ಏಕಾದಶಿಗಳಲ್ಲೇ ವಿಶೇಷ ಈ ವೈಕುಂಠ ಏಕಾದಶಿ

ವೈಕುಂಠ ಏಕಾದಶಿ, ಏಕಾದಶಿಗಳಲ್ಲೇ ಅತ್ಯಂತ ಶ್ರೇಷ್ಠವಾದ್ದು. ಧನುರ್ಮಾಸದ ಶುಕ್ಲ ಪಕ್ಷ ಏಕಾದಶಿಯಂದು ಶ್ರೀ ವಿಷ್ಣುವಿನ ವೈಕುಂಠ ದ್ವಾರ ತೆರೆಯುವ ದಿನವಾದ್ದರಿಂದ ಈ ಏಕಾದಶಿ ಶ್ರೇಷ್ಠವಾದದ್ದು ಎಂಬ ನಂಬಿಕೆ.
ವೆಂಕಟೇಶ್ವರ ಸ್ವಾಮಿ (ಸಂಗ್ರಹ ಚಿತ್ರ)
ವೆಂಕಟೇಶ್ವರ ಸ್ವಾಮಿ (ಸಂಗ್ರಹ ಚಿತ್ರ)
Updated on
ವೈಕುಂಠ ಏಕಾದಶಿ, ಏಕಾದಶಿಗಳಲ್ಲೇ ಅತ್ಯಂತ ಶ್ರೇಷ್ಠವಾದ ಏಕಾದಶಿ. ಧನುರ್ಮಾಸದ ಶುಕ್ಲ ಪಕ್ಷ ಏಕಾದಶಿಯಂದು ಶ್ರೀ ವಿಷ್ಣುವಿನ ವಾಸಸ್ಥಾನ ವೈಕುಂಠ ದ್ವಾರ ತೆರೆಯುವ ದಿನವಾದ್ದರಿಂದ ಈ ಏಕಾದಶಿ ಶ್ರೇಷ್ಠವಾದದ್ದು ಎಂಬ ನಂಬಿಕೆ. ಆದ್ದರಿಂದಲೇ ಇದನ್ನು ಮೋಕ್ಷದ ಏಕಾದಶಿ ಎಂಬ ಹೆಸರೂ ಇದೆ.

