

ಸಂಗೀತ ದೇವ ಭಾಷೆ. ಇದು ವೇದ-ಪುರಾಣಗಳ ಕಾಲದಿಂದಲೂ ಜಗತ್ಪ್ರಸಿದ್ಧ. ಸಾಮವೇದದಿಂದ ಹುಟ್ಟಿದ ಸಂಗೀತವು ಯಜ್ಞ-ಯಾಗ ಹಾಗೂ ದೇವತಾರ್ಚನೆಯ ಒಂದು ಅವಿಭಾಜ್ಯ ಅಂಗ. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ ಪ್ರತೀಕವಾದ ಓಂಕಾರ ಅಥವಾ ಪ್ರಣವ ನಾದದಿಂದಲೇ ಸಪ್ತಸ್ವರಗಳು ಜನಿಸಿವೆ.
ಸಂಗೀತ ಪರಂಪರೆ: ಸುಮಾರು ಕ್ರಿ.ಶ.ಒಂದನೇ ಶತಮಾನದ ಗ್ರಂಥ ಭರತನ ನಾಟ್ಯ ಶಾಸ್ತ್ರವೇ ಸಂಗೀತ ಶಾಸ್ತ್ರ ವಿವರಿಸುವ ಪ್ರಪಥಮ ಗ್ರಂಥ. ನಂತರ ಆತನ ಮಗ ವತ್ತಿಲಮಾ, ನಂತರ ಮಾತಂಗರು ರಾಗದ ವರ್ಗೀಕರಣ ಮಾಡಿದ್ದಾರೆ. 11ನೇ ಶತಮಾನದಲ್ಲಿ 'ಸಂಗೀತ ಮರರಂದ'ದ ಕತೃವಾದ ನಾರದರು ರಾಗಗಳನ್ನು ವಿಂಗಡಿಸಿದ್ದಾರೆ.
12ನೇ ಶತಮಾನದಲ್ಲಿ ಜಯದೇವನ 'ಗೀತ ಗೋವಿಂದ' ಭಕ್ತಿ-ಶೃಂಗಾರ ರಸ ಪ್ರಧಾನವಾದ ಮೊಟ್ಟ ಮೊದಲ ಸಂಗೀತ ರೂಪಕ. 13ನೇ ಶತಮಾನದಲ್ಲಿ(ಕನ್ನಡಿಗ) ಶಾಜ್ಞದೇವನಿಂದ ಸಂಗೀತ ರತ್ನಾಕರ ರಚಿತವಾಯಿತು. 13ನೇ ಶತಮಾನದ ಉತ್ತರಾರ್ಧದಲ್ಲಿ ಪರ್ಷಿಯಾ ಮತ್ತು ಮಹಮದೀಯರ ಮುತ್ತಿಗೆ, ಆಗಮನ ಮತ್ತು ಸಂಪರ್ಕದಿಂದ ಪ್ರಬಾವಿತವಾಗಿ ಸಂಗೀತ ಎರಡು ಕವಲಾಗಿ ಒಡೆದು ಉತ್ತರಾದಿ ಮತ್ತು ದಕ್ಷಿಣಾದಿ ಪದ್ಧತಿಗಳಾದವು. ದಕ್ಷಿಣದ ಸಂಗೀತವನ್ನು ಕರ್ಣಾಟಕ ಎಂದೂ ಉತ್ತರದ ಸಂಗೀತವನ್ನು ಹಿಂದೂಸ್ತಾನಿ ಎಂದೂ ಹರಿಪಾಲದೇವನು ತನ್ನ 'ಸಂಗೀತ ಸುಧಾರಕ' ಗ್ರಂಥದಲ್ಲಿ ತಿಳಿಸಿದ್ದಾನೆ.
14ನೇ ಶತಮಾನದಲ್ಲಿ ವಿದ್ಯಾರಣ್ಯರು ರಚಿಸಿದ 'ಸಂಗೀತ ಸಾರ' ಗ್ರಂಥದಲ್ಲಿ ಮೊದಲ ಬಾರಿಗೆ ರಾಗಗಳನ್ನು ಮೇಳ ಮತ್ತು ಜನ್ತಗಳೆಂದು ವಿಭಜಿಸಿದ್ದಾರೆ. ಈವರೆಗೂ ಸಂಸ್ಕೃತದಲ್ಲಿ ರಚಿತವಾಗುತ್ತಿದ್ದ ಕೃತಿಗಳು 15ನೇ ಶತಮಾನದಲ್ಲಿ ದೇಶಭಾಷೆಯಲ್ಲಿ ಪ್ರಾರಂಭ ಆಯಿತು. ನರಹರಿ ತೀರ್ಥರು, ಶ್ರೀಪಾದರಾಜರು, ವ್ಯಾಸರಾಯರು ಹಾಗೂ ವ್ಯಾಸರಾಯರ ಶಿಶ್ಯರಾದ ಪುರಂದರದಾಸರು, ವಾದಿರಾಜರು, ಕನಕದಾಸರು ಮೊದಲಾದವರು ಅಸಂಖ್ಯಾತ ಕೀರ್ತನೆ, ಸುಳಾದಿ ಮತ್ತು ಊಗಾಭೋಗಗಳನ್ನು ರಚಿಸಿದರು.
