ಧನು ಮನ ಅರಳಿತು...

ಧನುರ್ಮಾಸದಲ್ಲಿ ಒಂದು ಪೂಜೆ ಮಾಡಿದರೂ, ಸಾವಿರಾರು ದಿನಗಳ ಕಾಲ...
ಧನುರ್ಮಾಸದ ಪೂಜೆ
ಧನುರ್ಮಾಸದ ಪೂಜೆ

ಧಾರ್ಮಿಕ ಕಾರ್ಯಕ್ಕೊಂದು ತಿಂಗಳು

ಧನುರ್ಮಾಸದಲ್ಲಿ ಒಂದು ಪೂಜೆ ಮಾಡಿದರೂ, ಸಾವಿರಾರು ದಿನಗಳ ಕಾಲ ಪೂಜೆ ಮಾಡಿದ ಪುಣ್ಯ ಲಭಿಸುತ್ತದೆ . ಇದೀಗ ಧನುರ್ ಮಾಸ ಡಿ.16ರಿಂದ ಪ್ರಾರಂಭವಾಗಿದೆ...

ಸೂರ್ಯನು ಧನುರಾಶಿಯನ್ನು ಪ್ರವೇಶಿಸುವ ದಿನದಿಂದ ಆರಂಭಿಸಿ ಮಕರ ರಾಶಿಯವರಿಗೆ ಬರುವ ಒಂದು ತಿಂಗಳ ಕಾಲವೇ ಧನುರ್ಮಾಸ. ಈ ಧನುರ್ಮಾಸಕ್ಕೆ ಚಾಪಮಾಸ, ಕೋಂದಡ ಮಾಸ, ಕಾರ್ಮುಕ ಮಾಸ ಎಂದೂ ಹೆಸರಿದೆ. ಸೂರ್ಯ ಧನು ರಾಶಿಗೆ ಪ್ರವೇಶಿಸುವ ಕಾಲವನ್ನು ಧನುರ್ ಸಂಕ್ರಮಣ ಎನ್ನುತ್ತಾರೆ. ಹಾಗಾಗಿ ಧನುರ್ಮಾಸವು ಧನುರ್ ಸಂಕ್ರಮಣ ಕಾಲದಿಂದ ಮಕರ ಸಂಕ್ರಮಣ ಕಾಲದ ಮಧ್ಯಭಾಗದಲ್ಲಿ ಬರುತ್ತದೆ.

ನಮ್ಮ ಶಾಸ್ತ್ರಗಳಲ್ಲಿ ಈ ಮಾಸವನ್ನು ದೇವತಾ ಕಾರ್ಯಗಳಿಗಷ್ಟೇ ಮೀಸಲಿರಿಸುತ್ತಾರೆ. ಸಂಪ್ರದಾಯದ ಪ್ರಕಾರ ಈ ಮಾಸದ ಬ್ರಾಹ್ಮೀ ಮೂಹೂರ್ತದಲ್ಲಿ ದೇವಾನುದೇವತೆಗಳು, ಋುಷಿಮುನಿಗಳು ಶ್ರೀಮನ್ನಾರಾಯಣನ್ನು ಪ್ರಾರ್ಥಿಸುತ್ತಾರೆ. ಹಾಗಾಗಿ ವಿಷ್ಣು ಪೂಜೆಯ ನಂತರ ದೇವರಿಗೆ ಮುಗ್ಗಲವನ್ನು ನೈವೇದ್ಯ ಮಾಡುತ್ತಾರೆ.

ಧನುರ್ಮಾಸ ವಿಶೇಷ

ಧನುರ್ಮಾಸ ಮಹಾತ್ಮೆಯನ್ನು ಪಾಂಚರಾತ್ರಾಗಮ, ಆಗ್ನೇಯ ಪುರಾಣ ಮತ್ತು ಸ್ಮೃತಿ ಮುಕ್ತಾವಳಿಗಳಲ್ಲಿ ಹೇಳಲಾಗಿದೆ. ಪಾಂಚರಾತ್ರಾಗಮದಲ್ಲಿ ಧನುರ್ಮಾಸದ ಮಹಾತ್ಮೆಯನ್ನು ನಾಲ್ಕು ಆಧ್ಯಾಯಗಳಲ್ಲಿ ಹಂಸ ಮತ್ತು ಚತುರ್ಮುಖ ಬ್ರಹ್ಮನ ನಡುವೆ ಸಂವಾದ ನಡೆಯುತ್ತಿದೆ. ಮೊದಲ ಅಧ್ಯಾಯದಲ್ಲಿ ಧನುರ್ಮಾಸದ ಮಹತ್ವವನ್ನು ಸೂತ ಮಹರ್ಷಿಗಳು ವಿವರಿಸುತ್ತಾರೆ. ಎರಡನೇ ಅಧ್ಯಾಯದಲ್ಲಿ ರಾಜ ಸತ್ಯ ಅಧ್ಯಾಯದಲ್ಲಿ ಭಕ್ತ ತನ್ನ ಶಕ್ತ್ಯಾನುಸಾರ ನಡೆದುಕೊಳ್ಳಬೇಕಾದ ರೀತಿ ನೀತಿಗಳಿವೆ.

