

ಅಷ್ಟಾದಶ ಪುರಾಣಗಳಲ್ಲಿ ಅಗ್ನಿ ಪುರಾಣವೂ ಒಂದು. ಇದರ ಕರ್ತೃ ಮಹಾಮಹಿಮರಾದ ವೇದವ್ಯಾಸರು. ಪಂಚಭೂತಗಳಿಂದ ನಿರ್ಮಾಣವಾಗಿರುವುದು ಪ್ರಪಂಚ ಆ ಪಂಚಭೂತಗಳಲ್ಲಿ ಅಗ್ನಿಯೂ ಒಂದು ಪ್ರಮುಖವಾದ ಧಾತು. ಅಗ್ನಿ ಎಂದರೆ ತೇಜಸ್ಸು. ಹಿಂದೂಗಳಿಗೆ ಬೆಂಕಿಯಲ್ಲಿ ಅಗ್ನಿದೇವನನ್ನು ಗುರುತಿಸಿ ಪೂಜಿಸುವ ಕ್ರಮ ಅನಾದಿಕಾಲದ್ದು. ಇದು ಅತಿ ವಿಶಿಷ್ಟವಾದ ಪುರಾಣ. ಅಗ್ನಿ ಪುರಾಣದಲ್ಲಿ ಬ್ರಹ್ಮಾಂಡದ ಸಕಲ ಲೌಕಿಕ, ಅಲೌಕಿಕ ವಿಷಯಗಳ ಅದ್ಭುತ ವರ್ಣನೆ ಇದೆ.
ಇದು 383 ಅಧ್ಯಾಯಗಳ ಬೃಹತ್ ಗ್ರಂಥ. ಪ್ರಥಮದ 16 ಅಧ್ಯಾಯಗಳಲ್ಲಿ ಮಹಾವಿಷ್ಣುವಿನ ದಶಾವತಾರಗಳ ವರ್ಣನೆ ಅನನ್ಯಾದೃಶವಾಗಿ ವರ್ಣಿತವಾಗಿದೆ. 72 ರಿಂದ 105 ಅಧ್ಯಾಯಗಳವರೆಗೆ ಶ್ರೀ ಗಣೇಶನ ವರ್ಣನೆ, ಲಿಂಗರೂಪಿ ಶಿವನ ವರ್ಣನೆಗಳು ಹಾಗೂ ಪೂಜಾ ವಿಧಾನಗಳನ್ನು ವಿಶದವಾಗಿ ತಿಳಿಸಲಾಗಿದೆ.
'ಭುವನಕೋಶ'ಎಂಬ ಅಧ್ಯಾಯದಲ್ಲಿ ಬ್ರಹ್ಮಾಂಡದ ರಚನೆ, ಇದರಲ್ಲಿರುವ ಚೇತನ, ಅಚೇತನ ವಸ್ತುಗಳ ವಿವರಣೆ, ಜೀವಿತ ಹಾಗೂ ಜಡವಸ್ತುಗಳ ವಿವರಣೆ ಹಾಗೂ ವಿಶ್ವದ ಕಾರ್ಯನಿರ್ವಹಣೆಯಲ್ಲಿ ಪ್ರತಿಯೊಂದು ಅಣುರೇಣು ವಸ್ತುಧಾತುಗಳ ಪಾತ್ರ ಏನು ಎಂಬುದರ ವಿವರಣೆ ಇದೆ.
ಅಗ್ನಿಪುರಾಣದಲ್ಲಿ ಭವನ ನಿರ್ಮಾಣ ಬಗ್ಗೆ ವಿಶದವಾಗಿ ಹೇಳಲಾಗಿದೆ. ಇದರಲ್ಲಿ ಪ್ರಮುಖವಾಗಿ ದೇವಾಲಯಗಳ ನಿರ್ಮಾಣ ಹಾಗೂ ಅದರ ಮೂರು ವಿಶಿಷ್ಟ ಪ್ರಾಕಾರಗಳಾದ ದೇವಕಾಯತನ ಪ್ರಸಾದ ವಿಮಾನ ಮತ್ತು ತೀರ್ಥ ಎಂಬ ವಿಭಾಗಗಳು ಹೇಗಿರಬೇಕು, ಅದನ್ನು ಕಟ್ಟುವ ವಿಧಾನಗಳ ವಿವರಣೆ ಇದೆ. ಸಮಸ್ತ ಬ್ರಹ್ಮಾಂಡದ ಸೃಷ್ಟಿಕರ್ತನು ಮಾನವ ಕಲ್ಯಾಣಕ್ಕಾಗಿ ಭೂಲೋಕಕ್ಕೆ ಬಂದಿದ್ದಾನೆಂದು ನಂಬಿ, ಆತನಿಗಾಗಿ ನಿರ್ಮಿಸುವ ಸ್ಥಳ ಹೇಗಿರಬೇಕು ಎಂಬ ವಿವರಣೆ ಇದೆ. ದೇವಸ್ಥಾನಗಳ ಜೀರ್ಣೋದ್ಧಾರದ ಕ್ರಮವನ್ನು ತಿಳಿಸಲಾಗಿದೆ. ಪುರನಿರ್ಮಾಣ ಹಾಗೂ ವಾಸ್ತುಶಾಸ್ತ್ರ ಸಂಬಂಧಿಸಿದ ಸಕಲ ವಿಚಾರಗಳೂ ಅಗ್ನಿಪುರಾಣದಲ್ಲಿದೆ.
