ಜ್ಯೋತಿಷ್ಯಕ್ಕಿದು ಪಂಚಾಗ

ಜ್ಯೋತಿಷ್ಯಕ್ಕಿದು ಪಂಚಾಗ
Updated on: 

ಜ್ಯೋತಿಷ್ಯ ಶೂನ್ಯವೆಂದಾಗಲೀ, ಕಣಿ ಎಂದಾಗಲೀ ಮಾಟವೆಂದಾಗಲೀ, ಕೈ ಚಳಕವೆಂದಾಗಲೀ, ಭ್ರಮಿಸುವುದಲ್ಲ. ಇದಕ್ಕೆ ಅದರದೇ ಆದ ಮಹತ್ವವಿದೆ. ಇದು ವೇದದ ಒಂದು  ಅಂಗ. ಮಹಾಮುನಿಗಳಾದ ಗರ್ಗ, ನಾರದ ಪರಾಶರ, ಜೈಮಿನಿ ಮೊದಲಾದವರು ತಮ್ಮ ದಿವ್ಯ ಜ್ಞಾನವಾಹಿನಿಯಿಂದ ಆಕಾಶಕಾಯಗಳ ರಶ್ಮಿ ಜಾಲ ಮಾನವನ ಮೇಲೆ ಹೇಗೆ ಪರಿಣಾಮ ಉಂಟು ಮಾಡಿ ಅವನ ಸುಖ ದುಃಖಗಳಿಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.
ಇದು ಕರ್ಮ ಪರಿಪಾಠ ಪ್ರಾರಬ್ಧ ಕರ್ಮ ಅನುಭವಿಸುವ ಪಾಠ ಅಂದರೆ, ಸುಖ ದುಃಖ, ಕಷ್ಟನಷ್ಟ, ಏರು ಪೇರು, ಜೀವನದ ಆಗುಹೋಗುಗಳು ಇತ್ಯಾದಿಗಳನ್ನು ಮಾನವನಿಗೆ ಸೂಚಿಸುವುದೇ ಜ್ಯೋತಿಷ್ಯ. ಇದರಿಂದ ಪ್ರತಿಯೊಬ್ಬನ  ಭವಿಷ್ಯ ತಿಳಿಯಬಹುದು.
ಪಂಚಾಂಗದ ಮೂಲಕ ಕೆಲವು ಮುಖ್ಯಾಂಶಗಳನ್ನು ತಿಳಿಯಬಹುದು. ತಿಥಿ, ವಾರ, ನಕ್ಷತ್ರ, ಯೋಗ, ಕರಣ   ಈ ಐದು ಅಂಗಗಳೇ ಪಂಚಾಂಗ. ತಿಥಿಯಿಂದ ಶ್ರೇಯಸ್ಸು, ಸಂಪತ್ತು, ವಾರದಿಂದ ಆಯಷ್ಯ ವೃದ್ಧಿ, ನಕ್ಷತ್ರದಿಂದ ಪಾಪಹರಣ, ಯೋಗದಿಂದ ಯೋಗ ಪರಿಹಾರ. ಕರಣದಿಂದ ಕಾರ್ಯಸಿದ್ಧಿ ಉಂಟಾಗುತ್ತದೆ. ಮಾನವ ಜನ್ಮ ಕಾಲದಲ್ಲಿ ಪಂಚಾಂಗದ ಸಹಾಯದಿಂದ ಈ ಅಂಶಗಳನ್ನೆಲ್ಲಾ ತಿಳಿದು ಎಷ್ಟರ ಮಟ್ಟಿಗೆ ಶುಭ ಎಂಬುದನ್ನು ತಿಳಿಯಬಹುದು. ಇದಲ್ಲದೇ ಪಂಚಾಂಗದ ಸಹಾಯದಿಂದ ಅವನ ಜನ್ಮ ದಿನಾಂಕ, ಜನನ ವೇಳ, ಜನ್ಮಸ್ಥಳ ತಿಳಿದು ಗ್ರಹಗಳ ಸ್ಥಾನಗಳ ಆಧಾರದ ಮೇಲೆ ಜನ್ಮ ಕುಂಡಲಿ ರಚಿಸಿ ಅವನ ಭವಿಷ್ಯವನ್ನೂ ತಿಳಿಯಬಹುದು.