ನಾಲ್ಕನೇ ಅಧ್ಯಾಯದಲ್ಲಿ ವಿಪ್ರರಿಗೆ ಭೋಜನ ನೀಡಿ ಸತ್ಕರಿಸುವ ಬಗ್ಗೆ ವಿವರಣೆಯಿದೆ. ಮಹಾಭಾರತದಲ್ಲಿ ತನ್ನ ಆಹಾರ ತಾನೇ ಸಿದ್ಧ ಪಡಿಸಿಕೊಳ್ಳುವ ಬ್ರಾಹ್ಮಣನಿಗೆ ಪಾಂಡವರು ಉಪಚರಿಸಿದ ಪ್ರಸಂಗವನ್ನು ನೋಡಬಹುದು.

ಧನುರ್ಮಾಸದಲ್ಲಿ ಒಂದು ಪೂಜೆ ಮಾಡಿದರೂ, ಸಾವಿರಾರು ದಿನಗಳ ಕಾಲ ಪೂಜೆ ಮಾಡಿದ ಪುಣ್ಯ ಲಭಿಸುತ್ತದೆ. ಈ ಮಾಸದಲ್ಲಿ ನಾರಾಯಣ ಸ್ಮರಣೆಯ ಜೊತೆಗೆ ಮಹಾಲಕ್ಷ್ಮಿಯ ಪ್ರೀತ್ಯರ್ಥವಾಗಿ ಶ್ರೀದೇವಿಯ ಸ್ತೋತ್ರವನ್ನೂ ಪಠಿಸಬೇಕು.

ಧನುರ್ವ್ಯತೀಪಾತಯೋಗ

ಧನುರ್ಮಾಸದಲ್ಲಿ ವ್ಯತೀಪಾತ ಯೋಗವು ಸಹಸ್ತ ಅರ್ಧೋದಯಕ್ಕೆ ಸಮಾನ. ಈ ದಿನ ಶ್ರಾದ್ಧ, ಪಿತೃ ತರ್ಪಣ ನೀಡಬೇಕು. ನೈವೇದ್ಯ ಮಾಡಿ ಭಗವಂತನಿಗೆ ಆರ್ಘ್ಯವನ್ನು ನೀಡಬೇಕು.

ಪುರಾಣಗಳಲ್ಲಿ

ದೇವತೆಗಳ ರಾಜನಾದ ಇಂದ್ರ ಅಸುರರಿಂದ ಪರಾಜಿತನಾಗಿ ರಾಜ್ಯ ಭ್ರಷ್ಟನಾಗುತ್ತಾನೆ. ಆಗ ತನ್ನ ಪತಿದೇವನ ಕಲ್ಯಾಣಕ್ಕಾಗಿ ಶಚೀದೇವಿ ಶ್ರೀಹರಿಯನ್ನು ಪೂಜಿಸುತ್ತಾಳೆ. ಅದರಿಂದ ಸಂತುಷ್ಟನಾದ ಶ್ರೀಮನ್ನಾರಾಯಣನ ಕೃಪೆಯಿಂದ ಮತ್ತೆ ಇಂದ್ರ ಪದವಿ ಗಳಿಸುತ್ತಾನೆ.

ಮತ್ತೊಂದು ಕಥೆ ಪ್ರಕಾರ ಒಮ್ಮೆ ಪಾಂಡವರು ಯಜ್ಞವನ್ನು ಮಾಡುವ ಕಾಲಕ್ಕೆ ವಿಪ್ರನೊಬ್ಬ ಅನ್ನಾರ್ಥಿಯಾಗಿ ಬರುತ್ತಾನೆ. ಸ್ವಯಂಪಾಕ ಮಾಡಿಕೊಳ್ಳುವ ದೀಕ್ಷೆ ಪಡೆದ ಬ್ರಾಹ್ಮಣನನ್ನು ಉದ್ದೇಶಿಸಿ ಧರ್ಮರಾಯ, ಇಲ್ಲಿ ನೀವೇ ಅಡುಗೆ ಮಾಡಿಕೊಳ್ಳಲು ಸ್ಥಳವಿಲ್ಲ. ಹಾಗಾಗಿ ದ್ರೌಪದಿ ಅಡುಗೆ ಮಾಡುತ್ತಾಳೆ.