ಏಕಾದಶಿ ಶಬ್ದವು ಪಾಡ್ಯ, ಬಿದಿಗೆ, ತದಿಗೆ ಇತ್ಯಾದಿ ತಿಥಿಗಳ ಆದಿಯಾಗಿ ಬರುವ ಹನ್ನೊಂದನೇ ತಿಥಿ. ಏಕಾದಶಿಯ ಪ್ರತಿಯೊಂದು ಮಾಸದ ಶುಕ್ಲ ಹಾಗೂ ಕೃಷ್ಣ ಪಕ್ಷಗಳಲ್ಲಿ ಬರುವ ಪ್ರತ್ಯೇಕ ಪ್ರತ್ಯೇಕ ತಿಥಿಯಾಗಿದೆ. ಏಕಾದಶಿ ಎಂದರೆ ತಕ್ಷಣವೇ ನೆನಪಾಗುವುದು ಉಪವಾಸ. ಉಪವಾಸ ಆಚರಣೆಯೇ ಏಕಾದಶಿಯ ಒಂದು ಮುಖ್ಯ ಅಂಗ. ಏಕಾದಶಿ ಉಪವಾಸದ ಆಚರಣೆಯು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಹೆಚ್ಚಿನ ಪರಿಣಾಮಕಾರಿ. ಏಕಾದಶಿ ಆಚರಣೆಯು ಹದಿನೈದು ದಿನಗಳಿಗೊಮ್ಮೆ ಆಹಾರ ಪಾನೀಯಗಳ ಸೇವನೆ ವರ್ಜ್ಯ. ಈ ದಿನದಂದು ಕೆಲವರು ಅನ್ನವನ್ನು ಮಾತ್ರ ತ್ಯಜಿಸಿ ಉಪವಾಸ ಆಚರಿಸಿದರೆ,ಮತ್ತೆ ಕೆಲವರು ಹನಿ ನೀರನ್ನೂ ಕುಡಿಯದೆ,ನಿರಾಹಾರ ವ್ರತವನ್ನು ಆಚರಿಸುತ್ತಾರೆ. ಇನ್ನೂ ಕೆಲವರು ಏಕಾದಶಿಯಂದು ಮೌನ ವ್ರತ ಸಹ ಆಚರಿಸುತ್ತಾರೆ. ವೈಕುಂಠದ ಬಾಗಿಲು ತೆಗೆಯುವ ಹಿನ್ನೆಲೆಯಲ್ಲಿ ಉಪವಾಸವಿದ್ದು ವೆಂಕಟೇಶ್ವರ/ಶ್ರೀನಿವಾಸ/ವಿಷ್ಣು ದೇವರ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಭಾವನೆಯೂ ಇದೆ. 
ಮಾಸಕ್ಕೆ ಎರಡರಂತೆ ಪ್ರತಿ ಸಂವತ್ಸರವೂ ಒಟ್ಟಾರೆ 24 ಏಕಾದಶಿ ತಿಥಿಗಳಿಂದ ಕೂಡಿರುವುದಾದರೆ ಅದಕ್ಕೆ ಬದಲಾಗಿ ಮೂರು ವರ್ಷಕ್ಕೊಮ್ಮೆ ಬರುವ ಅಧಿಕ ಮಾಸದಿಂದಾಗಿ ಅಂಥ ಒಂದು ಸಂವತ್ಸರವು 26 ಏಕಾದಶಿ ತಿಥಿಗಳಿಂದ ಕೂಡಿರುತ್ತದೆ. ಪ್ರತಿಯೊಂದು ಏಕಾದಶಿಗೂ ಒಂದೊಂದು ಪುರಾಣೋಕ್ತ ಹೆಸರಿರುವುದಾಗಿದ್ದು ಒಂದಲ್ಲ ಒಂದು ವಿಧದಲ್ಲಿ ಅವು ಒಂದೊಂದು ಹೆಚ್ಚಿನ ಪುಣ್ಯಪ್ರದವಾಗಬಲ್ಲದಾಗಿದೆ. ಅವುಗಳ ಪೈಕಿ ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಗೆ ಶಯನಿ ಅಂತಲೂ ಕರೆದಿರುವುದಾಗಿದೆ. ಅಷ್ಟೇ ಮುಖ್ಯವಾಗಿ ಅವುಗಳೆರಡೂ ಕ್ರಮವಾಗಿ ಪ್ರಥಮೇಕಾದಶಿ ಮತ್ತು ವೈಕುಂಠ ಏಕಾದಶಿ ಅಂತಲೂ ಸಾವಿರಾರು ವರ್ಷಗಳಿಂದ ಕರೆಯಲಾಗಿದ್ದು, ಅವುಗಳ ಹಿನ್ನೆಲೆಯಾಗಿ ಅನೇಕ ಮಹಿಮೆಗಳು ಇರುವುದಾಗಿದೆ.

ಶಯನೀ ಆ ದಿನ ಮಹಾವಿಷ್ಣುವು ನಿದ್ರಿಸಲು ತೆರಳುವನೆಂದೂ, ಮುಂದೆ ಕಾರ್ತೀಕ ಮಾಸದ ಶುಕ್ಲ ಪಕ್ಷದ ಏಕಾದಶಿ "ಪ್ರಬೋಧಿನೀ"ಯ ನಂತರ ಬರುವ ’ಉತ್ಥಾನ’ದ್ವಾದಶಿಯಂದು ಅವನು ನಿದ್ರೆ ಮುಗಿಸಿ ಎಚ್ಚರಗೊಳ್ಳುತಾನೆಂದು ಆಸ್ತಿಕರ ನಂಬಿಕೆ. ಈ ಎರಡೂ ಏಕಾದಶಿಗಳ. ನಡುವಿನ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸ್ಯ ಎನ್ನಲಾಗುತ್ತದೆ. ಇದಾದ ನಂತರ ಬರುವುದೇ ವೈಕುಂಠ ಏಕಾದಶಿ.

