

ಮನುಷ್ಯನಿಗೂ ಕಾಗೆಗೂ ಅವಿನಾಭಾವ ಸಂಬಂಧ. ಕಾಗೆಯನ್ನು ಪಿತೃದೇವತೆ ಎಂದೂ ಕರೆಯುತ್ತರೆ. ಹೀಗಾಗಿಯೇ ಪಿತೃಪಕ್ಷದಲ್ಲಿ ಪಿತೃತರ್ಪಣ ನೀಡುವಾಗ ಕಾಗೆ ಬೇಕೇಬೇಕು.
ಮೃತಪಟ್ಟವರ ಉತ್ತರ ಕ್ರಿಯೆಯ ದಿನ ಮಧ್ಯಾಹ್ನ ಇತರರು ಊಟ ಮಾಡುವ ಮೊದಲು ಅನ್ನವನ್ನು ಕಾಗೆಗೆ ಇಡುವ ಕ್ರಮ ಇದೆ. ಸುತ್ತಮುತ್ತಲೂ ಬಹಳ ಸಂಖ್ಯೆಯಲ್ಲಿ ಕಾಗೆಗಳು ಇದ್ದರೂ ಕೆಲವರ ಉತ್ತರಕ್ರಿಯೆಯಲ್ಲಿ ಅನ್ನವನ್ನು ತಿನ್ನುವುದಕ್ಕೆ ಕಾಗೆಗಳು ಬರುವುದೇ ಇಲ್ಲ.
ಇದಕ್ಕೆ ಸರಿಯಾದ ಕಾರಣವನ್ನು ಯಾರೂ ಹುಡುಕಲು ಹೋಗಲೇ ಇಲ್ಲ. ಮನುಷ್ಯ ಸತ್ತ ನಂತರ ಕಾಗೆಯಾಗಿ ಮರು ಜನ್ಮ ಪಡೆದು ಬರುತ್ತಾನೆ ಎಂದು ಹೇಳುತ್ತಾರೆ. ಇದರಿಂದ ಕಾಗೆಗಳಿಗೆ ಆಹಾರ ಕೊಟ್ಟು ತಮ್ಮ ಪೂರ್ವಿಕರ ತೃಪ್ತಿಗಾಗಿ ಊಟ ಹಾಕುವುದು ಹಿಂದೂಗಳ ನಂಬಿಕೆ.
ಕಾಗೆ ಮನೆಯ ಎದುರು ಬಂದು ಕೂಗುವ ಧ್ವನಿಯಿಂದ ನೆಂಟರು ಬರುವ ಸೂಚನೆ ಎಂದು ನಂಬಿಕೆ. ಕಾಗೆಗಳ ಬೇರೆ ಬೇರೆ ಚೇಷ್ಟೆಯಿಂದ ಬೇರೆ ಬೇರೆ ಘಟನೆ ನಡೆಯುವ ನಂಬಿಕೆಯನ್ನು ಇಂದಿಗೂ ಇಟ್ಟುಕೊಂಡಿದ್ದಾರೆ. ಕೆಲವರು ಪ್ರಯಾಣ ಮಾಡುವ ಸಂದರ್ಭದಲ್ಲಿ ಕಾಗೆಯ ಶಕುನ ನೋಡುತ್ತಾರೆ. ಕಾಗೆ ಎಡಭಾಗದಲ್ಲಿ ಕೂಗುತ್ತಾ ಹಿಂದಿನಿಂದ ಬರುತ್ತಿದ್ದರೆ ಇದರಿಂದ ಲಾಭ ಇದೆ ಎಂದು ತಿಳಿಯುತ್ತಾರೆ.
ಎಡ ಭಾಗದಲ್ಲಿ ಕೂಗಿ ಎದುರಾಗಿ ಬರುತ್ತಿದ್ದರೆ ಏನಾದರೂ ತೊಂದರೆ ಇದೆ ಎಂದು ತಿಳಿಯುತ್ತಾರೆ. ಕೂಗಿಕೊಂಡು ಎದುರಿಗೆ ಬಂದರೆ ಕೈಗೊಂಡ ಕೆಲಸ ಕಾರ್ಯಗತವಾಗುವುದಿಲ್ಲ. ಕಾಗೆ ಮನೆಯ ಒಳಗೆ ಬರಬಾರದು. ನೆತ್ತಿಗೆ ಕುಕ್ಕಬಾರದು. ಕಾಗೆಗಳ ಮೈಥುನ ನೋಡಬಾರದು.
ಮನೆಯ ಮೇಲೆ ಕಾಗೆಗಳು ಗುಂಪಾಗಿ ಇದ್ದು ಕೂಗಬಾರದು. ಕಾಗೆಗಳು ಮನುಷ್ಯರ ಶರೀರದ ಮೇಲೆ ಮಲ ವಿಸರ್ಜನೆ ಮಾಡಬಾರದು. ಇದರಿಂದ ಏನಾದರೂ ತೊಂದರೆ ಇದೆ ಎಂದು ತಿಳಿಯಲಾಗುತ್ತದೆ.
ಕಾಗೆ ತಿನಿಸನ್ನು ಬಾಯಿಯಲ್ಲಿ ಕಚ್ಚಿಕೊಂಡು ಎಡಭಾಗದಿಂದ ಬಲ ಭಾಗಕ್ಕೆ ಹೋದರೆ ಕಾರ್ಯ ಸಫಲವಾಗುತ್ತದೆ. ಕಾಗೆ ಇನ್ನೊಂದು ಕಾಗೆಗೆ ತಿನಿಸು ಕೊಡುವುದನ್ನು ನೋಡಿದರೆ ಒಳ್ಳೆಯದು. ಕಾಗೆಗಳು ಕೊಕ್ಕಿನಿಂದ ಅಥವಾ ರೆಕ್ಕೆಯಿಂದ ಮನುಷ್ಯನ ಮೇಲೆ ದಾಳಿ ಮಾಡಿದರೆ ಶತ್ರುಗಳು ಜಾಸ್ತಿಯಾಗುತ್ತಾರೆ. ಕಾಗೆಗಳು ನೀರಿನಲ್ಲಿ ಸ್ನಾನ ಮಾಡುವುದನ್ನು ಕಂಡರೆ ಮುಂದೆ ಮಳೆ ಬರುವ ಸೂಚನೆ.
= ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್
Advertisement