ತಿಥಿ
ಶುಕ್ಲ ಪಕ್ಷದಲ್ಲಿ ಪಾಡ್ಯದಿಂದ ಪೂರ್ಣಿಮೆವರೆಗೆ 15 ತಿಥಿಗಳು. ಕೃಷ್ಣಪಕ್ಷದಲ್ಲಿ ಪಾಡ್ಯದಿಂದ ಅಮಾವಾಸ್ಯೆವೆರೆಗೆ 15 ತಿಥಿಗಳು. ಒಟ್ಟು 30 ತಿಥಿಗಳು. ಇದರಲ್ಲಿ 2,3,5,7,9,10, 13ನೇ ತಿಥಿಗಳು. ಶುಭ. ವಾರ: ಭಾನುವಾರದಿಂದ ಶನಿವಾರದವರೆಗೆ ಏಳು ದಿನಗಳು, ಇದರಲ್ಲಿ ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಶುಭವಾರ.
ನಕ್ಷತ್ರ
ಅಶ್ವಿನಿಯಿಂದ ರೇವತಿವರೆಗೆ 27 ನಕ್ಷತ್ರಗಳು. ಇವುಗಳಲ್ಲಿ ಭರಣಿ, ಕೃತ್ತಿಕ, ಆರಿದ್ರ, ಆಶ್ಲೇಷ, ಪುಬ್ಬ, ವಿಶಾಖ, ಜೇಷ್ಠ, ಪೂ.ಷಾಡ, ಪೂ.ಭಾದ್ರ ನಕ್ಷಗಳು ಶುಭ ಕಾರ್ಯಗಳಿಗೆ ಒಳ್ಳೆಯದಲ್ಲ.
ಯೋಗ
ವಿಷ್ಕಂಭದಿಂದ ವೈಧೃತಿವರೆಗೆ 27 ಯೋಗಗಳು. ಇದರಲ್ಲಿ ಅತಿಗಂಡ, ಶೂಲ, ಗಂಡ, ವ್ಯಾಘಾತ, ವ್ಯತೀಪಾತ, ಪರಿಘ, ವೈಧೃತಿ ಅಶುಭ ಯೋಗಗಳು.
ಕರಣ
ಬವದಿಂದ ಕಿಂಸ್ತುಘ್ನ ವರೆಗೆ 11 ಕರಣಗಳು. ಇವುಗಳಲ್ಲಿ ಬವ, ಬಾಲವ, ಕಾಲವ, ತೈತಲೆ, ಗರಜೇ ಈ ಐದು ಕರಣಗಳು ಶುಭ ಕರಣಗಳು.
ಜ್ಯೋತಿಷ್ಯದಿಂದ ಮುಖ್ಯವಾಗಿ ಪ್ರತಿಯೊಬ್ಬ ಮಾನವನ ಭವಿಷ್ಯ ತಿಳಿಯಬಹುದು. ಕ್ರಾಂತಿ ವೃತ್ತ ಅಥವಾ ಸೂರ್ಯ ಮಾರ್ಗದ ಇಕ್ಕೆಲಗಳಲ್ಲೂ ಅಗಲವಾಗಿ ಆಕಾಶದ ಸುತ್ತ ಹಬ್ಬಿರುವ ಪಟ್ಟಿಯೇ ಭಚಕ್ರ ಅಥವಾ ರಾಶಿ ಚಕ್ರ. ಕ್ರಾಂತಿ ವೃತ್ತ ಸೂರ್ಯನ ಸಂಚಾರದ ಮಾರ್ಗ. ಈ ಭಚಕ್ರವನ್ನು ಮಹರ್ಷಿಗಳು 12 ಭಾಗಗಳನ್ನಾಗಿ ಮಾಡಿ ರಾಶಿಗಳೆಂದು ಹೆಸರಿಸಿದರು.
ಅವುಗಳ ಆಕೃತಿ ಅಥವಾ ಸ್ವರೂಪದಂತೆ ಅವುಗಳಿಗೆ ವಿಶೇಷ ಹೆಸರುಗಳಿಂದ ಕರೆಯಲಾಗಿದ್ದು, ಪ್ರತಿಯೊಂದು ರಾಶಿಗೂ ಅದರದೇ ಆದ ಲಕ್ಷಣ ಸ್ವಭಾವಗಳಿರುತ್ತವೆ. ಮೇಷದಿಂದ ಮೀನದವರೆಗೂ 12 ರಾಶಿಗಳು, ಪ್ರತಿಯೊಂದು ರಾಶಿಗೂ 30 ಡಿಗ್ರಿ ಗಳಾಗುತ್ತವೆ. ಈ ಭಚಕ್ರದಲ್ಲಿ ಸೂರ್ಯನ ಜೊತೆಗೆ ಚಂದ್ರ, ಕುಜ, ಬುಧ, ಗುರು, ಶುಕ್ರ, ಶನಿ, ಗ್ರಹಗಳೂ, ರಾಹು ಕೇತುಗಳೆಂಬ ಛಾಯಾಗ್ರಹಗಳೂ ಪರಿಭ್ರಮಿಸುತ್ತವೆ.