15-16ನೇ ಶತಮಾನದಲ್ಲಿ ನಿಜಗುಣ ಶಿವಯೋಗಿಗಳು 'ವಿವೇಕ ಚೂಡಾಮಣಿ' ಗ್ರಂಥದಲ್ಲಿ ಸಾವಿರಾರು ಶೈವಭಕ್ತಿ ಕೀರ್ತನೆಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. 18ನೇ ಶತಮಾನದ ಉತ್ತರಾರ್ಧದಿಂದ 19ನೇ ಶತಮಾನದ ಪೂರ್ವಾರ್ಧದಲ್ಲಿ ಕರ್ಣಾಟಕ ಸಂಗೀತದ ತ್ರಿಮೂರ್ತಿಗಳಾದ ಶಾಮಾಶಾಸ್ತ್ರಿಗಳು, ತ್ಯಾಗರಾಜರು ಮತ್ತು ಮುತ್ತುಸ್ವಾಮಿ ದೀಕ್ಷಿತರು ಅಸಂಖ್ಯಾತ ಕೃತಿಗಳನ್ನು ರಚಿಸಿ ಕರ್ಣಾಟಕ ಸಂಗೀತದ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ.
ಶೈವಪಥ
8ನೇ ಶತಮಾನದಿಂದ ಸುಮಾರು 5 ದಶಕಗಳ ಕಾಲ ಅದ್ವೈತ ವೇದಾಂತ ದುಂದುಭಿ ಮೊಳಗಿತು. ಅದ್ವೈತದಲ್ಲಿ ಕೆಲವರು ಶಿವ-ವಿಷ್ಟು ಭೇದ ಕಲ್ಪಿಸದೆ ಶೈವ ಹಾಗೂ ವೈಷ್ಣವ ಸಂಪ್ರದಾಯ ಸ್ವೀಕರಿಸಿದರು. 4-5ನೇ ಶತಮಾನದಲ್ಲಿಯೇ ಶೈವ ಸಂಪ್ರದಾಯವೂ ಆಚರಣೆಯಲ್ಲಿದ್ದಿತ್ತು. ಪಂಚಾಚಾರ್ಯರು ಬೇರೆ ಬೇರೆ ಸ್ಥಳಗಳಲ್ಲಿ-ರಂಭಾಪುರಿ, ಉಜ್ಜಯಿನಿ, ಶ್ರೀಶೈಲ, ಕೇದಾರ, ವಾರಣಾಸಿ ಈ ಸ್ಥಳಗಳಲ್ಲಿ ಮಠಾಧೀಶರಾಗಿದ್ದರು.
ಸುಮಾರು 6ರಿಂದ 12ನೇ ಶತಮಾನದವರೆಗೆ ವೈಷ್ಣವ ಪಂಥಕ್ಕೆ ಪ್ರತಿಸ್ಪರ್ಧಿಯಾಗಿ ಶೈವ ಪಂಥವೂ ಬಲಿಷ್ಠವಾಗಿ ಬೆಳೆಯಿತು. ಬಿಜ್ಜಳನ ಮಂತ್ರಿ ಆಗಿದ್ದ ಬಸವೇಶ್ವರರು ವೀರಶೈವ ಮತವನ್ನು ಪ್ರಚಾರಮಾಡಿದರು. ಸುಮಾರು 10ರಿಂದ 11ನೇ ಶತಮಾನದ ವಚನಕಾರರೆಂದರೆ-ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ, ಮಾದರ ಚೆನ್ನಯ್ಯ ಮುಂತಾದವರು. ವಚನಕಾರರಿಗೆ ಗುರು, ಲಿಂಗ, ಜಂಗಮ ಮೂರು ಬೇರೆ ಅಲ್ಲ. ಹೀಗೆ ಅಂದಿನಿಂದ ಇಂದಿನವರೆಗೂ ಸಂಗೀತ ಪರಂಪರೆ ಅಧ್ಯಾತ್ಮದ ಚೌಕಟ್ಟಿನಲ್ಲಿ ಮುಂದುವರಿದುಕೊಂಡು ಬಂದಿದೆ.
-ಡಾ. ಪ್ರಮೀಳಾದೇವಿ