

ಬದುಕು ಹಲವು ಮುಖಗಳನ್ನು ಹೊಂದಿದ ಕ್ರಿಯೆ. ಜೈವಿಕ ಜಗತ್ತಿನ ವ್ಯಾಪಾರ, ಹುಟ್ಟು ಮತ್ತು ಸಾವು ಇವುಗಳ ನಡುವೆ ಜೀವಿಗಳ ಅಭಿವೃದ್ಧಿ ಮತ್ತು ಹೋರಾಟದ ಪ್ರಕ್ರಿಯೆ. ಬದುಕು ಅಂದರೆ ಒಂದು ಸಮುದ್ರವಿದ್ದಂತೆ. ಈಜುವುದು ಕಷ್ಟ, ಈಜಿ ದಡ ಸೇರಿದರೆ ಸಾರ್ಥಕ ಈ ಜನ್ಮ.
ಇಲ್ಲಿ ಜೀವಿಸುವುದು ಮುಖ್ಯವಲ್ಲ. ಯಾವ ರೀತಿ ಜೀವಿಸುತ್ತೇವೆ ಎನ್ನುವುದೇ ಮುಖ್ಯ. ನಮಗಾಗಿ ನಾವು ಬದುಕುವುದಕ್ಕಿಂತ ಬೇರೆಯವರಿಗಾಗಿ ಬದುಕುವುದು, ನಮ್ಮ ನೋವನ್ನು ಮರೆತು, ಆ ನೋವಿನೊಳಗೇ ಬೇರೆಯವರಿಗೆ ಸಂತಸ ನೀಡುವುದು, ಹಸಿದವರಿಗೆ ಊಟ ನೀಡುವುದು, ದುಃಖ ಒತ್ತರಿಸಿ ಬರುತ್ತಿದ್ದರೂ, ತೋರಿಸಿಕೊಳ್ಳದೇ ಬೇರೆಯವರ ಜೊತೆ ಸಂತೋಷವಾಗಿ ಜೀವಿಸುವುದು, ಸಮಾಜದಲ್ಲಿನ ಕಷ್ಟ ಸುಖಗಳಲ್ಲಿ ಭಾಗಿಯಾಗುವುದು, ಬಡವರು, ವೃದ್ಧರಿಗೆ ನೆರವಾಗುವುದು, ಹಿರಿಯರನ್ನು ಗೌರವಿಸಿ, ಪ್ರೀತಿಸುವುದು ಜೀವನ. ಅದೇ ನಿಜವಾದ ಬದುಕು.
ಕಷ್ಟಸುಖದ ಕಡಲುಬದುಕು ಕಷ್ಟಸುಖ ಬೆರೆತ ನೂರು ನದಿಗಳ ಕಡಲು. ಪ್ರತಿಕ್ಷಣ ಅದನ್ನು ಸುಖಮಯವಾಗಿಸುವ ಮಂತ್ರದಂಡ ನಮ್ಮ ಕೈಯಲ್ಲೇ ಇದೆ. ಅದಕ್ಕಾಗಿ ಕಾಣದ ಮನಸ್ಸನ್ನು ಹದಗೊಳಿಸಿದರೆ ಸಮಸ್ತ ಸೃಷ್ಟಿಯನ್ನೇ ಅನುಭವಿಸುವ, ಆನಂದಿಸುವ ಗುಣಾತ್ಮಕ ಭಾವ ನಮ್ಮಲ್ಲಿ ಉದಯಿಸುತ್ತದೆ. ನಮ್ಮ ಬಾಳಿನ ಹೊದಿಕೆ ಸುಖ ದುಃಖದ ದಾರಗಳಿಂದ ನೇಯ್ದಿರುತ್ತದೆ. ಈ ಕ್ಷಣ ಸುಂದರಗೊಳಿಸಿದರೆ ಮುಂದಿನ ಕ್ಷಣವೂ ಸುಂದರವಾಗುತ್ತದೆ. ಅದರ ಮುಂದಿನ ಕ್ಷಣಗಳೂ ಸುಂದರವಾಗುತ್ತವೆ. ಹೀಗೆ ನಮ್ಮ ಬದುಕೇ ಸುಂದರವಾಗುತ್ತದೆ, ಸುಖಮಯವಾಗುತ್ತದೆ.
ಕತ್ತಲು- ಬೆಳಕು ಎಂಬ ಜೋಡಿ ಎತ್ತುಗಳು ಜಗತ್ತಿನ ಬಂಡಿಯನ್ನು ಜೀಕಿದಂತೆ ಕಷ್ಟ ಮತ್ತು ಸುಖ ನಮ್ಮ ಬದುಕನ್ನು ಹಸನುಗೊಳಿಸುತ್ತದೆ. ಸಿರಿವಂತರಿರಲಿ, ಬಡವರಿರಲಿ ಸುಖ, ದುಃಖ ಎರಡನ್ನೂ ಅನುಭವಿಸಲೇಬೇಕು. ಕೆಲವೊಮ್ಮೆ ಸಿರಿವಂತರಾದವರೂ ದುಃಖಿಗಳಾಗಿರಬಹುದು. ಬಡವರಾದರೂ ಸುಖಿಗಳಾಗಿರಬಹುದು. ಒಟ್ಟಿನಲ್ಲಿ ಸುಖ, ದುಃಖಗಳ ಅನುಭವ ಬಂಧ ಯಾರನ್ನೂ ಬಿಟ್ಟಿಲ್ಲ.
