ಪಾಪ ಕರ್ಮಗಳನ್ನು ಕಳೆಯುವ ಶ್ರೀ ಸಿಗಂದೂರು ಚೌಡೇಶ್ವರಿ

ಶ್ರೀ ಸಿಗಂದೂರು ಚೌಡೇಶ್ವರಿ ! 'ನೀನೇ ಎಲ್ಲ' ಎನ್ನುವ ಭಾವದಲ್ಲಿ ಬೇಡಿ ಬರುವ ಭಕುತರಿಗೆ ಎಂದೂ `ಇಲ್ಲ' ಎನ್ನದ ಕರುಣಾಕರಿ ಆಕೆ.
ಸಿಗಂದೂರು ಶ್ರೀ ಚೌಡೇಶ್ವರಿ
ಸಿಗಂದೂರು ಶ್ರೀ ಚೌಡೇಶ್ವರಿ

ಶ್ರೀ ಸಿಗಂದೂರು ಚೌಡೇಶ್ವರಿ ! 'ನೀನೇ ಎಲ್ಲ' ಎನ್ನುವ ಭಾವದಲ್ಲಿ ಬೇಡಿ ಬರುವ ಭಕುತರಿಗೆ ಎಂದೂ `ಇಲ್ಲ' ಎನ್ನದ ಕರುಣಾಕರಿ ಆಕೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ನದಿಯ ಹಿನ್ನೀರ ಪ್ರದೇಶದ ಮೂಲೆಯಲ್ಲಿರುವ, ಗೂಗಲ್ಲಿಗೂ ಸಿಗದ ಸಿಗಂದೂರಿನ ಕಾನನದಲ್ಲಿ ಕುಳಿತು, ದೇಶದ ಮೂಲೆ-ಮೂಲೆಯಿಂದ ಸಾಮಾನ್ಯ ಆದ್ಮಿ-ಉದ್ಯಮಿ, ಸಂತ-ಶ್ರೀಮಂತ ಮುಂತಾದ ಭೇದವಿಲ್ಲದೆ ಲಕ್ಷಾಂತರ ಜನರನ್ನು ತನ್ನಲ್ಲಿಗೆ ಕರೆಸಿಕೊಳ್ಳುತ್ತಿರುವ ಈಕೆಯ ಪ್ರಭಾವ ವರ್ಣಿಸಲಸದಳ.

ಎರಡು ದಶಕದ ಹಿಂದೆ ಕುಗ್ರಾಮವಾಗಿದ್ದ ಸಿಗಂದೂರು, ಜಗನ್ಮಾತೆಯ ಉಪಸ್ಥಿತಿಯಿಂದ ಇಂದು ದಿವ್ಯ ಕ್ಷೇತ್ರವಾಗಿ ಪರಿಣಮಿಸಿದೆ. ಈ ಕ್ಷೇತ್ರದ ಅಧಿದೇವತೆಯಾಗಿ ತಾಯಿ ಚೌಡೇಶ್ವರಿ, ಲಕ್ಷಾಂತರ ಜನರ ದುಮ್ಮಾನ ನೀಗಿಸುತ್ತಾ, ತನ್ನ ಪ್ರಭಾವದ ಅರಿವಿನ ರವವನ್ನು ಭಕ್ತರ ಭಾವ ಬಾಂದಳದಲ್ಲಿ ನಿರಂತರ ಮೊಳಗಿಸುತ್ತಿದ್ದಾಳೆ. 25 ವರ್ಷಗಳ ಹಿಂದೆ ಸಿಗಂದೂರು ಐತಿಹಾಸಿಕ ಕ್ಷೇತ್ರವಲ್ಲ. ಬದಲಾಗಿ ನಮ್ಮ ಕಣ್ಣೆದುರಿಗೇ ಹುಟ್ಟಿ, ಈಗ ಕಣ್ಣ ಅಂದಾಜಿಗೂ ನಿಲುಕದಷ್ಟು ದೊಡ್ಡದಾಗಿ ಬೆಳೆದಿರುವ ಕ್ಷೇತ್ರವದು. 25 ವರ್ಷ ಹಿಂದಿನವೆರೆಗೂ ಇದೇ ಶರಾವತಿ ತೀರದ ಗೊಂಡಾರಣ್ಯದ ಗುಹೆಯೊಂದರಲ್ಲಿ ನೆಲೆಸಿದ್ದಳಾಕೆ.

