
ಮಥುರಾ: ಮಥುರಾದ ಜವಾಹರ್ ಭಾಗ್ ನಲ್ಲಿ ಅತಿಕ್ರಮಣಕಾರರು ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಘರ್ಷಣೆ ಹಿಂಸೆಗೆ ತಿರುಗಿದ್ದರಿಂದ ಸಾವಿರಾರು ಮರಗಳು ಸುಟ್ಟು ನಾಶವಾಗಿವೆ.
ಸುಮಾರು ೫೦೦೦ ಮರಗಳು ಅವುಗಳಲ್ಲಿ ಹೆಚ್ಚಿನವು ಹಣ್ಣಿನ ಮರಗಳು ಸುಟ್ಟು ಕರುಕಲಾಗಿವೆ ಎಂದು ಉತ್ತರ ಪ್ರದೇಶ ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹಸಿರು ನಾಶಕ್ಕೆ ಕಾರಣವಾದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮಥುರಾದಲ್ಲಿ ಪರಿಸರವಾದಿಗಳು ಆಗ್ರಹಿಸಿದ್ದಾರೆ.
೨೬೦ ಎಕರೆ ತೋಟವನ್ನು ಆಕ್ರಮಿಸಿಕೊಂಡಿದ್ದ ಅತಿಕ್ರಮಣಕಾರರ ವಿರುದ್ಧ ತೋಟಗಾರಿಕಾ ಇಲಾಖೆ ಕ್ರಮ ತೆಗೆದುಕೊಳ್ಳಬೇಕಿತ್ತು ಆದರೆ ಪರಿಸರಕ್ಕೆ ಆಗುತ್ತಿರುವ ತೊಂದರೆಯ ವಿರುದ್ಧ ಉದಾಸೀನ ತಳೆದರು ಅಧಿಕಾರಿಗಳು ಎಂದು ಬ್ರಜ್ ಬಚಾವೋ ಸಮಿತಿ ಸದಸ್ಯರು ಆರೋಪಿಸಿದ್ದಾರೆ.
ಆದರೆ ಇಲಾಖೆಯ ಅಧಿಕಾರಿಗಳು ಹಲವಾರು ಬಾರಿ ಇದರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು ಮತ್ತು ಹಿರಿಯ ಜಿಲ್ಲ ಅಧಿಕಾರಿಗಳಿಗೂ ಪದೇ ಪದೇ ಸೂಚಿಸಲಾಗಿತ್ತು ಎಂದು ಅಧಿಕಾರಿಗಳು ಸ್ಪಷ್ಟೀಕರಿಸಿದ್ದಾರೆ.
ಹಲವಾರು ವರ್ಷಗಳಿಂದ ಕಷ್ಟ ಪಟ್ಟು ಬೆಳೆಸಿದ್ದ ಈ ಮರಗಳು ಇಡೀ ಜವಾಹರ್ ಭಾಗ್ ಅನ್ನು ಹಸಿರುಮಯ ಮಾಡಿದ್ದವು ಎಂದಿರುವ ಅಧಿಕಾರಿ "ಈ ನಷ್ಟ ಸರಿಪಡಿಸಲು ಕಷ್ಟ, ಮತ್ತೆ ಈ ಹಸಿರನ್ನು ಮರುಕಳಿಸಲು ವರ್ಷಗಳೇ ಬೇಕು" ಎಂದಿದ್ದಾರೆ.
Advertisement