ಇದಲ್ಲದೇ ಈ ಭಚಕ್ರದಲ್ಲಿ 27 ನಕ್ಷತ್ರಗಳಿವೆ. ಅಶ್ವಿನಿಯಿಂದ ರೇವತಿವರೆಗೆ 27ನಕ್ಷತ್ರಗಳು. ಪ್ರತಿ ನಕ್ಷತ್ರದ ವ್ಯಾಪ್ತಿ 13.33 ಡಿಗ್ರಿಗಳು.
ಈ ಭಚಕ್ರದಲ್ಲಿ ಸೂರ್ಯ ಮಧ್ಯವರ್ತಿ. ಸೂರ್ಯನನ್ನು ಇತರ ಗ್ರಹಗಳು ಪರಿಭ್ರಮಣ ಮಾಡುತ್ತವೆ. ಈ ಸೂರ್ಯಾದಿ ಗ್ರಹಗಳಿರುವ ಸ್ಥಾನವೇ ಪಂಚಭೂತಗಳಿಗೆ ಅಂದರೆ ಅಗ್ನಿ, ಪೃಥ್ವಿ, ವಾಯು, ಜಲ ಮತ್ತು ಆಕಾಶ ತತ್ವಗಳಿಗೆ ಮಾತ್ರ ಸ್ಥಾನವಾಗಿರುತ್ತದೆ. ಸಕಲ ಚರಾಚರಾತ್ಮಕವಾದ ಈ ಪ್ರಪಂಚ ಪಂಚಭೂತಮಯವಾಗಿದೆ. ಪೃಥ್ವಿಯ ಮೇಲಿರುವ ಸಸ್ಯ, ಮಾನವ ಸೇರಿದಂತೆ ಪ್ರಾಣಿವರ್ಗಗಳು ಪಂಚಭೂತಮಯವಾಗಿದೆ.
ಆದ್ದರಿಂದ ಆಕಾಶಕಾಯಗಳಿಗೂ, ಗ್ರಹಗಳಿಗೂ ಹಾಗೂ ಭೂಮಿಯ ಮೇಲೆ ವಾಸ ಮಾಡುವ ಮಾನವರಿಗೂ ಅಲೌಕಿಕವಾದ ಸಂಬಂಧ ವುಂಟಾಗಿ ಆಕಾಶ ಕಾಯಗಳ ಗ್ರಹಗಳ ಪ್ರಭಾವ ಎಲ್ಲಾ ಮಾನವನರ ಮೇಲೆ ಜನನ ಕಾಲದಲ್ಲಿ ಪರಿಣಾಮ ಬೀರಿ ಅವನ ಸುಖ ದುಃಖಾದಿಗಳಿಗೆ, ಕಷ್ಟ ನಿಷ್ಟಗಳಿಗೆ, ಏರುಪೇರುಗಳಿಗೆ ಕಾರಣವಾಗುತ್ತದೆ.
ಈ ಕಾಲದಲ್ಲಿ ಗ್ರಹಗಳ ಪ್ರಭಾವ ಏನೆಂಬುದನ್ನು ಕುಂಡಲಿ ರಚಿಸಿ ತಿಳಿಯಬುಹುದು. ಈ ಕುಂಡಲಿಯಿಂದ ಪ್ರತಿಯೊಬ್ಬ ಮಾನವನಿಗೆ ಆಗುವ ಶುಭಾಶುಭಾಗಳನ್ನು ತಿಳಿಯಬಹುದು. ಇದೇ ಜ್ಯೋತಿಷ್ಯ. ಮಾಹಿತಿಗೆ ಮೊ. 9731906176 ಸಂಪರ್ಕಿಸಿ.


-ಎಂ.ವಿ. ಸತ್ಯನಾರಾಯಣ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com