ಜ್ಯೋತಿಶ್ಯಾಸ್ತ್ರಕ್ಕೆ ಸಂಬಂಧಪಟ್ಟ ಅನೇಕಾನೇಕ ವಿಚಾರಗಳು, ಮಾಹಿತಿಗಳು ಈ ಪುರಾಣದಲ್ಲಿದೆ. ಪ್ರಭವಾದಿ ಅರವತ್ತು ಸಂವತ್ಸರಗಳ ಫಲವನ್ನು ತಿಳಿಯುವ ಗಣಿತ ಕ್ರಮ, ತಾರಾಬಲ, ಚಂದ್ರಬಲ, ಆನಂದಾದಿಯೋಗಗಳನ್ನು ನೋಡುವ ಕ್ರಮ, ದುಷ್ಟಯೋಗಗಳಿಗೆ ಪರಿಹಾರಗಳು ಮತ್ತು ಮಾನವರು ಪ್ರತಿದಿನ ಆಚರಿಸಬೇಕಾದ ಕರ್ಮಗಳ ಆಚರಣೆಗಳ ವಿವರಣೆ ಇದೆ. ಒಂದು ಅಧ್ಯಾಯ ಪೂರ್ತ ಗ್ರಹಣ ಕಾಲದಲ್ಲಿ ಆಚರಿಸಬೇಕಾದ ಸಮಸ್ತ ಕರ್ಮಗಳ ವಿವರಣೆ ಇದೆ.
ಅಗ್ನಿಪುರಾಣದಲ್ಲಿ ವಿವರಿಸಲ್ಪಟ್ಟಿರುವ ನಮ್ಮ ಶರೀರದಲ್ಲಿ ಸುಪ್ತರೂಪದಲ್ಲಿ ಉಪಸ್ಥಿತಿ ಇರುವ ಸಪ್ತ ಕುಂಡಲಿನಿ ಚಕ್ರಗಳ ವಿವರಣೆಯನ್ನು ಓದಿದಾಗ ಅದ್ಭುತವಾದ ಅನುಭವವಾಗುತ್ತದೆ. ಅವು ಯಾವುವೆಂದರೆ:-
1. ಮೂಲಾಧಾರ: (ಎಡ್ರಿನಲ್ ಗ್ರಂಥಿ) ಇದು ಬೆನ್ನು ಮೂಳೆಯ ಕೊನೆಯಲ್ಲಿ ಗುದದ್ವಾರದ ಹತ್ತಿರ ಇರುತ್ತದೆ. ಈ ಕುಂಡಲಿನಿಯು ನಮ್ಮ ಭೌತಿಕ ಜೀವಶಕ್ತಿಯ ಕೇಂದ್ರ ಸ್ಥಾನ. ಇದು ಭೌತಿಕ ಶರೀರವನ್ನು ಸಚೇತವಾಗಿ ಇಡುತ್ತದೆ. ಇದನ್ನು ಲಂ ಎಂಬ ಬೀಜಾಕ್ಷರದಿಂದ ಗುರುತಿಸಲಾಗಿದೆ.
2. ಸ್ವಾಧಿಷ್ಠಾನ ಚಕ್ರ: (ಗೊನಾಡ್ಸ್) ಇದು ಪಂಚಭೂತಗಳಲ್ಲಿ ಜಲವನ್ನು ಪ್ರತಿನಿಧಿಸುತ್ತದೆ ಹಾಗೂ ಮಾನವನ ಲೈಂಗಿಕ ಅವಯವಗಳನ್ನು ನಿಯಂತ್ರಿಸುತ್ತದೆ. ಇದನ್ನು ಬಂ ಎಂಬ ಬೀಜಾಕ್ಷರದಿಂದ ಗುರುತಿಸಲಾಗಿದೆ.
