ಕೆಲದಿನಗಳ ಹಿಂದೆ ಟಿ.ವಿ. ನೋಡುತ್ತಿದ್ದೆ. ಒಬ್ಬ ಕ್ರಿಕೆಟಿಗನ ಜಾಹೀರಾತು ಪ್ರಸಾರವಾಗುತ್ತಿತ್ತು. ಆತ ತನ್ನೆಲ್ಲ ಶಕ್ತಿಯನ್ನು ಕೇವಲ ಒಂದು ತಂಪು ಪಾನೀಯದ ಜಾಹೀರಾತಿಗಾಗಿ ವ್ಯಯಿಸುತ್ತಿದ್ದುದನ್ನು ಕಂಡು ಅಚ್ಚರಿಯೂ ಆಯಿತು. ನೀವು ಇದನ್ನು ಕಾಕತಾಳೀಯ ಎನ್ನಬಹುದು, ಇವತ್ತು ಆ ಕ್ರಿಕೆಟಿಗ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದಾನೆ. ಅವನ ವೃತ್ತಿ ಭವಿಷ್ಯ ಸಂಕಟದಲ್ಲಿ ಸಿಲುಕಿದೆ.
ಅಧಿಕಾರ ಮತ್ತು ಹೊಣೆಗಾರಿಕೆ ಒಂದಕ್ಕೊಂದು ಪೂರಕವಾಗಿ ಇರುವಂಥವು. ಹೆಚ್ಚಿನ ಅಧಿಕಾರ ಸಿಕ್ಕಿದಂತೆಲ್ಲ ನಿಮ್ಮ ಹೊಣೆಗಾರಿಯೂ ಹೆಚ್ಚುತ್ತದೆ. ಯಾರಿಗಾದರೂ ಅಧಿಕಾರವನ್ನು ನೀಡಿರುತ್ತಾರೆ ಎಂದಾದರೆ ಅದು ಅವರೊಬ್ಬರ ಒಳಿತಿಗಾಗಿ ಅಲ್ಲ, ಇಡೀ ಸಮುದಾಯದ ಒಳಿತಿಗಾಗಿ; ಸೃಷ್ಟಿಯ ಒಳಿತಿಗಾಗಿ. ಸೂರ್ಯನನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಅವನಲ್ಲಿ ಅದ್ಭುತವಾದ ಶಕ್ತಿ ಇದೆ. ಅದನ್ನು ಆತ ತನ್ನ ತಾಪ ಮತ್ತು ಬೆಳಕಿನ ಮೂಲಕ ಭೂಮಿಯರುವ ಜೀವರಾಶಿಯ ಒಳಿತಿಗಾಗಿ ಬಳಸುತ್ತಿದ್ದಾನೆ. ಅದನ್ನು ಆತ ತನ್ನ ಸ್ವಂತಕ್ಕೆ ಬಳಸಿದ್ದರೆ ಏನಾಗುತ್ತಿತ್ತು? ಒಂದೋ ಆ ತಾಪ ತಾಳಲಾರದೇ ಆಸ್ಫೋಟಿಸಿಬಿಡುತ್ತಿದ್ದ, ಅಥವಾ ಬೆಳಕನ್ನು ಬೇರೆಯವರಿಗೆ ಹಂಚಲಾಗದೆ ಕಳೆಗುಂದುತ್ತಿದ್ದ.
ಅದೇರೀತಿ, ನಿಮಗೆ ಸಿಕ್ಕಿರುವ ಅಧಿಕಾರವನ್ನೂ ಸಮಷ್ಟಿಯ ಒಳಿತಿಗಾಗಿ ಬಳಸಿಕೊಳ್ಳಬೇಕು. ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಸಮುದಾಯದ ಆರೋಗ್ಯ ಮತ್ತು ಬದುಕನ್ನು ಬಲಿಗೊಟ್ಟು ಸ್ವಂತ ಲಾಭ ಮಾಡಿಕೊಳ್ಳಲು ಹೊರಟಿರಿ ಅಂತಾದರೆ, ಆ ಅಧಿಕಾರ ಕೆಲ ಸಮಯದಲ್ಲೇ ನಿಮ್ಮಿಂದ ದೂರ ಹೋಗುತ್ತದೆ ಮತ್ತು ನಿಮಗೆ ಅಪರಿಮಿತವಾದ ನೋವು ಒಂದನ್ನು ಬಿಟ್ಟರೆ ಬೇರೇನೂ ಉಳಿಯುವುದಿಲ್ಲ. ನಿಮ್ಮ ಕರ್ಮಫಲವನ್ನು ನೀವು ಅನುಭವಿಸಬೇಕಾಗುತ್ತದೆ. ನಮ್ಮ ಹಿರಿಯರು ಕರ್ಮಫಲದ ಬಗ್ಗೆ ವಿವರವಾಗಿ ಹೇಳಿದ್ದಾರೆ. 'ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇರುತ್ತದೆ' ಎಂದೂ ನ್ಯೂಟನ್ ಹೇಳಿರುವುದೂ ಅದನ್ನೇ. ಅಂದರೆ ನೀವು ನಿಮ್ಮ ಪರಿಸರದ ಮೇಲೆ ನಕಾರಾತ್ಮಕ ಶಕ್ತಿ ಬೀರುತ್ತಿದ್ದೀರಿ ಅಂತಾದರೆ, ಅದು ಮತ್ತಷ್ಟು ರಭಸದಿಂದ ನಿಮಗೆ ಬಡಿಯುತ್ತದೆ. ಇಲ್ಲಿ ಆ ಕ್ರಿಕೆಟಿಗ ತನ್ನ ಖ್ಯಾತಿ ಎನ್ನುವ ತನ್ನ ಅಧಿಕಾರದ ಮುಖಾಂತರ ಆಹಾರದ ವಿಚಾರದಲ್ಲಿ ಜನರ ದಾರಿ ತಪ್ಪಿಸಿದ. ಅದಕ್ಕೇ ಅವನ ವೃತ್ತಿ ಬದುಕು ಈಗ ಸಂಕಷ್ಟಕ್ಕೆ ಸಿಲುಕಿದೆ.
- ಯೋಗಿ ಅಶ್ವಿನಿ
Advertisement