ಕೆ 10 ಲಕ್ಷ ಗಳಿಸುತ್ತಿದ್ದಾರೆ. ಕಬ್ಬು ಕೈ ಕೊಟ್ಟರೆ ಅರಿಷಿಣ ಕೈ ಹಿಡಿಯುತ್ತದೆ. ಅರಿಷಿಣವೂ ಕೈ ಕೊಟ್ಟರೆ ಬಾಳೆ ಬದುಕಿಸುತ್ತದೆ. ಒಂದು ವೇಳೆ ಎಲ್ಲವೂ ಕೈ ಕೊಟ್ಟರೆ ಆ ನಷ್ಟವನ್ನು ಎದುರಿಸುವ ಎದೆಗಾರಿಕೆ ಈ ಹೈನುಗಾರಿಕೆಯಿಂದ ಬರುತ್ತದೆ ಎಂಬುದು ಇವರ ಅನುಭವ. 
ಹನಿ ನೀರಾವರಿ ಮತ್ತು ಜಾನುವಾರು ಮೂತ್ರ;
ನೀರಾವರಿಗಾಗಿ 4 ಬಾವಿ ಮತ್ತು 2 ಬೋರ್‍ವೆಲ್ ಹೊಂದಿದ್ದರೂ ಕೂಡ ನೀರಿನ ಮಿತವ್ಯಯಕ್ಕಾಗಿ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕಬ್ಬು, ಬಾಳೆ, ಅರಿಷಿಣ ಮತ್ತು ಗೋವಿನ ಜೋಳಕ್ಕೆ ಸಂಪೂರ್ಣ ಹನಿ ನೀರಾವರಿ ಅಳವಡಿಸಿದ್ದಾರೆ. ಬೆಳೆಗಳಿಗೆ ತಿಪ್ಪೆ ಗೊಬ್ಬರವನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಹನಿ ನೀರಾವರಿಯ ಪೈಪ್‍ನಲ್ಲಿ ಜಾನುವಾರುಗಳ ಮೂತ್ರ ಮಿಶ್ರಣ ಮಾಡಿ ನೀರುಣಿಸುವುದರಿಂದ ಕೀಟನಾಶಕ ಬಳಸುವ ಪ್ರಮೇಯವೇ ಬಂದಿಲ್ಲ ಎನ್ನುತ್ತಾರೆ. ಹೀಗೆ ಸರಕಾರಿ ಗೊಬ್ಬರ ಕಡಿಮೆ ಬಳಸಿ ತಮ್ಮಲ್ಲೇ ಲಭ್ಯವಿರುವ ತಿಪ್ಪೆ ಗೊಬ್ಬರ ಮತ್ತು ಜಾನುವಾರುಗಳ ಮೂತ್ರ ಬಳಸಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸುವ ಜಾಣ್ಮೆ ಮತ್ತು ಬೆಳೆಗಳನ್ನು ಅದಲು ಬದಲಾಗಿ ಬೆಳೆದು ಭೂಮಿಯ ಫಲವತ್ತತೆಯನ್ನು ಕಾಯ್ದುಕೊಳ್ಳುವ ಜಾಣ್ಮೆ ಇವರದು. 
ಉತ್ಪನ್ನಗಳ ಮುಕ್ತಿಗೆ ಮಾರುಕಟ್ಟೆ ಜ್ಞಾನ
ರೈತರು ಕೇವಲ ಭರ್ಜರಿಯಾಗಿ ಬೆಳೆಯುವ ಕಲೆ ಮಾತ್ರ ಹೊಂದಿದರೆ ಸಾಲದು ತಮ್ಮ ಉತ್ಪನ್ನಗಳಿಗೆ ಮುಕ್ತಿ ನೀಡಲು ಸರಿಯಾದ ಮಾರುಕಟ್ಟೆ ಬಗ್ಗೆ ಜ್ಞಾನ ಹೊಂದಿರಬೇಕು ಎಂದು ಅಭಿಪ್ರಾಯ ಪಡುವ ಇವರು, ತಮ್ಮ ಅರಿಷಿಣ ಉತ್ಪನ್ನವನ್ನು ದೂರದ ಸಾಂಗಲಿಗೆ ಮಾರಾಟ ಮಾಡುತ್ತಾರೆ. ಬಾಳೆಯನ್ನು ತಮ್ಮ ಹೊಲಕ್ಕೇ ಬಂದು ಖರೀದಿಸುವವರಿಗೆ ಮಾರುತ್ತಾರೆ. ಕಬ್ಬು ಮತ್ತು ಗೋವಿನಜೋಳದಿಂದ ಗರಿಷ್ಠ ಪ್ರಮಾಣದ ಮೇವು ಪಡೆದುಕೊಂಡು ಕಟಾವು ಮಾಡುತ್ತಾರೆ. ಆಗ ಬೆಲ್ಲ ಮತ್ತು ಸಕ್ಕರೆ ದರದಲ್ಲಿ ಯಾವುದು ಹೆಚ್ಚೋ ಅದರ ಮೇಲಿಂದ ಕಬ್ಬನ್ನು ಸಕ್ಕರೆ ಕಾರ್ಖಾನೆಗೋ ಅಥವಾ ಆಲಿಮನೆಗೋ ಕಳಿಸುವ ನಿರ್ಧಾರ ಮಾಡುತ್ತಾರೆ. 
ಒಟ್ಟಿನಲ್ಲಿ ಕೃಷಿಯಲ್ಲಿ ಸಮನ್ವಯತೆ ಕಾಯ್ದುಕೊಂಡರೆ, ಭೂತಾಯಿ ಎಲ್ಲರಿಗೂ ಒಲಿಯುತ್ತಾಳೆ ಎಂಬುದಕ್ಕೆ ಇವರ ಜಾಣ್ಮೆಯ ಕೃಷಿಯೇ ಸಾಕ್ಷಿ. ಇವರಿಂದ ಮಾಹಿತಿ ಪಡೆಯಲು ಮೋ. 9945219098 ಸಂಖ್ಯೆಗೆ ಸಂಪರ್ಕಿಸಬಹುದು. 
ಲೇಖನ-ಎಸ್.ವ್ಹಿ.ಸಿದ್ನಾಳ
ಅಂಚೆ: ಹಂದಿಗುಂದ-591235 ತಾ.ರಾಯಬಾಗ, ಜಿ.ಬೆಳಗಾವಿ.
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com