3. ಮಣಿಪೂರಕ ಚಕ್ರ: (ಕ್ಲೋಮ) ಪಂಚಭೂತಗಳಲ್ಲಿ ಇದು ಅಗ್ನಿ. ಇದು ನಾಭಿಯಿಂದ ಸ್ವಲ್ಪ ಮೇಲಿರುತ್ತದೆ. ಹಾಗೂ ದೇಹದ ಭೌತಿಕ ಶಕ್ತಿ ಹಾಗೂ ಉದ್ವೇಗಗಳು ಇದರ ನಿಯಂತ್ರಣದಲ್ಲಿರುತ್ತದೆ. ಇದು ರಂ ಎಂಬ ಬೀಜಾಕ್ಷರದಿಂದ ಸೂಚಿಸಲ್ಪಡುತ್ತದೆ.
4. ಅನಾಹತ ಚಕ್ರ: (ಥೈಮಸ್) ಇದು ಪಂಚಭೂತಗಳಲ್ಲಿ ವಾಯುವನ್ನು ಸೂಚಿಸುತ್ತದೆ. ಈ ಚಕ್ರ ವಕ್ಷ ಸ್ಥಳದಲ್ಲಿ ಸ್ಥಾಪಿತವಿದ್ದು, ಪ್ರೀತಿ, ಪ್ರೇಮ, ಮಮತೆ, ದೈವಭಕ್ತಿ, ಆತ್ಮೋನ್ನತಿ, ನಿರ್ಮಲವಾದ ಮನಸ್ಸು ಇವುಗಳಿಗೆ ಕೇಂದ್ರ ಸ್ಥಾನ. ಶ್ವಾಸಕೋಶ, ಹೃದಯ ಶಕ್ತಿಚಲನೆ ಇದರ ಅಧಿನದಲ್ಲಿದೆ. ಇದು ಹಂ ಬೀಜಾಕ್ಷರವನ್ನು ಸೂಚಿಸುತ್ತದೆ.
5. ವಿರುದ್ಧ ಚಕ್ರ: (ಥೈರಾಯಿಡ್ ಗ್ರಂಥಿ) ಇದು ಪಂಚಭೂತಗಳಲ್ಲಿ ಆಕಾಶ. ಇದು ಶ್ವಾಸನಾಳ, ಸ್ವರಪೆಟ್ಟಿಗೆಯಲ್ಲಿ ಸ್ಥಾಪಿತವಾಗಿದ್ದು, ಮಾನವನ ವ್ಯಕ್ತಿತ್ವವನ್ನು ನಿಯಂತ್ರಿಸುತ್ತದೆ. ಗಂ ಎಂಬುದು ಇದರ ಬೀಜಾಕ್ಷರ.
6. ಆಜ್ಞಾಚಕ್ರ: (ಪಿಟ್ಯುಟರಿ ಗ್ರಂಥಿ) ಇದು ಕೂಡ ಆಕಾಶ ತತ್ವವನ್ನು ಪ್ರತಿನಿಧಿಸುತ್ತದೆ. ಇದು ಎರಡು ಹುಬ್ಬುಗಳ ಮಧ್ಯೆ ಸ್ಥಾಪಿತವಿದ್ದು, ಇದನ್ನು 'ಭ್ರೂಮಧ್ಯ' ಅಥವಾ 'ಬ್ರಹ್ಮಸ್ಥಾನ'ವೆಂದು ಕರೆಯಲಾಗಿದೆ. ಇದು ಆತ್ಮದ ಪೀಠಸ್ಥಾನ ಹಾಗೂ ಅತೀಂದ್ರಿಯ ಜ್ಞಾನ ಪ್ರಾಪ್ತಿಯಾಗುವುದು ಇದರಿಂದಲೇ ಇದು ಘ್ರಾಣಶಕ್ತಿ ಹಾಗೂ ಶ್ರವಣಶಕ್ತಿಯನ್ನು ನಿಯಂತ್ರಿಸುತ್ತದೆ. ಇದರ ಬೀಜಾಕ್ಷರ ಔಂ.
