ಸುಖ ಸಂತೋಷಕ್ಕೆ ಸೂತ್ರಗಳು

ದಿನನಿತ್ಯ ಜೀವನದಲ್ಲಿ ಎಲ್ಲರೂ ಸಂತೋಷ ಬಯಸಿಯೇ ಇರುತ್ತೇವೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದಿನನಿತ್ಯ ಜೀವನದಲ್ಲಿ ಎಲ್ಲರೂ ಸಂತೋಷ ಬಯಸಿಯೇ ಇರುತ್ತೇವೆ. ದಿನವೂ ನಾವು ಇದರ ಬೆನ್ನು ಹತ್ತಿರುತ್ತೇವೆ. ಜಂಜಾಟ, ಗೋಳಾಟದಲ್ಲೂ ಹಂಬಲಿಸುವುದು ಅಪ್ರತಿಮ ಸಂತೋಷಕ್ಕಾಗಿ ಮತ್ತು ಸುಖಕ್ಕಾಗಿ.

ಸುಖ ಮತ್ತು ಸಂತೋಷಗಳಲ್ಲಿರುವ ವ್ಯತ್ಯಾಸವೆಂದರೆ ಸುಖ ಹೆಚ್ಚು ಹೊತ್ತು ಉಳಿಯುವಂಥದಲ್ಲ. ಸುಖ ಬರುವುದು ನಮ್ಮ ಪಂಚೇದ್ರಿಯಗಳಿಂದ. ಉದಾಹರಣೆಗೆ ಒಂದು ಸಮಯದಲ್ಲಿ ರುಚಿಕರ ವೈವಿಧ್ಯಮಯ ಭೂರಿ ಭೋಜನ ಆಸ್ವಾದಿಸುವುದು, ಗೆಳೆಯರೊಂದಿಗೆ ಐಶಾರಾಮಿ ಕಾರಿನಲ್ಲಿ ಒಂದು ಸುತ್ತು ಹಾಕಿ ಬರುವದು ಇವು ಸುಖಾನುಭವಗಳು. ಹೀಗೆ ಸುಖ ಪಡುವುದರಲ್ಲಿ ತಪ್ಪೇನೂ ಇಲ್ಲ. ಇಂಥವುಗಳಿಂದ ಬದುಕಿನಲ್ಲಿ ಒಳ್ಳೆಯ ಅನುಭವ ದೊರೆಯುತ್ತವೆ. ಆದರೆ ಇವೆಲ್ಲವೂ ಕ್ಷಣಿಕ. ಹೀಗೆ ಸುಖ ಕೇವಲ ಪಂಚೇಂದ್ರಿಗಳಿಗೆ ಆಗುವಂತಹುದು ಮತ್ತು ಬಾಹ್ಯವಾಗಿ ಬರುವಂತಹುದು. ಆದರೆ ಸಂತೋಷ ಅಂತರಂಗದಿಂದ ಬರುತ್ತದೆ.

ಸದಾ ಸಂತೋಷವಾಗಿರಲು ಕೆಲವು ಸಲಹೆ ಮನೋನಿಗ್ರಹ:
ಬಾಹ್ಯ ಒತ್ತಡಕ್ಕೆ ಒಳಗಾಗದೇ ಭಾವನೆ ಮೇಲೆ ನಿಯಂತ್ರಣ ಸಾಧಿಸಿ. ಉದ್ವೇಗಕ್ಕೆ ಒಳಗಾಗದೇ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಿ.

ಪ್ರೀತಿಸಿ:

ನೀವು ಮಾಡುತ್ತಿರುವ ಉದ್ಯೋಗ ಮತ್ತು ಜೀವನವನ್ನು ಪ್ರೀತಿಸಿ. ಯಾವುದೇ ಸಮಸ್ಯೆ ಬಂದರೂ ನಗುನಗುತ್ತಲೇ ಎದುರಿಸಿ. ಕಿರಿಕಿರಿಯನ್ನು ಅವಕಾಶಗಳಾಗಿ ಬದಲಾಯಿಸಿಕೊಳ್ಳಿ.

ಮೆಚ್ಚಿಕೊಳ್ಳಿ:
ಇತರರ ಕಾರ್ಯ ಕೌಶಲಗಳನ್ನು ಪ್ರಶಂಸಿಸಿರಿ. ಯಾವುದೇ ಕೆಲಸಗಳನ್ನು ನೂತನ ರೀತಿಯಲ್ಲಿ ಮಾಡಿದಲ್ಲಿ ಮುಕ್ತ ಕಂಠದಿಂದ ಹೊಗಳಿ. ನಿಮ್ಮ ಕಷ್ಟಕಾಲದಲ್ಲಿ ನಿಮಗಾದವರನ್ನು ಮೆಚ್ಚಿಕೊಂಡು ಕೃತಜ್ಞತೆ ಸಲ್ಲಿಸಿ. ಅವರಿಗೆ ಪ್ರತ್ಯುಪಕಾರ ಮಾಡುವ ಸಮಯ ಬಂದಾಗ ಹಿಂಜರಿಯದಿರಿ.