ಇಂಥ ಬದುಕಿನಲಿ ನಾವು ಮಾಡಬೇಕಾದ ಸಾಧನೆ ಎಂದರೆ ದುಃಖದ ಅಂಶವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಮತ್ತು ಸುಖದ ಅಂಶವನ್ನು ಹೆಚ್ಚಿಸುವುದು. ಬದುಕು ಸುಂದರ ಉದ್ಯಾನ. ಇಲ್ಲಿನ ಮನದಂಗಳದ ವಾತ್ಸಲ್ಯ, ಕಾರುಣ್ಯ, ಪ್ರೀತಿ, ದಯೆ, ಸಮಾಧಾನ, ಶಾಂತಿ, ಮುಂತಾದ ಗಿಡಗಳಿಗೆ ನಾವೇ ನೀರು, ಗೊಬ್ಬರ ಹಾಕಿ ಪೋಷಿಸಬೇಕು. ಮನೆ ಸುಂದರವಾಗಿದ್ದರೆ ಸಾಲದು, ಕಾಣದ ಮನಸ್ಸು, ಮಾಡುವ ಯೋಚನೆಗಳೂ ವಿಶಾಲವಾಗಿರಬೇಕು.
ಜೀವನ ಗಡಿಯಾರದ ಮುಳ್ಳುಗಳಿದ್ದಂತೆ ಏರುಪೇರು ಸರ್ವೇ ಸಾಮಾನ್ಯ. ಇಲ್ಲಿ ಮೇಲುಕೀಳು ಎನ್ನುವ ಹಂಗಿಲ್ಲದೆ ಎಲ್ಲರೂ ಒಂದೇ. ಇಂದು ಮೇಲಿದ್ದವ ನಾಳೆ ಕೆಳಗಿಳಿಯಲೇಬೇಕು ಮತ್ತೆ ಕೆಲವು ಸಮಯದ ನಂತರ ಒಂದೊಂದೇ ಮೆಟ್ಟಿಲು ಹತ್ತುತಾ ಮೇಲೆ ತಲುಪಲೇ ಬೇಕು. ದೇವರು ಸೃಷ್ಟಿಸಿದ ಈ ಜಗತ್ತಿನಲ್ಲಿ ಹೊಂದಾಣಿಕೆಯೇ ಮೇಲು. ಇಲ್ಲದಿದ್ದರೆ ಬದುಕಿನ ಬಂಡಿ ಕಾಲು ಮುರಿದುಕೊಂಡು ನಿಂತುಬಿಡುತ್ತದೆ.
ಹಣವಿದ್ದರೆ ಫಲವಿಲ್ಲ. ಗುಣವಿದ್ದರೆ ಮಾತ್ರ ಪಡೆದ ಜನ್ಮ ಸಾರ್ಥಕ. ಒಪ್ಪೊತ್ತಿಗೆ ಕಷ್ಟ ಪಡುವ ಕೂಲಿಯವನಾದರೂ ಪ್ರೀತಿಯ ಪ್ರಕಾಶದಿಂದ ಬೆಳಗುವ ಜ್ಞಾನ ಹೊಂದಿದ್ದರೆ ಸಾಕು. ಜೀವನ ಸಂಜೀವನ. ಆದ್ದರಿಂದ ಹಣದೊಂದಿಗೆ ಅಂಟಿಕೊಂಡು ಬರುವ ಅಹಂ, ದುರಹಂಕಾರಗಳನ್ನು ನಮಗೆ ತಾಕದಂತೆ ಓಡಿಸಬೇಕು ಅಷ್ಟೇ. ನಾವು ಯಾವತ್ತೂ ಅಂತರಂಗದ ಸಿರಿವಂತಿಕೆಯನ್ನು ಗಳಿಸುವತ್ತ ದುಡಿಯಬೇಕು. ಬಹಿರಂಗದ ಸಿರಿವಂತಿಕೆ, ಸಂಪತ್ತು, ಗೆಲುವು ಮುಂತಾದುವುಗಳಿಂದ ನೆಮ್ಮದಿ ಸಂತೋಷ ಸಾಧ್ಯವಿಲ್ಲ. ವಿಶಾಲ ಮನಸ್ಥಿತಿಯನ್ನು ಹೊಂದಿದ ಬದುಕು ನಿಜಕ್ಕೂ ಸುಂದರ ಕಾವ್ಯಧಾರೆ.
- ಜಮುನಾ ರಾಣಿ ಎಚ್.ಎಸ್.
Advertisement