ಸೀಮಿತ ಭಕ್ತರನ್ನು ಸಲಹುತ್ತಾ, ಅಲ್ಲಿನ ನಿಸರ್ಗದ ಸೊಬಗಿನ ಭವ್ಯತೆಗೆ ತನ್ನ ದಿವ್ಯತೆಯ ಎರಕಹೊಯ್ಯುತ್ತಾ, ತಾನೇ ತಾನಾಗಿ ನೆಲೆ ನಿಂತಿದ್ದಳಾಕೆ. ಅದೊಂದು ಸುದಿನ, ದೇವಸ್ಥಾನದ ಇಂದಿನ ಧರ್ಮದರ್ಶಿ ರಾಮಪ್ಪ ಹಾಗೂ ಪ್ರಧಾನ ಅರ್ಚಕ ಶೇಷಗಿರಿ ಭಟ್ಟರಿಗೆ ಪ್ರೇರಣೆಯಿತ್ತಳು. ಆ ಪ್ರೇರಣೆಯ ಫಲಶ್ರುತಿಯೇ  ಇಂದು ಕಂಗೊಳಿಸುತ್ತಿರುವ ಚೌಡೇಶ್ವರಿ ದೇವಾಲಯ. ಈ ದೇವಾಲಯಕ್ಕೆ ಇದು 25ನೇ ವರ್ಷದ ಸಂಭ್ರಮ. ಈ ನಿಟ್ಟಿನಲ್ಲಿ ಸಿಗಂದೂರು ಚೌಡಮ್ಮ ದೇವಸ್ಥಾನ ಟ್ರಸ್ಟ್ `ಅಮ್ಮನಡಿಗೆ ನಮ್ಮ ನಡಿಗೆ' ಎಂಬ ಉಪಶೀರ್ಷಿಕೆಯಡಿ `ಪಾದಾರ್ಪಣ 25' ಎಂಬ ವಿಶೇಷ ಕಾರ್ಯಕ್ರಮವನ್ನು 2015ರ ಏ.13ರಿಂದ 19ರವರೆಗೆ ಏಳು ದಿನ ಹಮ್ಮಿಕೊಂಡಿದೆ.

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನ ಹಾಗೂ ಸಾನ್ನಿಧ್ಯದಲ್ಲಿ ಈ ಕಾರ್ಯಕ್ರಮ ನೆರವೇರಲಿದೆ. ಪ್ರತಿನಿತ್ಯ ಹಗಲು ಧಾರ್ಮಿಕ ಕಾರ್ಯಕ್ರಮಗಳು, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಏ.14ರಂದು ದೃಶ್ಯ ಮತ್ತು ಮುದ್ರಣ ಮಾಧ್ಯಮಗಳ ಕುರಿತು ಸಂವಾದ, 15ರಂದು ಸಾಧಕರ ತಾಯಂದಿರ ಜೀವನಚಿತ್ರಣ, 16ರಂದು ಸಾಹಿತಿಗಳು, ವಿಮರ್ಶಕರ ಉಪಸ್ಥಿತಿಯಲ್ಲಿ ಸಾಹಿತ್ಯ ಸ್ವಾರಸ್ಯ, 17ರಂದು ಚಿತ್ರ ಕಲಾವಿದರು ಮತ್ತು ರಂಗಕರ್ಮಿಗಳ ಉಪಸ್ಥಿತಿಯಲ್ಲಿ `ಚಿತ್ರ-ಚಿತ್ತ', 18ರಂದು ರಾಜಕೀಯ ನೇತಾರರ ಉಪಸ್ಥಿತಿಯಲ್ಲಿ `ಮಾನ್ಯ-ಸಾಮಾನ್ಯ' ಹಾಗೂ 19ರಂದು ಸಾಧು-ಸಂತರ ಉಪಸ್ಥಿತಿಯಲ್ಲಿ `ಸಂತ-ಸರ್ವತ' ಕಾರ್ಯಕ್ರಮಗಳು ನಡೆಯಲಿವೆ. ಏ.15ರಿಂದ ಮೂರು ದಿನ ಪೂಜನ-ಗಾಯನ-ನರ್ತನ-ರೂಪಕಗಳ ಸಮ್ಮಿಲನವಾದ `ಅಂಬಾಕಥೆ' ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಿದೆ. ಕಾರ್ಯಕ್ರಮದ ಮೊದಲ ದಿನ ರಾಘವೇಶ್ವರ ಶ್ರೀಗಳಿಂದ `ಭಾವಪೂಜೆ' ನೆರವೇರಲಿದೆ. ಮೂಲಸ್ಥಾನದಿಂದ ದೇವಸ್ಥಾನಕ್ಕೆ ಜ್ಯೋತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ.

ಪೇಜಾವರ ವಿಶ್ವೇಶತೀರ್ಥ ಶ್ರೀಗಳು, ಆದಿಚುಂಚನಗಿರಿ ಶಾಖಾಮಠದ ಚಂದ್ರಶೇಖರ ಶ್ರೀಗಳು, ಸೋಂದಾ ಜೈನಮಠದ ಭಟ್ಟಾಕಲಂಕ ಭಟ್ಟಾರಕರು, ಕಾಗೋಡು ತಿಮ್ಮಪ್ಪ, ಸದಾನಂದ ಗೌಡ, ಆರ್.ವಿ. ದೇಶಪಾಂಡೆ, ಶ್ರೀನಿವಾಸ ಪ್ರಸಾದ್, ಕಿಮ್ಮನೆ ರತ್ನಾಕರ್, ಬಿ.ಎಸ್. ಯಡಿಯೂರಪ್ಪ, ಎಚ್.ಡಿ ಕುಮಾರಸ್ವಾಮಿ, ರವಿ ಹೆಗಡೆ, ಹಮೀದ್ ಪಾಳ್ಯ, ಬೋರಲಿಂಗಯ್ಯ, ಕೆ.ಕಲ್ಯಾಣ್, ಹೊನ್ನಾಳಿ ಚಂದ್ರಶೇಖರ್, ಮುಂತಾದವರು ಇಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com