ಕ್ರಿಯಾಶೀಲರಾಗಿರಿ:
ನಿಮ್ಮ ಶಕ್ತಿ, ಸಾಮರ್ಥ್ಯ ತಿಳಿದುಕೊಳ್ಳಿ. ಬಲಹೀನತೆ ಒಪ್ಪಿಕೊಳ್ಳಿ. ನಿಮ್ಮಲ್ಲಿ ನ್ಯೂನತೆಗಳಿವೆ ಎಂದ ಮಾತ್ರಕ್ಕೆ ಆಲಸಿಯಾಗದೆ ನಿಮ್ಮ ಪ್ರತಿಭೆ ಗುರುತಿಸಿಕೊಂಡು ಸದಾ ಕ್ರಿಯಾಶೀಲರಾಗಿರಿ.
ನಿಮಗೆ ವಹಿಸಿದ ಕೆಲಸಗಳಲ್ಲಿ ಉತ್ಸಾಹ ತೋರಿಸಿ. ಯಶಸ್ವಿಗಾಗಿ ಪ್ರಾಮಾಣಿಕವಾದ ಪ್ರಯತ್ನದಲ್ಲಿ ತೊಡಗಿ.

ಒತ್ತಡಗಳನ್ನು ಇಲ್ಲವಾಗಿಸಿ:
ಬಾಹ್ಯ ಒತ್ತಡಗಳಿಗೆ ಹೆದರದೆ ನಿಮ್ಮ ಸ್ವಂತ ಅರ್ಹತೆ ಮೇಲೆ ನಂಬಿಕೆ ಇಡಿ. ಒತ್ತಡಗಳನ್ನು ಮೌನವಾಗಿಸಿ.

ಇವುಗಳು ಬೇಡ
ಸಿಟ್ಟು ಬಿಡಿ-ಕೋಪ ತಾಪ ಹೆಚ್ಚಿಸುವಂಥ ವ್ಯಕ್ತಿಗಳೊಂದಿಗೆ ಹೆಚ್ಚು ವ್ಯವಹರಿಸಬೇಡಿ. ಸನಿಹಕ್ಕೆ ಹೋಗಬೇಡಿ-ಧೂಮಪಾನ, ಮದ್ಯಪಾನ, ಜೂಜಾಟ, ಪರಸ್ತ್ರೀ ವ್ಯಮೋಹ ಹೊಂದಿದ ವ್ಯಕ್ತಿಗಳ ಸನಿಹಕ್ಕೂ ಸುಳಿಯಬೇಡಿ. ದೂರವಿರಿ-ಅಶ್ಲೀಲ ಚಿತ್ರಗಳಿಂದ, ಕೀಳು ದರ್ಜೆಯ ಪತ್ರಿಕೆಗಳಿಂದ , ಅತಿಯಾದ ಟಿ.ವಿ. ವೀಕ್ಷಣೆಯಿಂದ ದೂರವಿರಿ.

ಜಾಲದಲ್ಲಿ ಬೀಳಬೇಡಿ-ಹಣವನ್ನು ದುಪ್ಪಟ್ಟು ಮಾಡುತ್ತೇನೆ ಎಂದು ನಂಬಿಸುವ ಮತ್ತು ಕಡಿಮೆ ದರದಲ್ಲಿ, ಕಂತುಗಳಲ್ಲಿ ವಸ್ತುಗಳನ್ನು ತೆಗೆದುಕೊಳ್ಳು ಎನ್ನುವ ನಯವಂಚಕರ ಜಾಲದಲ್ಲಿ ಬೀಳಬೇಡಿ.

ದಿಢೀರ್ ತೀರ್ಮಾನ ಬೇಡ:
ಯಾವುದೇ ವಿಷಯದ ಬಗ್ಗೆ ಹಿಂದೆ ಮುಂದೆ ವಿಚಾರ ಮಾಡದೇ ದಿಢೀರ್ ತೀತರ್ಮಾನ ತೆಗೆದುಕೊಂಡು ಸುಖಾಸುಮ್ಮನೆ ತೊಂದರೆಗೆ ಸಿಲುಕಿ ಹಾಕಿಕೊಳ್ಳಬೇಡಿ.

'ಶಾಂತಿಗಿಂತ ದೊಡ್ಡ ಸಾಧನೆ ಇಲ್ಲ. ಕರುಣೆಗಿಂತ ದೊಡ್ಡ ಧರ್ಮವಿಲ್ಲ. ತೃಪ್ತಿಗಿಂತ ದೊಡ್ಡ ಸಂತೋಷವಿಲ್ಲ' ಎಂದು ಪ್ರಾಜ್ಞರು ಹೇಳುತ್ತಾರೆ. ತೃಪ್ತಿಯೇ ಸಂತೋಷದ ಜೀವಾಳ. ಜೀವನದ ಪಯಣದಲ್ಲಿ ನಿಮ್ಮ ಸಂತೋಷದ ದೀಪ ಯಾವಾಗಲೂ ಬೆಳಗಲಿ. ಆ ಬೆಳಕು ಬಾಳಿನ ದಾರಿಗೆ ದೀವಿಗೆಯಾಗಿ ಖುಷಿ ತರಲಿ. ಆ ಖುಷಿ ಶಾಶ್ವತವಾಗಿ ನಿಮ್ಮದಾಗಲು ಈ ಸಲಹೆ ಪಾಲಿಸಿ ಸದಾ ಸಂತಸದಿಂದಿರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com