7. ಸಹಸ್ರಾರ ಚಕ್ರ: (ಪೀನಿಯಲ್ ಗ್ರಂಥಿ) ಇದು ಆಕಾಶತತ್ವವನ್ನು ಪ್ರತಿನಿಧಿಸುತ್ತದೆ ಹಾಗೂ ಮೆದುಳಿನ ಊರ್ಧ್ವಭಾಗದಲ್ಲಿದೆ. ಇದು ಮನುಷ್ಯನಿಗೆ ಜ್ಞಾನವನ್ನು ಪ್ರಸರಣ ಮಾಡುವ ಮುಖ್ಯ ಚಕ್ರ. ಪ್ರಾಪಂಚಿಕ ಭೋಗ, ಪಾಶ್ಚಮಾರ್ಥಿಕ ಬಯಕೆ ಎರಡನ್ನೂ ಐಕ್ಯಗೊಳಿಸುವ ಶಕ್ತಿ ಇದರಿಂದಲೇ ಉಂಟಾಗುವುದು. ಇದನ್ನು ಓಂ ಎಂಬ ಬೀಜಾಕ್ಷರದಿಂದ ಗುರುತಿಸಲಾಗಿದೆ.
ಈ ಏಳು ಚಕ್ರಗಳೇ ಅಲ್ಲದೆ ಇನ್ನೂ 21 ಉಪ ಚಕ್ರಗಳು ಇವೆ ಎಂದು ಈ ಪುರಾಣದಿಂದ ತಿಳಿದು ಬರುತ್ತದೆ.
ಅಗ್ನಿ ಪುರಾಣದಲ್ಲಿ ಪ್ರಾಣಾಯಾಮದ ಕ್ರಮಗಳಾದ ಪೂರಕ ಕುಂಭಕು ಮತ್ತು ರೇಚಕಗಳ ಸಂಪೂರ್ಣ ವಿಧಾನಗಳ ವಿವರಣೆ ಇದೆ. ನಾವು ಉಸಿರನ್ನು ತೆಗೆದುಕೊಳ್ಳುವಾಗ ಸೋ ಎಂಬ ಶಬ್ಧ ಬರುತ್ತದೆ, ಬಿಡುವಾಗ ಹಂ ಎಂಬ ಶಬ್ಧ ಬರುತ್ತದೆ. ಸೋಹ ಎಂದರೆ ಆ ಪರಮಾತ್ಮನೇ ನಾನು ಎಂಬ ಅರ್ಥ ಬರುತ್ತದೆ. ಇಂತಹ ಅಸಂಖ್ಯಾತ ಗುಪ್ತ ವಿಚಾರಗಳ ಭಂಡಾರ ಅಗ್ನಿ ಪುರಾಣ.
ನಮ್ಮ ಶರೀರದಲ್ಲಿ 72000 ನಾಡಿಗಳಿದ್ದು ಅವನ್ನು ಪಂಚಪ್ರಾಣಗಳಾದ ಪ್ರಾಣ, ಅಪಾನ, ಸಮಾನ, ವ್ಯಾನ ಉದಾನ ಹಾಗೂ ಉಪಪ್ರಾಣಗಳಾದ ನಾಗ, ಕೂರ್ಮ, ಕೃಕರ ದೇವದತ್ತ, ಧನಂಜಯಗಳೆಂಬ ಉಪಪ್ರಾಣಗಳು ಈ ಶರೀರದ ಸಮಸ್ತ ವ್ಯಾಪಾರವನ್ನು ನಿಯಂತ್ರಿಸುತ್ತಿವೆ ಎಂಬ ಅದ್ಭುತ ಜ್ಞಾನವನ್ನು ನೀಡುತ್ತದೆ ಅಗ್ನಿ ಪುರಾಣ.
254ನೇ ಅಧ್ಯಾಯದಲ್ಲಿ ರಾಜನೀತಿ, ನ್ಯಾಯ, ಆಪದ್ಧರ್ಮ, ನೀತಿಗಳ ವಿಸ್ತ್ರತ ವಿವರಣೆ ಇದೆ. ವೈದ್ಯಕೀಯ ಶಾಸ್ತ್ರ, ಚಿಕಿತ್ಸಾ ಕ್ರಮ, ವೈದ್ಯೋಪಚಾರಗಳ ವಿವರಣೆ ಇದೆ.
ಅಂತ್ಯದಲ್ಲಿ ಮಾನವ ಧರ್ಮಪಥದಲ್ಲಿ ಸಾಗುವುದರ ಫಲ ವಿರೂಪಣೆ ಇದೆ. ಅಗ್ನಿಪುರಾಣದಲ್ಲಿ ಇದನ್ನೆಲ್ಲಾ ಓದಿದಾಗ ಮೂಕವಿಸ್ಮಿತರಾಗುವುದು ಸಹಜವೇ.
-ವಿ. ಕೇಶವಮೂರ್ತಿ