ಭೀಮ ಬಡಿಸುತ್ತಾನೆ. ನಾನು ಆಫೋಷನ ಹಾಕುತ್ತೇನೆ. ನೀವು ನಿಸ್ಸಂಕೋಚವಾಗಿ ಊಟ ಮಾಡಬಹುದು ಎಂದು ಧರ್ಮರಾಯ ಬ್ರಾಹ್ಮಣನಲ್ಲಿ ನಿವೇದಿಸಿಕೊಳ್ಳುತ್ತಾನೆ. ಅಷ್ಟರಲ್ಲಿ ಭಗವಾನ್ ಕೃಷ್ಣ ಅಲ್ಲಿಗೆ ಬರುತ್ತಾನೆ.

ಕೃಷ್ಣ ಹೇಳುತ್ತಾನೆ. ಅನ್ಯಾಯವಾಗಿ ಬ್ರಾಹ್ಮಣನ ವ್ರತ ನಿಯಮ ಮುರಿಯಬೇಡ. ಅವನಿಗೆ ಅಡುಗೆ ಮಾಡಿಕೊಳ್ಳಲು ಸ್ಥಳಾವಕಾಶ ಮಾಡಿಕೊಡು ಎನ್ನುತ್ತಾನೆ. ಕೃಷ್ಣನ ಮಾತಿನಂತೆಯೇ ಬ್ರಾಹ್ಮಣನಿಗೆ ಅಡುಗೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಾನೆ. ಬ್ರಾಹ್ಮಣನ ಜೊತೆ ಉಳಿದವರೂ ಭೋಜನ ಮಾಡುತ್ತಾರೆ. ಬೇರೆಲ್ಲಾ ಎಂಜಲ ಎಲೆಗಳನ್ನು ತೆಗೆದ ಧರ್ಮರಾಯ ಬ್ರಾಹ್ಮಣನ ಎಲೆಯನ್ನು ತೆಗೆಯಲು ಮರೆಯುತ್ತಾನೆ. ಕೃಷ್ಣ ನಸುನಕ್ಕು ಅದೊಂದು ಎಲೆಯನ್ನೇಕೆ ಬಿಟ್ಟೆ ಎಂದು ವ್ಯಂಗ್ಯವಾಡುತ್ತಾನೆ.

ಕೃಷ್ಣನ ಮಾತಿನಂದ ಸಂಕೋಚಕ್ಕೆ ಈಡಾದ ಧರ್ಮರಾಯ ಎಲೆ ತೆಗೆಯಲು ಪ್ರಯತ್ನಿಸಿದಷ್ಚು ಹೊಸ ಎಲೆಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಆ ಕಾಲ ಧನುರ್ಮಾಸವಾಗಿರುತ್ತದೆ. ಹಾಗೆಂದೇ ಧನುರ್ಮಾಸದಲ್ಲಿ ದೇವರಿಗೆ ನಿವೇದನೆ ಮಾಡಿ, ಬ್ರಾಹ್ಮಣರಿಗೆ ದಾನ ಮಾಡುವ ಪದ್ಧತಿ ಜಾರಿಗೆ ಬಂದಿತ್ತೆನ್ನುತ್ತಾರೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಧರ್ಮ ಒಡೆದು ರೂಕ್ಷಗೊಳ್ಳುತ್ತದೆ. ಮುದ್ಗಾನ್ನವು ಧರ್ಮವನ್ನು ಸ್ನಿಗ್ಧಗೊಳಿಸುವ ಗುಣ ಹೊಂದಿದೆ ಮೇಲಾಗಿ ಚಳಿಗಾಲದಲ್ಲಿ ದೇಹದಲ್ಲಿನ ಕೊಬ್ಬಿನಂಶ ಕಡಿಮೆಯಾಗುವ ಕಾರಣ ಹುಗ್ಗಿಯ ಸೇವನೆಯಿಂದ ಸಮತೋಲನ ಕಾಪಾಡಿಕೊಳ್ಳಬಹುದು. ಪಾಂಚರಾತ್ರಾಗಮ ಶಾಸ್ತ್ರದಲ್ಲಿ ಮುದ್ಗಲ ನೇವೇದ್ಯವನ್ನು (ಅಕ್ಕಿ ಮತ್ತು ಹೆಸರುಬೇಳೆ) ಸಮ ಪ್ರಮಾಣದಲ್ಲಿ ಬೇಯಿಸಿ ತಯಾರಿಸಿದರೆ ಉತ್ತಮ ಫಲ ನೀಡುತ್ತದೆ ಎಂದು ಹೇಳಲಾಗಿದೆ. ಇದೀಗ ಡಿ.16ರಿಂದ ಪ್ರಾರಂಭವಾಗಿ ತಿಂಗಳ ಪರ್ಯಂತ ಇರುತ್ತದೆ.

- ಎನ್.ಲಕ್ಷ್ಮೀ ನಾರಾಯಣ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com