ವೈಕುಂಠ ಏಕಾದಶಿ ಬಗ್ಗೆ ಮತ್ತೂ ಒಂದು ಪೌರಾಣಿಕ ಹಿನ್ನೆಲೆ ಇದೆ. ಪೌರಾಣಿಕ ಕತೆಯೊಂದರ ಪ್ರಕಾರ ಗೋಕಲವೆಂಬ ನಗರದಲ್ಲಿ ವಾಸವಾಗಿದ್ದ ವೈಖಾನಸನೆಂಬ ರಾಜರ್ಷಿಗೆ ಮೃತಪಟ್ಟಿದ್ದ ತನ್ನ ತಂದೆ ನರಕವನ್ನು ಅನುಭವಿಸುತ್ತಿರುವುದು ದಿವ್ಯ ದೃಷ್ಟಿಗೆ ಗೋಚರವಾಗುತ್ತದೆ. ಖಿನ್ನನಾದ ರಾಜನು ಪಂಡಿತರ ಬಳಿ ತನ್ನ ತಂದೆಯ ಆತ್ಮವನ್ನು ನರಕದಿಂದ ಪಾರು ಮಾಡುವ ಬಗೆಯನ್ನು ಕೇಳುತ್ತಾನೆ. ಅದಕ್ಕೆ ಉತ್ತರವಾಗಿ ಅವರು ಅಂತಹ ನಿವಾರಣೆಯು ಕೇವಲ ಯಜ್ಞ ದಾನಗಳಿಂದ ಮಾತ್ರ ಆಗುವುದಲ್ಲ, ಜತೆಗೆ ಮಾರ್ಗಶಿರ್ಷ ಶುಕ್ಷ ಪಕ್ಷದ ಏಕಾದಶಿ ಆಚರಣೆಯ ಫಲವಾಗಿ ಅವನ ತಂದೆಯು ನರಕದಿಂದ ಪಾರಾಗುವನೆಂದರು.

ಅವನು ಹಾಗೆಯೇ ಏಕಾದಶಿ ವೃತಾಚರಣೆಯನ್ನು ಒಂದಾದರ ಮೇಲೊಂದರಂತೆ ಆಚರಿಸಿ ಕೊನೆಗೆ ಮಾರ್ಗಶೀರ್ಷ ಶುಕ್ಲ ಪಕ್ಷದ ವೈಕುಂಠ ಏಕಾದಶಿ ವೃತವನ್ನು ಆಚರಿಸಿ ಸೂಕ್ತ ದಾನಾದಿಗಳನ್ನು ಮಾಡುತ್ತಿದ್ದಂತೆ ಅವನ ತಂದೆಯ ದೇಹವು ನರಕದಿಂದ ಬಿಡಲ್ಪಟ್ಟು, ಮುಂದೆ ಬೇರೆ ದೇಹವು ಪ್ರಾಪ್ತವಾಗಿ ಸ್ವರ್ಗವನ್ನು ಸೇರಿದನು ಎಂದು ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯೇ ಈ ವಿಶೇಷ ದಿನ. ಈ ದಿನ ಉಪವಾಸವಿದ್ದು, ಭಗವಂತನು ವಿಶೇಷ ಸನ್ನಿಧಾನವಿರುವ ದೇವಸ್ಥಾನಗಳಿಗೆ ಹೋಗಿ ಭಕ್ತಿಯಿಂದ ದೇವರ ರೂಪವನ್ನು ಸಂದರ್ಶಿಸುವವರಿಗೆ ಮುಂದೆ ಮುಕ್ತಿ ಮತ್ತು ವೈಕುಂಠವನ್ನು ಪಡೆಯುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com